

ಬೀದರ್: ಜಿಲ್ಲೆಯ ಚಿಟಗುಪ್ಪ (ತಾಲೂಕು) ವ್ಯಾಪ್ತಿಯಲ್ಲಿ ನಿಷೇಧಿತ ಚೈನಾ ನೈಲಾನ್ ಮಾಂಜ ಗಾಳಿಪಟದ ದಾರ ಮತ್ತೊಂದು ಅಮಾಯಕ ಜೀವವನ್ನು ಬಲಿ ತೆಗೆದುಕೊಂಡಿದೆ. ರಾಷ್ಟ್ರೀಯ ಹೆದ್ದಾರಿ 65ರ ಮೇಲೆ ಬುಧವಾರ ಬೆಳಗ್ಗೆ ನಡೆದ ಭೀಕರ ಘಟನೆಯಲ್ಲಿ, ಬೈಕ್ನಲ್ಲಿ ತೆರಳುತ್ತಿದ್ದ ವ್ಯಕ್ತಿಯ ಕುತ್ತಿಗೆಗೆ ನೈಲಾನ್ ದಾರ ಸಿಲುಕಿ ತೀವ್ರ ರಕ್ತಸ್ರಾವವಾಗಿದ್ದು, ವ್ಯಕ್ತಿ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ.
ಈ ದುರ್ಘಟನೆಯಲ್ಲಿ ಮೃತಪಟ್ಟವರು ಬಂಬುಳಾಗಿ ಗ್ರಾಮದ ಸಂಜಕುಮಾರ್ ಗುಂಡಪ್ಪ ಹೊಸಮನಿ (43) ಎಂದು ಗುರುತಿಸಲಾಗಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ, ಹುಮನಾಬಾದ್ನಲ್ಲಿ ವಾಸವಾಗಿರುವ ತಮ್ಮ ಮಗಳನ್ನು ಕರೆದುಕೊಂಡು ಬರಲು ಸಂಜಕುಮಾರ್ ಬೈಕ್ನಲ್ಲಿ ತೆರಳುತ್ತಿದ್ದರು. ಈ ವೇಳೆ ತಾಲಮಡಗಿ ಗ್ರಾಮದ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಮೇಲೆ ಹಾರಾಡುತ್ತಿದ್ದ ಗಾಳಿಪಟದ ನಿಷೇಧಿತ ನೈಲಾನ್ ದಾರ ಅವರ ಕಣ್ಣಿಗೆ ಕಾಣದೆ ನೇರವಾಗಿ ಕುತ್ತಿಗೆಗೆ ಸಿಲುಕಿದೆ.
ಕೂಡಲೇ ಮಗಳಿಗೆ ವಿಷಯ ತಿಳಿಸಿ ಸಹಾಯಕ್ಕೆ ಅಂಗಲಾಚಿಸಿದ್ದರು ಎಂದು ತಿಳಿದು ಬಂದಿದೆ.

ಆದರೆ ನೈಲಾನ್ ದಾರ ಕುತ್ತಿಗೆಗೆ ಸಿಲುಕಿದ ಕ್ಷಣದಲ್ಲೇ ಅದು ತೀಕ್ಷ್ಣವಾಗಿ ಕುತ್ತಿಗೆ ಕೊಯ್ದಿದ್ದು, ಸಂಜಕುಮಾರ್ ಅವರಿಗೆ ತೀವ್ರ ರಕ್ತಸ್ರಾವವಾಗಿದೆ. ದಾರಿಕೋಕರೊಬ್ಬರು ರಕ್ಷಣೆಗೆ ದಾವಿಸಿ ಹುತ್ತಿಗೆಗೆ ಬಟ್ಟೆ ಕಟ್ಟಿ ಅಂಬುಲೆನ್ಸಿಗೆ ಕರೆ ಮಾಡಿದ್ದಾರೆ, ಆದರೆ ಅಂಬುಲೆನ್ಸ್ ತಡವಾಗಿ ಬಂದಿದ್ದರಿಂದ, ತೀವ್ರ ರಕ್ತ ಸ್ರಾವವಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಭಾರೀ ಆಘಾತ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆ ಕುರಿತಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಅಪಘಾತಕ್ಕೆ ನಿಷೇಧಿತ ನೈಲಾನ್ ದಾರವೇ ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಸ್ಪಷ್ಟವಾಗಿದೆ.
ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಗಾಳಿಪಟಕ್ಕಾಗಿ ತಾಲೂಕಿನಲ್ಲಿ ಚೈನಾ ನಿರ್ಮಿತ ನಿಷೇಧಿತ ನೈಲಾನ್ ದಾರ ಮತ್ತು ಮಾಂಜ ದಾರ ಬಳಕೆ ಹೆಚ್ಚಾಗಿರುವುದು ಆತಂಕಕಾರಿ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಕಳೆದ ಶನಿವಾರವಷ್ಟೇ, ಚಿಟಗುಪ್ಪ ಪಟ್ಟಣದಲ್ಲಿ ತನ್ನ ತಾಯಿಯೊಂದಿಗೆ ರಸ್ತೆ ಮೇಲೆ ತೆರಳುತ್ತಿದ್ದ ಬಾಲಕನ ಕೈಗೆ ನೈಲಾನ್ ಮಾಂಜದ ದಾರ ಸಿಲುಕಿದ್ದು, ಬಾಲಕ ತೀವ್ರವಾಗಿ ಗಾಯಗೊಂಡಿದ್ದ. ಆತನನ್ನು ಕಲಬುರ್ಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.
ಮಾ೦ಜಾ ದಾರ ಅಂದರೇನು? – ಗಾಜು ಪುಡಿ ಮಾಡಿ ಅರಿಶಿನ ಅ೦ಟು ಅಥವಾ ಇತರೆ ಜಿಗುಟು ವಸ್ತುವಿನೊಂದಿಗೆ ಸೇರಿಸಿ ರಾಸಾಯನಿಕ ಬಣ್ಣ ಮಿಶ್ರಣ ಮಾಡಿ ನೈಲಾನ್ ದಾರ ಅಥವಾ ತೆಳುವಾದ ವೈರ್ಗೆ ಸವರಿ ಆನ೦ತರ ಬಿಸಿಲಿನಲ್ಲಿ ಒಣಗಿಸುತ್ತಾರೆ. ಇದರಿ೦ದ ಅದು ಬಹಳ ಹರಿತವಾಗುತ್ತದೆ. ಈ ದಾರಕ್ಕೆ ಗಾಳಿಪಟ ಕಟ್ಟಿ ಹಾರಿಸುತ್ತಾರೆ. ಬೇರೆಯವರ ಪಟ ಕತ್ತರಿಸಲು ಈ ಮಾ೦ಜಾ ಉಪಯೋಗಿಸಿ ಗಾಳಿಪಟ ಹಾರಿಸುವುದು ರೂಢಿ. ಜನ-ಜಾನುವಾರು ಹಾಗೂ ಪಕ್ಷಿಗಳಿಗೆ ಇದು ಮಾರಕವಾಗಿರುವ ಕಾರಣ ನಿಷೇಧಿಸಲಾಗಿದೆ. ಆದರೂ ಎಗ್ನಿಲ್ಲದೇ ಬಳಕೆಯಾಗುತ್ತಿದೆ.
ಯಾವುದೇ ಆಟ ಜೀವಕ್ಕೆ ಕಂಠಕ ಆಗಬಾರದು. ಈ ದುರ್ಘಟನೆಯಿಂದ ಒಬ್ಬರ ಆಟದಿಂದ ಇನ್ನೊಬ್ಬರ ಪ್ರಾಣಕ್ಕೆ ಕಂಠಕವಾಗಿದೆ

