

ಶ್ರೀನಿವಾಸಪುರ : ಶ್ರೀನಿವಾಸಪುರ ಕ್ಷೇತ್ರದ ಅಭಿವೃದ್ಧಿಯಲ್ಲಿ ಮಾಜಿ ಶಾಸಕ ರಮೇಶ್ ಕುಮಾರ್ ಅವರು ನೀಡಿದ ಕೊಡುಗೆಯನ್ನು ನಿರಾಕರಿಸುವಂತಿಲ್ಲ. ಇಂತಹ ಸಂದರ್ಭದಲ್ಲಿ ಹಾಲಿ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಅವರು ನಿರಂತರವಾಗಿ ಅವರ ಹೆಸರನ್ನು ಎತ್ತಿ ಆರೋಪ ಮಾಡುವುದು ಅನಗತ್ಯವಲ್ಲದೆ ಕಾಲಹರಣವೆಂದು ಕೆಪಿಸಿಸಿ ಸದಸ್ಯ ಸಂಜಯ್ ರೆಡ್ಡಿ ಬುಧವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪಿಎಲ್ಡಿ ಬ್ಯಾಂಕ್ ಕಚೇರಿಯಲ್ಲಿ ಮಾತನಾಡಿದ ಅವರು, ಕನ್ನಡ ರಾಜ್ಯೋತ್ಸವದ ವೇದಿಕೆ ಎಂದರೆ ಭಾಷೆಯ ಗೌರವ. ಆದರೆ ಆ ವೇದಿಕೆಯನ್ನೇ ಬಳಸಿ ಮಾಜಿ ಶಾಸಕ ರಮೇಶ್ ಕುಮಾರ್ ಬಗ್ಗೆ ಟೀಕೆ ಮಾಡುವುದು ಸೂಕ್ತವಲ್ಲ. ಅಭಿವೃದ್ಧಿ ವಿಚಾರಗಳಲ್ಲಿ ಸ್ಪಷ್ಟತೆ ಇಲ್ಲದಿರುವುದು ಶಾಸಕರ ನಿಲುವಿಗೆ ಪ್ರಶ್ನೆ ಹುಟ್ಟಿಸುತ್ತದೆ ಎಂದು ಹೇಳಿದರು.
ರಮೇಶ್ ಕುಮಾರ್ ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿಪಡಿಸಿರುವ ದಾಖಲೆ ಇಲ್ಲವೆಂದು ಅವರು ಸ್ಪಷ್ಟಪಡಿಸಿದರು. ತಾಲೂಕಿನ ಎಲ್ಲಾ ಸರ್ಕಾರಿ ಕಚೇರಿಗಳನ್ನು ಪಟ್ಟಣದ ಹೊರ ವಲಯದ ಕೆರೆಯ ಬಳಿಗೆ ಸ್ಥಳಾಂತರಿಸಲು ಮುಂದಾದಾಗ ತಡೆದು ನಿಲ್ಲಿಸಿದವರು ಯಾರು ? ಕ್ಯಾನ್ಸರ್ ಆಸ್ಪತ್ರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಯೋಜನೆಗೆ ಅಡಚಣೆ ತಂದದ್ದು ಯಾರು ? ಹಳೆಯ ಶಾಸಕರ ಹೆಸರನ್ನು ಎತ್ತುವುದರ ಬದಲು ಅಭಿವೃದ್ಧಿಯ ಬಗ್ಗೆ ಯೋಚಿಸಬೇಕು ಎಂದು ಸಂಜಯ್ ರೆಡ್ಡಿ ಪ್ರಶ್ನಿಸಿದರು.
ಅವರು ಮುಂದುವರಿದು, ರಮೇಶ್ ಕುಮಾರ್ ಅವರ ಅವಧಿಯಲ್ಲಿ ಪ್ರತಿ ಗ್ರಾಮಕ್ಕೂ ಶುದ್ಧ ಕುಡಿಯುವ ನೀರಿನ ಘಟಕ, ಅನೇಕ ರಸ್ತೆಗಳಿಗೆ ಡಾಂಬರೀಕರಣ, ಹೋಬಳಿಗಳಿಗೆ ವಿದ್ಯುತ್ ಸಬ್ಸ್ಟೇಷನ್ಗಳ ನಿರ್ಮಾಣ ನಡೆದಿದ್ದು ಇದು ಅವರ ಶ್ರಮದ ಫಲವೆಂದರು.
ನೈತಿಕತೆ ಯಾವುದು ? – ಕೆ.ಕೆ. ಮಂಜುನಾಥ್
ಕೋಮಲ್ ನಿರ್ದೇಶಕ ಕೆ.ಕೆ. ಮಂಜುನಾಥ್ ಮಾತನಾಡುತ್ತಾ ರಮೇಶ್ ಕುಮಾರ್ ಬಗ್ಗೆ ಮಾತನಾಡುವ ನೈತಿಕತೆ ಹಾಲಿ ಶಾಸಕರಿಗೆ ಇಲ್ಲ. ತಾಲೂಕಿನಲ್ಲಿ ಹೆಚ್ಚಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ವಿದ್ಯುತ್ ಉಪಕೇಂದ್ರಗಳು, ಅನುದಾನ ಸೌಲಭ್ಯಗಳ ಆಗಮನ ಇವೆಲ್ಲವೂ ಅವರ ಕಾಲದಲ್ಲೇ ಸಾಧ್ಯವಾಗಿದವು. ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಅವರು ಅಭಿವೃದ್ಧಿ ತಂದು ಕ್ಷೇತ್ರವನ್ನು ಮುಂದೆ ಕೊಂಡೊಯ್ದರು ಎಂದು ವಾಗ್ದಾಳಿ ನಡೆಸಿದರು.
ರೈತರ ವಿಚಾರದಲ್ಲಿ ಆಸಕ್ತಿ ಎಲ್ಲಿದೆ ? – ಬಿ.ಎಲ್. ಪ್ರಕಾಶ್ ಟೀಕೆ
ಪುರಸಭೆ ಮಾಜಿ ಅಧ್ಯಕ್ಷ ಬಿ.ಎಲ್. ಪ್ರಕಾಶ್ ಅವರು ಕನ್ನಡ ರಾಜ್ಯೋತ್ಸವದಲ್ಲಿ ಕನ್ನಡದ ಬಗ್ಗೆ ಮಾತಾಡದೇ ಬೇರೆ ಮಾತುಗಳಿಗೆ ತಿರುಗುವುದು ಸೂಕ್ತವಲ್ಲ. ಕೈಗಾರಿಕಾ ಪ್ರದೇಶಕ್ಕೆ ರೈತರು ವಿರೋಧ ವ್ಯಕ್ತಪಡಿಸುತ್ತಿರುವುದನ್ನು ಕಾಂಗ್ರೆಸ್ ಮುಖಂಡರು ಅಡ್ಡಿಪಡಿಸುತ್ತಿದ್ದಾರೆ ಎಂಬುದು ತಪ್ಪು ಮಾಹಿತಿ. ರೈತರ ಬಗ್ಗೆ ಕಾಳಜಿ ಇದ್ದಿದ್ದರೆ ಅರಣ್ಯ ವಿಷಯ ಚರ್ಚೆಯ ಜಿಲ್ಲಾ ಸಭೆಗೆ ಗೈರುಹಾಜರಾಗುತ್ತಿರಲಿಲ್ಲ ಎಂದು ಟೀಕಿಸಿದರು.
ಕಾರ್ಯಕ್ರಮದಲ್ಲಿ ಪಿಎಲ್ಡಿ ಬ್ಯಾಂಕ್ ಉಪಾಧ್ಯಕ್ಷ ನಾಗದೇನಹಳ್ಳಿ ಸೀತಾರಾಮರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್. ಅಕ್ಬರ್ ಶರೀಫ್, ಮಾಜಿ ಪುರಸಭೆ ಅಧ್ಯಕ್ಷ ಮಹಾಬಬ್ ಶರೀಫ್, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ವೆಂಕಟರೆಡ್ಡಿ ಹಾಗೂ ಪಾತೂರಗಡ್ಡ ವಾಸು, ಸೋಮಯಾಜಹಳ್ಳಿ ಮಂಜುನಾಥ್ರೆಡ್ಡಿ, ದ್ವಾರಸಂದ್ರ ಮುನಿವೆಂಕಟಪ್ಪ, ಬಂದರ್ಲಹಳ್ಳಿ ಮುನಿಪ್ಪ, ಗಂಗಾದರ್, ಶಬ್ಬೀರ್ ಖಾನ್, ಸರ್ದಾರ್, ರಾಜ, ರಫೀಕ್ ಅಹ್ಮದ್, ನರಸಿಂಹಮೂರ್ತಿ ಸೇರಿದಂತೆ ಅನೇಕರು ಹಾಜರಿದ್ದರು.

