

ಬೆಂಗಳೂರು: ರಾಜ್ಯದ ಬಡ ಕುಟುಂಬಗಳಿಗೆ ಪೌಷ್ಟಿಕ ಆಹಾರ ಭದ್ರತೆ ನೀಡುವ ಗುರಿಯೊಂದಿಗೆ ರೂಪಿಸಿದ ಇಂದಿರಾ ಆಹಾರ ಕಿಟ್ ಯೋಜನೆಯ ಪರಿಣಾಮಕಾರಿ ಜಾರಿಗಾಗಿ ಇಂದು ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಸರ್ಕಾರವು ಹಲವು ಪ್ರಮುಖ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿದ್ದ ಹೆಚ್ಚುವರಿ 5 ಕೆ.ಜಿ ಅಕ್ಕಿಯ ಬದಲಿಗೆ ಆಹಾರ ಕಿಟ್ ವಿತರಿಸುವ ನಿರ್ಧಾರವನ್ನು ಸಂಪುಟ ಈಗಾಗಲೇ ಅಂಗೀಕರಿಸಿದ್ದು, ಅದರ ಅನುಷ್ಠಾನಕ್ಕೆ ಅಗತ್ಯ ಕ್ರಮಗಳನ್ನು ತಕ್ಷಣ ಕೈಗೊಳ್ಳಲು ಸಭೆಯಲ್ಲಿ ಸೂಚಿಸಲಾಯಿತು.
ಮಾಸಿಕ 1.25 ಕೋಟಿ ಕಿಟ್ ಅವಶ್ಯಕತೆ
ರಾಜ್ಯದಲ್ಲಿ ಪ್ರತಿ ತಿಂಗಳು 1,25,08,262 ಆಹಾರ ಕಿಟ್ಗಳು ಅಗತ್ಯವಿದ್ದು, ಇದಕ್ಕೆ ಒಟ್ಟು ರೂ. 466 ಕೋಟಿ ವೆಚ್ಚವಾಗುವ ಅಂದಾಜು ಮಂಡಿಸಲಾಯಿತು. ಕುಟುಂಬದ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ತೊಗರಿ ಬೇಳೆ, ಸೂರ್ಯಕಾಂತಿ ಎಣ್ಣೆ, ಸಕ್ಕರೆ ಮತ್ತು ಉಪ್ಪು ಒಳಗೊಂಡ ಕಿಟ್ಗಳನ್ನು ವಿತರಿಸಲಾಗುವುದು.
ಪೌಷ್ಟಿಕತೆಗೆ ತೊಗರಿ ಬೇಳೆಗೆ ಆದ್ಯತೆ
ಯೋಜನೆಗಾಗಿ ಪ್ರತಿ ತಿಂಗಳು 18,628 ಮೆಟ್ರಿಕ್ ಟನ್ ತೊಗರಿ ಬೇಳೆ, ಹಾಗೂ 12,419 ಮೆಟ್ರಿಕ್ ಟನ್ ಎಣ್ಣೆ, ಸಕ್ಕರೆ ಮತ್ತು ಉಪ್ಪು ಅಗತ್ಯವಿದೆ. ಪೌಷ್ಟಿಕ ಮೌಲ್ಯವನ್ನು ಹೆಚ್ಚಿಸಲು ತೊಗರಿ ಬೇಳೆಯ ಪ್ರಮಾಣವನ್ನು ಗರಿಷ್ಠ ಮಟ್ಟದಲ್ಲಿ ಸೇರಿಸುವಂತೆ ಸೂಚಿಸಲಾಯಿತು.
ಪಾರದರ್ಶಕ ಖರೀದಿಗೆ ನೀತಿ-ನಿಯಮಗಳ ಅನುಸರಣೆ
ನಾಫೆಡ್ ಹಾಗೂ ಎನ್ಸಿಸಿಎಫ್ ನಂತಹ ಕೇಂದ್ರ ಸರ್ಕಾರದ ಸಹಕಾರಿ ಸಂಸ್ಥೆಗಳ ಮೂಲಕ ಖರೀದಿಗೆ ಆದ್ಯತೆ ನೀಡಲಾಗಿದ್ದು, ಕೆಟಿಪಿಪಿ ನಿಯಮಾವಳಿಗಳಂತೆ ಸಂಪೂರ್ಣ ಪಾರದರ್ಶಕ ಟೆಂಡರ್ ಪ್ರಕ್ರಿಯೆ ಅನುಸರಿಸಲು ಸೂಚಿಸಲಾಯಿತು. ಗುಣಮಟ್ಟದ ವಿಚಾರದಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳಬಾರದೆಂದು ಸಭೆಯಲ್ಲಿ ಒತ್ತಿ ಹೇಳಲಾಯಿತು.
ತಂತ್ರಜ್ಞಾನ ಆಧಾರಿತ ವಿತರಣೆ
ನ್ಯಾಯಬೆಲೆ ಅಂಗಡಿಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮೂಲಕ ಕಿಟ್ ಹಸ್ತಾಂತರ ವ್ಯವಸ್ಥೆಯು ಅನಿವಾರ್ಯವಾಗಲಿದೆ. ವಿತರಣೆ ಪ್ರಕ್ರಿಯೆಯಲ್ಲಿ ಅಕ್ರಮಗಳನ್ನು ತಡೆಯಲು ಮತ್ತು ಮೇಲ್ವಿಚಾರಣೆಯನ್ನು ಬಲಪಡಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಲಾಜಿಸ್ಟಿಕ್ಸ್ ಬಲಪಡಿಸಿ
ಸಗಟು ಗೋದಾಮುಗಳಿಂದ ನ್ಯಾಯಬೆಲೆ ಅಂಗಡಿಗಳವರೆಗೆ ಕಿಟ್ಗಳು ಪ್ರತಿ ತಿಂಗಳು 10ರೊಳಗಾಗಿ ತಲುಪುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಇಂದಿರಾ ಆಹಾರ ಕಿಟ್ ಯೋಜನೆ ರಾಜ್ಯದ ಲಕ್ಷಾಂತರ ಬಡ ಕುಟುಂಬಗಳ ಪೌಷ್ಟಿಕ ಭದ್ರತೆಯನ್ನು ಗುರಿಯಾಗಿಟ್ಟುಕೊಂಡಿದ್ದು, ಪಾರದರ್ಶಕವಾಗಿ ಮತ್ತು ಅತ್ಯುತ್ತಮ ಗುಣಮಟ್ಟದೊಂದಿಗೆ ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ, ಮುಖ್ಯಮಂತ್ರಿ ಅವರ ರಾಜಕೀಯ ಸಲಹೆಗಾರ ನಸೀರ್ ಅಹ್ಮದ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಸೇರಿದಂತೆ ಉನ್ನತ ಅಧಿಕಾರಿಗಳಿದ್ದರು.


