
ಶ್ರೀನಿವಾಸಪುರ : ಭಾಷೆಯ ಕಾಂತಿ ಮಸುಕಾದ ಕಾಲಗಳಲ್ಲಿಯೂ ಜನರನ್ನು ಒಂದೇ ನೆರಳಿಗೆ ಕರೆದೊಯ್ಯುವ ನಾಡಿನ ನಂಟು ಕನ್ನಡದದ್ದು ಎಂದು ನಿವೃತ್ತ ಪ್ರಾಧ್ಯಾಪಕ ಡಾ. ಸಿ.ಎ. ರಮೇಶ್ ಹೇಳಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಚಕೋರ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.
‘ಕರ್ನಾಟಕತ್ವ ಮತ್ತು ಕನ್ನಡ ಕವಿತೆ’ ವಿಷಯವಾಗಿ ಉಪನ್ಯಾಸ ನೀಡಿದ ಅವರು, ಆದಿ ಕವಿಗಳಿಂದ ಇಂದಿನ ಪೀಳಿಗೆತನಕ ಎಲ್ಲರೂ ಕಾವ್ಯದ ಮೂಲಕ ಕನ್ನಡದ ಹಿರಿಮೆಯನ್ನು ವಿಶ್ವದ ಅಂಚುಗಳಿಗೆ ಕರೆದುಕೊಂಡು ಹೋಗಿದ್ದಾರೆ. ಇದು ಕನ್ನಡ ಸಂಸ್ಕೃತಿಯ ಒಟ್ಟಾರೆ ಶಕ್ತಿಯ ಪ್ರತಿಬಿಂಬ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಎನ್.ಬಿ. ಗೋಪಾಲಗೌಡ ಮಾತನಾಡಿ, ಕರ್ನಾಟಕ ಏಕೀಕರಣ ಚಳುವಳಿಗೆ ಕನ್ನಡ ಸಾಹಿತಿಗಳ ಕೊಡುಗೆ ಅಳತೆಯಾಚೆದ್ದು. ಚಳುವಳಿಗಾರರ ಕೈ ಹಿಡಿದಾಗ ಸಾಹಿತ್ಯ ಚಳುವಳಿಯ ರೂಪ ಪಡೆದು ಜನಮನಗಳಲ್ಲಿ ಜಾಗೃತಿ ಮೂಡಿಸಿತು. ಕುವೆಂಪು, ಬೇಂದ್ರೆ, ಕಾರಂತ ಮೊದಲಾದವರ ಕೃತಿ ಮತ್ತು ನಿಲುವುಗಳು ಇಂದಿಗೂ ಮಾರ್ಗದೀಪ ಎಂದು ಹೇಳಿದರು.
ಕನ್ನಡ ಸಾಹಿತ್ಯ ಅಕಾಡೆಮಿಯ ಚಕೋರ ಬಳಗದ ಕೋಲಾರ ಜಿಲ್ಲಾ ಸಂಚಾಲಕ ಜಯಮಂಗಲ ಚಂದ್ರಶೇಖರ್ ಪ್ರಾಸ್ತಾನಿಕ ನುಡಿಗಳಲ್ಲಿ, ಕನ್ನಡತ್ವ ಎಂದರೆ ಕೇವಲ ಭಾಷೆಯಲ್ಲ ಸಂಸ್ಕೃತಿ, ಪರಂಪರೆ, ಜೀವನಪದ್ದತಿ ಎಲ್ಲವನ್ನೂ ಹೊತ್ತಿರುವ ಅಸ್ಮಿತೆ. ಆಲೂರು ವೆಂಕಟರಾಯರು ಕನ್ನಡತ್ವ ಎಂಬ ಪದವನ್ನು ಏಕೀಕರಣ ಚಳುವಳಿಯ ಆರಂಭದಲ್ಲೇ ಬಲವಾಗಿ ಬಳಸಿದ್ದರು. ಸಾಹಿತ್ಯವನ್ನು ತಾಲೂಕು ಹಾಗೂ ಹೋಬಳಿ ಮಟ್ಟಗಳಿಗೆ ತಲುಪಿಸುವ ನಿಟ್ಟಿನಲ್ಲಿ ಸರಣಿ ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ. ಎಸ್. ಸಣ್ಣೀರಯ್ಯ ವಹಿಸಿದ್ದು, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಚ್. ಮೃತ್ಯುಂಜಯ, ಸಾಹಿತಿ ಆರ್. ಚೌಡರೆಡ್ಡಿ ಪಣಸಮಾಕನಹಳ್ಳಿ, ಕಸಾಪ ತಾಲೂಕು ಅಧ್ಯಕ್ಷೆ ಪಿ.ಎಸ್. ಮಂಜುಳಾ, ಪ್ರಾಂಶುಪಾಲ ಎನ್. ಶಂಕರೇಗೌಡ, ದಲಿತ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಜಿ.ಕೆ. ನಾರಾಯಣಸ್ವಾಮಿ, ಕವಿಗಳಾದ ಚಲಪತಿ, ಕೆ.ವಿ. ನಾಗರಾಜ್, ಶಿಕ್ಷಕ ವೆಂಕಟೇಶಮೂರ್ತಿ ಹಾಗೂ ಅನೇಕ ಮಂದಿ ಭಾಗವಹಿಸಿದ್ದರು.
ಗಾಯಕ ಮುರಳಿಬಾಬು, ನಾಗರತ್ನಮ್ಮ ಮತ್ತು ತಂಡ ಸುಗಮಸಂಗೀತದ ಲಯದಲ್ಲಿ ಕಾರ್ಯಕ್ರಮಕ್ಕೆ ಸಂವೇದನಾತ್ಮಕ ಸೊಬಗು ತುಂಬಿದರು.


