

ಉಡುಪಿ: ವಿಶೇಷ ಚೇತನ ಮಕ್ಕಳ ಆರೈಕೆಯು ಒಂದು ಸವಾಲಿನ ಹಾಗೂ ಜವಾಬ್ದಾರಿಯುತ ಕೆಲಸವಾಗಿದ್ದು ಉತ್ತಮ ಆರೈಕೆ, ಪ್ರೋತ್ಸಾಹ ಮತ್ತು ಬೆಂಬಲದಿಂದ ಇಂತಹ ಮಕ್ಕಳು ತಮ್ಮ ಜೀವನದಲ್ಲಿ ಯಶಸ್ಸಿನ ಮೆಟ್ಟಿಲನ್ನು ಏರಲು ಸಾಧ್ಯವಿದೆ ಎಂದು ಉದ್ಯಮಿ, ದಾನಿ ಮೈಕಲ್ ಡಿಸೋಜಾ ಹೇಳಿದರು
ಅವರು ಶನಿವಾರ ಪಾಂಬೂರು ಮಾನಸ ವಿಶೇಷ ಚೇತನ ಶಾಲೆಯಲ್ಲಿ ಆಟಿಸಂ ವಿಭಾಗದ ಪ್ರಾಥಮಿಕ ತರಬೇತಿ ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ವಿಶೇಷ ಚೇತನ ಮಕ್ಕಳು ಸಮಾಜದ ಆಸ್ತಿ. ಅವರನ್ನು ಆರೈಕೆ ಮಾಡುವುದು, ಅವರ ಶೈಕ್ಷಣಿಕ ಚಟುವಟಿಕೆಗೆ ಪ್ರೇರಣೆ ನೀಡುವುದು ಪುಣ್ಯದ ಕೆಲಸವಾಗಿದ್ದು ಮಾನಸ ಸಂಸ್ಥೆ ಕಳೆದ 28 ವರ್ಷಗಳಿಂದ ನಿರಂತರವಾಗಿ ಮಾಡಿಕೊಂಡು ಬಂದಿದ್ದು ದೈಹಿಕವಾಗಿ ಸರಿ ಇರುವ ಮಕ್ಕಳನ್ನು ನಿಭಾಯಿಸುವುದೇ ಕಷ್ಟಕರವಾಗಿರುವಾಗ ವಿಶೇಷ ಚೇತನ ಮಕ್ಕಳಿಗೆ ಶಿಕ್ಷಣ ನೀಡಿ ಅವರನ್ನು ಆರೈಕೆ ಮಾಡುತ್ತಿರುವ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಶಿಕ್ಷಕರ ಪಾತ್ರ ಸಮಾಜಕ್ಕೆ ಅನುಕರಣೀಯವಾದದ್ದು ಎಂದರು.
ದೇವರು ನಮಗೆ ನೀಡಿದ ಸಂಪತ್ತಿನ ಒಂದು ಭಾಗವನ್ನು ಅಗತ್ಯವಿರುವ ಇಂತಹ ಸಂಸ್ಥೆಗಳಿಗೆ ನೀಡಿದಾಗ ದೇವರ ಆಶೀರ್ವಾದ ಲಭಿಸಿದಂತಾಗುತ್ತದೆ. ಮಾನಸ ಸಂಸ್ಥೆ ವಿಶೇಷ ಚೇತನ ಮಕ್ಕಳಿಗೆ ಶಿಕ್ಷಣ ನೀಡುವ ಜತೆಗೆ ಅವರ ಆಸಕ್ತಿದಾಯಕ ಕ್ಷೇತ್ರವನ್ನು ಗುರುತಿಸಿ ಅದರಲ್ಲಿ ತರಬೇತಿ ನೀಡುತ್ತಿರುವ ಕೆಲಸಕ್ಕೆ ಮುಂದೆಯೂ ಸಹಕಾರ ನೀಡುವುದಾಗಿ ಹೇಳಿದರು.
ನೂತನ ಕೇಂದ್ರವನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ| ಜೆರಾಲ್ಡ್ ಐಸಾಕ್ ಲೋಬೋ ಆಶೀರ್ವಚನ ನೇರವೇರಿಸಿದರು.
ಆಟಿಸಂ ವಿಭಾಗದ ಪ್ರಾಥಮಿಕ ತರಬೇತಿ ಕೇಂದ್ರದ ನಿರ್ಮಾಣಕ್ಕೆ ಆರ್ಥಿಕ ಸಹಾಯ ನೀಡಿದ ಮೈಕಲ್ ಫ್ಲಾವಿಯಾ ಡಿಸೋಜಾ ದಂಪತಿಗಳನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ, ನಿವೃತ್ತ ಯೋಧ ಕಮೋಡರ್ ಜೆರೊಮ್ ಕ್ಯಾಸ್ತಲಿನೋ ಮೂಡುಬೆಳ್ಳೆ, ಮಾನಸ ಸಂಸ್ಥೆಯ ಪ್ರಾಂಶುಪಾಲರಾದ ಸಿಸ್ಟರ್ ವಿನ್ನಿಗೊನ್ಸಾಲ್ವಿಸ್, ಸಹಕಾರ್ಯದರ್ಶಿ ಮೇರಿ ಡಿಸೋಜಾ, ಕೋಶಾಧಿಕಾರಿ ಜೊಸೇಫ್ ಎಫ್ ನೊರೊನ್ಹಾ ಟ್ರಸ್ಟಿಗಳಾದ ಡಾ|ಎಡ್ವರ್ಡ್ ಲೋಬೊ, ಹೆನ್ರಿ ಮಿನೇಜಸ್, ಕಿರಣ್ ಕ್ರಾಸ್ತಾ, ಸಲಹಾ ಸಮಿತಿ ಸದಸ್ಯರಾದ ವಾಲ್ಟರ್ ಸಿರಿಲ್ ಪಿಂಟೊ, ಜೆರಾಲ್ಡ್ ರೊಡ್ರಿಗಸ್, ಗ್ರೇಸಿ ಲಸ್ರಾದೊ, ಮೈಕಲ್ ಡಿಸೋಜಾ ಟ್ರಸ್ಟಿನ ಸಲಹಾಸಮಿತಿ ಸದಸ್ಯರಾದ ಓಸ್ವಲ್ಡ್ ರೊಡ್ರಿಗಸ್, ಲೈನಲ್ ಆರಾನ್ಹಾ, ಸ್ಟೀಫನ್ ಪಿಂಟೊ, ಶಾಲೆಯ ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಗಳು, ದಾನಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಮಾನಸ ಟ್ರಸ್ಟ್ ಅಧ್ಯಕ್ಷರಾದ ಜೋನ್ ಮಾರ್ಟಿಸ್ ಸ್ವಾಗತಿಸಿ, ಕಾರ್ಯದರ್ಶಿ ಡಾ|ಜೆರಾಲ್ಡ್ ಪಿಂಟೊ ವಂದಿಸಿದರು. ರೀನಾ ಡಿಸೋಜಾ, ಲವೀನಾ ಮೋನಿಸ್ ಕಾರ್ಯಕ್ರಮ ನಿರೂಪಿಸಿದರು.














































