

ಶ್ರೀನಿವಾಸಪುರ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಕರ್ನಾಟಕ ರಾಜ್ಯದಾದ್ಯಂತ ಸೇರಿದಂತೆ ಕೋಲಾರ ಜಿಲ್ಲೆಯಲ್ಲಿ ಚುರುಕಾಗಿ ನಡೆಯುತ್ತಿದೆ.
ಆದರೆ ಸಮೀಕ್ಷೆಯ ಉದ್ದೇಶವನ್ನು ಸರಿಯಾಗಿ ಅರಿಯದೆ, ಕೆಲವು ಪ್ರದೇಶಗಳಲ್ಲಿ ವದಂತಿಗಳು ಹರಡುತ್ತಿರುವುದು ಸಾರ್ವಜನಿಕರಲ್ಲಿ ಗೊಂದಲ ಉಂಟುಮಾಡಿದೆ.
ಗಣತಿದಾರರು ಮನೆಮನೆಗೆ ತೆರಳಿ ವಿವರ ಸಂಗ್ರಹಿಸುತ್ತಿರುವ ಸಂದರ್ಭದಲ್ಲಿ ಪಡಿತರ ಚೀಟಿ ರದ್ದು ಮಾಡುವ ಉದ್ದೇಶದಿಂದಲೇ ಅಧಿಕಾರಿಗಳು ಬರುತ್ತಿದ್ದಾರೆ ಎಂಬ ತಪ್ಪು ಕಲ್ಪನೆ ಕೆಲವರಲ್ಲಿ ಮೂಡಿದ್ದು, ಜನರು ಸರಿಯಾದ ಮಾಹಿತಿಯನ್ನು ನೀಡಲು ಹಿಂಜರಿಯುತ್ತಿರುವುದು ಅಧಿಕಾರಿಗಳಿಗೆ ಆತಂಕಕಾರಿ ಸಂಗತಿಯಾಗಿ ಪರಿಣಮಿಸಿದೆ.
ಈ ಕುರಿತು ಸ್ಪಷ್ಟನೆ ನೀಡಿದ ಪ್ರಧಾನ ಮಂತ್ರಿ ಹೊಸ 15 ಅಂಶಗಳ ಕಾರ್ಯಕ್ರಮ ಸಮಿತಿಯ ಜಿಲ್ಲಾ ಸದಸ್ಯ ಶಬ್ಬೀರ್ ಅಹ್ಮದ್ ಪಾಷಾ, ಸಮೀಕ್ಷೆಯ ಉದ್ದೇಶ ಪಡಿತರ ಚೀಟಿ ರದ್ದು ಮಾಡುವುದು ಅಥವಾ ಸೌಲಭ್ಯ ಕಡಿತಗೊಳಿಸುವುದು ಅಲ್ಲ. ಇದು ಕೇವಲ ಸಾಮಾಜಿಕ ಹಾಗೂ ಶೈಕ್ಷಣಿಕ ದತ್ತಾಂಶ ಸಂಗ್ರಹಣೆಗೆ ಮಾತ್ರ ಸೀಮಿತವಾಗಿದೆ.
ರಾಜ್ಯದ ಎಲ್ಲಾ ವರ್ಗಗಳ ನಿಜಸ್ಥಿತಿ ಅರಿತು ಭವಿಷ್ಯದ ಸಮಗ್ರ ಅಭಿವೃದ್ಧಿ ಯೋಜನೆ ರೂಪಿಸಲು ಈ ಸಮೀಕ್ಷೆ ನೆರವಾಗಲಿದೆ ಎಂದು ಹೇಳಿದರು.
ಅವರು ಮುಂದುವರಿದು, ರಾಜ್ಯಾದ್ಯಂತ ಇನ್ನೂ ಅಸಮಾನತೆಗಳು ಗೋಚರಿಸುತ್ತಿವೆ. ಕೆಲವರು ಶಿಕ್ಷಣದಲ್ಲಿ ಹಿಂದುಳಿದರೆ, ಕೆಲವರು ಸಾಮಾಜಿಕ–ಆರ್ಥಿಕವಾಗಿ ಹಿಂದುಳಿದಿದ್ದಾರೆ. ಈ ಅಸಮತೋಲನವನ್ನು ಸರಿಪಡಿಸಲು ನಿಖರವಾದ ದತ್ತಾಂಶ ಅಗತ್ಯವಾಗಿದೆ.
ಸಮೀಕ್ಷೆಯಿಂದ ದೊರೆಯುವ ಮಾಹಿತಿಯು ಮುಂದಿನ ಸರ್ಕಾರಿ ಯೋಜನೆಗಳ ಬುನಾದಿಯಾಗಲಿದೆ ಎಂದು ವಿವರಿಸಿದರು.
ಸಮೀಕ್ಷೆಯಲ್ಲಿ ಎಲ್ಲ ಸಮುದಾಯಗಳೂ ಸಮಾನವಾಗಿ ಪಾಲ್ಗೊಳ್ಳಬೇಕು. ವದಂತಿಗಳಿಗೆ ಕಿವಿ ಕೊಡದೆ, ಸಮೀಕ್ಷಾ ಸಿಬ್ಬಂದಿಗೆ ಧೈರ್ಯವಾಗಿ ಅಗತ್ಯ ಮಾಹಿತಿಯನ್ನು ನೀಡಬೇಕು. ಇದು ಎಲ್ಲರ ಹಿತದೃಷ್ಟಿಯಿಂದ ನಡೆಯುತ್ತಿರುವ ಕಾರ್ಯ ಎಂದು ಶಬ್ಬೀರ್ ಅಹ್ಮದ್ ಪಾಷಾ ಸಾರ್ವಜನಿಕರನ್ನು ಮನವಿ ಮಾಡಿದರು.
ಜಿಲ್ಲೆಯಾದ್ಯಂತ ಗಣತಿದಾರರು ಕುಟುಂಬ ಸದಸ್ಯರ ಶಿಕ್ಷಣ, ಉದ್ಯೋಗ, ಆರ್ಥಿಕ ಸ್ಥಿತಿ, ಸಾಮಾಜಿಕ ಅಂಶಗಳ ಕುರಿತು ಮಾಹಿತಿ ದಾಖಲಿಸುತ್ತಿದ್ದಾರೆ. ಹಿಂದುಳಿದ ವರ್ಗಗಳಷ್ಟೇ ಅಲ್ಲದೆ, ಎಲ್ಲಾ ಸಮುದಾಯಗಳ ನಿಜಸ್ಥಿತಿಯನ್ನು ಒಳಗೊಂಡಂತೆ ದತ್ತಾಂಶ ಸಂಗ್ರಹಣೆ ನಡೆಯುತ್ತಿದೆ.
ಇದೊಂದು ಜನಪರ ಕಾರ್ಯಕ್ರಮ.
ಇದರ ಯಶಸ್ಸಿಗೆ ಸಾರ್ವಜನಿಕರ ಸಹಕಾರ ಅವಶ್ಯಕ. ಸಮೀಕ್ಷೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ನಾವುಲ್ಲರೂ ಕೈಜೋಡಿಸಿದಂತಾಗುತ್ತದೆ ಎಂದು ಪಾಷಾ ಅಂತಿಮವಾಗಿ ಕೋರಿದರು.

