

ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದಲ್ಲಿ ಪ್ರಥಮ ವರ್ಷದ ಮೊದಲ ಬ್ಯಾಚ್ ವಿದ್ಯಾರ್ಥಿಗಳಿಗೆ ಒರಿಯಂಟೇಶನ್ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು. ಮುಖ್ಯ ಅತಿಥಿಗಳಾಗಿ ಕೋಡ್ ಜ಼ಿಂಗ್ ಇದರ ಸಿ ಇ ಓ ಆಗಿರುವ ಶ್ರೀ ಶ್ರೀನಿವಾಸ ಪ್ರಭು ಇವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅವರು ತಮ್ಮ ಆರಂಭಿಕ ಶೈಕ್ಷಣಿಕ ಜೀವನದಲ್ಲಿ ತಾವು ಎದುರಿಸಿದ ಸವಾಲುಗಳ ಬಗ್ಗೆ ವಿವರಿಸುತ್ತ, ನಿರಂತರ ಪ್ರಯತ್ನ, ಸ್ವಯಂ ಶಿಸ್ತು ಮತ್ತು ತಮ್ಮ ಇಚ್ಛಾಶಕ್ತಿಯಿಂದ ಅವರು ಕ್ರಮೇಣ ಈ ಅಡೆತಡೆಗಳನ್ನು ನಿವಾರಿಸಿ ಕೊಂಡರು ಎಂಬುದಾಗಿ ಹೇಳಿದರು. ಕಠಿಣ ಪರಿಶ್ರಮ ಮತ್ತು ದೃಢ ಸಂಕಲ್ಪದಿಂದ ಮಿತಿಗಳನ್ನು ಸಾಮರ್ಥ್ಯಗಳಾಗಿ ಪರಿವರ್ತಿಸಬಹುದು ಎಂಬುದನ್ನು ಸಭಿಕರ ಮನಮುಟ್ಟುವಂತೆ ಹೇಳಿದರು. ಉಪ ಪ್ರಾಂಶುಪಾಲರಾದ ಡಾ ಮೆಲ್ವಿನ್ ಡಿ ಸೋಜ ಅವರು ವಿದ್ಯಾರ್ಥಿಯ ಶೈಕ್ಷಣಿಕ ಪಯಣದಲ್ಲಿ, ಕಾಲೇಜು ಸೇರಿದ ನಂತರವೂ ಪೋಷಕರು ವಹಿಸುವ ನಿರ್ಣಾಯಕ ಪಾತ್ರವನ್ನು ಒತ್ತಿ ಹೇಳಿದರು. ವಿವಿಧ ವಿಭಾಗದ ಡೀನ್ ಅವರು ಮಾತಾಡಿ ಕಾಲೇಜಿನಲ್ಲಿ ಲಭ್ಯವಿರುವ ಸೌಲಭ್ಯಗಳು , ಪ್ಲೇಸ್ಮೆಂಟ್ ವಿಭಾಗದ ತರಭೇತಿ ಇನ್ನಿತರ ವಿಷಯಗಳ ಬಗ್ಗೆ ವಿವರಣೆ ನೀಡಿದರು. ಅಧ್ಯಕ್ಷತೆ ವಹಿಸಿದ ಕಾಲೇಜಿನ ಬ್ರ್ಯಾಂಡ್ ಬಿಲ್ಡಿಂಗ್ ವಿಭಾಗದ ನಿರ್ದೇಶಕರಾದ ಡಾ ರಾಮಕೃಷ್ಣ ಹೆಗಡೆ ಅವರು ಮಾತನಾಡಿ ವಿದ್ಯಾರ್ಥಿಗಳು ಈಗ ಕೇವಲ ವ್ಯಕ್ತಿಗಳಲ್ಲ, ನಮ್ಮ ಸಂಸ್ಥೆಯ ಪ್ರತಿನಿಧಿಗಳು ಎನ್ನುತ್ತ ತಾವು ಶಿಸ್ತನ್ನು ಕಾಪಾಡಿಕೊಳ್ಳುವುದು, ಬಲವಾದ ವೈಯಕ್ತಿಕ ಬ್ರ್ಯಾಂಡ್ ಅನ್ನು ಅಭಿವೃದ್ಧಿಪಡಿಸುವುದು ಮತ್ತು ನಾಯಕತ್ವ, ಆತ್ಮವಿಶ್ವಾಸ ಮತ್ತು ಭಾವನಾತ್ಮಕ ಬುದ್ಧಿವಂತಿಕೆಯಂತಹ ಮೃದು ಕೌಶಲ್ಯಗಳ ಮೇಲೆ ಕೆಲಸ ಮಾಡುವುದರ ಪ್ರಾಮುಖ್ಯತೆಯ ಬಗ್ಗೆ ಅವರು ಮಾತನಾಡಿದರು. ಪಠ್ಯೇತರ ಚಟುವಟಿಕೆಗಳು, ಕ್ಲಬ್ಗಳು, ಕಾರ್ಯಾಗಾರಗಳು ಮತ್ತು ಅವರ ಒಟ್ಟಾರೆ ಬೆಳವಣಿಗೆಗೆ ಕೊಡುಗೆ ನೀಡುವ ಘಟನೆಗಳಲ್ಲಿ ಭಾಗವಹಿಸಲು ಅವರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ನೆರೆದ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ನೀಡಲಾಯಿತು.
ವಿದ್ಯಾರ್ಥಿನಿ ಇಶ್ರತ್ ಹಾಗೂ ಮಿನಾಜ಼್ ಕಾರ್ಯಕ್ರಮ ನಿರೂಪಿಸಿದರು. ಅಂತಿಮ ವರ್ಷದ ವಿದ್ಯಾರ್ಥಿನಿ ಸುಪ್ರೀತ ಸ್ವಾಗತಿಸಿ, ಅನಿಶ್ ಪೂಜಾರಿ ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳು, ಪೋಷಕರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಒಂದು ವಾರಗಳ ಇಂಡಕ್ಷನ್ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ನೀತಿ, ಅನ್ವೇಷಣೆ, ತಾಂತ್ರಿಕ, ಕಲೆ, ಆಂಗ್ಲ ಭಾಷೆ, ಹೀಗೆ ವಿವಿಧ ವಿಭಾಗದಲ್ಲಿ ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ತರಭೇತಿ ನೀಡಲಾಯಿತು.

