

ಶ್ರೀನಿವಾಸಪುರ, ಆ. ೪ – ಹಬ್ಬದ ಒಳಗೆ ಚರಂಡಿಗಳನ್ನು ಸ್ವಚ್ಛಗೊಳಿಸಿ ಬ್ಲೀಚಿಂಗ್ ಪೌಡರ್ ಹಾಕುವ ಜೊತೆಗೆ ಬೀದಿ ದೀಪಗಳನ್ನು ತ್ವರಿತವಾಗಿ ಸ್ಥಾಪಿಸುವಂತೆ ಹಾಗೂ ನೀರಿನ ಕೊರತೆಯುಳ್ಳ ಗ್ರಾಮಗಳಲ್ಲಿ ತಕ್ಷಣ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಶಾಸಕರಾದ ಜಿ.ಕೆ. ವೆಂಕಟಶಿವಾರೆಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ಹೊರವಲಯದ ಹೊಗಳಗೆರೆ ಕೃಷಿ ಮಾವು ಅಭಿವೃದ್ದಿ ಮಂಡಳಿ ಸಭಾಂಗಣದಲ್ಲಿ ಸೋಮವಾರ ನಡೆದ ಅಧಿಕಾರಿಗಳ ಕೆಡಿಪಿ (ಕೆಳಮಟ್ಟದ ಅಭಿವೃದ್ಧಿ) ಸಭೆಗೆ ಚಾಲನೆ ನೀಡಿದ ಅವರು ಮಾತನಾಡಿದರು.
ಹಳ್ಳಿಗಳಲ್ಲಿ ನಿಲ್ಲಿಸಿರುವ ಜೆಜೆಎಂ (ಜಲ ಜೀವನ್ ಮಿಷನ್) ಕಾಮಗಾರಿಗಳನ್ನು ಪುನಃ ಆರಂಭಿಸಿ ಗುಣಮಟ್ಟದೊಂದಿಗೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚನೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಶುದ್ಧ ಕುಡಿಯುವ ನೀರಿಗಾಗಿ ಆರಂಭಿಸಿರುವ ಘಟಕಗಳನ್ನು CSR ಅನುದಾನದ ಮೂಲಕ ಪೂರ್ಣಗೊಳಿಸಲು ಇಒಗೆ ಸೂಚನೆ ನೀಡಿರುವುದಾಗಿ ಅವರು ತಿಳಿಸಿದರು. ಎರಡು ತಿಂಗಳೊಳಗೆ ಎಲ್ಲಾ ಶುದ್ಧ ನೀರಿನ ಘಟಕಗಳು ಕಾರ್ಯನಿರ್ವಹಿಸಲು ಬೇಕಾದ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಲಕ್ಷ್ಮೀಪುರ ಗ್ರಾಮದಲ್ಲಿ ಸರ್ಕಾರಿ ಶಾಲೆಯ ಜಮೀನಿಗೆ ಸಂಬಂಧಿಸಿದಂತೆ ಲಪಟಾಯಿಸುವ ಯತ್ನ ನಡೆಯುತ್ತಿರುವುದನ್ನು ತಡೆಗಟ್ಟುವ ಸಲುವಾಗಿ ಬಿಇಒ ಹಾಗೂ ಪಿಡಿಒ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಒಂದು ಗುಂಟೆಯನ್ನೂ ಬಿಡಬಾರದು ಎಂದು ಖಡಕ್ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಇಒ ಸರ್ವೇಶ್, ತಾಲ್ಲೂಕಿನ ೪೨೦ ಶಾಲೆಗಳ ಮೂಲಭೂತ ಸೌಲಭ್ಯ ಅಭಿವೃದ್ಧಿಗೆ ನರೇಗಾ ಯೋಜನೆಯಡಿಯಲ್ಲಿ ೨೦೦ ಕಾಮಗಾರಿಗಳು ಪೂರ್ಣಗೊಂಡಿದ್ದು, ಉಳಿದ ೨೨೦ ಕಾಮಗಾರಿಗಳನ್ನು ಒಂದೂವರೆ ತಿಂಗಳಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ಹೇಳಿದರು.
ಸಭೆಯಲ್ಲಿ ತಹಶೀಲ್ದಾರ್ ಜಿ.ಎನ್. ಸುದೀಂದ್ರ, ತಾ.ಪಂ. ಸಹಾಯಕ ನಿರ್ದೇಶಕ ರಾಮಪ್ಪ, ವ್ಯವಸ್ಥಾಪಕ ಮಂಜುನಾಥ್, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಮನೋಹರ್, ಕೆಡಿಪಿ ನಾಮ ನಿರ್ದೇಶಿತ ಸದಸ್ಯರು ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾ.ಪಂ. ಪಿಡಿಒ ಗಳು ಭಾಗವಹಿಸಿದ್ದರು.

