

ಶ್ರೀನಿವಾಸಪುರ, ಜುಲೈ 25 – ಪಟ್ಟಣದ ಜಾಕಿರ್ ಹುಸೇನ್ ಮೊಹಲ್ಲಾಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉರ್ದು ಹಾಗೂ ಇಂಗ್ಲಿಷ್ ಮಾಧ್ಯಮದ ಹಿರಿಯ ಪ್ರಾಥಮಿಕ ಶಾಲೆಗೆ ಪುರಸಭೆ ಅಧ್ಯಕ್ಷ ಭಾಸ್ಕರ್ ಅವರು ದಿಢೀರ್ ಭೇಟಿ ನೀಡಿದ್ದು, ಶಾಲೆಯ ಮೂಲಭೂತ ಸೌಲಭ್ಯಗಳ ಕೊರತೆ ಬಗ್ಗೆ ಪರಿಶೀಲನೆ ನಡೆಸಿದರು.
ಶಾಲೆಯ ಶಿಕ್ಷಕರೊಂದಿಗೆ ಮಾತುಕತೆ ನಡೆಸಿದ ಅಧ್ಯಕ್ಷರು, ಶುದ್ಧ ಕುಡಿಯುವ ನೀರಿನ ಕೊರತೆಯ ಬಗ್ಗೆ ಗಮನ ಹರಿಸಿ ನೂತನ ನೀರಿನ ಸಂಪು ನಿರ್ಮಿಸಲು ಹಾಗೂ ಶಾಲೆಗೆ ಅಗತ್ಯವಿರುವ ಇತರ ಮೂಲಭೂತ ಸೌಲಭ್ಯಗಳನ್ನು ಕೂಡ ತ್ವರಿತವಾಗಿ ಒದಗಿಸುವ ಭರವಸೆ ನೀಡಿದರು.
ಅಡುಗೆಮನೆಯ ಪರಿಸ್ಥಿತಿ, ಮಕ್ಕಳಿಗೆ ನೀಡಲಾಗುವ ಮಧ್ಯಾಹ್ನ ಭೋಜನದ ಗುಣಮಟ್ಟ ಮತ್ತು ಪಾಕವಿಧಾನದ ಬಗ್ಗೆ ನೇರವಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಮಕ್ಕಳ ಅಭಿಪ್ರಾಯ ಆಧರಿಸಿ ಅಡುಗೆಮನೆ ಸುಧಾರಣೆಗಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗೌನಿಪಲ್ಲಿ ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷ ಮತ್ತು ಕಾಂಗ್ರೆಸ್ ಹಿರಿಯ ಮುಖಂಡ ಬಕ್ಷುಸಾಬ್ ಮಾತನಾಡಿ, ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅಲ್ಪಸಂಖ್ಯಾತ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸೌಲಭ್ಯಗಳು ಅತ್ಯಂತ ಅಗತ್ಯವಿದೆ. ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳ ಸಹಕಾರದಿಂದ ಶಾಲೆಯ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಪುರಸಭೆ ಸದಸ್ಯೆ ಸಂಜೆಯ ಸಿಂಗ್, ಗೌನಿಪಲ್ಲಿ ಗ್ರಾಮ ಪಂಚಾಯತ್ನ ಸದಸ್ಯ ಖಾದರ್ ಬಾಷಾ, ಪ್ರಧಾನಮಂತ್ರಿ ಹೊಸ 15 ಅಂಶಗಳ ಕಾರ್ಯಕ್ರಮದ ಜಿಲ್ಲಾ ಸಮಿತಿ ಸದಸ್ಯ ಶಬ್ಬೀರ್ ಅಹ್ಮದ್, ಶಾಲೆಯ ಮುಖ್ಯ ಶಿಕ್ಷಕ ಮೊಹಮ್ಮದ್ ಸಾಧಿಕ್, ಎಸ್ಡಿಎಂಸಿ ಅಧ್ಯಕ್ಷ ಹಿದಾಯತ್ ಉಲ್ಲಾ ಖಾನ್, ಡಾ ಎ ಪಿ ಜೆ ಅಬ್ದುಲ್ ಕಲಾಂ ವೆಲ್ಫೇರ್ ಟ್ರಸ್ಟ್ ಉಪಾಧ್ಯಕ್ಷ ಇಲಿಯಾಸ್ ಪಾಷ , ಕಾರ್ಯದರ್ಶಿ ಹೆಚ್ ಅಕ್ರಂ ಪಾಷ , ಇಂತಿಯಾಸ್ ಪಾಷ, ಸೈಯದ್ ಅಮ್ಜದ್ ಪಾಷಾ, ರಫೀಕ್ ಅಹ್ಮದ್, ನಾಗೇಶ್ ಹಾಗೂ ಇತರರು ಉಪಸ್ಥಿತರಿದ್ದರು.
ಸ್ಥಳೀಯ ಸಮುದಾಯದ ಮುಖಂಡರು ಶಾಲೆಯ ಮುಂದಿನ ಬೆಳವಣಿಗೆಯ ಬಗ್ಗೆ ಹಿತಚಿಂತನೆ ವ್ಯಕ್ತಪಡಿಸಿ, ಉತ್ತಮ ಶೈಕ್ಷಣಿಕ ಪರಿಸರ ನಿರ್ಮಾಣಕ್ಕೆ ಸಕ್ರಿಯ ಸಹಕಾರ ನೀಡಲು ಒತ್ತಾಯಿಸಿದರು.




