

ಕುಂದಾಪುರ: ಸಮಾಜದ ಎಲ್ಲಾ ಸ್ಥರಗಳ ನಂಬಿಕೆಗೆ ಅರ್ಹರಾದವರೇ ಪತ್ರಕರ್ತರು. ಸಾಂವಿಧಾನಿಕ ಚೌಕಟ್ಟಿನಲ್ಲಿ ಸಮಾಜ ಮುನ್ನಡೆಯಬೇಕಾದರೆ ಪ್ರತೀ ಪತ್ರಕರ್ತನೂ ನೈಜತೆಯಿಂದ, ನಿಷ್ಠುರನಾಗಿರಬೇಕು. ನಾನು ಕಂಡಾಗೆ ಇಲ್ಲಿನ ಪತ್ರಕರ್ತರು ನಂಬಿಕೆಗೆ ಅರ್ಹರು, ನಮ್ಮ ಡಿಪಾರ್ಟ್ಮೆಂಟ್ಗೆ ತುಂಬಾ ಸಹಕಾರ ನೀಡುತ್ತಾರೆ. ಪೊಲೀಸ್ ಮತ್ತು ಪತ್ರಕರ್ತರು ಸರಿ ಇದ್ದರೆ ಸ್ವಚ್ವ ಸಮಾಜ ನಿರ್ಮಾಣವಾಗುತ್ತೆ. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಹರಿರಾಂ ಶಂಕರ್ ಹೇಳಿದರು. ಅವರು ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ರಾಧಾಬಾಯಿ ಹಾಲ್ ನಲ್ಲಿ ನಡೆದ ಪತ್ರಿಕಾ ದಿನಾಚರಣೆ ಹಾಗೂ ಸಂಘದ ಅಧೀಕೃತ ಸದಸ್ಯರ ಡೈರಕ್ಟರಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜದ ಮೇಲೆ ಪತ್ರಕರ್ತರ ದೃಷ್ಟಿಕೋನ ವ್ಯತಿರಿಕ್ತ ಪರಿಣಾಮ ಬೀರದಂತೆ ನೋಡಿಕೊಳ್ಳುವ ಜವಾಬ್ಧಾರಿ ಪತ್ರಕರ್ತರದ್ದಾಗಿದೆ ಪೊಲಿಸ್ ಇಲಾಖೆ ಹಾಗೂ ಪತ್ರಕರ್ತರು ಸಮಾಜದ ಎರಡು ಕಣ್ಣುಗಳು ಎಂದು ಅವರು ಅಭಿಪ್ರಾಯಪಟ್ಟರು.
ಸಂಘದ ಅಧೀಕೃತ ಸದಸ್ಯರ ಡೈರಕ್ಟರಿಯನ್ನು ಕೋಟದ ಗೀತಾನಂದ ಫೌಂಡೆಷನ್ನ ಪ್ರವರ್ತಕ ಆನಂದ ಸಿ ಕುಂದರ್ ಬಿಡುಗಡೆಗೊಳಿಸಿದರು. ಇದೇ ಸಂದರ್ಭ ಸಾಧಕ ಪತ್ರಕರ್ತರಾದ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಆಯ್ಕೆಯಾದ ಯು.ಎಸ್.ಶೆಣೈ ಮತ್ತು ಅಮೇರಿಕಾದ ಸಂಸ್ಥೆಯಿಂದ ಡಾಕ್ಟರೇಟ್ ಗಳಿಸಿದ ಡಾ.ಉದಯ ಕುಮಾರ್ ತಲ್ಲೂರು ಸನ್ಮಾನಿಸಲಾಯಿತು.
ಪತ್ರಿಕಾ ದಿನಾಚರಣೆ ಕುರಿತಾಗಿ ಲಕ್ಷ್ಮಿ ಸೋಮ ಬಂಗೇರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಜೇಂದ್ರ ನಾಯಕ ಅವರು ವಿಶೇಷ ಉಪನ್ಯಾಸ ನೀಡಿ, ಲೇಖನಿಗೆ ಅಗಾಧವಾದ ಶಕ್ತಿ ಇದೆ. ಲೇಖನಿಯ ಮೂಲಕ ಸಮಾಜದ ಚಿತ್ರಣವನ್ನೇ ಬದಲಾಯಿಸುವ ಸಾಧ್ಯತೆ ಇದೆ. ಮನುಷ್ಯ ಮನುಷ್ಯ ನಂಬುವಂತಹ, ವಿಶ್ವಾಸದಿಂದ ಕಾಣುವಲ್ಲಿ ವಿಮುಖರಾಗುತ್ತಿದ್ದೇವೆ. ಸಮಾಜದ ಮೇಲಿನ ಜವಬ್ದಾರಿ, ಹೊಣೆಗಾರಿಕೆ ಪತ್ರಕರ್ತರ ಮೇಲಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಮೌಲ್ಯಗಳು ಮರೆಯಾಗುತ್ತಿವೆ. ಶಿಕ್ಷಣದಲ್ಲಿ ಅಂಕಗಳೇ ಪ್ರಧಾನವಾಗುತ್ತಿವೆ.ಅಂಕಗಳನ್ನು ಹೊತ್ತು ತರುವ ಪ್ರಶ್ನೆಗಳು ಹೃದಯ ಸಂಸ್ಕಾರಕ್ಕೆ ಒಳಗಾಗುತ್ತಿಲ್ಲ. ಒಳಗಡೆ ಹೃದಯವಂತಿಕೆ, ಸಂಸ್ಕಾರ, ಎಲ್ಲರನ್ನು ಸಮಾನವಾಗಿ ಕಾಣುವ ಸಂವೇದತೆಬ ತೆರೆದುಕೊಂಡಾಗ ಸಾಧ್ಯವಾಗುತ್ತದೆ ಎಂದರು.
ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಅಧ್ಯಕ್ಷತೆ ವಹಿಸಿ ಅಧ್ಯಕ್ಷಯಿ ಮಾತುಗಳನ್ನಾಡಿದರು.
ಕುಂದಾಪುರ ತಹಶೀಲ್ದಾರ್ ಪ್ರದೀಪ್ ಕುರುಡೇಕರ್, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಕಾಲೇಜಿನ ಪ್ರಾಂಶುಪಾಲ ಡಾ.ಶುಭಕರ ಅಚಾರ್ಯ, ಡಾ.ಜಿ.ಎಮ್.ಗೊಂಡ, ರಾಜೇಶ ಕೆ.ಸಿ, ಶುಭ ಹಾರೈಸಿದರು.
ಜಿಲ್ಲಾ ಸಂಘದ ಉಪಾಧ್ಯಕ್ಷ ವಿನಯ ಪಾಯಸ್, ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಲೋಕೇಶ ಆಚಾರ್ಯ ತೆಕ್ಕಟ್ಟೆ, ಪತ್ರಕರ್ತರ ಸ್ವಂತ ಕಟ್ಟಡ ನಿರ್ಮಾಣ ಸಮೀತಿಯ ಮುಖ್ಯರಾಗಿ ಆಯ್ಕೆಯಾದ ಕೆ.ಸಿ.ರಾಜೇಶ್ ಉಪಸ್ಥಿತರಿದ್ದರು.
ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಎಸ್ ಬೀಜಾಡಿ ಸ್ವಾಗತಿಸಿದರು. ಉಪಾಧ್ಯಕ್ಷ ರಾಘವೇಂದ್ರ ಪೈ ವಂದಿಸಿದರು. ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರ್ವಹಿಸಿದರು.





























