

ಶ್ರೀನಿವಾಸಪುರ: ಚುಂಚದೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ, ವಿದ್ಯಾರ್ಥಿಗಳಿಗೆ ವಿವಿಧ ಶೈಕ್ಷಣಿಕ ಸಲಕರಣೆ ವಿತರಣಾ ಸಮಾರಂಭವನ್ನು ಬಿಆರ್ಪಿ ರಶ್ಮಿ ಹಾಗೂ ಸೀಗೆಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಸ್.ಆರ್.ಧರ್ಮೇಶ್ ಉದ್ಘಾಟಿಸಿದರು.
ಚುಂಚದೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ, ಸೀಗೆಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಸ್.ಆರ್.ಧರ್ಮೇಶ್ ವಿದ್ಯಾರ್ಥಿಗಳಿಗೆ ವಿವಿಧ ಶೈಕ್ಷಣಿಕ ಸೌಲಭ್ಯ ವಿತರಿಸಿದರು.
ಉತ್ತಮ ಅಂಕದೊಂದಿಗೆ ಮಾನವೀಯ ಮೌಲ್ಯ ಮೈಗೂಡಿಸಿಕೊಳ್ಳಿ
ವಿದ್ಯಾರ್ಥಿಗಳು ಅಧಿಕ ಅಂಕ ಗಳಿಸಲು ಸ್ಪರ್ಧಿಸಿದರೆ ಸಾಲದು, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬೆಳೆಯಬೇಕು ಎಂದು ಚುಂಚಿದೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮುನಿಯಪ್ಪ ಹೇಳಿದರು.
ತಾಲ್ಲೂಕಿನ ಚುಂಚದೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ದಾನಿ ಧರ್ಮೇಶ್ ನೀಡಿದ್ದ ವಿವಿಧ ಶೈಕ್ಷಣಿಕ ಸಲಕರಣೆಗಳನ್ನು ವಿದ್ಯಾರ್ಥಿಗಳಿಗೆ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಯಾವುದೇ ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗಿಂತ ಕಡಿಮೆ ಇಲ್ಲದಂತೆ ಕಲಿಯುತ್ತಿದ್ದಾರೆ. ಪೋಷಕರು ಸರ್ಕಾರ ಹಾಗೂ ದಾನಿಗಳು ನೀಡುವ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಲು ಪೂರಕವಾಗಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದು ಹೇಳಿದರು.
ಬಿಆರ್ಪಿ ರಶ್ಮಿ ಮಾತನಾಡಿ, ಧರ್ಮೇಶ್ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಅಗತ್ಯ ನೆರವು ನೀಡುತ್ತಿದ್ದಾರೆ. ಸಮಾಜ ಸೇವಾ ಕಾರ್ಯಗಳಿಗೆ ತಮ್ಮ ಗಳಿಕೆಯ ಸಿಂಹಪಾಲನ್ನು ಬಳಸುತ್ತಿದ್ದಾರೆ. ಅವರ ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆ ಸ್ತುತ್ಯಾರ್ಹ ಎಂದು ಹೇಳಿದರು.
ಸೀಗೆಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಸ್.ಆರ್.ಧರ್ಮೇಶ್ ವಿದ್ಯಾರ್ಥಿಗಳಿಗೆ ವಿವಿಧ ಸೌಲಭ್ಯ ವಿತರಿಸಿ ಮಾತನಾಡಿ, ಅಗತ್ಯವಿರುವ ವ್ಯಕ್ತಿಗಳಿಗೆ ಕೈಲಾದ ನೆರವು ನೀಡುವುದು ಮಾನವೀಯ ನಡೆ. ಬಡತನದ ಕಷ್ಟ ಕಂಡವರಿಗೆ ಮಾತ್ರ ಬಡವರ ನೋವು ಅರ್ಥವಾಗುತ್ತದೆ. ನನಗೆ ಅದರ ಅನುಭವ ಇರುವುದರಿಂದಲೇ ಬಡ ಮಕ್ಕಳಿಗೆ ಸಾಧ್ಯವಿರುವ ನೆರವು ನೀಡುತ್ತಿದ್ದೇನೆ. ಪರಿಸರ ರಕ್ಷಣೆ ಹಾಗೂ ಸಮಾಜ ಸೇವೆಗೆ ಒತ್ತು ನೀಡಿದ್ದೇನೆ. ಅದನ್ನು ಸದುಪಯೋಗ ಪಡಿಸಿಕೊಂಡರೆ ಸಂತೋಷವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕಿಯರಾದ ಮೀನಾ, ವಾಣಿಶ್ರೀ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಸಿಹಿಯೊಂದಿಗೆ ಛತ್ರಿ, ಲೇಖನ ಸಾಮಗ್ರಿ, ತಟ್ಟೆ ಲೋಟ ವಿತರಿಸಲಾಯಿತು.
ಸಿಆರ್ಪಿ ಬಸವರಾಜ್, ರಘೋತ್ತಮ್, ಗ್ರಾಮ ಪಂಚಾಯಿತಿ ಸದಸ್ಯೆ ಶಿಲ್ಪ, ಎಸ್ಡಿಎಂಸಿ ಅಧ್ಯಕ್ಷ ಶ್ರೀನಿವಾಸಪ್ಪ, ಆಶಾ ಕಾರ್ಯಕರ್ತೆ ನಂದಿನಿ, ಶಿಕ್ಷಕ ಗೋಪಾಲಪ್ಪ, ಶಿಕ್ಷಕಿಯರಾದ ಮಂಜುಳ, ಶಾಂತಮ್ಮ, ಸುಶೀಲಮ್ಮ ಸಮಾರಂಭದಲ್ಲಿ ಇದ್ದರು.


