

ಕೋಲಾರ : ಅಲ್ಪಸಂಖ್ಯಾತರ ಸಮುದಾಯಕ್ಕಾಗಿ ಜಾರಿಗೊಳಿಸಲಾಗಿರುವ ಪ್ರಧಾನಮಂತ್ರಿ 15 ಅಂಶದ ಕಾರ್ಯಕ್ರಮಗಳ ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು ವಿವಿಧ ಇಲಾಖೆಗಳಡಿ ಅಲ್ಪಸಂಖ್ಯಾತರಿಗಾಗಿ ಇರುವ ಆರ್ಥಿಕ ಮತ್ತು ಭೌತಿಕ ಪ್ರಗತಿಯನ್ನು ಕೂಡಲೇ ಸಾಧಿಸುವಂತೆ ನಿರ್ದೇಶನ ನೀಡಿದರು.
ಶೈಕ್ಷಣಿಕ ಸೌಲಭ್ಯ ಕಲ್ಪಿಸುವುದು, ತಂತ್ರಜ್ಞಾನ ತರಬೇತಿ ಮೂಲಕ ಕೌಶಲ್ಯ ಕಾರ್ಯಕ್ರಮ ತಲುಪಿಸುವುದು, ಆರ್ಥಿಕ ಚಟುವಟಿಕೆ ಬಲಪಡಿಸಲು ಸಾಲ ಸೌಲಭ್ಯ ಕಲ್ಪಿಸುವುದು. ನಾಗರಿಕ ಸೇವೆಗಳ ಬಗ್ಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳುವುದು, ವಸತಿ ಯೋಜನೆ, ಅಲ್ಪಸಂಖ್ಯಾತರ ಜೀವನ ಮಟ್ಟ ಸುಧಾರಿಸಲು ವಸತಿ ಯೋಜನೆ ಕಲ್ಪಿಸುವುದು.
ಹೀಗೆ ಹಲವು ಕಾರ್ಯಕ್ರಮಗಳನ್ನು ಅಲ್ಪಸಂಖ್ಯಾತರಿಗೆ ತಲುಪಿಸುವಂತೆ ನಿರ್ದೇಶನ ನೀಡಿದರು.
ಶಾಸಕರಾದ ಕೊತ್ತೂರು ಜಿ.ಮಂಜುನಾಥ್ ಅವರು ಮಾತನಾಡಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸರ್ಕಾರವು ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತರುತಿದ್ದು, ಅಧಿಕಾರಿಗಳು ಅದನ್ನು ಸಾಮಾನ್ಯ ಜನರಿಗೆ ತಲುಪಿಸುವ ಕೆಲಸವನ್ನು ಮಾಡಬೇಕಾಗಿದೆ ನೂತನವಾಗಿ ಸಮಿತಿಯನ್ನು ರಚಿಸಿದ್ದು ಅವರೊಂದಿಗೂ ಅಧಿಕಾರಿಗಳು ಸೇರಿ ಯೋಜನೆಗಳ ಮಾಹಿತಿಯನ್ನು ಹಂಚಿಕೊಂಡು ಅವರ ಸಹಯೋಗದೊಂದಿಗೆ ಕಾರ್ಯಕ್ರಮ ಅನುಷ್ಠಾನ ಗೊಳಿಸಬೇಕು ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಾರಾಯಣಸ್ವಾಮಿ ಮಾಹಿತಿ ನೀಡಿ 197 ಅಂಗನವಾಡಿ ಕೇಂದ್ರಗಳಿದ್ದು, ಇಲಾಖೆಯಿಂದ ಪೂರಕ ಪೌಷ್ಠಿಕ ಆಹಾರ ಕಲ್ಪಿಸುವುದು, ಭಾಗ್ಯಲಕ್ಷ್ಮಿ, ಗೃಹಲಕ್ಷ್ಮಿ, ಪ್ರಧಾನಮಂತ್ರಿ ಅವರ ಮಾತೃವಂದನಾ ಯೋಜನೆ ತಲುಪಿಸುವುದು ಸೇರಿದಂತೆ ಹಲವು ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.
ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಕೃಷ್ಣಮೂರ್ತಿ ಅವರು ಮಾತನಾಡಿ ಶಾಲೆಗಳಲ್ಲಿ ಸಮವಸ್ತ್ರ, ಉಚಿತ ಪಠ್ಯಪುಸ್ತಕ ವಿತರಣೆ, ವಿದ್ಯಾರ್ಥಿ ವೇತನ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು.
ಕೃಷಿ ಇಲಾಖೆಯ ಅಧಿಕಾರಿ ಮಾಹಿತಿ ನೀಡಿ ಕೃಷಿ ಇಲಾಖೆ ಸೂಕ್ಷ್ಮ ನೀರಾವರಿ, ಕೃಷಿ ಯಾಂತ್ರೀಕರಣ, ಬಿತ್ತನೆ ಬೀಜ ವಿತರಣೆ ಹೀಗೆ ಹಲವು ಕಾರ್ಯಕ್ರಮ ತಲುಪಿಸಲಾಗುತ್ತಿದೆ ಎಂದರು.
ತೋಟಗಾರಿಕೆ ಇಲಾಖೆ ಅಧಿಕಾರಿ ಮಾತನಾಡಿ ಇಲಾಖೆಯಿಂದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ,ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆ, ಹನಿ ನೀರಾವರಿ ಯೋಜನೆ, ಜೇನು ಸಾಕಾಣಿಕೆ, ಅನುಷ್ಠಾನ ಸಹಾಯಧನ ಹೀಗೆ ಹಲವು ಯೋಜನೆಗಳನ್ನು ಅಲ್ಪಸಂಖ್ಯಾತರಿಗೆ ತಲುಪಿಸಲಾಗುತ್ತಿದೆ. 2024-25ನೇ ಸಾಲಿನಲ್ಲಿ ಶೇ.100ರಷ್ಟು ಗುರಿ ಸಾಧಿಸಲಾಗಿದೆ ಎಂದರು.
ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧಿಕಾರಿ ಶಿರಿನ್ ತಾಜ್ ಅವರು ಮಾಹಿತಿ ನೀಡಿ ಶ್ರಮಶಕ್ತಿ, ಸ್ವಾವಲಂಭಿ ಸಾರಥಿ, ವೃತ್ತಿ ಪ್ರೋತ್ಸಾಹ, ಅರಿವು, ವಿದೇಶಿ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಧನ, ನೇರಸಾಲ ಯೋಜನೆ, ಉನ್ನತ ಶಿಕ್ಷಣಕ್ಕೆ ಸಾಲ ಯೋಜನೆ ಹೀಗೆ ಹಲವು ಯೋಜನೆ ತಲುಪಿಸಲಾಗುತ್ತಿದೆ. ಕಳೆದ ಸಾಲಿನಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ವಿದೇಶಿ ವಿಧ್ಯಾಭ್ಯಾಸಕ್ಕಾಗಿ ಕಳುಹಿಸಿಕೊಡಲಾಗಿದೆ ಎಂದು ಮಾಹಿತಿ ನೀಡಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೂಲಕ 3 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು, 8 ಮೌಲನಾ ಆಜಾದ್ ವಸತಿ ಶಾಲೆಗಳ ಅಭಿವೃದ್ಧಿ ಸಂಬಂಧಿಸಿದಂತೆ ಮಾತನಾಡಿ ದಾಖಲಾತಿಗಳ ಬಗ್ಗೆ ಮಾಹಿತಿ ನೀಡಿದರು.
ಅಲ್ಪಸಂಖ್ಯಾತರ ಇಲಾಖೆಯ ಶಾಲೆಗಳಲ್ಲಿ ಈಗಾಗಲೇ ದಾಖಲಾತಿಗಳು ಪ್ರಾರಂಭವಾಗಿದ್ದು, ಕೊನೆಯ ದಿನಾಂಕ ಮುಗಿಯುವುದರೊಳಗೆ ಇರುವಂತಹ ಬಾಕಿ ಇರುವಂತಹ ದಾಖಲಾತಿಯನ್ನು ಸಮುದಾಯದ ಮುಖಂಡರೊಂದಿಗೆ ಅರಿವು ಮೂಡಿಸಿ ದಾಖಲಾತಿ ಪೂರ್ಣಗೊಳಿಸಬೇಕು ಎಂದರು. ಇಲಾಖೆಯ ಅಧಿಕಾರಿಗಳು ಯೋಜನೆಗಳನ್ನು ಸಮುದಾಯದ ಜನರಿಗೆ ತಲುಪಿಸುತ್ತಿರುವ ಬಗ್ಗೆ ಸಮಿತಿಯ ಸದಸ್ಯರು ಆಗಾಗ್ಗೆ ಗಮನವಹಿಸಬೇಕು ಎಂದು ತಿಳಿಸಿದರು.
ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕರಾದ ಅಂಬಿಕಾ ಅವರು ಮಾತನಾಡಿ ಸ್ಥಳೀಯ ಪಟ್ಟಣ ಪಂಚಾಯಿತಿ, ಪುರಸಭೆ ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಸಹಾಯಧನ ನೀಡಲಾಗಿದೆ. ಶಸ್ತ್ರ ಚಿಕಿತ್ಸೆಗೆ ಸಹಾಯಧನ, ವೈದ್ಯಕೀಯ ಧನ, ಲಘು ವಾಹನ ಚಾಲನಾ ತರಬೇತಿ,ಇತರೆ ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ ಎಂದರು ಅಲ್ಪಸಂಖ್ಯಾತರಿಗೆ ಮೀಸಲು ಇಟ್ಟಿರುವಂತಹ ಅನುದಾನವನ್ನು ಅವರಿಗೆ ಮಾತ್ರ ಪೂರ್ಣ ಬಳಕೆಯಲ್ಲಿ ಬಳಕೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಕಾರ್ಯಕ್ರಮದಲ್ಲಿ ಸಮಿತಿಯ ಸದಸ್ಯರಾದ ಶಪೀಕ್ ಅಹಮ್ಮದ್, ಇನಾಯತ್ತುಲ್ಲ ಷರೀಫ್, ಇಂದಿರಾ ಮತಿ, ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ, ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿ ಮೈಲಾರಪ್ಪ, ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಉಪ ನಿರ್ದೇಶಕರಾದ ರವಿಚಂದ್ರ, ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಜೋಶಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಅಧಿಕಾರಿ ಶ್ರೀನಿವಾಸ್, ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ ರಮೇಶ್, ಜಿಲ್ಲಾ ಹಣಕಾಸು ಸಂಸ್ಥೆ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.




