

ಕುಂದಾಪುರ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯನ್ನು 09-07-2025) ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿರುವ ಭಗಿನಿ ಸುಪ್ರಿಯ ಇವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅವರು ಮಾತನಾಡಿ ವಿದ್ಯಾರ್ಥಿಗಳು ತಂದೆ-ತಾಯಿಯರಿಗೆ ವಿಧೇಯರಾಗಿ ಅವರ ಕಷ್ಟಗಳನ್ನು ಅರಿತುಕೊಂಡು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಬೇಕು ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಇಲ್ಲಿನ ಸಮನ್ವಯ ಸಂಪನ್ಮೂಲ ಅಧಿಕಾರಿಗಳಾಗಿರುವ ಪ್ರದೀಪ್ ಕುಮಾರ್ ಇವರು ಮಾತನಾಡಿ ಪೋಷಕರ ಸಭೆಗೆ ತಾಯಿ ತಂದೆಯರಿಬ್ಬರೂ ಹಾಜರಿರಬೇಕು. ಮಕ್ಕಳ ಮೇಲೆ ಇಬ್ಬರಿಗೂ ಜವಾಬ್ದಾರಿ ಇದೆ. ತಮ್ಮ ಮಕ್ಕಳ ಕುಂದು ಕೊರತೆ ಶೈಕ್ಷಣಿಕ ವಿಚಾರವಾಗಿ ತಿಳಿದುಕೊಳ್ಳಬೇಕು. ಪೋಷಕರು ಮನೆಯಲ್ಲಿ ಟಿವಿಯ ಧಾರಾವಾಹಿಗಳಿಂದ ದೂರವಿರಬೇಕು. ಮಕ್ಕಳಿಗೆ ಕಲಿಕೆಯ ವಾತಾವರಣವನ್ನು ಉಂಟು ಮಾಡಬೇಕು. ಯಾವ ಕಾರಣಕ್ಕೂ ಮಕ್ಕಳಿಗೆ ಮೊಬೈಲನ್ನು ನೀಡಬಾರದು, ಮೊಬೈಲ್ ವೀಕ್ಷಣೆ ಮಾಡುವುದರಿಂದ ಮಕ್ಕಳಿಗೆ ಕಣ್ಣಿನ ಸಮಸ್ಯೆ, ಮರೆವು, ಖಿನ್ನತೆ ಮೊದಲಾದ ಸಮಸ್ಯೆಗಳು ಬರುವ ಸಾಧ್ಯತೆ ಇದೆ. ಪೋಷಕರು ಮಕ್ಕಳ ಬಗ್ಗೆ ಕನಸು ಕಾಣುತ್ತಿರುತ್ತಾರೆ. ಅದನ್ನು ನನಸು ಮಾಡುವ ಜವಾಬ್ದಾರಿ ಮಕ್ಕಳ ಮೇಲೆ ಇದೆ. ಶಾಲೆಯಲ್ಲಿ ಮಾಡಿದ ಪಾಠಗಳನ್ನು ಪ್ರತಿನಿತ್ಯ ಓದಿ ಮನನ ಮಾಡಿಕೊಳ್ಳಬೇಕು. ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿ ಗಳಾಗಿ ಬಾಳಬೇಕು ಎಂದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯನಿ ಭಗಿನಿ ಐವಿಯವರು ಪ್ರಸ್ತುತ ವರ್ಷದ ಕಾರ್ಯಯೋಜನೆ ವರದಿಯನ್ನು ವಾಚಿಸಿದರು. ಶಾಲಾ ಹಿರಿಯ ಶಿಕ್ಷಕರಾದ ಮೈಕಲ್ ಇವರು ಸ್ವಾಗತಿಸಿದರು. ಶಿಕ್ಷಕಿ ಶ್ರೀಲತಾ ಇವರು ವಂದಿಸಿದರು. ಶಿಕ್ಷಕ ಅಶೋಕ್ ದೇವಾಡಿಗ ಇವರು ಕಾರ್ಯಕ್ರಮ ನಿರೂಪಿಸಿದರು.















