

ಶ್ರೀನಿವಾಸಪುರ, ಜೂನ್ 26: ಮಾವು ಬೆಳೆಗಾರರ ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾಧ್ಯಕ್ಷ ನೀಲಟೂರು ಚಿನ್ನಪ್ಪ ರೆಡ್ಡಿ ಅವರು ಜಿಲ್ಲಾಧಿಕಾರಿ ಎಂ.ಆರ್. ರವಿಯವರೊಂದಿಗೆ ಮಾತನಾಡುತ್ತಾ, ರಾಜ್ಯ ಸರ್ಕಾರ ಪ್ರಸ್ತುತ ಘೋಷಿಸಿರುವ ಬೆಂಬಲ ಬೆಲೆಗೆ ಸ್ವಾಗತ ವ್ಯಕ್ತಪಡಿಸಿದರು. ಆದರೆ, ಬೆಂಬಲ ಬೆಲೆಗೆ ವಿಧಿಸಿರುವ ನಿಬಂಧನೆಗಳು ಕೇವಲ ಕೆಲವು ರೈತರಿಗೆ ಮಾತ್ರ ಪ್ರಯೋಜನವಾಗುವಂತಹವುಗಳಾಗಿದ್ದು, ಇವುಗಳನ್ನು ಮರುಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದರು.
ಸದ್ಯದ ಮಾವು ಉತ್ಪಾದನೆಯ ಪ್ರಮಾಣ ಕಡಿಮೆ ಇದೆ. ೧೦ ಟನ್ ಅಥವಾ ೨ ಹೆಕ್ಟರ್ ಹೊಂದಿರುವ ರೈತರಿಗೆ ಮಾತ್ರ ಬೆಂಬಲ ಬೆಲೆ ನೀಡಲಾಗುವುದು ಎಂಬ ನಿಬಂಧನೆ ಎತ್ತಿನ ಮೇಲೆ ತುಪ್ಪ ಸವರಿದಂತಾಗಿದೆ. ಎಲ್ಲ ಮಾವು ಬೆಳೆಗಾರರಿಗೆ ಯಾವುದೇ ನಿರ್ಬಂಧವಿಲ್ಲದೆ ಬೆಂಬಲ ಬೆಲೆ ಸಿಗಬೇಕು ಎಂದು ಅವರು ಹೇಳಿದರು.
ಶ್ರೀನಿವಾಸಪುರ ಪಟ್ಟಣದ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಎಂ.ಆರ್. ರವಿ, ರೈತರ ಆಕ್ರೋಶ ಮತ್ತು ಅಹವಾಲುಗಳನ್ನು ನೇರವಾಗಿ ಆಲಿಸಿದರು. ಈ ಸಂದರ್ಭದಲ್ಲಿ ಅವರು, ಈ ವಿಚಾರವನ್ನು ತಕ್ಷಣವೇ ಸರ್ಕಾರದ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ನೀಡಿದರು.
ಚಿನ್ನಪ್ಪ ರೆಡ್ಡಿಯವರು ಮುಂದುವರೆದು, ೨೦೧೮ರಲ್ಲಿ ೫ ಹೆಕ್ಟರ್ ಹಾಗೂ ೪೫ ಟನ್ ಮೌಲ್ಯದ ಮಾವಿಗೆ ಒಂದು ಲಕ್ಷ ಇಪ್ಪತ್ತು ಸಾವಿರ ರೂಪಾಯಿ ಬೆಂಬಲ ಬೆಲೆ ನೀಡಲಾಗುತ್ತಿತ್ತು. ಈಗ ಕೇವಲ ೪೦,೦೦೦ ರೂಪಾಯಿ ಮಾತ್ರ ದೊರೆಯುತ್ತಿದೆ. ಇಂತಹ ಕಡಿತ ಬೆಂಬಲ ಬೆಲೆ ರೈತರ ಆರ್ಥಿಕ ಸ್ಥಿತಿಗೆ ಅನ್ಯಾಯವಾಗಿದೆ ಎಂದು ದೂರಿದರು.
ಇತ್ತೀಚೆಗೆ ರಾಜ್ಯ ಸರ್ಕಾರ ೨.೫೦ ಲಕ್ಷ ಟನ್ ಮಾವು ಖರೀದಿಸುವುದಾಗಿ ಘೋಷಿಸಿದ್ದು, ಆದರೆ ಪ್ರಸ್ತುತ ರಾಜ್ಯದಲ್ಲಿ ಕೇವಲ ೧.೫೦ ಲಕ್ಷ ಟನ್ ಉತ್ಪಾದನೆಯಷ್ಟೇ ಇದೆ. ಉಳಿದ ೧ ಲಕ್ಷ ಟನ್ ಮಾವಿಗೆ ಬೆಂಬಲ ಬೆಲೆ ಸಿಗುವುದಿಲ್ಲ ಎನ್ನುವುದು ಆತಂಕದ ವಿಷಯ. ಇದು ನೈಜ ಹಕ್ಕು ಹೊಂದಿದ ರೈತರನ್ನು ಪಕ್ಕಕ್ಕೆ ತಳ್ಳುವ ಹಾದಿಯಾಗಿದೆ. ೨೫ ದಿನಗಳಿಂದ ಹೋರಾಟ ನಡೆಸುತ್ತಿರುವ ರೈತರಿಗೂ ಪರಿಹಾರ ವ್ಯವಸ್ಥೆ ಮಾಡಬೇಕು. ಕನಿಷ್ಟ ೧ ಟನ್ಗೆ ೧೦,೦೦೦ ರೂ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಅವರು ಮನವಿ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್, ತೋಟಗಾರಿಕೆ ಉಪನಿರ್ದೇಶಕ ಕುಮಾರಸ್ವಾಮಿ, ತಹಶೀಲ್ದಾರ್ ಜಿ.ಎನ್. ಸುದೀಂದ್ರ, ತೋಟಗಾರಿಕೆ ಸಹಾಯಕ ನಿರ್ದೇಶಕ ರಾಜೇಶ್, ಕೃಷಿ ಉತ್ಪನ್ನ ಮಾರುಕಟ್ಟೆ ಜಿಲ್ಲಾ ಸಹಾಯಕ ನಿರ್ದೇಶಕ ರವಿಕುಮಾರ್, ಕಾರ್ಯದರ್ಶಿ ಶ್ರೀನಿವಾಸ್ ಸೇರಿದಂತೆ ಅನೇಕ ಅಧಿಕಾರಿಗಳು ಹಾಗೂ ರೈತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


