

ಶ್ರೀನಿವಾಸಪುರ, 10 ಆಗಸ್ಟ್: ರಾಜ್ಯದ ಅಲ್ಪಸಂಖ್ಯಾತ ಸಮುದಾಯದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹೊಸ “ಸರಳ ಸಾಮೂಹಿಕ ಮದುವೆ ಸಹಾಯ ಯೋಜನೆ 2025–26” ಅನ್ನು ಜಾರಿಗೆ ತಂದಿದೆ.
ಈ ಯೋಜನೆಯಡಿ ನೋಂದಾಯಿತ ಸಾಮೂಹಿಕ ಮದುವೆಯಲ್ಲಿ ಭಾಗವಹಿಸುವ ಪ್ರತೀ ಅರ್ಹ ದಂಪತಿಗೆ ₹ 50,000 ಆರ್ಥಿಕ ಸಹಾಯ ನೀಡಲಾಗುತ್ತದೆ.
ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮ ಸಮಿತಿ ಸದಸ್ಯ ಶಬ್ಬೀರ್ ಅಹ್ಮದ್ ಪಾಷಾ ಅವರು, ಮದುವೆ ವೈಭವವನ್ನು ಕಡಿಮೆ ಮಾಡಿ ಸರಳ ರೀತಿಯಲ್ಲಿ ನೆರವೇರಿಸುವುದರ ಜೊತೆಗೆ ಬಡ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವುದೇ ಈ ಯೋಜನೆಯ ಉದ್ದೇಶ ಎಂದು ಹೇಳಿದರು.
ಯೋಜನೆಯ ಪ್ರಮುಖ ಅಂಶಗಳು:
ಸಾಮೂಹಿಕ ಮದುವೆಗಳಲ್ಲಿ ಕನಿಷ್ಠ 10 ದಂಪತಿಗಳ ಭಾಗವಹಿಸುವಿಕೆ ಕಡ್ಡಾಯ.
ವರನ ವಯಸ್ಸು 21–45 ವರ್ಷಗಳ ನಡುವೆ, ವಧುವಿನ ವಯಸ್ಸು 18–42 ವರ್ಷಗಳ ನಡುವೆ ಇರಬೇಕು.
ವರ–ವಧು ಇಬ್ಬರೂ ಅಲ್ಪಸಂಖ್ಯಾತ ಸಮುದಾಯದವರಾಗಿದ್ದುವಾಸಸ್ಥಳದ ಗುರುತುಪತ್ರ ಹೊಂದಿರಬೇಕು.
ವಿಧವೆಯರೂ ಸಹ ಅರ್ಹರು; ಆದರೆ ಮೊದಲ ಪತ್ನಿ ಜೀವಂತವಿದ್ದರೆ ಎರಡನೇ ಮದುವೆಗೆ ಸಹಾಯ ನೀಡಲಾಗುವುದಿಲ್ಲ.
ಮದುವೆ ಆಯೋಜನೆ:
ನೋಂದಾಯಿತ ಸ್ವಯಂಸೇವಾ ಸಂಸ್ಥೆಗಳೇ ಸಾಮೂಹಿಕ ಮದುವೆಗಳನ್ನು ಆಯೋಜಿಸಲು ಅರ್ಹರು. ಮದುವೆ ವ್ಯವಸ್ಥೆಯ ಆಡಳಿತ ವೆಚ್ಚಕ್ಕಾಗಿ ಹೆಚ್ಚುವರಿ ₹5,000 ಸಹ ನೀಡಲಾಗುತ್ತದೆ.
ಜಿಲ್ಲಾ ಮಟ್ಟದ ಗುರಿ:
ಕೋಲಾರ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮಲ್ಲಾರಪ್ಪ ಅವರು,
2025–26ನೇ ಸಾಲಿನಲ್ಲಿ ಕೋಲಾರ ಜಿಲ್ಲೆಗೆ ಒಟ್ಟು 120 ದಂಪತಿಗಳ ಗುರಿ ನಿಗದಿಪಡಿಸಲಾಗಿದೆ. ಯೋಜನೆಯಡಿ ಅರ್ಹ ದಂಪತಿಗಳು ಸರಳ ಹಾಗೂ ಸಾಮೂಹಿಕವಾಗಿ ಮದುವೆ ನಡೆಸಿದರೆ ಸರ್ಕಾರದಿಂದ ₹ 50,000 ಸಹಾಯ ದೊರೆಯುತ್ತದೆ. ಸ್ವಯಂಸೇವಾ ಸಂಸ್ಥೆಗಳು ಕೂಡಾ ಯೋಜನೆ ಜಾರಿಗೆ ಸಹಕರಿಸಬೇಕು. ಈ ಯೋಜನೆ ಬಡ ಕುಟುಂಬಗಳಿಗೆ ನಿಜವಾದ ಆಶಾಕಿರಣವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಿಭಾಗದ ನಿರೀಕ್ಷೆ:
ಈ ಯೋಜನೆ ಸರಳ, ಸಾಮೂಹಿಕ ಮದುವೆಗಳ ಪರಂಪರೆಯನ್ನು ಉತ್ತೇಜಿಸುವುದರೊಂದಿಗೆಆರ್ಥಿಕ ಭಾರವನ್ನು ಕಡಿಮೆ ಮಾಡಿ, ಹಬ್ಬದ ಸಂಭ್ರಮವನ್ನು ಹೆಚ್ಚಿಸಲು ನೆರವಾಗಲಿದೆ.
ಅರ್ಜಿ ಸಲ್ಲಿಕೆ:
ಅರ್ಜಿ ನಮೂನೆಗಳು ಜಿಲ್ಲೆ ಹಾಗೂ ತಾಲ್ಲೂಕು ಅಲ್ಪಸಂಖ್ಯಾತರ ಕಲ್ಯಾಣ ಕಚೇರಿಗಳಲ್ಲಿ ಲಭ್ಯವಿವೆ. ಸ್ವಯಂಸೇವಾ ಸಂಘಟನೆಗಳು ಹಾಗೂ ಅರ್ಹ ದಂಪತಿಗಳು ತ್ವರಿತವಾಗಿ ಅರ್ಜಿ ಸಲ್ಲಿಸಿ ಯೋಜನೆಯ ಪ್ರಯೋಜನ ಪಡೆಯಲು ಇಲಾಖೆಯು ಮನವಿ ಮಾಡಿದೆ.



