

ಶ್ರೀನಿವಾಸಪುರ : ತಾಲೂಕಿನ ದಳಸನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೂಹಳ್ಳಿ ಗ್ರಾಮದ ನಿವೇಶನ ರಹಿತರು ಸರಕಾರಿ ಜಾಗದಲ್ಲಿ ತಾವೇ ನಿರ್ಮಿಸಿಕೊಂಡಿರುವ ಮನೆಗಳಿಗೆ ಕೂಡಲೇ ಹಕ್ಕುಪತ್ರ ನೀಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಒತ್ತಾಯಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಮುಂದೆ ಕರ್ನಾಟಕ ಪ್ರಾಂತ ರೈತ ಸಂಘದವತಿಯಿಂದ ಸೋಮವಾರ ಪ್ರತಿಭಟನೆ ನಡೆಸಿ ತಾ.ಪಂ ವ್ಯವಸ್ಥಾಪಕ ಮಂಜುನಾಥ್ ರವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು
2016 ರಲ್ಲಿ ಗ್ರಾಮದ ಎಲ್ಲಾ ಜನ ವಿಭಾಗದವರು ಸೇರಿ ನಿರ್ಗತಿಕರಿಗೆ ನಿವೇಶನಗಳನ್ನು ಹಂಚಿಕೊಳ್ಳಲು ಗ್ರಾಮದ ಪಕ್ಕದಲ್ಲಿರುವ ಸರಕಾರಿ ಜಮೀನಿನ ನಾಲ್ಕು ಎಕರೆಯಲ್ಲಿ ಎರಡು ಎಕರೆಯಷ್ಟು ಬಡವರು ಮನೆ ಕಟ್ಟಿಕೊಳ್ಳಲು 30 , 40 ರಂತೆ ನಿವೇಶನಗಳನ್ನು ಹಂಚಿಕೊಳ್ಳಲಾಗಿತ್ತು. ನಿವೇಶನಗಳಿಗೆ ಹಕ್ಕು ಪತ್ರ ನೀಡಲು ಒತ್ತಾಯಿಸಿ ಈ ಹಿಂದೆ ದಳಸನೂರು ಗ್ರಾಮ ಪಂಚಾಯಿತಿಗೆ ಅನೇಕ ಬಾರಿ ಮನವಿ ಸಲ್ಲಿಸಲಾಗಿತ್ತು.
ಈ ಮನವಿಗಳನ್ನು ಮಾನ್ಯ ಜಿಲ್ಲಾಧಿಕಾರಿಗಳು ಪರಿಶೀಲಿಸಲು ಪಂಚಾಯಿತಿಗೆ ಪತ್ರವನ್ನು ಕಳುಹಿಸಿರುತ್ತಾರೆ. ಆದರೆ ಇತ್ತೀಚಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿರುವ ಮಂಗಳಾಂಬರವರು ಈಗಾಗಲೇ ಅಲ್ಲಿ ನಿವೇಶಗಳನ್ನು ಹಂಚಿಕೆ ಮಾಡಿಕೊಂಡು ಮನೆ ನಿರ್ಮಿಸಿಕೊಂಡಿರುವ ವಸತಿ ರಹಿತರ ಪಟ್ಟಿಗೆ ಮತ್ತಷ್ಟು ಹೆಸರುಗಳನ್ನು ಸೇರ್ಪಡೆ ಮಾಡಿರುವುದು ಅಲ್ಲಿನ ನಿವೇಶನ ರಹಿತರಿಗೆ ಗೊಂದಲಗಳು ಉಂಟಾಗಿದೆ. ಈಗಾಗಲೇ ನಾವುಗಳು 30, 40 ರ ವಿಸ್ತೀರ್ಣದಂತೆ ಕೆಲವರು ಪೂರ್ಣ ಪ್ರಮಾಣದಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿದ್ದರು, ಈಗ ಹೆಚ್ಚುವರಿ ಪಟ್ಟಿಯಿಂದ ನಮ್ಮ ನಿವೇಶನಗಳ ವಿಸ್ತೀರ್ಣಗಳನ್ನು ಕಡಿಮೆಗೊಳಿಸಲು ಪಂಚಾಯಿತಿ ಅಧಿಕಾರಿಗಳು ಮುಂದಾಗಿರುವುದನ್ನು ನಿವೇಶನ ರಹಿತರ ಹೋರಾಟ ಸಮಿತಿ ಖಂಡಿಸುತ್ತಿದೆ. ಆದ್ದರಿಂದ ಮಾನ್ಯ ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳು ಮಧ್ಯಪ್ರದೇಶ ಮಾಡಿ ನಮ್ಮ ನಿವೇಶನಗಳಿಗೆ ಅಕ್ಕಪತ್ರ ನೀಡಬೇಕೆಂದು ಒತ್ತಾಯಿಸಿದರು.
ಈ ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿ ಸದಸ್ಯ ಶಿವರಾಜ್ ಕುಮಾರ್, ತಾಲೂಕು ಸಮಿತಿ ಸಹಕಾರ್ಯದರ್ಶಿ ಜಿ. ಮಂಜುಳಾ, ಗ್ರಾಮ ಘಟಕದ ಅಧ್ಯಕ್ಷ ಸೋಮಶೇಖರ್, ಕಾರ್ಯದರ್ಶಿ ವೆಂಕಟಲಕ್ಷ್ಮಮ್ಮ , ರೈತ ಸಂಘದ ತಾಲೂಕು ಮುಖಂಡರುಗಳಾದ ಮುನಿರಾಜು, ಹೂಹಳ್ಳಿ ಆಂಜನಪ್ಪ , ರಾಮಲಕ್ಷ್ಮಮ್ಮ ,ಲಕ್ಷ್ಮಿದೇವಮ್ಮ, ಮಂಜುಳಾ, ಸಾಲಮ್ಮ, ಪ್ರಸನ್ನಕುಮಾರ ,ಕೃಷ್ಣ , ಮುನಿಯಪ್ಪ, ಕುಮಾರ ಮುಂತಾದವರು ಭಾಗವಹಿಸಿದ್ದರು.

