

ಶ್ರೀನಿವಾಸಪುರ : ವಿದ್ಯಾರ್ಥಿಗಳು ಇಂತಹ ವೇದಿಕೆಗಳನ್ನು ಸದ್ಬಳಕೆ ಮಾಡಿಕೊಂಡು ತಮ್ಮೊಳಗೆ ಅಡಗಿರುವ ಪ್ರತಿಭೆಯನ್ನು ಹೊರಹೊಮ್ಮಿಸಬೇಕು. ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ವಿದ್ಯಾವಂತರಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಬಿ.ಸಿ. ಮುನಿಲಕ್ಷ್ಮಯ್ಯ ಸಲಹೆ ನೀಡಿದರು.
ಪಟ್ಟಣದ ತ್ಯಾಗರಾಜ ಬಡಾವಣೆಯ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಕಸಬಾ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೆ ಪಾಠಪ್ರವಚನಗಳಿಗೆ ಮಾತ್ರ ಸೀಮಿತವಾಗಿದ್ದ ಸರ್ಕಾರಿ ಶಾಲೆಗಳು, ಇದೀಗ ಪಠ್ಯೇತರ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿನ ಸೃಜನಶೀಲತೆ ಮತ್ತು ಪ್ರತಿಭೆಯನ್ನು ಅರಳಿಸುವ ಕಾರ್ಯ ಮಾಡುತ್ತಿವೆ. ಇಂತಹ ಕಾರ್ಯಕ್ರಮಗಳು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವರದಾನವಾಗಿವೆ ಎಂದು ಹೇಳಿದರು.
ಪ್ರತಿಯೊಬ್ಬ ವಿದ್ಯಾರ್ಥಿಯೂ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ತಮ್ಮಲ್ಲಿರುವ ಸಾಮರ್ಥ್ಯವನ್ನು ಸಮಾಜಕ್ಕೆ ಪರಿಚಯಿಸಬೇಕು ಎಂದರು.
ಜಿಲ್ಲಾ ಉಪಸಮನ್ವಯಾಧಿಕಾರಿ ರಾಜೇಶ್ವರಿ ಮಾತನಾಡಿ, ಕಲಿಕಾ ಹಬ್ಬವು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿದ್ದು, ಅವರಲ್ಲಿನ ವಿವಿಧ ಪ್ರತಿಭೆಗಳನ್ನು ಗುರುತಿಸಲು ವೇದಿಕೆಯಾಗುತ್ತದೆ.
ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಸಮಾಜ ಗುರುತಿಸುವಂತೆ ಉತ್ತಮ ಪ್ರದರ್ಶನ ನೀಡಬೇಕು ಎಂದು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಬಿಆರ್ಸಿ ಕೆ.ಸಿ. ವಸಂತ, ಟಿಪಿಒ ವೆಂಕಟಸ್ವಾಮಿ, ಇಸಿಒ ಕೋದಂಡಪ್ಪ, ಬಿಆರ್ಪಿ ವೆಂಕಟಾಚಲಪತಿ, ಪುರಸಭೆ ಪರಿಸರ ಅಭಿಯಂತರ ಲಕ್ಷ್ಮೇಶ್, ಆರೋಗ್ಯ ನಿರೀಕ್ಷಕ ಟಿ.ವಿ. ಸುರೇಶ್, ಸಿಆರ್ಪಿ ರಾಧಾಕೃಷ್ಣ, ಜಯರಾಮರೆಡ್ಡಿ, ಮುಖ್ಯಶಿಕ್ಷಕ ನಾರಾಯಣಸ್ವಾಮಿ, ಎಸ್ಡಿಎಂಸಿ ಅಧ್ಯಕ್ಷ ಆನಂದರೆಡ್ಡಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

