ಬರಹ; ವಿಶ್ವ ಕುಂದಾಪುರ



ಕರ್ನಾಟಕದ ರಂಗಭೂಮಿ ಪ್ರಿಯರಿಗೆ ಒಂದು ರಸಗವಳ ಸಿಗುತ್ತಿದೆ. ಈಗಾಗಲೇ ಸಾವಿರಾರು ಪ್ರೇಕ್ಷಕರ ಮನಗೆದ್ದಿರುವ ನಾಟಕವೊಂದರ ಪ್ರಯೋಗ ರಾಜ್ಯದ ನಾನಾ ಭಾಗಗಳಲ್ಲಿ ಜನರನ್ನು ರಂಜಿಸುತ್ತ ಮುನ್ನಡೆದಿದೆ.
ಬೃಹತ್ ಕಾದಂಬರಿಯೊಂದನ್ನು ಮೂರು-ಮೂರುವರೆ ತಾಸಿನ ನಾಟಕ ರೂಪದಲ್ಲಿ ರಂಗದ ಮೇಲೆ ತರುವುದೆಂದರೆ ಒಂದು ರೀತಿಯಲ್ಲಿ ಸಾಗರದ ನೀರನ್ನು ಬೊಗಸೆಯಲ್ಲಿ ಹಿಡಿಯುವ ಸಾಹಸದಂತೆಯೇ ಸರಿ. ಶಿವಮೊಗ್ಗ ರಂಗಾಯಣ, ಅಂಥದ್ದೊಂದು ಸಾಹಸಕ್ಕೆ ಕೈ ಹಾಕಿ ಯಶಸ್ವಿಯಾಗಿ ಸಾಗುತ್ತಿದೆ. ಕನ್ನಡದ ಖ್ಯಾತ ಕಥೆಗಾರ ಬೊಳುವಾರು ಮಹಮದ್ ಕುಂಞ ಅವರ ಬೃಹತ್ ಕಾದಂಬರಿ `ಸ್ವಾತಂತ್ರ್ಯದ ಓಟ’, ಅದೇ ಹೆಸರಿನ ನಾಟಕವಾಗಿ ಈಗ ರಂಗಭೂಮಿಯ ಮೇಲೆ ರಭಸವಾಗಿ ನಡೆಯುತ್ತಿದೆ. ವೆಬ್ ಸಿರೀಸ್ ಆಗಬಹುದಾಗಿದ್ದ ಸಾಹಿತ್ಯ ಕೃತಿಯೊಂದನ್ನು ಒಂದು ನಾಟಕಕ್ಕೆ ಅಳವಡಿಸಿರುವುದು ಶ್ಲಾಘನೀಯ ಎನ್ನುವುದು ಖ್ಯಾತ ಸಾಹಿತಿ ಹಾಗೂ ನಾಟಕಕಾರ ಕೋಟಿಗಾನಹಳ್ಳಿ ರಾಮಯ್ಯ ಅವರ ಅಭಿಮತ.
2012ರಲ್ಲಿ ಪ್ರಕಟಿತ, 2016ರ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕøತ ಕಾದಂಬರಿಯನ್ನು ನಾಟಕ ರೂಪಕ್ಕೆ ಅಳವಡಿಸಿರುವ ರಂಗಾಯಣ, ಭಾರತದ ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯೋತ್ತರ ಕಾಲದ ಬೆಳವಣಿಗೆಗಳನ್ನು ಮತ್ತು ದೇಶ ವಿಭಜನೆಯ ನೋವಿನ ನಡುವೆಯೂ ಕೋಲ್ಮಿಂಚಿನಂತೆ ಮಿಂಚಿದ ಮಾನವೀಯ ಮೌಲ್ಯಗಳ ಸೆಲೆಯನ್ನು ಮನೋಜ್ಞವಾಗಿ ರಂಗಭೂಮಿಗೆ ತಂದಿರುವುದು ರಂಗಾಸಕ್ತರ ಮೆಚ್ಚುಗೆಗೆ ಪಾತ್ರವಾಗಿದೆ. 1,111 ಪುಟಗಳ ಕಾದಂಬರಿಯನ್ನು ನಾಟಕ ರೂಪಕ್ಕೆ ಅಳವಡಿಸಿದವರು ಗೋಮರ್ದನಹಳ್ಳಿ ಮಂಜುನಾಥ್. ಇದರ ನಿರ್ದೇಶಕರು ನಟರಾಜ ಹೊನ್ನವಳ್ಳಿ.
ಸ್ವಾತಂತ್ರ್ಯ ಹೋರಾಟಕ್ಕೆ ತನ್ನದೇ ವಿಶಿಷ್ಟ ಕೊಡುಗೆ ಕೊಟ್ಟ, ದಕ್ಷಿಣ ಭಾರತದ ಜಲಿಯನ್ವಾಲಾಬಾಗ್ ಎಂದೇ ಖ್ಯಾತವಾದ ವಿದುರಾಶ್ವತ್ಥವನ್ನು ಒಳಗೊಂಡ ಅವಿಭಜಿತ ಕೋಲಾರ ಜಿಲ್ಲೆ ಕೂಡ ಈ ನಾಟಕಕ್ಕೆ ಸಾಕ್ಷಿಯಾಯಿತು. ಜೂನ್ 16ರಂದು ಕೋಲಾರದ ರಂಗಮಂದಿರದಲ್ಲಿ ಅದರ ಒಂದು ಪ್ರದರ್ಶನ ನಡೆಯಿತು.
- ಕಥಾ ಹಂದರ
ದೇಶ ವಿಭಜನೆಯ ನೋವು, ಬಂಧು-ಮಿತ್ರರ ಅಗಲಿಕೆ, ಮಹಾತ್ಮ ಗಾಂಧಿ ಹತ್ಯೆ, ಸ್ವಾತಂತ್ರ್ಯದ ಅರ್ಥ, ಸಂಕೀರ್ಣ ಮಾನವ ಸಂಬಂಧಗಳು ಮೊದಲಾದವು ಕಾದಂಬರಿಯ ಮೂಲ ದ್ರವ್ಯವಾಗಿವೆ.
ವಿಭಜನೆಯ ನಂತರ ಲಾಹೋರ್ನಿಂದ ನಿರಾಶ್ರಿತರ ಶಿಬಿರಕ್ಕೆ ಸಿಖ್ ಕುಟುಂಬದ ಮೊಹಿಂದರ್ ಭಾಭಿ ಮತ್ತು ಆಕೆಯ ತಂಗಿ ತನ್ವೀರ್ಳನ್ನು ಕರೆದುಕೊಂಡು ಬರುತ್ತಿದ್ದ ಕಥಾ ನಾಯಕ ಚಾಂದ್ ಅಲಿ ಅಂತಿಮವಾಗಿ ದೆಹಲಿಗೆ ಬಂದು ಸೇರಿದ ನಂತರ ಆತನಲ್ಲಿ ಉಂಟಾಗಿದ್ದ ತಲ್ಲಣ, ತನ್ನದಲ್ಲದ ಪರರ ಸಂಪತ್ತನ್ನು ಅನುಭವಿಸಬಾರದೆಂಬ ಜನಸಾಮಾನ್ಯರ ವಿವೇಕ, ಮುತ್ತುಪ್ಪಾಡಿ ಎಂಬ ಕಾಲ್ಪನಿಕ ಹಳ್ಳಿಯೊಂದರಲ್ಲಿ ಅಲಿ ನೆಲೆ ಕಂಡುಕೊಂಡಿದ್ದು, ಒಂದು ಸಾಂಪ್ರದಾಯಿಕ ಕೌಟುಂಬಿಕ ವಾತಾವರಣವು ಆಧುನಿಕ ಸೌಲಭ್ಯಗಳನ್ನು ಹೊಂದಿ ಕಂಡ ಪ್ರಗತಿ… ಇವೇ ಮುಂತಾದವು ರಂಗದ ಮೇಲೆ ಪ್ರಸ್ತುತಿಗೊಂಡ ಕಥಾ ಹಂದರದ ಸಾರವಾಗಿದೆ. ಜನರ ಅಸಹಾಯಕತೆಯನ್ನು ಬಳಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಪ್ರವೃತ್ತಿ ಯಾವುದೇ ಒಂದು ನಿರ್ದಿಷ್ಟ ಧರ್ಮಕ್ಕೆ ಸೀಮಿತವಾದುದಲ್ಲ ಎನ್ನುವುದನ್ನು ಮೂಸಾ ತಾತನ ಆಸ್ತಿ ಲಪಟಾಯಿಸಲು ಮುಸ್ಲಿಂ ಧರ್ಮ ಗುರುಗಳು ನಡೆಸಿದ ಸಂಚು ಅನಾವರಣಗೊಳಿಸುತ್ತದೆ. ಅಲ್ಲದೇ, ತಲಾಖ್ನ ಅಪವ್ಯಾಖ್ಯಾನ ಹಾಗೂ ದುರುಪಯೋಗದ ಯತ್ನವೊಂದು ವಿಫಲಗೊಂಡಿದ್ದನ್ನು ಕೂಡ ನಾಟಕ ವಿಭಿನ್ನವಾಗಿ ದಾಖಲಿಸುತ್ತದೆ. - ರಂಗದ ಮೇಲೆ `ಬರದೇ ಬಂದ’ ಗಾಂಧಿ
ಚಾಂದ್ ಅಲಿ, ತನ್ನ ತಾಯ್ನೆಲಕ್ಕೆ ಮರಳಲು ಗಾಂಧಿ ನೆರವಾಗಬಹುದೆಂಬ ಆಸೆಯೊಂದಿಗೆ ಬಿರ್ಲಾ ಭವನಕ್ಕೆ ಬಂದಿದ್ದಾಗ ರಂಗದ ಮೇಲೆ ಮಹಾತ್ಮ ಪ್ರತ್ಯಕ್ಷನಾಗದೇ ಅವರ ಧ್ವನಿಯ ಮೂಲಕವೇ ಸೌಹಾರ್ದದ ಸಂದೇಶ ಸಾರಿ ಜನರ ನಡುವೆಯೇ ಗಾಂಧಿ ಇದ್ದಾರೇನೋ ಎನ್ನುವಂಥ ಭಾವನೆ ಬರುವಂತೆ ಮಾಡಿದ್ದು ರಂಗತಂತ್ರದ ಪ್ಲಸ್ ಪಾಯಿಂಟ್ಗಳಲ್ಲಿ ಒಂದಾಗಿದೆ. ಗುಂಡು ಹೊಡೆದಾಗ ಮಹಿಳೆಯರು ತಿರುಗಿಸುತಿದ್ದ ಚರಕವೇ ಬಿದ್ದುಹೋಗುವಂತೆ ಮಾಡಿದ ದೃಶ್ಯ ಆ ಗುಂಡು ಮಾಡಿದ್ದ ಘಾಸಿ ಏನೆಂಬುದನ್ನು ಹಾಗೂ ಗಾಂಧಿ ಹತ್ಯೆಯನ್ನು ಸಾಂಕೇತಿಕವಾಗಿ ಪರಿಣಾಮಕಾರಿ ರೀತಿಯಲ್ಲಿ ಧ್ವನಿಸಿದ್ದು ಕೂಡ ಗಮನಾರ್ಹವಾಗಿದೆ. ಭಾರತ ಮಾತೆಗೆ ಜೈಕಾರದ ಘೋಷಣೆ ಮಾತ್ರವೇ ದೇಶಪ್ರೇಮವಲ್ಲ. ಸೌಹಾರ್ದ ಬಾಳ್ವೆ ಮತ್ತು ಜನರ ಬದುಕನ್ನು ಹಸನುಗೊಳಿಸುವುದೇ ದೇಶಪ್ರೇಮವೆಂಬ ಮಹತ್ವದ ಸಂದೇಶ ನಾಟಕದ ಅಂತಃಸ್ಥ ತಿರುಳಾಗಿದೆ. - ಗಮನ ಸೆಳೆದ ಕಲಾವಿದರು
ಒಟ್ಟು 22 ಕಲಾವಿದರು `ಸ್ವಾತಂತ್ರ್ಯ ಓಟ’ದ ನಾನಾ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಎಲ್ಲರೂ ವೃತಿಪರ ಕಲಾವಿದರಾದರೂ ಕೆಲವರದ್ದಾದರೂ ನಟನೆಯ ಸೊಬಗನ್ನು ಉಲ್ಲೇಖಿಸುವುದು ಅಗತ್ಯವೆನಿಸುತ್ತದೆ. ಕಥಾ ನಾಯಕ ಚಾಂದ್ ಅಲಿಯ ಮೂರು ಹಂತದ ಅಂದರೆ ಬಾಲಕ, ಮಧ್ಯ ವಯಸ್ಕ ಹಾಗೂ ವೃದ್ಧನ ಪಾತ್ರ ನಿರ್ವಹಿಸಿದ ಸಾಗರ್ ದನದಮನಿ, ಆಕಾಶ್ ಪವಾರ್ ಮತ್ತು ಭೈರವ್ ಪೂಜಾರಿ ತಮ್ಮ ಹೊಣೆಗಾರಿಕೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಮನೆಗೆಲಸದ ಸುಮತಿ ಪಾತ್ರವನ್ನು ರೇಣುಕಾ ಸಿದ್ದಿ ಚಿನಕುರುಳಿಯಂತೆ ನಿಭಾಯಿಸಿ ಗಮನ ಸೆಳೆಯುತ್ತಾರೆ. ಸೂಫಿ ಬಾಬಾ ಬದ್ರುದ್ದಿನ್ ಪಾತ್ರಕ್ಕೆ ಭಾಸ್ಕರ್ ಹಿತ್ತಲಮನಿ ಜೀವ ತುಂಬಿದ್ದಾರೆ.
ರಾಘವ ಕಮ್ಮಾರ್ ಸಾರಥ್ಯದ ಸಂಗೀತ ತಂಡದ ಮೇಘನಾ ಕೊತಬಾಳ ಮತ್ತು ವೆಂಕಟೇಶ ರೆಡ್ಡಿ ಹಾಡುಗಾರಿಕೆ; ಸೂಫಿ ಸಂಗೀತ, ನಿರ್ಗುಣಿ ಭಜನ್, ಅವಧ್ನ ಕೊನೆಯ ನವಾಬ ವಾಜಿದ್ ಅಲಿ ಷಾ ಅವರ ಬಾಬುಲ್ ಮೋರಾ ಪ್ರಸ್ತುತಿಯು ಪ್ರೇಕ್ಷಕರಿಗೆ ಮುದ ನೀಡುವುದಲ್ಲದೆ ನಾಟಕದ ಮೆರುಗನ್ನು ಹೆಚ್ಚಿಸುತ್ತದೆ. ಈ ನಾಟಕ ಅದ್ಭುತ ಬೆಳಕಿನ ವಿನ್ಯಾಸ ಹಾಗೂ ರಂಗಸಜ್ಜಿಕೆ, ಲವಲವಿಕೆಯ ನಟನೆಯಿಂದಾಗಿ ನೋಡುಗರಿಗೆ ಒಂದು ಸಿನಿನಾಟಕದ ಅನುಭವವನ್ನೇ ಕಟ್ಟಿಕೊಟ್ಟಂತಿತ್ತು ಎಂದರೆ ಉತ್ಪ್ರೇಕ್ಷೆಯಾಗದು. ಒಟ್ಟಾರೆಯಾಗಿ ಈ ನಾಟಕ ಶಿವಮೊಗ್ಗ ರಂಗಾಯಣದ ಮಾಸ್ಟರ್ ಪೀಸ್ಗಳಲ್ಲಿ ಒಂದಾಗಿ ಉಳಿಯುವುದರಲ್ಲಿ ಸಂದೇಹವಿಲ್ಲ. - 1 ಕೋಟಿ ರೂಪಾಯಿ ಅನುದಾನ: ಪ್ರಸನ್ನ ಡಿ ಸಾಗರ, 2025ರಲ್ಲಿ ಸಿದ್ದರಾಮಯ್ಯ ನೇತೃತ್ವದ ಅಂದಿನ ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾಪನೆ ಮೇರೆಗೆ ಈ ನಾಟಕಕ್ಕಾಗಿಯೇ ಒಂದು ಕೋಟಿ ರೂಪಾಯಿ ಅನುದಾನ ಮಂಜೂರಾಗಿದೆ.
2026 ಏಪ್ರಿಲ್ 25 ಮತ್ತು 26ರಂದು ಶಿವಮೊಗ್ಗದಲ್ಲಿ ಎರಡು ಪ್ರದರ್ಶನದ ನಂತರ ಕೋಲಾರ ಸಹಿತ ಹಲವು ಊರುಗಳಲ್ಲಿ ಪ್ರದರ್ಶನ ಕಂಡಿರುವ `ಸ್ವಾತಂತ್ರ್ಯದ ಓಟ’ದ ನಡಿಗೆ ಮುಂದುವರಿದಿದೆ. ಮನುಷ್ಯ ಸಂಬಂಧ ಕಟ್ಟುವ ಅಗತ್ಯದ ಸಮಕಾಲೀನ ಸನ್ನಿವೇಶಕ್ಕೆ ಪ್ರಸ್ತುತವೆನಿಸುವ ನಾಟಕದ 35 ಪ್ರದರ್ಶನಗಳನ್ನು ನೀಡಲು ಉದ್ದೇಶಿಸಲಾಗಿದೆ. ಅದರ ನಂತರವೂ ಅದನ್ನು ಮುಂದುವರಿಸುವ ಇರಾದೆಯಿದೆ ಎಂದು ಪ್ರಸನ್ನ ತಿಳಿಸಿದ್ದಾರೆ.
- ರಂಗಾಯಣ
- ವಿಶ್ವ ಕುಂದಾಪುರ

