

ಕೋಲಾರ: ಮಹಿಳೆಯರ ಸಬಲೀಕರಣ ಮತ್ತು ಶೈಕ್ಷಣಿಕ ಅರಿವು ಮೂಡಿಸುವ ಉದ್ದೇಶದಿಂದ ಎಸ್ಐಇಡಿಎಸ್ (SIEDS – Society for Informal Education Development Studies) ಎನ್ಜಿಒ ಸಹಯೋಗದೊಂದಿಗೆ ಕೋಲಾರದ ನಿಸಾರ್ ನಗರನಲ್ಲಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ (ಕೆಎಂಡಿಸಿ) ಕೋಲಾರ
ಜಿಲ್ಲಾ ವ್ಯವಸ್ಥಾಪಕರಾದ ಶಿರೀನ್ ತಾಜ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಅವರು ಮಹಿಳೆಯರಿಗೆ ಶಿಕ್ಷಣ, ಉದ್ಯೋಗಾವಕಾಶಗಳು, ಸ್ವಾವಲಂಬನೆ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು.
ಅಲ್ಪಸಂಖ್ಯಾತ ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ಅರಿವು ಪಡೆದು ಶಿಕ್ಷಣದ ಮೂಲಕ ಪ್ರಬಲರಾಗಬೇಕು. ಸರ್ಕಾರ ಹಾಗೂ ಕೆಎಂಡಿಸಿ ಮೂಲಕ ಸಾಲ ಯೋಜನೆಗಳು ಮತ್ತು ಉದ್ಯೋಗ ತರಬೇತಿ ಕೋರ್ಸ್ಗಳು ಲಭ್ಯವಿವೆ. ಇವುಗಳನ್ನು ಸದುಪಯೋಗಪಡಿಸಿಕೊಂಡು ಜೀವನವನ್ನು ಸುಧಾರಿಸಬೇಕು, ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಜಿಲ್ಲಾ ಸಲಹಾ ಅಧಿಕಾರಿಯಾದ ಮಹಮ್ಮದ್ ಪಿ., ಮಹಿಳಾ ಸಮೂಹ ಸಂಘಟನೆಯ ಸಮನ್ವಯಾಧಿಕಾರಿ ಶ್ರೀಮತಿ ಲಕ್ಷ್ಮಿ, ಸ್ವಸಹಾಯ ಸಂಘಗಳ ಮಹಿಳಾ ಪ್ರತಿನಿಧಿಗಳು ಹಾಗೂ ಸ್ಥಳೀಯರು ಭಾಗವಹಿಸಿದರು.
ಈ ವೇಳೆ ಅಕ್ಷರಾಭ್ಯಾಸ, ಮಹಿಳಾ ಹಕ್ಕುಗಳು, ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕುರಿತ ಚರ್ಚೆಗಳು ನಡೆದವು. ಜೊತೆಗೆ ಹಣಕಾಸು ಸಹಾಯ, ಉದ್ಯೋಗ ತರಬೇತಿ ಮತ್ತು ಸಹಾಯಧನ ಅರ್ಜಿ ಪ್ರಕ್ರಿಯೆಗಳ ಕುರಿತು ಮಾಹಿತಿಯೂ ನೀಡಲಾಯಿತು.
ಕಾರ್ಯಕ್ರಮವು ಮಹಿಳೆಯರಲ್ಲಿ ಆತ್ಮವಿಶ್ವಾಸ ಬೆಳೆಸಲು ಪೂರಕವಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟರು.


