

ಟೆಹ್ರಾನ್, ಫೆ.28: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ತಾರಕಕ್ಕೇರಿರುವ ನಡುವೆ ಇಸ್ರೇಲ್ ಶನಿವಾರ ಮುಂಜಾನೆ ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ಭೀಕರ ಕ್ಷಿಪಣಿ ದಾಳಿ ನಡೆಸಿದೆ.ಅಮೆರಿಕದ ಎಚ್ಚರಿಕೆಗಳ ಬೆನ್ನಲ್ಲೇ ನಡೆದ ಈ ದಾಳಿ, ಇರಾನ್ – ಇಸ್ರೇಲ್ ನಡುವಿನ ನೇರ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದ್ದು, ಪೂರ್ಣ ಪ್ರಮಾಣದ ಯುದ್ಧದ ಭೀತಿ ಉಂಟಾಗಿದೆ. ಪರಿಸ್ಥಿತಿ ಗಂಭೀರವಾಗಿದೆ.
ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಅಧಿಕೃತ ಘೋಷಣೆ ನೀಡುತ್ತಾ, “ಮುನ್ನೆಚ್ಚರಿಕಾ ಕ್ರಮವಾಗಿ” ಇರಾನ್ ವಿರುದ್ಧ ದಾಳಿ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. ಇರಾನ್ ತನ್ನ ಮೇಲೆ ದಾಳಿ ನಡೆಸುವ ಸಂಚು ರೂಪಿಸಿದೆ ಎಂಬ ಗುಪ್ತಚರ ಮಾಹಿತಿ ಆಧರಿಸಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಟೆಹ್ರಾನ್ ನಗರದ ಹಲವೆಡೆ ಭಾರಿ ಸದ್ದುಗಳೊಂದಿಗೆ ಸರಣಿ ಸ್ಫೋಟಗಳು ಸಂಭವಿಸಿದ ವರದಿಗಳು ಬಂದಿವೆ. ಇರಾನ್ನ ಸರ್ವೋಚ್ಚ ನಾಯಕ ಅಲಿ ಖಮೇನಿ ಹಾಗೂ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರ ಭವನಗಳನ್ನು ಗುರಿಯಾಗಿಸಿ ದಾಳಿ ನಡೆದಿರುವುದಾಗಿ ತಿಳಿದುಬಂದಿದೆ. ಆದರೆ ದಾಳಿ ನಡೆದ ವೇಳೆ ಖಮೇನಿ ಟೆಹ್ರಾನ್ನಲ್ಲಿ ಇರಲಿಲ್ಲ ಎಂದು ಅಂತರರಾಷ್ಟ್ರೀಯ ಮಾಧ್ಯಮ ವರದಿಗಳು ಸೂಚಿಸಿವೆ.
ಇಸ್ರೇಲ್ ಸರ್ಕಾರವು ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿದ್ದು, ನಾಗರಿಕರಿಗೆ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಸೂಚಿಸಲಾಗಿದೆ. ಇರಾನ್ ಯಾವುದೇ ಕ್ಷಣದಲ್ಲಿ ಡ್ರೋನ್ ಹಾಗೂ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಮೂಲಕ ಪ್ರತಿದಾಳಿ ನಡೆಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಇಸ್ರೇಲ್ ತನ್ನ ‘ಐರನ್ ಡೋಮ್’ ಸೇರಿದಂತೆ ಎಲ್ಲ ವಾಯು ರಕ್ಷಣಾ ವ್ಯವಸ್ಥೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಟ್ಟಿದೆ.
ವಾಯುಪ್ರದೇಶವನ್ನು ಮುಚ್ಚಿ ನಾಗರಿಕ ವಿಮಾನ ಹಾರಾಟಕ್ಕೂ ನಿರ್ಬಂಧ ಹೇರಲಾಗಿದೆ. ಅಮೆರಿಕ ಸಹಯೋಗದಲ್ಲಿ ಹಲವು ತಿಂಗಳ ಯೋಜನೆಯಂತೆ ಈ ದಾಳಿ ನಡೆದಿರುವುದಾಗಿ ತಿಳಿದುಬಂದಿದ್ದು, ‘ಆಪರೇಷನ್ ಶೀಲ್ಡ್ ಆಫ್ ಜುದಾ’ ಹೆಸರಿನಲ್ಲಿ ಜಂಟಿ ಕಾರ್ಯಾಚರಣೆ ನಡೆಸಲಾಗಿದೆ ಎನ್ನಲಾಗಿದೆ.


