

ಶಿರೂರು, ಜುಲೈ 10: ಜ್ಞಾನದಾ ಶಿಕ್ಷಣ ಸಂಸ್ಥೆಯಲ್ಲಿ 2026–27ನೇ ಶೈಕ್ಷಣಿಕ ಸಾಲಿನ ಶಾಲಾ ಸಂಸತ್ ಹಾಗೂ ವಿವಿಧ ವಿದ್ಯಾರ್ಥಿ ಸಂಘಗಳ ಉದ್ಘಾಟನಾ ಸಮಾರಂಭವು ಜುಲೈ 10ರಂದು ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬೈಂದೂರಿನ ಸುರಭಿ ಅಧ್ಯಕ್ಷರು ಹಾಗೂ ವಿಶ್ರಾಂತ ಮುಖ್ಯ ಶಿಕ್ಷಕರಾದ ಶ್ರೀ ಆನಂದ ಮುದ್ದೋಡಿ ಅವರು ಶಾಲಾ ಸಂಸತ್ ಹಾಗೂ ನೂತನ ವಿದ್ಯಾರ್ಥಿ ಸಂಘಗಳನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ನಾಯಕತ್ವದ ಗುಣಗಳನ್ನು ಬೆಳೆಸುವುದು ಅತ್ಯಂತ ಮುಖ್ಯ. ಶಾಲಾ ಸಂಸತ್ ರಚನೆಯ ಮೂಲಕ ವಿದ್ಯಾರ್ಥಿಗಳಿಗೆ ನಾಯಕತ್ವದ ತರಬೇತಿ ನೀಡಿದರೆ ಅವರು ಭವಿಷ್ಯದಲ್ಲಿ ದೇಶದ ಅಮೂಲ್ಯ ಆಸ್ತಿಯಾಗಿ ರೂಪುಗೊಳ್ಳುವುದರ ಜೊತೆಗೆ ಪ್ರಜಾಪ್ರಭುತ್ವ ಹಾಗೂ ಚುನಾವಣಾ ವ್ಯವಸ್ಥೆಯ ಬಗ್ಗೆ ಉತ್ತಮ ಅರಿವು ಹೊಂದಲಿದ್ದಾರೆ ಎಂದು ಹೇಳಿದರು.
ಸ್ಪರ್ಧಾತ್ಮಕ ಯುಗದಲ್ಲಿ ಉತ್ತಮ ಶಿಕ್ಷಣದೊಂದಿಗೆ ನಾಯಕತ್ವದ ಗುಣ, ಶಿಸ್ತು, ಸ್ವಚ್ಛತೆ ಹಾಗೂ ಉತ್ತಮ ಸಂಸ್ಕಾರಗಳನ್ನು ಅಳವಡಿಸಿಕೊಂಡು ಆದರ್ಶ ಪ್ರಜೆಗಳಾಗಿ ಬೆಳೆಯಬೇಕು ಎಂದು ಕರೆ ನೀಡಿದ ಅವರು, ಮಂತ್ರಿಮಂಡಲದ ಕಾರ್ಯವೈಖರಿಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಸಂಸ್ಥೆಯ ಕಾರ್ಯದರ್ಶಿ ಧೀರಜ್ ಆರ್ ಶಿರೂರ್ಕರ್ . ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಶುಭ ಹಾರೈಸಿದರು. ಪ್ರಾಂಶುಪಾಲರಾದ ಡಾ. ರವಿದಾಸ್ ಶೆಟ್ಟಿ ಅವರು ಚುನಾಯಿತ ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ನಾಯಕನಾಗಿ ಸಾಕ್ಷತ್, ಉಪನಾಯಕಿಯಾಗಿ ಅಂಜಲಿ, ಶಿಸ್ತಿನ ಮಂತ್ರಿಯಾಗಿ ಅಫಾಫ್, ಉಪಮಂತ್ರಿಯಾಗಿ ಚಕ್ರವರ್ತಿ, ಕ್ರೀಡಾ ಮಂತ್ರಿಯಾಗಿ ಧನ್ವಿ, ಉಪಮಂತ್ರಿಯಾಗಿ ಪ್ರೀತಮ್, ಸಾಂಸ್ಕೃತಿಕ ಮಂತ್ರಿಯಾಗಿ ಜಾನವಿ ಹಾಗೂ ಉಪಮಂತ್ರಿಯಾಗಿ ತನ್ಮಯ್ ಪ್ರಮಾಣವಚನ ಸ್ವೀಕರಿಸಿದರು.
ಸಭೆಯಲ್ಲಿ ವಿವಿಧ ಸಂಘಗಳ ಮಾರ್ಗದರ್ಶಕರು, ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಐಶ್ವರ್ಯ ಸ್ವಾಗತಿಸಿದರು. ಶಿಕ್ಷಕಿ ಸಿ.ಜಿ.ವಿ.ಪಿ. ಅವರು ಅತಿಥಿಗಳನ್ನು ಪರಿಚಯಿಸಿದರು. ರಿತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು, ಮೇಘನಾ ವಂದಿಸಿದರು.












