

ಶ್ರೀನಿವಾಸಪುರ : ನಾನು ಎಲ್ಲರಂತೆ ಹೊಗಳಿಕೆ ಮಾತುಗಳನ್ನು ಆಡುವವನಲ್ಲ. ನುಡಿದಂತೆ ನಡೆಯುವುದೇ ನನ್ನ ಸ್ವಭಾವ. ಗ್ರಾಮವನ್ನು ಉಳಿಸಿಕೊಳ್ಳುವ ವಿಚಾರದಲ್ಲಿ ನಿಮ್ಮೊಂದಿಗೆ ಸದಾ ನಿಲ್ಲುತ್ತೇನೆ ಎಂದು ಅಡ್ಡಗಲ್ ಕ್ಷೇತ್ರದ ನಾಯಕ ಕೆ.ಆರ್.ರಮೇಶ್ ಕುಮಾರ್ ಭರವಸೆ ನೀಡಿದರು.
ತಾಲೂಕಿನ ಶಿವಪುರ ಗ್ರಾಮದಲ್ಲಿ ಶುಕ್ರವಾರ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು, ನನ್ನ ಬಗ್ಗೆ ಕೆಲವರು ಹೊಗಳುತ್ತಾರೆ, ಇನ್ನೂ ಕೆಲವರು ತೆಗಳುತ್ತಾರೆ. ಆದರೆ ಯಾವ ಮಾತಿಗೂ ನಾನು ಹಿಗ್ಗುವುದಿಲ್ಲ, ಅಂಜುವುದಿಲ್ಲ. ನನಗೆ ಮುಖ್ಯವಾದವರು ಬಡಕುಟುಂಬಗಳು ಎಂದರು.
ಹಿಂದೆ ಗ್ರಾಮದಲ್ಲಿ 35 ಸ್ತ್ರೀಶಕ್ತಿ ಸಂಘಗಳು ಇದ್ದವು. ಆ ಸಂಘಗಳ ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕೆಂಬ ಉದ್ದೇಶದಿಂದ ಪ್ರತಿ ಸಂಘದಲ್ಲಿನ ಒಬ್ಬ ಮಹಿಳೆಗೆ ಡಿಸಿಸಿ ಬ್ಯಾಂಕ್ ಮೂಲಕ ಶೂನ್ಯ ಬಡ್ಡಿಯಲ್ಲಿ 50 ಸಾವಿರ ರೂ. ಸಾಲ ವ್ಯವಸ್ಥೆ ಮಾಡಿದ್ದೆ ಎಂದು ತಿಳಿಸಿದರು.
ನನ್ನ ಅವಧಿಯಲ್ಲಿ ಸರ್ಕಾರದ ವಸತಿ ಯೋಜನೆಯಡಿ ಕ್ಷೇತ್ರದ ಅನೇಕ ಬಡವರಿಗೆ ಮನೆಗಳನ್ನು ಒದಗಿಸಲಾಗಿದೆ. ನಾನು ಸಾಹುಕಾರರ ಕುಟುಂಬದಿಂದ ಬಂದವನಲ್ಲ. ಬಡಕುಟುಂಬದಲ್ಲಿ ಹುಟ್ಟಿ ಬೆಳೆದಿರುವುದರಿಂದ ಅವರ ನೋವು ನನಗೆ ಚೆನ್ನಾಗಿ ಗೊತ್ತಿದೆ ಎಂದರು.
ವಿರೋಧಿಗಳು ಮೊದಲು ಸುಳ್ಳು ಹೇಳುವುದನ್ನು ನಿಲ್ಲಿಸಬೇಕು ಎಂದು ಚಾಟಿ ಬೀಸಿದ ಅವರು, ಹಿಂದಿನ ಚುನಾವಣೆಯಲ್ಲಿ ಕೆಲವರು ನನ್ನ ಬೆನ್ನಿಗೆ ಚೂರಿ ಹಾಕಿದರು. ಆದರೂ ನನಗೆ ನನ್ನ ಮತದಾರರ ಮೇಲೆ ಅಪಾರ ವಿಶ್ವಾಸವಿದೆ. ಮುಂದಿನ ಚುನಾವಣೆಗೆ ಇನ್ನೂ ಎರಡು ವರ್ಷ, ಮೂರು ತಿಂಗಳು, 21 ದಿನ ಬಾಕಿಯಿದೆ. ಆ ವೇಳೆ ಯಾರು ಇರುತ್ತಾರೆ, ಯಾರು ಇರೋದಿಲ್ಲ ಎಂಬುದು ದೇವರಿಗೇ ಗೊತ್ತು ಎಂದರು.
ಅರಣ್ಯ ಇಲಾಖೆಗೆ ಸಂಬಂಧಿಸಿದ ವಿಚಾರದಲ್ಲಿ ಯಾರೂ ತಲೆಕೆಡಿಸಿಕೊಳ್ಳಬೇಕಿಲ್ಲ. ಈಗಾಗಲೇ ಸರ್ಕಾರ ಹಾಗೂ ಅರಣ್ಯ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿದ್ದೇನೆ. ನೀವು ನೆಮ್ಮದಿಯಿಂದ ನಿದ್ದೆ ಮಾಡಿ, ನಾನು ನಿಮ್ಮೊಂದಿಗೆ ಇದ್ದೇನೆ ಎಂದು ಭರವಸೆ ನೀಡಿದರು. ನನಗೆ ಮನೆ ಕಟ್ಟುವುದೂ ಗೊತ್ತು, ಗ್ರಾಮ ಕಟ್ಟುವುದೂ ಗೊತ್ತು. ಇದು ಸಾಮಾನ್ಯ ಸಂಗತಿ ಎಂದರು.
ಈ ಸಂದರ್ಭದಲ್ಲಿ ಅಡ್ಡಗಲ್ ಕ್ಷೇತ್ರದ ಕೋಮುಲ್ ನಿರ್ದೇಶಕ ಕೆ.ಕೆ.ಮಂಜುನಾಥರೆಡ್ಡಿ, ಕೆಪಿಸಿಸಿ ಸದಸ್ಯ ಸಂಜಯ್ ರೆಡ್ಡಿ, ಪಿಎಲ್ಡಿ ಬ್ಯಾಂಕ್ ಉಪಾಧ್ಯಕ್ಷ ಕೋಡಿಪಳ್ಳಿ ಸುಬ್ಬಿರೆಡ್ಡಿ, ತಾ.ಪಂ ಮಾಜಿ ಅಧ್ಯಕ್ಷ ಗುರಪ್ಪ, ಮುಖಂಡರಾದ ಕೇತುಗಾನಹಳ್ಳಿ ಕೆ.ಎಂ.ನಾಗರಾಜು, ಜೆವಿಕಾಲೋನಿ ವೆಂಕಟೇಶ್, ಶಿವಪುರ ಎಸ್.ಜಿ.ವಿ. ವೆಂಕಟೇಶ್, ಜಗದೀಶ್ ಕುಮಾರ್, ಜಿ.ಗುರುಪ್ಪ, ವಿ.ಗುರುಪ್ರಸಾದ್, ವಿ.ಶ್ರೀನಿವಾಸ್, ಮುರಳಿ, ಸಲ್ಲಪ್ಪ, ಎಸ್.ಜಿ.ವಿ.ವೆಂಕಟರಮಣ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


