

ಪಣಜಿ: ಗೋವಾದ ಧಾರಬಂದೋರಾ ತಾಲ್ಲೂಕಿನ ದುರ್ಗಿಣಿ (ಅಮಿಗೋಸ್ ಜಂಕ್ಷನ್) ಬಳಿ ಶುಕ್ರವಾರ (ಅಕ್ಟೋಬರ್ 23, 2026) ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೆಂಗಳೂರು ಮೂಲದ ದಂಪತಿ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಕಾರಿನಲ್ಲಿದ್ದ ಮತ್ತೊಬ್ಬರು ಹಾಗೂ ಟ್ರಕ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಂಜಿನ ಡಿಜಿಎಂ ಸಾವು:
ಅಪಘಾತದಲ್ಲಿ ಮೃತಪಟ್ಟವರನ್ನು ಬೆಂಗಳೂರು ನಿವಾಸಿಗಳಾದ ಸೌಮೆನ್ ಪೌಲ್ (53) ಮತ್ತು ಅವರ ಪತ್ನಿ, ಹಾಸನ ಮೂಲದ ಸಿಂಧು ಮೂರ್ತಿ (48) ಎಂದು ಗುರುತಿಸಲಾಗಿದೆ. ಸಿಂಧು ಮೂರ್ತಿ ಅವರು ಪ್ರಖ್ಯಾತ ಮರ್ಸಿಡಿಸ್ ಬೆಂಜ್ ಕಂಪನಿಯಲ್ಲಿ ಡಿಜಿಎಂ (ಡೆಪ್ಯುಟಿ ಜನರಲ್ ಮ್ಯಾನೇಜರ್) ಆಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.
ಮುಖಾಮುಖಿ ಡಿಕ್ಕಿ:
ಮೃತರ ಕುಟುಂಬದ ಮೂಲಗಳ ಪ್ರಕಾರ, ಸಿಂಧು ಮೂರ್ತಿ ಅವರ ಅಕ್ಕ ಸೀಮಾ ರಮೇಶ್ ಅವರನ್ನು ಗೋವಾಕ್ಕೆ ಬಿಡಲು ದಂಪತಿಗಳು ತಮ್ಮ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಬೆಂಗಳೂರಿನಿಂದ ಪ್ರಯಾಣ ಬೆಳೆಸಿದ್ದರು. ಗೋವಾ-ಕರ್ನಾಟಕ ರಾಷ್ಟ್ರೀಯ ಹೆದ್ದಾರಿಯ ಅಮಿಗೋಸ್ ಜಂಕ್ಷನ್ ತಲುಪಿದಾಗ, ಎದುರುಗಡೆಯಿಂದ ಅತಿವೇಗವಾಗಿ ಬಂದ ಟ್ರಕ್ ಇವರ ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ದಂಪತಿಗಳು ಕಾರಿನೊಳಗೇ ಸಿಲುಕಿ ಕೊನೆಯುಸಿರೆಳೆದಿದ್ದಾರೆ.
ಇಬ್ಬರ ಸ್ಥಿತಿ ಗಂಭೀರ:
ಕಾರಿನ ಹಿಂಬದಿಯ ಸೀಟಿನಲ್ಲಿ ಕುಳಿತಿದ್ದ ಸೀಮಾ ರಮೇಶ್ (53) ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಟ್ರಕ್ ಚಾಲಕ ನಾಗರಾಜ್ ಭಜಾಂದ್ರಿ ಎಂಬಾತನಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪೊಲೀಸ್ ತನಿಖೆ:
ಘಟನಾ ಸ್ಥಳಕ್ಕೆ ಧಾವಿಸಿದ ಕುಲೇಮ್ ಠಾಣೆಯ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಅಪಘಾತಕ್ಕೆ ಟ್ರಕ್ ಚಾಲಕನ ಬೇಜವಾಬ್ದಾರಿಯ ಚಾಲನೆಯೇ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಪೊಲೀಸರು ಟ್ರಕ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

