HOLY ROSARY CHURCH, KUNDAPUR – 450 th JUBILEE SOUVENIR 2021

ಹೆಬ್ಬಾವನ್ನು ಕೊಂದರೆ ಜೈಲು ಶಿಕ್ಷೆಯಾಗುತ್ತೆ: ಮನೆ ಬಳಿ ಬಂದ ಹೆಬ್ಬಾವನ್ನು ಕೊಂದದಕ್ಕೆ ಜಾಮೀನು ರಹಿತ ಬಂಧನ

JANANUDI.COM NETWORK               EDITOR : BERNARD D’COSTA

ಚಿತ್ರ ಎರವಲು

ಪುತ್ತೂರು:  ಮನೆ ಬಳಿ ಬಂದಿದ್ದ ಹೆಬ್ಬಾವನ್ನು ಹಿಡಿದು ಅರಣ್ಯ ಇಲಾಖೆಯ ಕಟ್ಟಡದ ಬಾಗಿಲಿಗೆ ಕಟ್ಟಿ ಹಾಕಿದ ಹೆಬ್ಬಾವು ಸಾಯಲು ಕಾರಣವಾದ ಆರೋಪದಡಿ ಗ್ರಾ. ಪಂ ಸಿಬ್ಬಂದಿ ಸಹಿತ  ಇಬ್ಬರನ್ನು ಪುತ್ತೂರು ಅರಣ್ಯ ಇಲಾಖೆ ಸಿಬ್ಬಂದಿಗಳು ಬಂಧಿಸಿದ್ದಾರೆ. ಪುತ್ತೂರು ಕೊಳ್ತಿಗೆ ಗ್ರಾಮದ ಶೇಡಿಗುರಿ ವಾಸಿ ಧನಂಜಯ(38) ಮತ್ತು ಗ್ರಾ. ಪಂ ಸಿಬ್ಬಂದಿ  ಜಯ(38) ಬಂಧಿತರು.      

ಹೆಬ್ಬಾವನ್ನು ಹಿಡಿದು ಕಟ್ಟಡದ ಬಾಗಿಲ ಬೀಗಕ್ಕೆ ಕಟ್ಟಿದ ಪರಿಣಾಮ  ಹಾವು ಮೃತಪಟ್ಟಿದೆ. ಹೆಬ್ಭಾವನ್ನು ಕೊಲ್ಲುವುದು 1972 ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಜಾಮೀನು ರಹಿತ ಅಪರಾಧವಾಗುತ್ತದೆ. ಈ ಹಿನ್ನೆಲೆಯಲ್ಲಿ  ಆರೋಪಿತರನ್ನು  ಬಂಧಿಸಿ  ಅರಣ್ಯಾಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು . ನ್ಯಾಯಾಲಯವು ಇವರಿಗೆ ಜುಲೈ 15 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. 

ಕಾರ್ಯಾಚರಣೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯವರಾದ  ವೈ.ಕೆ. ದಿನೇಶ್ ಕುಮಾರ್ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ. ಪಿ. ಕಾರ್ಯಪ್ಪ ಇವರ ನಿರ್ದೇಶನದಂತೆ ವಲಯ ಅರಣ್ಯಾಧಿಕಾರಿಗಳಾದ ಕಿರಣ್ ಬಿ. ಎಮ್. ಉಪ ವಲಯ ಅರಣ್ಯಾಧಿಕಾರಿಗಳಾದ ಲೋಕೇಶ್ ಎಸ್. ಎನ್. ಅರಣ್ಯ ರಕ್ಷಕರುಗಳಾದ ದೀಪಕ ,ನಿಂಗರಾಜ್ ಮತ್ತು ಇಲಾಖೆ ವಾಹನ ಚಾಲಕರಾದ ಜಗದೀಶ್ ಪಾಲ್ಗೊಂಡಿದ್ದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ವರದಿ:ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ      ಸಂಪಾದಕರು : ಬರ್ನಾಡ್ ಡಿ’ಕೋಸ್ತಾ

ಕೋಲಾರ:- ಸರ್ಕಾರಿ ನೌಕರರ ಪ್ರತಿಭಾವಂತ ಮಕ್ಕಳನ್ನು ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಪುರಸ್ಕರಿಸಲು ನಿರ್ಧರಿಸಿದ್ದು, ಅರ್ಜಿ ಸಲ್ಲಿಸಲು ಜಿಲ್ಲಾ ಹಾಗೂ ತಾಲ್ಲೂಕು ನೌಕರರ ಸಂಘಗಳ ಅಧ್ಯಕ್ಷರ ದೃಢೀಕರಣ ಪತ್ರ ಕಡ್ಡಾಯವಾಗಿರುವುದರಿಂದ ನೌಕರರು ಸಂಘದ ಪದಾಧಿಕಾರಿಗಳನ್ನು ಸಂಪರ್ಕಿಸಲು ಸಂಘದ ಜಿಲ್ಲಾಧ್ಯಕ್ಷ ಸುರೇಶ್‍ಬಾಬು ಮನವಿ ಮಾಡಿದ್ದಾರೆ.
ನೌಕರರು ತಮ್ಮ ಪ್ರತಿಭಾವಂತ ಮಕ್ಕಳ ಅರ್ಜಿಗಳನ್ನು ಸಲ್ಲಿಸುವ ಮುನ್ನಾ ಅರ್ಜಿಗಳನ್ನು ನೌಕರರ ಸಂಘದ ಕಚೇರಿಯಲ್ಲಿ ಸಲ್ಲಿಸಿ, ದೃಢೀಕರಣ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಈ ಕುರಿತು ಜಿಲ್ಲೆಯ ಸರ್ಕಾರಿ ನೌಕರರಿಗೆ ಮನವಿ ಮಾಡಿರುವ ಅವರು, ಪ್ರತಿಭಾ ಪುರಸ್ಕಾರ ಅರ್ಜಿಗಳನ್ನು ಈಗಾಗಲೇ ಕೇಂದ್ರ ಸಂಘ ಬಿಡುಗಡೆ ಮಾಡಿದ್ದು, ನೌಕರರ ಅರ್ಹ ಪ್ರತಿಭಾನ್ವಿತ ಮಕ್ಕಳು ಅರ್ಜಿ ಸಲ್ಲಿಸಲು ಕೋರಿದ್ದಾರೆ.
ವಿದ್ಯಾರ್ಥಿಯ ಪೋಷಕರು ನಿಗಮ, ಮಂಡಳಿ,ಪ್ರಾಧಿಕಾರ, ವಿಶ್ವವಿದ್ಯಾಲಯ, ಖಾಸಗಿ, ಅನುದಾನಿತ ವಿದ್ಯಾಸಂಸ್ಥೆಯ ನೌಕರರಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಲು ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ನೌಕರರ ಸಂಘಗಳ ಜಿಲ್ಲಾ ಹಾಗೂ ತಾಲ್ಲೂಕು ಅಧ್ಯಕ್ಷರುಗಳಿಗೆ ಸೂಚಿಸಿದ್ದಾರೆ.
ಜಿಲ್ಲಾ ಹಾಗೂ ತಾಲ್ಲೂಕು ನೌಕರರ ಸಂಘಗಳ ಅಧ್ಯಕ್ಷರ ದೃಢೀಕರಣ ಪತ್ರವಿಲ್ಲದ ಆನ್‍ಲೈನ್ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದು ರಾಜ್ಯ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಸ್ವಷ್ಟಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ದೃಢೀಕರಣಕ್ಕಾಗಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ-ದೂರವಾಣಿ ಸಂಖ್ಯೆ-9449272408, ಕಾರ್ಯಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ-ದೂ.9448211802 ಅಥವಾ ಸಂಘದ ಕಚೇರಿಯ ನಾರಾಯಣಸ್ವಾಮಿ-ದೂ.9945353615 ಅವರನ್ನು ಸಂಪರ್ಕಿಸಲು ಸುರೇಶ್‍ಬಾಬು ಕೋರಿದ್ದಾರೆ.

623 ಅಂಕಗಳನ್ನು ಗಳಿಸಿ ಸಾಧನೆ ಮಾಡಿದ ಪಿ.ಸಹನಾರನ್ನು ಚಿನ್ಮಯ ಮಿಷನ್‍ನ ಸ್ವಾಮಿ ಬ್ರಹ್ಮಾನಂದಜೀ ಸನ್ಮಾನಿಸಿದರು.

ವರದಿ:ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ   ಸಂಪಾದಕರು : ಬರ್ನಾಡ್ ಡಿ’ಕೋಸ್ತಾ

ಕೋಲಾರದಲ್ಲಿ ಚಿನ್ಮಯ ವಿದ್ಯಾಲಯದ ಆಶ್ರಯದಲ್ಲಿ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ನಡೆದ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ 623 ಅಂಕಗಳನ್ನು ಗಳಿಸಿ ಸಾಧನೆ ತೋರಿದ ಮುದುವಾಡಿ ಗ್ರಾಮದ ಡಿ.ಎನ್.ಫಣಿಕುಮಾರ್,ಜಯಲಕ್ಷ್ಮಿ ದಂಪತಿಗಳ ಪುತ್ರಿಯಾದ ಪಿ.ಸಹನಾರನ್ನು ಚಿನ್ಮಯ ಮಿಷನ್‍ನ ಸ್ವಾಮಿ ಬ್ರಹ್ಮಾನಂದಜೀ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲರು, ಶಿಕ್ಷಕರು ಹಾಜರಿದ್ದರು.

ಜಗದೀಶ್ ಶೇಠ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ವತಿಯಿಂದ ವಕ್ಕಲೇರಿ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ವರದಿ:ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ     ಸಂಪಾದಕರು : ಬರ್ನಾಡ್ ಡಿ’ಕೋಸ್ತಾ

ಕೋಲಾರ:- `ಸೋಷಿಯಲ್ ಇಮ್ಮರ್ಶನ್ ಪ್ರೋಗ್ರಾಂ’ ನಡಿ ಸಮುದಾಯದ ಅಗತ್ಯತೆಗಳಿಗೆ ವಿದ್ಯಾರ್ಥಿಗಳನ್ನು ಸಂವೇದನಾ ಶೀಲಗೊಳಿಸುವ ಮತ್ತು ಸಂಶೋಧನೆಯ ಮೂಲಕ ಸಾಮಾಜಿಕ ಸಮಸ್ಯೆಗಳನ್ನು ಗುರುತಿಸುವ ಪ್ರಯತ್ನವಾಗಿ ತಾಲ್ಲೂಕಿನ ವಕ್ಕಲೇರಿ ಹಾಗೂ ಶೆಟ್ಟಿಕೊತ್ತನೂರು ಗ್ರಾಮಗಳಲ್ಲಿ ಜಗದೀಶ್ ಶೇಠ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ವತಿಯಿಂದ ಉಚಿತ ವೈದ್ಯಕೀಯ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಶೀಬಿರದಲ್ಲಿ 450ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಆರೋಗ್ಯ ತಪಾಸಣೆಗೆ ಒಳಪಟ್ಟಿದ್ದು, ಮನೆಮನೆಗೂ ತೆರಳಿ ಜನರ ಸಮಸ್ಯೆಗಳನ್ನು ಆಲಿಸುವ ಮೂಲಕ ಸಾಮಾಜಿಕ ಸಮಸ್ಯೆಗಳನ್ನು ಗುರುತಿಸುವ ಅನನ್ಯ ಉಪಕ್ರಮವನ್ನು ಕೈಗೊಳ್ಳಲಾಗಿದ್ದು, ವಿದ್ಯಾರ್ಥಿಗಳು ಅಧ್ಯಯನದ ಮೂಲಕ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದರು.


ರಾಜ್ಯದ ಹೆಸರಾಂತ ಆಸ್ಪತ್ರೆಗಳ ವೈದ್ಯರಾದ ಡಾ.ಕೆ.ಜ್ಯೋತಿ ಲಕ್ಷ್ಮಿ, ಕ್ಲೌಡ್ ನೈನ್ ಆಸ್ಪತ್ರೆಯ ಡಾ.ಎಸ್.ಪುಷ್ಪಲತಾ, ಎಂ.ಎಸ್.ರಾಮಯ್ಯ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ.ನಿದಾ, ಖ್ಯಾತ ತಜ್ಞೆ ಡಾ.ರಶ್ಮಿ ಮತ್ತಿತರರು ಆರೋಗ್ಯ ತಪಾಸಣೆ ನಡೆಸಿದರು.
ಶಿಬಿರದಲ್ಲಿ ಎತ್ತರ ಮಾಪನ, ತೂಕ ಮಾಪನ, ರಕ್ತದೊತ್ತಡ, ನಾಡಿ ತಪಾಸಣೆ, ಚರ್ಮ, ಕೂದಲು ಮತ್ತು ಉಗುರುಗಳ ತಪಾಸಣೆಯಂತಹ ಸಾಮಾನ್ಯ ತಪಾಸಣೆ ಸೇರಿದಂತೆ ಉಚಿತ ಪರೀಕ್ಷೆಗಳು ಲಭ್ಯವಿದ್ದವು. ಮೂಗು,ಗಂಟಲು ತಜ್ಞರು ಹೃದಯ, ಶ್ವಾಸಕೋಶ, ಹೊಟ್ಟೆ, ಕೈಕಾಲುಗಳನ್ನು ಪರೀಕ್ಷಿಸಿ, ಗರ್ಭಿಣಿಯರಿಗೆ ಡಾಪ್ಲರ್ ಮೂಲಕ ಭ್ರೂಣದ ಹೃದಯ ಪರೀಕ್ಷೆ , ಅದರಂತೆ ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ಉಚಿತ ಔಷಧ ಮತ್ತು ಪ್ರೋಟೀನ್ ಪೌಡರಗಳನ್ನು ನೀಡಲಾಯಿತು.
ವಿದ್ಯಾರ್ಥಿಗಳು ವಕ್ಕಲೇರಿ ಮತ್ತು ಶೆಟ್ಟಿಕೊಟ್ನೂರಿನ ಪ್ರತಿ ಮನೆಗೆ ಭೇಟಿ ನೀಡಿ ಕರಪತ್ರಗಳ ಮೂಲಕ ಪ್ರಚಾರ ನಡೆಸಿ ಆರೋಗ್ಯ ರಕ್ಷಣೆ ಕುರಿತು ಜಾಗೃತಿ ಮೂಡಿಸಿದರು. ಜತೆಗೆ ಸಮೀಕ್ಷೆ ನಡೆಸಿ ಗ್ರಾಮಸ್ಥರ ಇತರ ಸಮಸ್ಯೆಗಳನ್ನು ಕಂಡುಹಿಡಿಯಲು ಪ್ರಯತ್ನಿಸಿದರು.
ವಕ್ಕಲೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಶಿಬಿರಕ್ಕೆ ಸುಮಾರು 250 ಮಂದಿ ಭೇಟಿ ನೀಡಿದ್ದರು. ಶೆಟ್ಟಿಕೊತ್ತನೂರಿನಲ್ಲಿ ನಡೆದ ಶಿಬಿರಕ್ಕೆ 220 ಮಂದಿ ಆಗಮಿಸಿ ತಪಾಸಣೆಗೆ ಒಳಗಾದರು.
ಇದೇ ಸಂದರ್ಭದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆಗೆ ಒಳಗಾಗಿದ್ದು, ನೂರಾರು ಮಂದಿ ಇದರ ಪ್ರಯೋಜನ ಪಡೆದುಕೊಂಡರು.
ಈ ಶಿಬಿರಕ್ಕೆ ಜಗದೀಶ್ ಶೇಠ್ ಸ್ಕೂಲ್ ಆಫ್ ಮ್ಯಾನೇಜ್‍ಮೆಂಟ್‍ನ ಅಧ್ಯಾಪಕರಾದ ಬಿನಿತಾ ವರ್ಥಕ್, ಕುಮಾರಿ ಝಿನಿಯ ನನ್ರಾ ಮತ್ತು ಆಡಿ. ವಿಠ್ಠಲ ರಂಗನ್ ನೇತೃತ್ವ ವಹಿಸಿದ್ದರು.

ಕೋಲಾರ ಡಿಸಿಸಿ ಬ್ಯಾಂಕಿನಿಂದ ಪುರುಷ ಸ್ವಸಹಾಯ ಸಂಘಗಳಿಗೂ ಆರ್ಥಿಕ ಸೌಲಭ್ಯ – ಸಾಲಮರುಪಾವತಿಯಲ್ಲಿ ಬದ್ದತೆ ಇದ್ದರೆ ಮತ್ತಷ್ಟು ನೆರವು-ಬ್ಯಾಲಹಳ್ಳಿ ಗೋವಿಂದಗೌಡ

ವರದಿ:ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ       ಸಂಪಾದಕರು:ಬರ್ನಾಡ್ ಡಿ’ಕೋಸ್ತಾ

ಕೋಲಾರ:- ಮಹಿಳೆಯರಂತೆ ಪುರುಷರೂ ಸಾಲ ಮರುಪಾವತಿಯಲ್ಲಿ ಬದ್ದತೆ ತೋರಿದರೆ ಮತ್ತಷ್ಟು ಪುರುಷ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ ನೀಡುವ ಮೂಲಕ ಸ್ವಾವಲಂಬಿ ಬದುಕಿಗೆ ನೆರವಾಗಲು ಬ್ಯಾಂಕ್ ಸಿದ್ದವಿದೆ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸ್ವಷ್ಟಪಡಿಸಿದರು.
ನಗರದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ನಗರದ ಶತಶೃಂಗ ಪುರುಷ ಸ್ವಸಹಾಯ ಸಂಘಕ್ಕೆ ಭದ್ರತೆ ರಹಿತ 5 ಲಕ್ಷ ರೂ ಸಾಲ ವಿತರಿಸಿ ಅವರು ಮಾತನಾಡುತ್ತಿದ್ದರು.
ಅವಿಭಜಿತ ಜಿಲ್ಲೆಯ ಲಕ್ಷಾಂತರ ಮಹಿಳೆಯರಿಗೆ ಡಿಸಿಸಿ ಬ್ಯಾಂಕ್ ಭದ್ರತೆ ರಹಿತ ಸಾಲ ಸೌಲಭ್ಯ ಕಲ್ಪಿಸಿದೆ, ಸಾಲ ಮರುಪಾವತಿಯಲ್ಲೂ ಮಹಿಳೆಯರು ಶೇ.100 ಸಾಧನೆಯಾಗುತ್ತಿದ್ದು, ಬ್ಯಾಂಕಿಗೆ ಬೆನ್ನೆಲುಬಾಗಿದ್ದಾರೆ ಎಂದು ತಿಳಿಸಿದರು.
ಭದ್ರತೆ ಇಲ್ಲದೇ ಮಹಿಳೆಯರಿಗೆ ಸಾಲ ನೀಡಲು ಮುಂದಾದಾಗ ಅನೇಕರು ಆಶ್ಚರ್ಯ ವ್ಯಕ್ತಪಡಿಸಿದರು, ಮಹಿಳೆಯರು ಸಾಲ ಮರುಪಾವತಿಸುವರೇ, ಬ್ಯಾಂಕಿನ ಗತಿಯೇನು ಎಂದೆಲ್ಲಾ ಪ್ರಶ್ನಿಸಿದ್ದರು ಎಂದು ಸ್ಮರಿಸಿದ ಅವರು, ಇದೀಗ ಮಹಿಳೆಯರೇ ಸಮರ್ಪಕ ಸಾಲ ಮರುಪಾವತಿ, ಉಳಿತಾಯದ ಹಣ ಠೇವಣಿ ಇಡುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ ಎಂದು ತಿಳಿಸಿದರು.
ಪುರುಷರು ಸ್ವಸಹಾಯ ಸಂಘ ರಚಿಸಿಕೊಂಡು ಸ್ವಾವಲಂಬಿ ಬದುಕಿನ ಸಂಕಲ್ಪದೊಂದಿಗೆ ಸಾಲಕ್ಕೆ ಮುಂದಾದರೆ ನಿಯಮಾನುಸಾರ ಬ್ಯಾಂಕ್ ಸಾಲ ವಿತರಿಸಲು ಸಿದ್ದವಿದೆ ಎಂದ ಅವರು, ಸಕಾಲಕ್ಕೆ ಸಾಲ ಮರುಪಾವತಿಸಿ ಮತ್ತಷ್ಟು ಸಾಲ ಸೌಲಭ್ಯ ಪಡೆದುಕೊಳ್ಳಿ ಎಂದು ಕಿವಿಮಾತು ಹೇಳಿದರು.
ಕೋಲಾರ ಡಿಸಿಸಿ ಬ್ಯಾಂಕ್ ಬಡವರು,ರೈತರು, ಮಹಿಳೆಯರ ಬದುಕು ಹಸನಾಗಿಸುವ ಬದ್ದತೆ ಹೊಂದಿದೆ, ಸಂಘ ರಚಿಸಿಕೊಂಡು ಉಳಿತಾಯದ ಹಣವಿಡುವ ಎಲ್ಲಾ ಸಂಘಗಳಿಗೂ ಈಗಾಗಲೇ ಸಾಲ ಸೌಲಭ್ಯ ನೀಡಲಾಗಿದೆ, ಎಂದಿಗೂ ಮಧ್ಯವರ್ತಿಗಳ ಹಾವಳಿಗೆ ಅವಕಾಶ ನೀಡುವುದಿಲ್ಲ ಎಂದು ಸ್ವಷ್ಟಪಡಿಸಿದರು.
ಇ-ಶಕ್ತಿ ಅನುಷ್ಠಾನದ ಮೂಲಕ ಮಹಿಳಾ ಸ್ವಸಹಾಯ ಸಂಘಗಳ ವಾರದ ಸಭೆ, ಉಳಿತಾಯದ ಚಟುವಟಿಕೆಗಳನ್ನು ಗಣಕೀಕರಿಸುವ ಪ್ರಯತ್ನ ಯಶಸ್ಸಿನತ್ತ ಸಾಗಿದೆ, ಇದರಿಂದ ಮಹಿಳೆಯರು ನಡೆಸುವ ವಹಿವಾಟು, ಪ್ರತಿನಿಧಿಗಳು ಸಾಲದ ಕಂತು ಮರುಪಾವತಿಸುವ ಮಾಹಿತಿ ಕ್ಷಣಾರ್ಧದಲ್ಲಿ ಸ್ವಸಹಾಯ ಸಂಘದ ಪ್ರತಿ ಮಹಿಳೆಯರ ಮೊಬೈಲ್‍ಗೂ ಹೋಗುವುದರಿಂದ ಅವ್ಯವಹಾರಗಳಿಗೆ ಕಡಿವಾಣ ಬೀಳುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ದಿವಾಳಿಯಾಗಿದ್ದ ಡಿಸಿಸಿ ಬ್ಯಾಂಕ್ ಇಂದು ಲಕ್ಷಾಂತರ ತಾಯಂದಿರಿಗೆ ಸಾಲ ಸೌಲಭ್ಯ ನೀಡುವ ಮೂಲಕ ಅನೇಕ ಮನೆಗಳಲ್ಲಿ ಬೆಳಕು ಮೂಡುವಂತೆ ಮಾಡಿದೆ, ದಿವಾಳಿಯಾಗಿದ್ದ ಬ್ಯಾಂಕಿಗೆ ಅಧ್ಯಕ್ಷರೆಂದು ಗೋವಿಂದಗೌಡರನ್ನು ಟೀಕಿಸುತ್ತಿದ್ದ ಕಾಲವಿತ್ತು ಆದರೆ ಇದೀಗ ಬ್ಯಾಂಕನ್ನು ಇಷ್ಟೊಂದು ಉನ್ನತಮಟ್ಟಕ್ಕೆ ತಂದ ಕೀರ್ತಿಗೂ ಅವರು ಪಾತ್ರರಾಗಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಹಾಗೂ ಖಜಾಂಚಿ ಎ.ಜಿ.ಸುರೇಶ್ ಕುಮಾರ್ ಮಾತನಾಡಿ, ಪತ್ರಕರ್ತರು ರಚಸಿಕೊಂಡಿರುವ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ ಒದಗಿಸುವ ಮೂಲಕ ಪತ್ರಕರ್ತರ ಬದುಕಿಗೆ ಬ್ಯಾಂಕ್ ನೆರವಾಗಿದೆ, ಅದೇ ರೀತಿ ಬ್ಯಾಂಕಿನ ನಂಬಿಕೆ ಉಳಿಸಿಕೊಂಡು ಸಾಲ ಮರುಪಾವತಿಯನ್ನು ಸಕಾಲದಲ್ಲಿ ಮಾಡಲು ಸದಸ್ಯರು ಬದ್ದತೆ ತೋರಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಹಾಗೂ ಖಜಾಂಚಿ ಎ.ಜಿ.ಸುರೇಶ್ ಕುಮಾರ್, ಶತಶೃಂಗ ಪುರುಷ ಸ್ವಸಹಾಯ ಸಂಘ ಪ್ರತಿನಿಧಿಗಳಾದ ಎಸ್.ಲಕ್ಷ್ಮಿಪತಿ, ಕೆ.ಜಿ.ಶಿವಕುಮಾರ್, ಸಂಘದ ಸದಸ್ಯರುಗಳಾದ ನವಿದ್ ಪಾಷ, ಎಲ್.ಎ.ಸಾಗರ್, ಶಿವರಾಜ್, ವಿಜಯಕುಮಾರ್ ತಬರೇಜ್, ಅಮರೇಶ್ ಮಂಜೇಶ್ ಕಿತ್ತಂಡೂರು ವೆಂಕಟ್ರಾಮ್ ಹಾಗೂ ಪತ್ರಕರ್ತರಾದ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

ಹೋ.ರೋಜರಿ ಆ. ಮಾ. ಪ್ರೌಢ ಶಾಲೆಯ ಶಿಕ್ಷಕ ರಕ್ಷಕ ಸಭೆ : ಪೋಷಕರು ತಮ್ಮ ಹದಿಹರೆಯದ ಮಕ್ಕಳನ್ನು ಸ್ನೇಹಿತರಂತೆ ನಡೆಸಿಕೊಳ್ಳಬೇಕು – ಡಾ| ಪ್ರಕಾಶ್ ತೋಳಾರ್

JANANUDI.COM NETWORK               EDITOR : BERNARD D’COSTA


ಕುಂದಾಪುರ, ಜು.7: ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಇಲ್ಲಿ ಶಾಲಾ ರಕ್ಷಕ ಶಿಕ್ಷಕ ಸಭೆಯ 6 ರಂದು ನಡೆಯಿತು. ಇದರ ಅಧ್ಯಕ್ಷತೆಯನ್ನು ಶಾಲಾ ಜಂಟಿ ಕಾರ್ಯದರ್ಶಿ ಅ| ವಂ| ಧರ್ಮಗುರು ಸ್ಟ್ಯಾನಿ ತಾವ್ರೊ ವಹಿಸಿದ್ದು. “ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪೋಷಕರು ಮತ್ತು ಶಿಕ್ಷಕರು ಸಮಾನ ಪಾತ್ರವನ್ನು ವಹಿಸಬೇಕಾಗುತ್ತದೆ. ಈ ಪಾತ್ರವನ್ನು ಚೆನ್ನಾಗಿ ಪೋಷಕರು ಮತ್ತು ಶಿಕ್ಷಕರು ನಿರ್ವಹಿಸಿದರೆ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಯಾಗುತ್ತೆ” ಎಂದು ತಿಳಿಸಿ ಪೋಷಕರಿಂದಲೂ ಮಾಹಿತಿಯನ್ನು ಪಡೆದುಕೊಂಡರು.
“ಪೋಷಕರು ತಮ್ಮ ಹದಿಹರೆಯದ ಮಕ್ಕಳನ್ನು ಸ್ನೇಹಿತರಂತೆ ನಡೆಸಿಕೊಳ್ಳಬೇಕು, ಅವರಿಗೆ ಈ ಪ್ರಾಯದಲ್ಲಿ ಹೆಚ್ಚಿನ ಕಾಳಜಿಯನ್ನು ವಹಿಸಬೇಕು” ಎಂದು ಮಾತಾ ಆಸ್ಪತ್ರೆಯ ಮನೋರೋಗ ತಜ್ಞರು ಆಗಿರುವ ಡಾ| ಪ್ರಕಾಶ್ ತೋಳಾರ್ ಪೋಷಕರಿಗೆ ತಿಳಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಸಿ| ತೆರೇಜ್ ಶಾಂತಿಯವರು ಶಾಲೆಯ ನೀತಿ ನಿಯಮಗಳ ಬಗ್ಗೆ ಪೋಷಕರಿಗೆ ತಿಳಿಸಿದರು. ಶಾಲಾ ವರದಿಯನ್ನು ಪ್ರತಿಮಾ ಬಿ ಯವರು ವಾಚಿಸಿದರು. ಶಾಲಾ ಅಧ್ಯಾಪಕ ವೃಂದದವರು ತಮ್ಮ ತಮ್ಮ ವಿಷಯದ ಬಗ್ಗೆ ಮಹಿತಿ ನೀಡಿದರು. ಶಿಕ್ಷಕಿ ರಂಜಿತಾ ಮುಖ್ಯ ಅತಿಥಿಗಳ ಪರಿಚಯವನ್ನು ಮಾಡಿ, ಸ್ವಾಗತಿಸಿದರು. ಶಿಕ್ಷಕಿ ಕುಮಾರಿ ವಿದ್ಯಾ ನಿರೂಪಿಸಿದರು. ಶಿಕ್ಷಕ ಲುವಿಸ್ ಪ್ರಶಾಂತ್ ರೇಬೆರೊ ವಂದಿಸಿದರು.

ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ರಕ್ಷಕ ಶಿಕ್ಷಕ ಸಭೆ:ಶಿಕ್ಷಕರು ಮತ್ತು ಪೋಷಕರು ಒಂದೇ ನಾಣ್ಯದ ಎರಡು ಮುಖಗಳು-ಉಪನ್ಯಾಸಕಿ ಶರ್ಮಿಳಾ ಮಿನೇಜಸ್

JANANUDI.COM NETWORK               EDITOR : BERNARD D’COSTA


ಕುಂದಾಪುರ,7: ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ 6 ರಂದು ಶಾಲಾ ರಕ್ಷಕ ಶಿಕ್ಷಕ ಸಭೆ ನಡೆಯಿತು. ಇದರ ಅಧ್ಯಕ್ಷತೆಯನ್ನು ಶಾಲೆಯ ಜಂಟಿ ಕಾರ್ಯದರ್ಶಿಯಾದ ಅ| ವಂ| ಧರ್ಮಗುರು ಸ್ಟ್ಯಾನಿ ತಾವ್ರೊ ವಹಿಸಿದ್ದರು. ಅವರು “ಮಕ್ಕಳ ಸರ್ವತೋಮುಖ ಬೆಳವಣಿಗೆಯಾಗುವಲ್ಲಿ ಪೋಷಕರು ಮತ್ತು ಶಿಕ್ಷಕರು ಸಮಾನ ಪಾತ್ರವನ್ನು ವಹಿಸಿಕೊಳ್ಳ ಬೇಕಾಗಿದೆಯೆಂದು” ಪೋಷಕರಿಗೆ ಅಮೂಲ್ಯ ಮಾಹಿತಿ ನೀಡಿ ಪೋಷಕರಿಂದಲೂ ಮಾಹಿತಿ ಕಲೆ ಹಾಕಿದರು.


“ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನನ್ನು ತಾನು ಗುರುತಿಸಿಕೊಳ್ಳುವಲ್ಲಿ ಪೋಷಕರು ಅತ್ಯಗತ್ಯ ಪಾತ್ರವನ್ನು ವಹಿಸುತ್ತಾರೆ. ಶಿಕ್ಷಕರು ಮತ್ತು ಪೋಷಕರು ಒಂದು ನಾಣ್ಯದ ಎರಡು ಮುಖಗಳು” ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ ಸಂತ ಮೇರಿಸ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕಿ ಶರ್ಮಿಳಾ ಮಿನೇಜಸ್ ತಿಳಿ ಹೇಳಿದರು.


ಮುಖ್ಯ ಶಿಕ್ಷಕಿ ಸಿಸ್ಟರ್ ತೆರೇಜ್ ಶಾಂತಿಯವರು ಶಾಲೆಯ ನೀತಿ ನಿಯಮಗಳ ಬಗ್ಗೆ ಪೋಷಕರಿಗೆ ತಿಳಿಸಿದರು. ಶಿಕ್ಷಕಿ ರಮ್ಯ ಶಾಲಾ ವರದಿಯನ್ನು ವಾಚಿಸಿದರು. ಶಾಲಾ ಅಧ್ಯಾಪಕ ವೃಂದ ತಮ್ಮ ತಮ್ಮ ವಿಷಯದ ಪ್ರಗತಿಯ ಬಗ್ಗೆ ತಿಳಿಸಿದರು. ಶಿಕ್ಷಕಿ ನೀತಾ ಮೆಂಡೋನ್ಸಾ ಸ್ವಾಗತಿಸಿದರು. ಶಿಕ್ಷಕಿ ಪ್ರೀತಿ ಅಂದ್ರಾದೆ ವಂದಿಸಿದರು. ಶಿಕ್ಷಕಿ ರಮ್ಯಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

ಕುಂದಾಪುರ ಆಯುಷ್ ಫೆಡರೇಷನ್ ಆಫ್ ಇಂಡಿಯಾ( AFI)ವತಿಯಿಂದ ವೈದ್ಯರ ದಿನಾಚರಣೆ

JANANUDI.COM NETWORK                EDITOR : BERNARD DCOSTA

ಕುಂದಾಪುರ: ಕುಂದಾಪುರ AFI. ವತಿಯಿಂದ ತಾರೀಕು 02/07/ 22ರಂದು ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು  ಕುಂದಾಪುರದ ಹೋಟೆಲ್ ಶರೊನ್  ಸಭಾಂಗಣದಲ್ಲಿ  ಆಚರಿಸಲಾಯಿತು. ಕುಂದಾಪುರ AFI  ಅಧ್ಯಕ್ಷ ಡಾ| ರವೀಂದ್ರ ತಲ್ಲೂರು ಇವರು ಪ್ರಾಸ್ತಾವಿಕ ಮಾತುಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. AFI ಜಿಲ್ಲಾಧ್ಯಕ್ಷ ಡಾ|ಎನ್.ಟಿ. ಅಂಚನ್ ಪಡುಬಿದ್ರಿ, ಇವರು ವೈದ್ಯರ ದಿನಾಚರಣೆಯ ಮಹತ್ವ,ಸಮಾಜಕ್ಕೆ ವೈದ್ಯರ ಕೊಡುಗೆಗಳನ್ನು ವಿಸ್ತ್ರತವಾಗಿ ವಿವರಿಸಿದರು.

ಹಳ್ಳಿ ಪ್ರದೇಶವಾದ ಆರ್ಡಿ, ಗೋಳಿಯಂಗಡಿ ಭಾಗದಲ್ಲಿ ಕಳೆದ 51ವರ್ಷಗಳಿಂದ ಕನಿಷ್ಠ ಶುಲ್ಕ, ಗರಿಷ್ಠ ಸೇವೆಯಿಂದ ಮನೆಮಾತಾಗಿರುವ ಡಾ| ಪರಮೇಶ್ವರ್ ಉಡುಪ ಗೋಳಿಯಂಗಡಿ, ಕುಂದಾಪುರ ದೇವಿ ನರ್ಸಿಂಗ್ ಹೋಮ್ ಆಡಳಿತ ನಿರ್ದೇಶಕ ಖ್ಯಾತ ಫಿಸಿಷಿಯನ್ ಡಾ| ಮಾನಂಜೆ ರವೀಂದ್ರ ರಾವ್ ಹಾಗೂ ಕುಂದಾಪುರ ತಾಲೂಕಿನಲ್ಲಿ ಮನೆಮಾತಾಗಿರುವ ಸುಮಾರು 50,000ಕ್ಕೂ ಹೆಚ್ಚು ಹೆರಿಗೆಯನ್ನು ಮಾಡಿಸಿರುವ ಖ್ಯಾತ  ಸ್ತ್ರೀರೋಗ ಮತ್ತು ಹೆರಿಗೆ ತಜ್ಞೆ  ಶ್ರೀಮತಿ ಡಾ| ಭವಾನಿ ರವೀಂದ್ರ ರಾವ್ ರವರನ್ನು ಆದರದಿಂದ ಸನ್ಮಾನಿಸಲಾಯಿತು.

   ಸನ್ಮಾನಿತರಲ್ಲಿ ಡಾ| ಪರಮೇಶ್ವರ್ ಉಡುಪರು  ಮಾತನಾಡಿ 1971 ರ ದಶಕದಲ್ಲಿ ಫೋನ್ ಇಲ್ಲದ,  ಸಾರಿಗೆ ವ್ಯವಸ್ಥೆ ಇಲ್ಲದ, ಕರೆಂಟು ಇಲ್ಲದ, ಹೆಚ್ಚಿನ ವೈದ್ಯಕೀಯ ಸೌಲಭ್ಯ ಇಲ್ಲದ ಕಾಲದಲ್ಲಿ ಸೇವೆ ನೀಡಿರುವುದನ್ನು ವಿವರಿಸಿದರು. ಬೆಳಿಗ್ಗೆ 7 ರಿಂದ  ತನ್ನ ಸೇವೆ ಪ್ರಾರಂಭಿಸುವುದು ಅವರ ವೃತ್ತಿ ಮೇಲಿನ ಪ್ರೀತಿಯ ಸಂಕೇತವಾಗಿರುತ್ತದೆ.

   ಡಾ|ರವೀಂದ್ರ ರಾವ್ ಅವರಮಾತನಾಡಿ ತಾವು ವೃತ್ತಿ ಜೀವನ ಪ್ರಾರಂಭಿಸಿದ ವರ್ಷಗಳಿಂದ ಇಂದಿನ ಕಾಲ ಘಟ್ಟ ಕ್ಕೂ ರೋಗಿಗಳ ಮನೋಭಾವನೆಯಲ್ಲಿ ಗೌರವ, ಪ್ರೀತಿ, ನಂಬಿಕೆಯಲ್ಲಾ ಗಿರುವ ವ್ಯತ್ಯಾಸವನ್ನು  ಹೇಳಿದರು. ವೈದ್ಯ ವೃತ್ತಿ ಒಂದು ಸೇವಾವೃತ್ತಿ. ಜನರು ಇದೊಂದು ವ್ಯಾವಹಾರಿಕ ವೃತ್ತಿಯೆಂದು ಭಾವಿಸಿರುವುದರಿಂದ ಇತ್ತೀಚಿನ ದಿನಗಳಲ್ಲಿ ವೈದ್ಯರ ಮೇಲಿನ ಆರೋಪ, ಹಲ್ಲೆ ಇತ್ಯಾದಿ ಪ್ರಕರಣಗಳು ಜಾಸ್ತಿ ಆಗುತಿರುವ  ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಡಾ| ಭವಾನಿ ರಾವ್ ಮಾತನಾಡಿ ವೈದ್ಯ ವೃತ್ತಿ ಎಂಬುದು ಬಿಡುವಿಲ್ಲದ ನಿರಂತರ ವೃತ್ತಿ ಆಗಿರುತ್ತದೆ. ಹಗಲು- ರಾತ್ರಿಯೆನ್ನದೆ ಸೇವೆಯನ್ನು ನೀಡಬೇಕಾದ ಸಂದರ್ಭಗಳೇ ಜಾಸ್ತಿ.ಆದರೆ ಇದರಲ್ಲಿರುವ ಆತ್ಮ ತೃಪ್ತಿ ಬೇರೊಂದು ವೃತ್ತಿಯಲ್ಲಿ ಸಿಗಲಾರದು.ಅದೂ ತಮ್ಮ ತಾಲೂಕಿನಲ್ಲಿ ತಾವು ವೃತ್ತಿಯಲ್ಲಿ ಹೆಸರು ಮಾಡಿರುವುದು ಹೆಮ್ಮೆಯೆನಿಸುತ್ತದೆ ಎಂದರು ಶ್ರದ್ಧೆಯಿಂದ ನಮ್ಮ ವೃತ್ತಿಯನ್ನು ನಿರ್ವಹಿಸಿ ಎಂದು ವೈದ್ಯರಿಗೆ ಕಿವಿಮಾತು ಹೇಳಿದರು. ಡಾ| ಸಬಿತಾ ಆಚಾರ್ಯ ಪ್ರಾರ್ಥನೆಯಲ್ಲಿ, ಡಾ| ಜೆ.ಕೆ.ಶೆಟ್ಟಿ ಗೋಳಿ ಅಂಗಡಿ, ಡಾ|ಪೌರವ ಶೆಟ್ಟಿ, ಡಾ|ಪ್ರವೀಣ್ ಶೆಟ್ಟಿ ನಾಗೂರು, ಡಾ| ವಿಜಯಲಕ್ಷ್ಮಿ ಇವರುಗಳು ಸಹಕರಿಸಿದರು ಜಿಲ್ಲಾ ಕಾರ್ಯದರ್ಶಿ ಡಾ| ಸತೀಶ್ ರಾವ್, ಉಡುಪಿ ತಾಲೂಕಿನ ಕಾರ್ಯದರ್ಶಿ ಡಾ| ಸಂದೀಪ್ ಸನಿಲ್ ಉಪಸ್ಥಿತರಿದ್ದರು.

   ಅರುಣ್ ಶೆಟ್ಟಿ ಖ್ಯಾತ ಚರ್ಮರೋಗ ತಜ್ಞರು ಇವರಿಂದ psoriasis management ಬಗ್ಗೆ C. M. E ಕಾರ್ಯಕ್ರಮ ನಡೆಯಿತು. ಡಾ| ಸೋನಿ ಡಿ ಕೋಸ್ತಾ ಕಾರ್ಯಕ್ರಮ ನಿರೂಪಿಸಿದರು AFI ಕುಂದಾಪುರ ಕಾರ್ಯದರ್ಶಿ ಡಾ| ರಾಜೇಶ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು.

ವ್ಯಕ್ತಿತ್ವ ವಿಕಸನ ಮತ್ತು ಜೀವನಮೌಲ್ಯಗಳು ಮಾಹಿತಿ ಶಿಬಿರ – 2022

ವರದಿ: ರಮೇಶ್ ವಕ್ವಾಡಿ                              ಸಂಪಾದಕರು: ಬರ್ನಾಡ್ ಡಿಕೋಸ್ತಾ


ಹಂಗಾರಕಟ್ಟೆ
: ಶಾಲೆಯಲ್ಲಿ ಸಂತಸದ ಕಲಿಕೆ, ಗುಣಮಟ್ಟದ ಶಿಕ್ಷಣ ಸೃಜನಶೀಲ ಚಟುವಟಿಕೆಗಳು ನಡೆಯಬೇಕು. ಸೃಷ್ಟಿ ಶೀಲ ವ್ಯಕ್ತಿತ್ವಗಳು ಬೆಳಗಬೇಕು ಎಂದು ಶ್ರೀಮತಿ ವಿಜಯಲಕ್ಷ್ಮಿ ಶೆಟ್ಟಿ ಅಧ್ಯಕ್ಷರು ಗ್ರಾಮ ಪಂಚಾಯತ್ ಆವರ್ಸೆ ಇವರು ಇತ್ತೀಚೆಗೆ ಅಭಿವೃದ್ಧಿ ಸಂಸ್ಥೆ (ರಿ.), ಬಾಳ್ಕುದ್ರು ಹಂಗಾರಕಟ್ಟೆ ಹಾಗೂ ಗ್ರಾಮ ಪಂಚಾಯತ್ ಆವರ್ಸೆ ಮತ್ತು ಸರ್ಕಾರಿ ಪ್ರೌಢಶಾಲೆ ಆವರ್ಸೆ, ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಇದರ ಸಂಯುಕ್ತ ಆಶ್ರಯದಲ್ಲಿ ಆವರ್ಸೆಯಲ್ಲಿ ನಡೆದ ವ್ಯಕ್ತಿತ್ವ ವಿಕಸನ ಮತ್ತು ಜೀವನಮೌಲ್ಯಗಳು ಎಂಬ ಮಾಹಿತಿ ಶಿಬಿರ 2022 ಉದ್ಘಾಟಿಸಿ ಶುಭ ನುಡಿದರು.
ಮುಖ್ಯ ಅತಿಥಿಯಾಗಿ ಶ್ರೀ ಚೇತನ್‍ಕುಮಾರ್ ಶೆಟ್ಟಿ, ಉದ್ಯಮಿ ಇಂಜಿನಿಯರ್ ಬ್ರಹ್ಮಾವರ ಇವರು ಮಾತಾಡಿ ಶಾಲಾ ಪಠ್ಯದೊಂದಿಗೆ ಸಹಪಠ್ಯ ಚಟುವಟಿಕೆಗಳು ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಅಕ್ಷರ ಕಲಿಕೆ ಮಾತ್ರ ಶಿಕ್ಷಣವಲ್ಲ ಅಲ್ಲದೆ ಎಳೆವೆಯಲ್ಲಿ ಸಮಗ್ರ ಮಾಹಿತಿಗಳು ಲಭ್ಯವಾದಲ್ಲಿ ಅವರಲ್ಲಿ ಏಕಾಗ್ರತೆ ಹೆಚ್ಚುತ್ತದೆ. ಸಮಯ ಪ್ರಜ್ಞೆ ಮತ್ತು ಸೂಕ್ಷ್ಮತೆ ಬೆಳೆಯುತ್ತದೆ ಎಂದರು.
ಸಭಾದ್ಯಕ್ಷತೆಯನ್ನು ಶ್ರೀ ಶಂಕರ ಕುಲಾಲ್ ಅಧ್ಯಕ್ಷರು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸರಕಾರಿ ಪ್ರೌಢಶಾಲೆ ಆವರ್ಸೆ ಇವರು ಮಾತಾಡುತ್ತಾ ಇಂತಹ ಶಿಬಿರಗಳಿಂದ ನೀತಿಯ ಮೌಲ್ಯಗಳು ಅಂತರಂಗದ ನೆಲೆಗಳಾಗುತ್ತವೆ. ಅದೇ ರೀತಿ ಶಾಂತಿ, ಸಹಬಾಳ್ವೆ, ಸಹನೆ ಮನೋಧರ್ಮವಾಗಿ ನೆಲೆಯೂರಬೇಕೆಂಬುದೇ ಮೌಲ್ಯವಾಗಿ ಬೆಳೆಯುತ್ತದೆ. ನಮ್ಮ ಬದುಕಿನಲ್ಲಿ ಅನೇಕ ಅಹಿತಕರ ಘಟನೆಗಳು ಆಗಿಂದಾಗೆ ನಡೆಯುತ್ತಿರುತ್ತದೆ. ಎಲ್ಲದಕ್ಕೂ ಪ್ರತಿಕ್ರಯಿಸುತ್ತಾ ಹೋದರೆ ಸಮಾಜ ಅಲ್ಲೋಲ ಕಲ್ಲೋಲವಾಗುವುದಲ್ಲದೆ ಅಂತರಂಗ ಕದಡಿ ಹೋಗಿ ಉದ್ವಿಗ್ನತೆ ಕೋಪ, ಆರೋಪಗಳು ಮಾತ್ರ ಉಳಿಯುತ್ತದೆ ಎಂದರು.
ಸಭೆಯಲ್ಲಿ ಶ್ರೀ ರಮೇಶ್ ಕುಲಾಲ್ ಮುಖ್ಯ ಶಿಕ್ಷಕರು ಸರಕಾರಿ ಪ್ರೌಢಶಾಲೆ ಆವರ್ಸೆ, ಶ್ರೀ ರಮೇಶ್ ವಕ್ವಾಡಿ ಕಾರ್ಯದರ್ಶಿ ಅಭಿವೃದ್ಧಿ ಸಂಸ್ಥೆ (ರಿ) ಬಾಳ್ಕುದ್ರು ಹಂಗಾರಕಟ್ಟೆ, ಸಂಪನ್ಮೂಲ ವ್ಯಕ್ತಿ ಅಬ್ದುಲ್ ರವೂಫ್ ಮುಖ್ಯ ಶಿಕ್ಷಕರು ಸರಕಾರಿ ಪ್ರೌಢಶಾಲೆ ಹೆಸ್ಕುತ್ತೂರು, ಕುಂದಾಪುರ ವಲಯ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಮಕ್ಕಳಿಗೆ ಲಘು ಉಪಾಹಾರ ನೀಡಲಾಯ್ತು
ತದನಂತರ ಸುಮಾರು ಒಂದು ಗಂಟೆಗಳ ಕಾಲ ಸಂವಾದ ಕಾರ್ಯಕ್ರಮವನ್ನು ಅಬ್ದುಲ್ ರವೂಫ್ ನೀಡಿ ಮಾಹಿತಿ ಹಂಚಿಕೊಂಡರು. ಅವರು ಮಾತನಾಡುತ್ತಾ ಅನುಕರಣೆಯಿಂದ ಮಕ್ಕಳು ಬಹಳ ಸಂಗತಿಯನ್ನು ರೂಢಿಸಿಕೊಳ್ಳುತ್ತಾರೆ. ಅಂತಹ ಮಾದರಿಯಾಗಿ ಅನೇಕ ನಿದರ್ಶನಗಳು ನಮಗೆ ಗೋಚರಿಸುತ್ತದೆ ಮತ್ತು ಪುರಾಣದ ಉದಾಹರಣೆಗಳಿಂದ ವ್ಯಕ್ತಿತ್ವದ ಕುರಿತು ಸ್ಪಷ್ಟೀಕರಿಸಿದರೂ ಇಂತಹ ಮಾದರಿಯಿಂದ ಕಲಿಕೆ ಸಾಧ್ಯವಾಗುತ್ತದೆ ಎಂದರು. ಅದೇ ರೀತಿ ಮೌಲ್ಯದ ಮಾದರಿಗಳಾಗಿ ತಾಯಿ-ತಂದೆ, ಚಿಕ್ಕಮ್ಮ-ಚಿಕ್ಕಪ್ಪ, ಅಜ್ಜ-ಅಜ್ಜಿ, ಅತ್ತೆ-ಮಾವ, ಶಿಕ್ಷಕರು, ಊರ ಜನರು ಮನೆಯಲ್ಲಿರುವ ಬೆಕ್ಕು-ನಾಯಿ, ಪ್ರಾಣಿ-ಪಕ್ಷಿ, ಜೀವ-ಜಂತು, ಪ್ರಕೃತಿ ಇಂತಹ ಮಾದರಿಗಳಿಂದ ಮಗು ಮೌಲ್ಯವನ್ನು ರೂಢಿಸಿಕೊಳ್ಳಲು ಪೂರಕವಾಗಿದೆ ಎಂದು ಅಭಿಪ್ರಾಯಪಟ್ಟರು. ಸೃಜನಶೀಲ ಪ್ರಕೃಯೆಯಲ್ಲಿ ಮಗುವೇ ಮೌಲ್ಯದ ಸಂಕೇತವಾಗಿದ್ದು ಆ ಮಗುವಿನೊಳಗಿರುವ ಕೆಲವೊಂದು ಸೂಕ್ತ ಮೌಲ್ಯ ಜಾಗೃತವಾಗಿ ತನ್ನನ್ನು ತಾನು ವಿಸ್ತರಿಸಿಕೊಳ್ಳುತ್ತಾ ಹೋಗುತ್ತದೆ.
ಈ ಕಾರ್ಯಕ್ರಮವನ್ನು ಶಾಲಾ ದೈಹಿಕ ಶಿಕ್ಷಕ ಅಜಾದ್ ಮಹಮದ್ ನಿರೂಪಿಸಿ, ಶ್ರೀ ರಮೇಶ್ ಕುಲಾಲ್ ಮುಖ್ಯ ಶಿಕ್ಷಕರು ಸ್ವಾಗತಿಸಿ, ಶ್ರೀ ರಮೇಶ್ ವಕ್ವಾಡಿ ಪ್ರಾಸ್ತಾವನೆಗೈದರು. ಕು| ಜಯಲಕ್ಷ್ಮೀ ಸೇರಿಗಾರ್ ಕರ್ಜೆ ವಂದಿಸಿದರು. ಸುಮಾರು 153 ವಿದ್ಯಾರ್ಥಿಗಳು ಈ ಮಾಹಿತಿ ಶಿಬಿರದಿಂದ ಪ್ರಯೋಜನ ಪಡೆದರು.