

ಮಂಗಳೂರು ಮತ್ತೊಮ್ಮೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಮಂಗಳೂರಿನ ಪುರಭವನದಲ್ಲಿ ಕಳೆದ ವಾರ ಮಾಂಡ್ ಸೊಭಾಣ್ ನೇತೃತ್ವದಲ್ಲಿ ಆರಂಭಿಸಿದ್ದ ಅತೀ ದೀರ್ಘಾವಧಿಯ ಸಮೂಹಗಾಯನವು ಇಂದು ಹನ್ನೊಂದು ದಿನ ಹನ್ನೊಂದು ಗಂಟೆ ಹಾಗೂ ಹನ್ನೊಂದು ನಿಮಿಷಗಳನ್ನ ಪೂರ್ಣಗೊಳಿಸುವುದರೊಂದಿಗೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡನ್ನು ತನ್ನದಾಗಿಸಿಕೊಂಡಿತು. ಸಂಜೆ 5:12 ಗಂಟೆಯಾಗುತ್ತಿದ್ದಂತೆ ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ ಪಿಂಟೊ ಹಾಗೂ ಇತರ ಸಂಘಾಟಕರು ಹರ್ಷೋದ್ಗಾರದೊಂದಿಗೆ ವಿಶ್ವ ದಾಖಲೆಯನ್ನು ಸಂಭ್ರಮಿಸಿದರು. ಈ ಹಿಂದೆ 2024ರಲ್ಲಿ ವಡ್ತಾಲ್ನಲ್ಲಿ ಶ್ರೀ ಹರಿಕೃಷ್ಣ ಕೀರ್ತನ್ ಯಾಗ್ ಸಂಸ್ಥೆಯು ನಿರ್ಮಿಸಿದ್ದ 11 ದಿನಗಳು, 11 ಗಂಟೆಗಳು ಮತ್ತು 11 ನಿಮಿಷಗಳ (275 ಗಂಟೆಗಳು ಮತ್ತು 11 ನಿಮಿಷಗಳು) ಹಿಂದಿನ ಮೈಲಿಗಲ್ಲನ್ನು ಮಾಂಡ್ ಸೊಭಾಣ್ ಸಂಗೀತ ಮ್ಯಾರಥಾನ್ ಮೀರಿಸಿದೆ.
ಮಾಂಡ್ ಸೊಭಾಣ್ ಸಂಸ್ಥೆಯ 40 ನೇ ವಾರ್ಷಿಕೋತ್ಸವದ ನೆನಪಿಗಾಗಿ ಮತ್ತು ದಿವಂಗತ ಸಂಸ್ಥಾಪಕ ಎರಿಕ್ ಒಝೇರಿಯೊ ಅವರ ಸ್ಮರಣಾರ್ಥವಾಗಿ ಹಮ್ಮಿಕೊಳ್ಳಲಾದ ಮಹಾಸಂಗೀತ ಸಮ್ಮೇಳನದ ಪ್ರಮುಖ ಭಾಗವಾಗಿ ಈ ಐತಿಹಾಸಿಕ ದಾಖಲೆಯ ಪ್ರಯತ್ನ ನಡೆದಿತ್ತು.
ಈ ಅದ್ಭುತ ಸಾಧನೆಯ ಮೂಲಕ ಮಾಂಡ್ ಸೊಭಾಣ್ ಮತ್ತೊಮ್ಮೆ ಕೊಂಕಣಿ ಭಾಷೆ ಮತ್ತು ಸಂಸ್ಕೃತಿಗೆ ಜಾಗತಿಕ ಮನ್ನಣೆ ತಂದುಕೊಟ್ಟಿದೆ. ಮುಖ್ಯವಾಗಿ ಕರಾವಳಿ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ಮತ್ತು ಕೇರಳದ ಕೆಲವು ಭಾಗಗಳಲ್ಲಿ ನೆಲೆಸಿರುವ ಕೊಂಕಣಿ ಸಮುದಾಯವು ಹೊಸ ವಿಶ್ವದಾಖಲೆಯನ್ನ ಸ್ಥಾಪಿಸುವ ಮೂಲಕ ತನ್ನಲ್ಲಿನ ಒಗ್ಗಟ್ಟು, ಶಿಸ್ತು ಹಾಗೂ ಭಾಷಾ ಪ್ರೇಮಕ್ಕೆ ಸಾಕ್ಷಿಯಾಯಿತು.
ಸಂಗೀತ ಮ್ಯಾರಥಾನ್ ಗೆ ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ ಪಿಂಟೊ ಅವರ ನೇತೃತ್ವದಲ್ಲಿ ನಡೆದ ತಿಂಗಳುಗಳ ನಿಖರ ಸಿದ್ಧತೆ ನಡೆದಿ್ತ್ತು . ದಾಖಲೆಯ ನಂತರವೂ ಗಾಯನವು ಮುಂದುವರೆದಿದ್ದು, ಭಾನುವಾರ ಸಂಜೆ 5:00 ಗಂಟೆಗೆ ‘ಟೀಮ್ ಸುಮೇಲ್’ ತಂಡದ ಹಾಡುಗಾರಿಕೆಯೊಂದಿಗೆ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾಮೇಳಕ್ಕೆ ಅಧಿಕೃತ ತೆರೆ ಬೀಳಲಿದೆ.
ಈ ಮೈಲಿಗಲ್ಲಿನ ಬಗ್ಗೆ ಅಪಾರ ಸಂತಸ ವ್ಯಕ್ತಪಡಿಸಿದ ಲುವಿ ಜೆ ಪಿಂಟೊ “ಒಂದು ಸಂಸ್ಥೆಯಾಗಿ ವಿಶ್ವ ದಾಖಲೆಯನ್ನು ಹೊಂದಲು ನಮಗೆ ಹೆಮ್ಮೆಯಿದೆ, ಆದರೆ ಗಾಯಕರು ಮತ್ತು ಈ ಬೃಹತ್ ಯೋಜನೆಗಾಗಿ ತೆರೆಮರೆಯಲ್ಲಿ ಶ್ರಮಿಸಿದ ಪ್ರತಿಯೊಬ್ಬರೂ ಈ ದಾಖಲೆಯ ನಿಜವಾದ ಒಡೆಯರು. ವಿಶ್ವದ ಮೂಲೆ ಮೂಲೆಗಳಿಂದ ನಮಗೆ ಬೆಂಬಲ ನೀಡಿದ ಸಮಗ್ರ ಕೊಂಕಣಿ ಸಮುದಾಯಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ದಾಖಲೆ ನಿರ್ಮಿಸುವುದು ಮಾತ್ರ ನಮ್ಮ ಏಕೈಕ ಉದ್ದೇಶವಾಗಿರಲಿಲ್ಲ; ಈ ಪ್ರಯತ್ನದ ಮೂಲಕ ನಾವು ಕೊಂಕಣಿ ಸಮುದಾಯದ ಐಕ್ಯತೆ ಮತ್ತು ಶಕ್ತಿಯನ್ನು ಯಶಸ್ವಿಯಾಗಿ ಪ್ರದರ್ಶಿಸಿದ್ದೇವೆ.” ಎಂದು ಹೇಳಿದರು.
ಮ್ಯಾಂಡ್ ಸೊಭಾಣ್ ಸಂಸ್ಥೆಯ ಐತಿಹಾಸಿಕ ಗಿನ್ನೆಸ್ ವಿಶ್ವ ದಾಖಲೆಯ ಮ್ಯಾರಥಾನ್ ಗಾಯನ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡ ಡಾ. ರೊನಾಲ್ಡ್ ಕೊಲಾಸೊ ಮತ್ತು ಇತರ ಗಣ್ಯರು

ಬರೋಬ್ಬರಿ 11 ದಿನಗಳು, 11 ಗಂಟೆಗಳು ಮತ್ತು 11 ನಿಮಿಷಗಳ ಕಾಲ ನಿರಂತರವಾಗಿ ನಡೆದ ‘ಮ್ಯಾರಥಾನ್ ಗಾಯನ (ಬಹು ಗಾಯಕರು)’ ವಿಭಾಗದಲ್ಲಿ ಹೊಸ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ ಮ್ಯಾಂಡ್ ಸೊಭಾಣ್ ಸಂಸ್ಥೆಯ ಐತಿಹಾಸಿಕ ಸಾಧನೆಯನ್ನು ನಗರದಲ್ಲಿ ಅದ್ಧೂರಿಯಾಗಿ ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಲಾಯಿತು. ಈ ಸಂಭ್ರಮಾಚರಣೆಯಲ್ಲಿ ಅನಿವಾಸಿ ಭಾರತೀಯ ಉದ್ಯಮಿ ಹಾಗೂ ಸಮಾಜಸೇವಕ ಡಾ. ರೊನಾಲ್ಡ್ ಕೊಲಾಸೊ ಅವರು ಪಾಲ್ಗೊಂಡರು.
ಡಾ. ರೊನಾಲ್ಡ್ ಕೊಲಾಸೊ ಮತ್ತು ಶ್ರೀಮತಿ ಜೇನ್ ಕೊಲಾಸೊ ಅವರೊಂದಿಗೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಮ್ಯಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ. ಪಿಂಟೊ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್ ಹಾಗೂ ರಾಯ್ ಕ್ಯಾಸ್ಟೆಲಿನೊ ಸೇರಿದಂತೆ ಕೊಂಕಣಿ ಸಂಸ್ಕೃತಿಯ ಹಲವು ಗಣ್ಯರು ಮತ್ತು ಪೋಷಕರು ಈ ಸಂಭ್ರಮದ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಸಂಸ್ಥೆಯ ಸಾಧನೆಯನ್ನು ಶ್ಲಾಘಿಸಿ ಮಾತನಾಡಿದ ಡಾ. ರೊನಾಲ್ಡ್ ಕೊಲಾಸೊ ಅವರು, “ತನ್ನ ದಿಟ್ಟ ಉಪಕ್ರಮಗಳು ಮತ್ತು ಅಚ್ಚುಕಟ್ಟಾದ ಕಾರ್ಯವೈಖರಿಗೆ ಹೆಸರಾಗಿರುವ ಮ್ಯಾಂಡ್ ಸೊಭಾಣ್, ಈ ಜಾಗತಿಕ ಮೈಲಿಗಲ್ಲಿನ ಮೂಲಕ ತನ್ನ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿಕೊಂಡಿದೆ. ದಾಖಲೆ ನಿರ್ಮಿಸಿದ ಈ ಸಂಗೀತ ಮ್ಯಾರಥಾನ್ ಜಗತ್ತಿನಾದ್ಯಂತ ಸುಮಾರು 7,000 ಗಾಯಕರನ್ನು ಮಂಗಳೂರಿಗೆ ಒಗ್ಗೂಡಿಸಿದ್ದು, 5,000ಕ್ಕೂ ಹೆಚ್ಚು ಹಾಡುಗಳ ಸುಧೆಯನ್ನು ಹರಿಸಿದೆ. ಕೊಂಕಣಿ ಸಂಗೀತವನ್ನು ವಿಶ್ವ ಭೂಪಟದಲ್ಲಿ ಗುರುತಿಸುವಂತೆ ಮಾಡಿದ ಅಧ್ಯಕ್ಷ ಲುವಿ ಜೆ. ಪಿಂಟೊ ಮತ್ತು ಇಡೀ ಮ್ಯಾಂಡ್ ಸೊಭಾಣ್ ತಂಡದ ಅಚಲ ಸಮರ್ಪಣೆ, ದೂರದೃಷ್ಟಿಯ ಯೋಜನೆ ಮತ್ತು ಐತಿಹಾಸಿಕ ವಿಜಯಕ್ಕಾಗಿ ನಾನು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ,” ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇತರ ಗಣ್ಯರೂ ಸಹ ತಂಡದ ಈ ಅಮೋಘ ಸಾಂಸ್ಕೃತಿಕ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ವಿನ್ಸೆಂಟ್ ಫೆರ್ನಾಂಡಿಸ್ ಕಾಸಿಯಾ ಮತ್ತು ಅವರ ‘ಮೊಗಾಚಿ ಲಹರಾಂ’ ತಂಡದವರು ಸಂಭ್ರಮಾಚರಣೆಯುದ್ದಕ್ಕೂ ಉತ್ಸಾಹಭರಿತ ಬ್ರಾಸ್ ಬ್ಯಾಂಡ್ ಸಂಗೀತವನ್ನು ನುಡಿಸುವ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿದರು.





































