HOLY ROSARY CHURCH, KUNDAPUR – 450 th JUBILEE SOUVENIR 2021

ಕೆನರಾ ಬ್ಯಾಂಕ್ ಡಿ.ಎಂ. ರತ್ನಾಕರ ಗಾಣಿಗರಿಗೆ ಸನ್ಮಾನ


ವೃತ್ತಿ ಸೇವೆಯಲ್ಲಿ ಅತ್ಯುತ್ತಮ ಸಾಧನೆಗೈದು ರಾಷ್ಟ್ರ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವ ಕುಂದಾಪುರ ಕೆನರಾ ಬ್ಯಾಂಕ್ ವಿಭಾಗೀಯ ಪ್ರಬಂಧಕ ರತ್ನಾಕರ ಗಾಣಿಗ ಗಂಗೊಳ್ಳಿಯವರನ್ನು ರೋಟರಿ ಕುಂದಾಪುರ ದಕ್ಷಿಣದ ವತಿಯಿಂದ ಗೌರವಿಸಲಾಯಿತು.
ಕುಂದಾಪುರ ಸರಕಾರಿ ಪ. ಪೂ. ಕಾಲೇಜಿನ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ನಡೆದ ಸಮಾರಂಭದಲ್ಲಿ ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ ಅಧ್ಯಕ್ಷತೆ ವಹಿಸಿದ್ದರು.
ವೃತ್ತಿ ಸೇವೆ ನಿರ್ದೇಶಕ ಯು.ಎಸ್.ಶೆಣೈ ರತ್ನಾಕರ ಗಾಣಿಗರನ್ನು ಪರಿಚಯಿಸಿ ಅಭಿನಂದಿಸಿದರು.
ರತ್ನಾಕರ ಗಾಣಿಗ ಮಾತನಾಡಿ “ಬ್ಯಾಂಕ್ ಮೂಲಕ ಸಾರ್ವಜನಿಕ ಸೇವೆಗೈಯಲು ತುಂಬಾ ಅವಕಾಶವಿದ್ದು ನಾನು ಬಡವರು, ವಿದ್ಯಾರ್ಥಿ ಗಳಿಗೆ ಸಹಾಯ ಮಾಡಲು ಗರಿಷ್ಠ ಪ್ರಯತ್ನ ಮಾಡಿದ್ದೇನೆ. ಬ್ಯಾಂಕಿನ ಹಾಗೂ ಸಾರ್ವಜನಿಕ ರ ವಿಶ್ವಾಸ ಗಳಿಸಿದ್ದೇನೆ. ರೋಟರಿ ಕುಂದಾಪುರ ದಕ್ಷಿಣ ವೃತ್ತಿ ಸೇವೆಯ ಸಾಧನೆಗೆ ಗುರಿತಿಸಿರುವುದು ತುಂಬಾ ಸಂತೋಷ ವಾಯಿತು” ಎಂದರು. ಕಾರ್ಯದರ್ಶಿ ಸಚಿನ್ ನಕ್ಕತ್ತಾಯ ವಂದಿಸಿದರು.

ಸಂತ ಜೋಸೆಫ್ ಪ್ರೌಢಶಾಲೆ ಕುಂದಾಪುರ: “ವ್ಯಸನ ಮುಕ್ತ ದಿನಾಚರಣೆ”

ಕುಂದಾಪುರ ಸಂತ ಜೋಸೆಫ್ ಪ್ರೌಢ ಶಾಲೆಯಲ್ಲಿ ದಿನಾಂಕ 01-08-22 ರಂದು ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆಯನ್ನು ” ವ್ಯಸನ ಮುಕ್ತ” ದಿನಾಚರಣೆಯನ್ನಾಗಿ ಆಚರಿಸಲಾಯಿತು. ಪ್ರೌಢಶಾಲಾ ಮುಖ್ಯೋಪಾಧ್ಯಾಯನಿ ಸಿಸ್ಟರ್ ಐ ವಿ ಇವರು ಡಾ. ಮಹಾಂತ ಶಿವಯೋಗಿ ಅವರ ಕುರಿತು ಮಾಹಿತಿ ನೀಡಿದರು. ಶಿಕ್ಷಕರಾದ ಮೈಕಲ್ ಇವರು ವ್ಯಸನ ಮುಕ್ತ ಸಮಾಜ ನಿರ್ಮಾಣ ವಿಷಯದ ಕುರಿತು ಮಾತನಾಡಿ ಮಧ್ಯಪಾನ, ಮಾದಕ ದ್ರವ್ಯ ,ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿದರು. ಶಿಕ್ಷಕರಾದ ಅಶೋಕ್ ದೇವಾಡಿಗ ಇವರು ವ್ಯಸನ ಮುಕ್ತ ಸಮಾಜ ನಿರ್ಮಾಣದ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕ ಶಿಕ್ಷಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸಮಾಜ ನಿರ್ಮಾಣ ಕಾರ್ಯದಲ್ಲಿ ಡಾ. ಮಹಾಂತ ಶಿವಯೋಗಿ ಸ್ವಾಮೀಜಿ ಅವರ ಪಾತ್ರ ಹಿರಿದು

ಶ್ರೀನಿವಾಸಪುರ: ಸಮಾಜ ನಿರ್ಮಾಣ ಕಾರ್ಯದಲ್ಲಿ ಡಾ. ಮಹಾಂತ ಶಿವಯೋಗಿ ಸ್ವಾಮೀಜಿ ಅವರ ಪಾತ್ರ ಹಿರಿದು.ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಂ.ಶ್ರೀನಿವಾಸನ್ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮತಿ ವತಿಯಿಂದ ಸೋಮವಾರ ಏರ್ಪಡಿಸಿದ್ದ ಮಹಾಂತ ಶಿವಯೋಗಿ ಸ್ವಾಮೀಜಿ ಜನ್ಮದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಅನೇಕ ಸಂತರು ಸಾಮಾಜಿಕ ಬದಲಾವಣೆತೆ ತಮ್ಮದೇ ಆದ ರೀತಿಯಲ್ಲಿ ಶ್ರಮಿಸಿದ್ದಾರೆ. ಆ ಸಾಲಿನಲ್ಲಿ ಡಾ. ಮಹಾಂತ ಶಿವಯೋಗಿ ಸ್ವಾಮೀಜಿ ಅಗ್ರಗಣ್ಯರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿರಸ್ತೇದಾರ್ ಮನೋಹರ ಮಾನೆ ಡಾ. ಮಹಾಂತ ಶಿವಯೋಗಿ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಪುಷ್ಪಾರ್ಚನೆ ಮಾಡಿ ಕೈ ಮುಗಿದರು.
ಉಪ ತಹಶೀಲ್ದಾರ್ ಬಲ ರಾಮಚಂದ್ರೇಗೌಡ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಮಂಜುನಾಥರೆಡ್ಡಿ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಪ್ಪ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಧನಂಜಯ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಆಂಜಲಮ್ಮ, ಅಬಕಾರಿ ಇಲಾಖೆ ಇನ್ಸ್‍ಪೆಕ್ಟರ್ ರೋಹಿತ್, ಗುರುರಾಜರಾವ್,ಚುನಾವಣೆ ವಿಭಾಗದ ಶಿರಸ್ತೇದಾರ್ ಕಿರಣ್, ಶಾಖಾಧಿಕಾರಿ ಲೋಕೇಶ್, ಮತಗಟ್ಟೆ ಅಧಿಕಾರಿ ವಿ.ತಿಪ್ಪಣ್ಣ, ಕಂದಾಯ ನಿರೀಕ್ಷಕ ಜನಾರ್ಧನ್, ಆಹಾರ ನಿರೀಕ್ಷಕ ಗುರುರಾಜರಾವ್, ಗ್ರಾಮ ಲೆಕ್ಕಾಧಿಕಾರಿಗಳಾದ ವಸುಂದರಾದೇವಿ, ಹರಿ ಮತ್ತಿತರರು ಇದ್ದರು.

ಶಿರ್ವ ಸೈಂಟ್ ಮೇರಿಸ್ ಕಾಲೇಜಿಗೆ ಕಂಪ್ಯೂಟರ್ ಕೊಡುಗೆ


ಶಿರ್ವ:ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ಹೆಚ್ಚಿನ ಕಾರ್ಯಗಳನ್ನು ನಿರ್ವಹಿಸಲು ಕಂಪ್ಯೂಟರ್ಗಳನ್ನು ಬಳಸಲಾಗಿದೆ. ಹೀಗಾಗಿ ಪ್ರತಿಯೊಬ್ಬರಿಗೂ ಕಂಪ್ಯೂಟರ್ ಜ್ಞಾನ ಹೊಂದುವುದು ಅವಶ್ಯಕ. ವಿದ್ಯಾರ್ಥಿಗಳು ಕಂಪ್ಯೂಟರ್‌ಗಳ ಸದುಪಯೋಗ ದಿಂದ ಉತ್ತಮ ಉಪಾದಿ ಹಾಗೂ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳಬೇಕು. ಇವತ್ತು ಕಂಪ್ಯೂಟರ್ ಒಂದು ಮೂಲಭೂತ ಅಗತ್ಯ ವಸ್ತುವಾಗಿದೆ. ಶಿಕ್ಷಣ ,ಆರೋಗ್ಯ ,ಪ್ರಾಕೃತಿಕ ಹಿನ್ನಲೆಯಲ್ಲಿ ಕರ್ಣಾಟಕ ಬ್ಯಾಂಕ್ ತನ್ನದೇ ಆದ ಕೊಡುಗೆಯನ್ನು ಈ ಸಮಾಜಕ್ಕೆ ನೀಡುತ್ತಾ ಬಂದಿದೆ ಎಂದು ಇಲ್ಲಿನ ಶಿರ್ವ ಸೈಂಟ್ ಮೇರಿಸ್ ಕಾಲೇಜಿಗೆ ಕರ್ಣಾಟಕ ಬ್ಯಾಂಕ್ ವತಿಯಿಂದ ಕೊಡುಗೆಯಾಗಿ ನೀಡಲಾದ 5 ಕಂಪ್ಯೂಟರ್ ಗಳನ್ನು ಕರ್ಣಾಟಕ ಬ್ಯಾಂಕ್ ಉಡುಪಿ ರೀಜನಲ್ ಆಫೀಸ್ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಶ್ರೀ ರಾಜ್ ಗೋಪಾಲ್ ಬಿ. ಅವರು ಮುಖ್ಯ ಅತಿಥಿಯಾಗಿ ಉದ್ಘಾಟಿಸಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು.

ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಪ್ರಾಚಾರ್ಯ ಡಾ| ಹೆರಾಲ್ಡ್ ಐವನ್ ಮೋನಿಸ್ ಅವರು ಸಮಾಜ ಕಾಯ೯ ಕೆಲಸಗಳಲ್ಲಿ ಕರ್ಣಾಟಕ ಬ್ಯಾಂಕ್ ಸದಾ ಮುಂದು ಎಂದು ನಮ್ಮ ಕಾಲೇಜಿಗೆ ಕಂಪ್ಯೂಟರ್ ಗಳನ್ನು ಕೊಡುಗೆ ನೀಡುವ ಮೂಲಕ ಶೈಕ್ಷಣಿಕ ಪ್ರಗತಿಗೆ ಕೈಜೋಡಿಸಿರುವುದು ಶ್ಲಾಘನೀಯ ಎಂದು ಮ್ಯಾನೇಜರ್ ಮತ್ತು ಅವರ ಸಿಬ್ಬಂದಿ ವಗ೯ದವರನ್ನು ಅಭಿನಂದಿಸಿದರು

ಸಂತಮೇರಿ ಮತ್ತು ಡಾನ್ ಬಾಸ್ಕೋ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಅತಿವಂದನೀಯ ಡಾ| ಲೆಸ್ಲಿ ಸಿ.ಡಿಸೋಜ ರವರು ಅಧ್ಯಕ್ಷನೆಲೆಯಲ್ಲಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಕಲಿಕಾ ಅವಧಿಯಲ್ಲಿ ತಮಗೆ ಪ್ರತ್ಯೇಕ ಮತ್ತು ಪರೋಕ್ಷವಾಗಿ ಸಹಕಾರ ನೀಡಿದ ಸಮಾಜದ ಋಣವನ್ನು ಸದಾ ತಮ್ಮ ಗಮನದಲ್ಲಿಟ್ಟುಕೊಂಡು ಮುಂದೆ ಸಮಾಜಕ್ಕೆ ತಮ್ಮಿಂದ ಎಷ್ಟು ಸಾಧ್ಯವೊ ಅಷ್ಟನ್ನು ಸಮಾಜಕ್ಕೆ ಹಿಂತಿರುಗಿಸಬೇಕು ಹಾಗೂ ಸಮಾಜಮುಖಿ ಕೆಲಸದಲ್ಲಿ ಒಂದು ಹೆಜ್ಜೆ ಮುಂದಿರಬೇಕೆಂದೂ ಮಾನವೀಯ ಸಂಬಂಧಗಳಿಗೆ ಬೆಲೆ ಕೊಡಬೇಕೆಂದು ತಮ್ಮ ಆಶಿವ೯ಚನದಲ್ಲಿ ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.

ಈ ಕಾರ್ಯಕ್ರಮದಲ್ಲಿ ಕರ್ಣಾಟಕ ಬ್ಯಾಂಕ್ ಶಿರ್ವ ಬ್ರಾಂಚಿನ ಮ್ಯಾನೇಜರ್ ಜನಾರ್ದನ್, ಕ್ಲೆರಿಕಲ್ ಸ್ಟಾಫ್ ಶ್ರೀನಿವಾಸ ಪೈ, ವಿದ್ಯಾರ್ಥಿಕ್ಷೇಮ ಪಾಲನಾಧಿಕಾರಿ ಯಶೋದಾ,ಬಿಸಿಎ ವಿಭಾಗದ ಎಲ್ಲಾ ಅಧ್ಯಾಪಕ ಅಧ್ಯಾಪಕೇತರಬಂಧುಗಳು , ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ವಿಧಾತ್ ಶೆಟ್ಟಿ, ಅಲಿಸ್ಟರ್ ಸುಜಾಯ್ ಡಿಸೋಜಾ ಮತ್ತು ಅರುಣ್ ಸಹಕರಿಸಿದರು.ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಐಟಿ ಕ್ಲಬ್ ನಿರ್ದೇಶಕ ಲೆಫ್ಟಿನೆಂಟ್ ಶ್ರೀ ಕೆ ಪ್ರವೀಣ್ ಕುಮಾರ್ ಸ್ವಾಗತಿಸಿ, ಉಪನ್ಯಾಸಕ ಶ್ರೀ ಪ್ರಕಾಶ್ ವಂದಿಸಿದರು. ಉಪನ್ಯಾಸಕಿ ಶ್ರೀಮತಿ ದಿವ್ಯಶ್ರೀ ಬಿ ಕಾರ್ಯಕ್ರಮ ಸಂಯೋಜಿಸಿದರು.

ಕುಂದಾಪುರ ವಲಯ ಮಟ್ಟದ ಕರಾಟೆ ಸ್ಪರ್ಧೆ ಉದ್ಘಾಟನೆ


ಕುಂದಾಪುರ: ಸ್ಪರ್ಧೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಸ್ಪರ್ಧಾತ್ಮಕ ದೃಷ್ಟಿಯಲ್ಲಿ ಭಾಗವಹಿಸುವುದು ಮುಖ್ಯ. ಸೋಲನ್ನು ಸವಾಲಾಗಿ ಸ್ವೀಕರಿಸಿ ಗೆಲುವಿನಡೆಗೆ ಸಾಗುವಲ್ಲಿ ಸದಾ ಪ್ರಯತ್ನಶೀಲರಾಗಿರಬೇಕು ಎಂದು ಸೈಂಟ್ ಮೇರಿಸ್ ಸಮೂಹ ಸಂಸ್ಥೆಯ ಸಂಚಾಲಕ ಅತೀ.ವಂ.ಫಾ. ಸ್ಟ್ಯಾನಿ ತಾವ್ರೋ ಹೇಳಿದರು.
ಅವರು ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರ, ಸೈಂಟ್ ಮೇರಿಸ್ ಪ್ರೌಢಶಾಲೆ ಕುಂದಾಪುರದ ಆಶ್ರಯದಲ್ಲಿ ನಡೆದ ಕುಂದಾಪುರ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಕರಾಟೆ ಸ್ಪರ್ಧೆ-2022 ಹಾಗೂ ವ್ಯಸನ ಮುಕ್ತ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಂದ್ಯಾಟವನ್ನು ಕುಂದಾಪುರ ಪುರಸಭೆಯ ಸದಸ್ಯ ಪ್ರಭಾಕರ ವಿ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ವೆಂಕಟೇಶ್ ನಾವುಂದ, ಉಡುಪಿ ಜಿಲ್ಲಾ ಕರಾಟೆ ಅಸೋಸಿಯೇಶನ್ ಅಧ್ಯಕ್ಷ ಕಿರಣ್ ಕುಂದಾಪುರ, ಕುಂದಾಪುರ ವಲಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ್‍ಚಂದ್ರ ಶೆಟ್ಟಿ ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಸಿಆರ್‍ಪಿ ಶಂಕರ್ ಶೆಟ್ಟಿ,ಉಡುಪಿ ಜಿಲ್ಲಾ ಕರಾಟೆ ಅಸೋಸಿಯೇಶನ್ ಕಾರ್ಯದರ್ಶಿ ಲೋಹಿತಾಶ್ವ, ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಡೋರಾತಿ ಸುವಾರಿಸ್, ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ರೇಶ್ಮಾ ಫೆರ್ನಾಂಡಿಸ್, ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ತೆರೇಸಾಶಾಂತಿ, ಹೋಲಿ ರೋಸರಿ ಪ್ಲೇ ಸ್ಕೂಲ್‍ನ ಮುಖ್ಯ ಶಿಕ್ಷಕಿ ಶೈಲಾ ಲೂಯಿಸ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪಂದ್ಯಾಟದ ಪ್ರಾಯೋಜಿಕತ್ವ ವಹಿಸಿಕೊಂಡ ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ವೆಂಕಟೇಶ್ ನಾವುಂದ ಅವರನ್ನು ಶಾಲೆಯ ವತಿಯಿಂದ ಗೌರವಿಸಲಾಯಿತು.
ಸೈಂಟ್ ಮೇರಿಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಅಸುಂತ ಲೋಬೋ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ದತ್ತಾತ್ರೇಯ ಹಮ್ಮು ನಾಯಕ್ ಪ್ರಾಸ್ತಾವನೆಗೈದರು. ಹಿರಿಯ ಶಿಕ್ಷಕ ಭಾಸ್ಕರ್ ಗಾಣಿಗ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.

ಅಂಕದಕಟ್ಟೆ ನಿವಾಸಿ ಶೀನ ದೇವಾಡಿಗ (82) ನಿಧನ


ಕುಂದಾಪುರ ಅಂಕದಕಟ್ಟೆ ನಿವಾಸಿ ಶೀನ ದೇವಾಡಿಗ (82) ಇವರು ಅಲ್ಪ ಕಾಲದ ಅಸೌಖ್ಯದಿಂದ ದಿನಾಂಕ 31-07-2022ರ ಆದಿತ್ಯವಾರ ನಿಧನರಾದರು. ಮೂಲತಹ:, ಚಾಂತರದವರಾಗಿದ್ದ ಅವರು ಉತ್ತಮ ಕೃಷಿಕರಾಗಿದ್ದು, ಅಂಗಡಿ ವ್ಯಾಪರದಲ್ಲೂ ಗುರುತಿಸಿ ಕೊಂಡಿದ್ದರು. ಶ್ರೀಯುತರು ಪತ್ನಿ, 4 ಗಂಡು, 1 ಹೆಣ್ಣು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಬಡವರ ಅನ್ನ ಹಾಗೂ ಮಾಂಗಲ್ಯವನ್ನು ಕಿತ್ತುಕೊಳ್ಳುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಅಬಕಾರಿ ಇಲಾಖೆಗೆ ಮುತ್ತಿಗೆ

ಬಂಗಾರಪೇಟೆ ಜುಲೈ-31, ಬಡವರ ಅನ್ನ ಹಾಗೂ ಮಾಂಗಲ್ಯವನ್ನು ಕಿತ್ತುಕೊಳ್ಳುತ್ತಿರುವ ಗ್ರಾಮೀಣ ಪ್ರದೇಶದ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಲ್ಲಿ ವಿಫಲವಾಗಿರುವ ಅಬಕಾರಿ ಇಲಾಖೆಯ ಬಡ ವಿರೋಧಿ ನೀತಿಯನ್ನು ಖಂಡಿಸಿ ದಿನಾಂಕ: 06-08-2022 ರಂದು ಮಾಂಗಲ್ಯಗಳ ಸಮೇತ ಅಬಕಾರಿ ಕಚೇರಿ ಮುತ್ತಿಗೆ ಹಾಕಲು ರೈಲ್ವೆ ನಿಲ್ದಾಣ ಉದ್ಯಾನವನದಲ್ಲಿ ಕರೆದಿದ್ದ ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಕಿಲೋಮೀಟರ್ ಗಟ್ಟಲೆ ಅಲೆದಾಡಿದರು ಹನಿ ನೀರು ಸಿಗದೆ ಇರಬಹುದು ಆದರೆ ದಿನದ 24 ಗಂಟೆ ಗ್ರಾಮೀಣ ಪ್ರದೇಶದ ದಿನಸಿ ಅಂಗಡಿಗಳಲ್ಲಿ ಗಲ್ಲಿಗಲ್ಲಿಯಲ್ಲೂ ಅಕ್ರಮ ಮದ್ಯ ಮಾರಾಟ ಮಾಡುವ ಮುಖಾಂತರ ಗ್ರಾಮೀಣ ಪ್ರದೇಶದಲ್ಲಿ ಅಶಾಂತಿ ಹಾಗೂ ಬಡವರ ಅನ್ನವನ್ನು ಅಬಕಾರಿ ಇಲಾಖೆ ಅಧಿಕಾರಿಗಳೇ ಕಸಿದುಕೊಳ್ಳುತ್ತಿದ್ದಾರೆ. ಮಹಿಳಾ ಜಿಲ್ಲಾಧ್ಯಕ್ಷ ಎ.ನಳಿನಿಗೌಡ ಅವ್ಯವಸ್ಥೆ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ಎರಡು ವರ್ಷ ಸಾಂಕ್ರಾಮಿಕ ರೋಗಗಳಿಂದ ತತ್ತರಿಸಿ ದುಡಿಯುವ ಕೈಗೆ ಕೆಲಸವಿಲ್ಲದೆ ಮಕ್ಕಳ ವಿದ್ಯಾಭ್ಯಾಸ ಹಿರಿಯರ ಆರೋಗ್ಯಕ್ಕೆ ಖಾಸಗಿ ಸಾಲ ಮಾಡಿದ ಹಣ ತೀರಿಸುವ ಸಮಯದಲ್ಲಿ ಗಲ್ಲಿಗಲ್ಲಿಯಲ್ಲೂ ಅಕ್ರಮ ಮದ್ಯ ಮಾರಾಟಕ್ಕೆ ಅಕ್ರಮ ಪರವಾನಿಗೆ ನೀಡುವ ಮುಖಾಂತರ ಸರ್ಕಾರ ನಡೆಯಬೇಕಾದರೆ ಅಬಕಾರಿ ಇಲಾಖೆಯ ಆದಾಯ ಹೆಚ್ಚಾಗಬೇಕೆಂಬ ಸರ್ಕಾರದ ಆದೇಶಕ್ಕೆ ಅಬಕಾರಿ ಇಲಾಖೆ ಅಧಿಕಾರಿಗಳು ಗ್ರಾಮೀಣ ಪ್ರದೇಶ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕುಮ್ಮಕ್ಕು ನೀಡುವ ಮೂಲಕ ಅಬಕಾರಿ ಇಲಾಖೆ ಚಿನ್ನದ ಮೊಟ್ಟೆ ಇಡುವ ಇಲಾಖೆಯಾಗಿ ಮಾರ್ಪಟ್ಟಿದೆ ಎಂದು ಆರೋಪ ಮಾಡಿದರು.
ಅಕ್ರಮ ಮದ್ಯ ಮಾರಾಟ ತಡೆಯಬೇಕಾದರೆ ಅಧಿಕಾರಿಗಳಿಗೆ ಬಡ ಕೂಲಿ ಕಾರ್ಮಿಕರು ದೂರು ನೀಡಿದರೆ ನೆಪಮಾತ್ರಕ್ಕೆ ದಾಳಿ ಮಾಡಿ ದಂಡ ವಿಧಿಸಿ, ಪತ್ರಿಕಾ ಮಾದ್ಯಮಕ್ಕೆ ಪೊಟೋ ನೀಡಿ ಆ ನಂತರ ಯಥಾಸ್ಥಿತಿ ಮಾರಾಟ ಮಾಡಲು ಅವಕಾಶ ನೀಡುತ್ತಾರೆಂದು ಆಕ್ರೋಷ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ಐತಂಡಹಳ್ಳಿ ಮಂಜುನಾಥ ಮಾತನಾಡಿ ಅಬಕಾರಿ ಅಧಿಕಾರಿಗಳಿಗೆ ಹಣ ನೀಡಿದರೆ ಬಂಗಾರಪೇಟೆ ತಾಲ್ಲೂಕಿನಲ್ಲಿ ಮಾರಾಟ ಮಾಡುತ್ತಾರೆ. ನಿಯಮವನ್ನು ಉಲ್ಲಂಘನೆ ಮಾಡಿ ಮದ್ಯದ ಅಂಗಡಿ ಮಾಲೀಕರು ದಿನದ 24 ಗಂಟೆ ರಾಜ್ಯ ರೋಷವಾಗಿ ಮದ್ಯ ಮಾರಾಟ ಮಾಡುವ ಮುಖಾಂತರ ಕೂಲಿ ಮಾಜಿ ಜೀವನ ಮಾಡುತ್ತಿರುವ ಬಡವರು ದುಡಿದ ಹಣವನ್ನು ಮದ್ಯದ ಅಂಗಡಿಗೆ ಅಡಹಿಟ್ಟು ಮನೆಗೆ ಹೋಗಿ ಹೆಂಡತಿ ಮಕ್ಕಳನ್ನು ಒಡೆಯುವ ಜೊತೆಗೆ ಕೊಲೆಗಳಾಗಿರುವುದು ಉದಾಹರಣೆಗಳು ಬೇಕಾದಷ್ಟು ಇದ್ದರೂ ಇದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ತಿಂಗಳ ಮಾಮೂಲಿ ಪಡೆದುಕೊಳ್ಳುವ ಮುಖಾಂತರ ಅಕ್ರಮ ಮದ್ಯ ಮಾರಾಟ ಅಧಿಕಾರಿಗಳ ನೆರಳಿನಲ್ಲಿ ನಡೆಯುತ್ತಿದೆ ಎಂದು ಕಿಡಿಕಾಡಿದರು.
ಗ್ರಾಮೀಣ ಪ್ರದೇಶದ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ ಬಡವರ ಅನ್ನ ಹಾಗೂ ಮಾಂಗಲ್ಯವನ್ನು ಉಳಿಸಿಕೊಡುವಂತೆ ಅಬಕಾರಿ ಅಧಿಕಾರಿಗಳನ್ನು ಒತ್ತಾಯಿಸಿ ದಿನಾಂಕ:06-08-2022 ರ ಶನಿವಾರ ಮಾಂಗಲ್ಯಗಳ ಸಮೇತ ಅಬಕಾರಿ ಇಲಾಖೆ ಮುತ್ತಿಗೆ ಹಾಕುವ ವಿಚಾರವನ್ನು ಸಭೆಯಲ್ಲಿ ತೀರ್ಮಾನಿಸಲಾಯಿತೆಂದರು.
ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ, ಕೋಲಾರ ತಾಲ್ಲೂಕು, ಈಕಂಬಳ್ಳಿ ಮಂಜುನಾಥ, ಪಾರಂಡಹಳ್ಳಿ ಮಂಜುನಾಥ, ನಾಗಭೂಷಣ್, ಮರಗಲ್ ಮುನಿಯಪ್ಪ, ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಚಲಪತಿ, ಹಸಿರು ಸೇನೆ ಜಿಲ್ಲಾಧ್ಯಕ್ಷ ಕಿರಣ್, ಚಾಂದ್‍ಪಾಷ, ಬಾಬಾಜಾನ್, ರಾಜ್ಯ ಕಾರ್ಯದರ್ಶಿ ಹುಲ್ಕುರು ಹರಿಕುಮಾರ್ ರಾಮಸಾಗರ ವೇಣು ಸಂದೀಪ್‍ರೆಡ್ಡಿ, ಸಂದೀಪ್‍ಗೌಡ, ಕಿರಣ್, ವೆಂಕಟರವಣಪ್ಪ ನಾಗಯ್ಯ , ಮುನಿರಾಜು, ಮುನಿಕೃಷ್ಣ ಮುಂತಾದವರು ಇದ್ದರು.

ಮಕ್ಕಳ ಅಭಿವೃದ್ಧಿಗೆ ಪಠ್ಯದೊಂದಿಗೆ ಸಹಪಠ್ಯ ಚಟುವಟಿಕೆಗಳು ಮುಖ್ಯ – ತಿಮ್ಮಸಂದ್ರ ನಾಗರಾಜ್

ಕೋಲಾರ ಜು.30 : ಮಕ್ಕಳ ಸವಾರ್ಂಗೀಣ ಅಭಿವೃದ್ಧಿಗೆ ಪಠ್ಯದೊಂದಿಗೆ ಸಹಪಠ್ಯ ಚಟುವಟಿಕೆಗಳು ಮುಖ್ಯವೆಂದು ತಿಮ್ಮಸಂದ್ರ ನಾಗರಾಜ್ ಅಭಿಪ್ರಾಯಪಟ್ಟರು.
ಟಮಕ ದೇವರಾಜ್ ಅರಸ್ ಮೆಡಿಕಲ್ ಕಾಲೇಜು ಹಿಂಭಾಗ ಅಂತರರಾಷ್ಟ್ರೀಯ ಕ್ರೀಡಾಪಟು ಮತ್ತು ಅಥ್ಲೆಟಿಕ್ಸ್ ಕೋಚ್ ಆದ ದೊರೆಸ್ವಾಮಿ ಅವರ ಮಾರ್ಗದರ್ಶನದಲ್ಲಿ ಪಿ. ಗೋಪಾಲನ್ ಸ್ಪೋಟ್ರ್ಸ್ ಅಕಾಡೆಮಿ, ಇಂಡಿಯನ್ ಸ್ಪೋಟ್ರ್ಸ್ ಮತ್ತು ಮಾರ್ಷಲ್ ಆಟ್ರ್ಸ್ ಅಕಾಡೆಮಿಯ ಕಾರ್ಯದರ್ಶಿಗಳಾದ ಶಿವಕುಮಾರ್ ರವರ ಸಾರಥ್ಯದಲ್ಲಿ ಪ್ರತಿ ಭಾನುವಾರ ಮಕ್ಕಳಿಗೆ ಕ್ರೀಡಾ ಚಟುವಟಿಕೆಗಳಾದ ಟೇಬಲ್ ಟೆನಿಸ್, ಸ್ಕೇಟಿಂಗ್, ಕರಾಟೆ, ಬಾಕ್ಸಿಂಗ್, ಬ್ಯಾಸ್ಕೆಟ್ಬಾಲ್, ಕ್ರಿಕೆಟ್, ಕೇರಂ, ಯೋಗ ಇತ್ಯಾದಿ ಕ್ರೀಡೆಗಳನ್ನು ತರಬೇತುದಾರರಿಂದ ತರಬೇತಿ ನೀಡುತ್ತ ಬಂದಿದ್ದಾರೆ. ಈ ತರಬೇತಿ ಕೇಂದ್ರದಿಂದ ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಪಟುಗಳಾಗಿ ತಯಾರು ಮಾಡಲಿ ಎಂದರು.
ಅಕಾಡೆಮಿಯ ಕಾರ್ಯದರ್ಶಿಗಳಾದ ಶಿವಕುಮಾರ್ ಮಾತನಾಡುತ್ತಾ ಮಕ್ಕಳ ದೈಹಿಕವಾಗಿ ಮಾನಸಿಕವಾಗಿ ಮತ್ತು ಬೌದ್ಧಿಕವಾಗಿರಲು ಕ್ರೀಡಾ ಚಟುವಟಿಕೆಗಳು ಅಗತ್ಯವಾಗಿ ಬೇಕಾಗಿದೆ. ಶಾಲೆಯಲ್ಲಿ ಮಕ್ಕಳು ಪಠ್ಯ ಚಟುವಟಿಕೆಗಳೊಂದಿಗೆ ಮುಂದೆ ಬಂದರೆ ಸಾಲದು, ಉತ್ತಮ ಆರೋಗ್ಯವಂತರಾಗಲು ವ್ಯಾಯಾಮ ಯೋಗ ಮತ್ತು ಕ್ರೀಡಾ ಚಟುವಟಿಕೆಗಳು ಮುಖ್ಯ ಆದುದರಿಂದ ಆಸಕ್ತ ಮಕ್ಕಳಿಗೆ ನಮ್ಮ ಸ್ಪೋಟ್ರ್ಸ್ ಅಕಾಡೆಮಿಯಿಂದ ತರಬೇತಿಯನ್ನು ನೀಡಲಾಗುತ್ತಿದೆ ನಿಮ್ಮ ಹೆಚ್ಚು ಹೆಚ್ಚು ಆಸಕ್ತಿ ಮಕ್ಕಳು ಬಂದರೆ ಸೇರಿಸಿಕೊಳ್ಳಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಕೋಚ್‍ಗಳಾದ ಲಿಖಿತ್ ಕುಮಾರ್ ಮತ್ತು ತಿಲಕ್‍ರವರು ತರಬೇತಿ ಪಡೆಯಲು ಬಂದ ಮಕ್ಕಳು ಉಪಸ್ಥಿತರಿದ್ದರು.

ಮಾಜಿ‌ ಶಾಸಕ ಅಪ್ಪಣ್ಣ ಹೆಗ್ಡೆ ಅವರಿಗೆ ಪತ್ನಿ (ನಾಗರತ್ನ ಶೆಟ್ಟಿ – 80) ವಿಯೋಗ

ಕುಂದಾಪುರ: ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆಯವರ ಪತ್ನಿ‌ ನಾಗರತ್ನ ಶೆಟ್ಟಿ (80) ಭಾನುವಾರ ಸಂಜೆ ಬಸ್ರೂರಿನ ತಮ್ಮ ಸ್ವಗ್ರಹದಲ್ಲಿ ಹೃದಯಾಘಾತದಿಂದ‌ ನಿಧನರಾಗಿದ್ದಾರೆ.ಧಾರ್ಮಿಕ, ಸಾಮಾಜಿಕ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು ಬಸ್ರೂರು ಹಾಗೂ ಕೊಲ್ಲೂರಿನ ಕೂಡುರಿನ ಪರಿಸರದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದರು.ಮೃತರಿಗೆ ಪತಿ, ಇಬ್ಬರು ಪುತ್ರರು, ಮೂವರು ಪುತ್ರಿಯರಿದ್ದಾರೆ

ಅಂತ್ಯಕ್ರಿಯೆ:

ಸೋಮವಾರ ಮಧ್ಯಾಹ್ನ ಕೊಲ್ಲೂರು ಸಮೀಪದ ಕೂಡುರು‌ ಮನೆಯಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದ್ದು, ಬೆಳಗ್ಗೆ 9 ಗಂಟೆಯಿಂದ 11 ರವರೆಗೆ ಬಸ್ರೂರಿನ ಮನೆಯಲ್ಲಿ ಸಾರ್ವಜನಿಕ ದರ್ಶನಕ್ಕಾಗಿ‌ ಪಾರ್ಥಿವ ಶರೀರವನ್ನು ಇಡಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿದೆ.