HOLY ROSARY CHURCH, KUNDAPUR – 450 th JUBILEE SOUVENIR 2021

ನೀಲಟೂರು ಗ್ರಾಮದಲ್ಲಿ ಶನಿವಾರ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ

ಶ್ರೀನಿವಾಸಪುರ: ತಾಲ್ಲೂಕಿನ ನೀಲಟೂರು ಗ್ರಾಮದಲ್ಲಿ ಶನಿವಾರ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
ಪ್ರಸಾದ್ (33) ಕೊಲೆಯಾದ ಯುವಕ.
ಪ್ರಸಾದ್ ಮತ್ತು ಕಿರಣ್ ಕುಟುಂಬದ ಮಧ್ಯೆ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಮಾವಿನ ಕಾಯಿ ಕೀಳುವ ವಿಚಾರದಲ್ಲಿ ಜಗಳವಾಗಿದೆ. ಕಿರಣ್, ಪ್ರಸಾದ್ ಮುಖಕ್ಕೆ ಕಾರದ ಪುಡಿ ಎರಚಿ ಕಬ್ಬಿಣದ ರಾಡ್ ಮತ್ತು ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಪ್ರಸಾದ್ ಅವರನ್ನು ಆಂಬುಲೆನ್ಸ್‍ನಲ್ಲಿ ಕೋಲಾರದ ಜಾಲಪ್ಪ ಆಸ್ಪತ್ರೆಗೆ ಕೊಂಡೊಯ್ಯುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟರು ಎಂದು ಹೇಳಲಾಗಿದೆ.
ಆರೋಪಿ ಕಿರಣ್ ಶ್ರೀನಿವಾಸಪುರ ಪೊಲೀಸರಿಗೆ ಶರಣಾಗಿದ್ದು, ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ನೀಲಟೂರಿನಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಪತ್ರಕರ್ತರು ಸದಾ ಒತ್ತಡದಲ್ಲಿರುತ್ತಾರೆ ಸದಾ ಆರೋಗ್ಯವನ್ನು ಕಾಪಾಡಬೇಕಾಗಿದೆ: ಕಲ್ಯಾಣ ಸಚಿವರಾದ ದಿನೇಶ್ ಗುಂಡುರಾವ್

ಬೆಂಗಳೂರು: ಪತ್ರಕರ್ತರು ಸದಾ ಒತ್ತಡದಲ್ಲಿರುತ್ತಾರೆ. ವೃತ್ತಿಯಲ್ಲಿ ಸಕ್ರೀಯರಾಗಬೇಕಾದರೆ, ಸದಾ ಆರೋಗ್ಯವನ್ನು ಕಾಪಾಡಬೇಕಾಗಿರುವುದು ಬಹಳ ಮುಖ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡುರಾವ್ ಅಭಿಪ್ರಾಯಪಟ್ಟರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಮತ್ತು ಬಿಬಿಎಂಪಿ ಸಹಯೋಗದೊಂದಿಗೆ ಪತ್ರಕರ್ತರಿಗೆ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪತ್ರಕರ್ತರು ಸಮಾಜ ಮತ್ತು ಸರ್ಕಾರದ ನಡುವಿನ ಸಂಪರ್ಕ ಸೇತುವೆಯಂತೆ ಕಾರ್ಯವೆಸಗುತ್ತಿರುವ ಕಾರಣ ಶಿಸ್ತಿನ ಜೀವನವನ್ನು ಪಾಲಿಸಬೇಕಾಗುತ್ತದೆ. ಹಾಗಾಗಿ ನಿರಂತರ ಆರೋಗ್ಯ ತಪಾಸಣೆಗಳೂ ಅವರಿಗೆ ಅತ್ಯಗತ್ಯ ಎಂದು ಅವರು ಹೇಳಿದರು.

ಆರೋಗ್ಯದ ಬಗ್ಗೆ ಯಾವುದೇ ಕಾರಣಕ್ಕೆ ನಿರ್ಲಕ್ಷ್ಯ ವಹಿಸಬಾರದು. ರೋಗ ಬರುವ ಮುನ್ನವೇ ಆಗಿಂದಾಗ್ಗೆ ತಪಾಸಣೆ ಮಾಡಿಸಿಕೊಂಡು ಜಾಗ್ರತೆ ವಹಿಸಿದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ಕೆಯುಡಬ್ಲ್ಯೂಜೆ ಪತ್ರಕರ್ತರ ಬಗ್ಗೆ ಕಾಳಜಿ ವಹಿಸಿ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಸದಸ್ಯರ ಕಾಳಜಿಯೂ ಸಹ ಪತ್ರಕರ್ತರ ಸಂಘಕ್ಕೆ ಮುಖ್ಯವಾಗಿ ಇರುವುದರಿಂದ ಸಂಘವು ಇಂತಹ ಕಾರ್ಯಚಟುವಟಿಕೆಗಳನ್ನು ಸತತವಾಗಿ ಹಮ್ಮಿಕೊಳ್ಳುತ್ತಿದೆ ಎಂದರು.

ರಾಜ್ಯ ಖಜಾಂಚಿ ಎಂ.ವಾಸುದೇವ ಹೊಳ್ಳ ಪ್ರಾರಂಭದಲ್ಲಿ ಸ್ವಾಗತಿಸಿದರು. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ವಿ.ಮುನಿರಾಜು, ಬಿಬಿಎಂಪಿ ಆರೋಗ್ಯಾಧಿಕಾರಿ ಡಾ.ಶರಣಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಜ್ಯ ಸಮಿತಿ ಸದಸ್ಯರಾದ ಕೌಸಲ್ಯ ಫಳನಾಕರ್, ಕೆ. ಆರ್ .ದೇವರಾಜ್,ಮತ್ತು ನರೇಂದ್ರ ಪಾರೇಕಟ್, ಶಿವರಾಜ್ ಮತ್ತಿತರರು ಹಾಜರಿದ್ದರು.
ನಂತರ ಆರೋಗ್ಯ ಸಚಿವರು, ಕೆಯುಡಬ್ಲ್ಯೂ ಜೆ ಕಾರ್ಯಾಲಯಕ್ಕೆ ಭೇಟಿ ನೀಡಿದ್ದರು. ಇದೇ ಸಂದರ್ಭದಲ್ಲಿ ಆರೋಗ್ಯ ತಪಾಸಣೆ ವೀಕ್ಷಿಸಿ ಮೆಚ್ಚಿಗೆಯ ಮಾತುಗಳನ್ನಾಡಿದರು. ಸೋಮಶೇಖರ್ ಗಾಂಧಿ ವಂದಿಸಿದರು.

ಸಹಕಾರಿ ಸಂಘಗಳಲ್ಲಿರುವ ಮಹಿಳೆಯರ ಸ್ತ್ರೀ ಶಕ್ತಿ ಸಾಲ ಮನ್ನಾ ಮಾಡಬೇಕು:ರೈತ ಸಂಘದ ರಾಜ್ಯ ಸಂಚಾಲನಾ ಸಮಿತಿ- ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇವರಿಗೆ ಒತ್ತಾಯ

ಕೋಲಾರ, ಜೂ.24: ರೈತ ಸಂಘದ ರಾಜ್ಯ ಸಂಚಾಲನ ಸಮಿತಿ ಚುಕ್ಕಿ ನಂಜುಂಡಸ್ವಾಮಿ ಮತ್ತು ಕೆ.ಟಿ ಗಂಗಾದರ್ ರವರ ನೇತೃತ್ವದಲ್ಲಿ ಸಹಕಾರಿ ಸಂಘಗಳಲ್ಲಿರುವ ಮಹಿಳೆಯರ ಸ್ತ್ರೀ ಶಕ್ತಿ ಸಾಲ ಮನ್ನಾ ಮಾಡಬೇಕು ಮತ್ತು ಮುಂಬುರುವ ಬಜೆಟ್‍ನಲ್ಲಿ ರೈತ ಪರ ಯೋಜನೆಗಳನ್ನು ಜಾರಿ ಮಾಡಬೇಕೆಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‍ರವರನ್ನು ಬೇಟಿ ಮಾಡಿ ರೈತ ಸಂಘದ ರಾಜ್ಯ ಸಂಚಾಲನಾ ಸಮಿತಿಯಿಂದ ಒತ್ತಾಯಿಸಲಾಯಿತು.
ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ ಮುಂದಿನ ದಿನಗಳಲ್ಲಿ ನಮ್ಮ ರಾಜ್ಯದ ರೈತರು ಬೆಳೆಯುವ ಅಕ್ಕಿಯನ್ನು ಅನ್ನಭಾಗ್ಯ ಯೋಜನೆಗೆ ಬಳಸಿಕೊಂಡರೆ ಬಡವರಿಗೆ ಅನ್ನಬಾಗ್ಯ ರೈತರಿಗೆ ಬೆಲೆ ಬಾಗ್ಯ ಕೊಟ್ಟ ಹಾಗೆ ಆಗುತ್ತದೆ. ಮುಂಬರುವ ಬಜೆಟ್ ನಲ್ಲಿ ರೈತಪರ ಯೋಜನೆಗಳನ್ನು ಜಾರಿ ಮಾಡುವ ಜೊತೆಗೆ ಪ್ರಜಾಯಾತ್ರೆ ಮತ್ತು ಮಹಿಳಾ ಸಮಾವೇಶಗಳಲ್ಲಿ ಮುಖ್ಯಮಂತ್ರಿಗಳು ಮತ್ತು ನೀವು ಸಹಕಾರ ಸಂಘಗಳಲ್ಲಿನ ಎಲ್ಲಾ ಮಹಿಳೆಯರ ಸಾಲ ಮನ್ನಾ ಮಾಡಿ ನಂತರ 1 ಲಕ್ಷ ರೂ ಬಡ್ಡಿ ರಹಿತ ಸಾಲ ನೀಡುತ್ತೇವೆಂದು ಮಹಿಳೆಯರಿಗೆ ಬಹಿರಂಗ ಸಭೆಯಲ್ಲಿ ವಾಗ್ದಾನ ನೀಡಿದ್ದು, ಸರ್ಕಾರ ಬಂದು ಎರಡು ತಿಂಗಳಾದರೂ ಸ್ತ್ರೀಶಕ್ತಿ ಸಾಲ ಮನ್ನಾ ಬಗ್ಗೆ ಚರ್ಚೆ ಮಾಡದೆ ಇರುವುದು ಮಹಿಳೆಯರಿಗೆ ಮಾಡಿದ ಅಪಮಾನವಾಗಿದ್ದು, ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬರಬೇಕಾದರೆ ಮಹಿಳೆಯರೇ ಕಾರಣವಾಗಿದ್ದು, ತಾವುಗಳು ಸ್ತ್ರೀಶಕ್ತಿ ಸಾಲದ ಮನ್ನಾವನ್ನು ಕೂಡಲೇ ಮಾಡಬೇಕೆಂದು ಅಗ್ರಹಿಸಿದರು.
ನಳಿನಿಗೌಡ ಮಾತನಾಡಿ ಮಹಿಳೆಯರು ಕಾಂಗ್ರೇಸ್‍ನ ನಿಮ್ಮ ಮಾತಗೆ ಬೆಲೆ ಕೊಟ್ಟು ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದೇವೆ ಅಧಿಕಾರಕ್ಕೆ ಬಂದ ನಂತರ ಮಹಿಳೆಯರಿಗೆ ಕೊಟ್ಟ ಮಾತು ನಡೆಸಿಕೊಳ್ಳುವುದು ನಿಮ್ಮ ಕರ್ತವ್ಯವಾಗಿದೆ. ಸ್ತ್ರೀ ಶಕ್ತಿ ಸಾಲ ಮಾಡಿರುವವರು ಉದ್ಯಮಿಗಳು ಮತ್ತು ರಾಜಕಾರಣಿಗಳ ಮನೆಯ ಮಹಿಳೆಯರಲ್ಲ, ಹಳ್ಳಿಗಾಡಿನ ಬಡ ಕೂಲಿಕಾರ್ಮಿಕರ ಹೆಣ್ಣು ಮಕ್ಕಳಾಗಿದ್ದು, ನಿಮ್ಮ ಪಕ್ಷದ ನಾನಾಯಕಿ ಕಾರ್ಯಕ್ರಮಕ್ಕೆ ಮಹಿಳೆಯರೇ ಬಲ ತುಂಬಿರುವುದು ಅದನ್ನು ಮರೆತರೆ ಮುಮದಿನ ಚುನಾವಣೆಯಲ್ಲಿ ಮಹಿಳೆಯರು ತಮ್ಮ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತಾರೆ. ನೀವು ಮನ್ನಾ ಮಾಡದೇ ಹೋದರೆ ಸಹಕಾರಿ ಬ್ಯಾಂಕ್‍ಗಳಿಗೂ ನಷ್ಟ ನಿಮ್ಮ ಪಕ್ಷಕ್ಕೂ ತುಂಬಲಾರದ ನಷ್ಟ ಉಂಟಾಗುತ್ತದೆ ಎಂದು ಮನವರಿಕೆ ಮಾಡಿಕೊಡಲಾಯಿತು.
ಸಹಕಾರ ಸೋಸೈಟಿ ಮತ್ತು ಬ್ಯಾಂಕ್ ಸಿಬ್ಬಂದಿ ಈಗಾಗಲೇ ಮಹಿಳೆಯರಿಗೆ ಸಾಲ ವಸೂಲಿ ಹೆಸರಿನಲ್ಲಿ ಕಿರುಕುಳ ಕೊಡಲು ಪ್ರಾರಂಭಿಸಿದ್ದರೂ ಸರ್ಕಾರ ಮೌನವಾಗಿ ಕುಳಿತಿದೆ ಹಾಗೂ ಕೋಲಾರ, ಚಿಕ್ಕಬಳ್ಳಾಪುರ , ತುಮಕೂರು, ಮಂಡ್ಯ, ಸ್ತ್ರೀ ಶಕ್ತಿ ಸಾಲ ಮನ್ನಾ ಮಾಡುವಂತೆ ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದು,ಸಹಕಾರ ಸಿಬ್ಬಂದಿ ಮತ್ತು ಮಹಿಳೆಯರ ನಡುವೆ ಜಟಾಪಟಿಗಳು ನಡೆದು ಗಲಾಟೆಗಳಾಗಿರುವುದು ಗುಪ್ತಚರ ವರದಿಯಿಂದ ನಿಮ್ಮ ಗಮನಕ್ಕೂ ಬಂದಿದೆ. ಆದ್ದರಿಂದ ಕೊಟ್ಟ ಮಾತಿನಂತೆ ಈ ಬಜೆಟ್‍ನಲ್ಲಿ ಮಹಿಳೆಯರ ಸಾಲ ಮನ್ನಾ ಮಾಡುತ್ತೇವೆಂದು ಘೋಷಿಸಬೇಕು.ನೀವು ಮನ್ನಾ ಮಾಡದೇ ಹೋದರೆ ಮಹಿಳೆಯರು ಬೀದಿಗೆ ಇಳಿದು ಸರ್ಕಾರದ ವಿರುದ್ದ ರೊಚ್ಚಿಗೇಳುವುದು ಗ್ಯಾರಂಟಿ ಆಗಿದೆ ಇದರ ಪರಿಣಾಮ ಸರ್ಕಾರದ ಮೇಲೆ ಬೀಳುತ್ತದೆ.ಸಹಕಾರಿ ಬ್ಯಾಂಕ್‍ಗಳು ನೀವು ಕೊಟ್ಟ ಮಾತಿನಿಂದ ದಿವಾಳಿ ಅಂಚಿಗೆ ಬಂದು ನಿಲ್ಲುತ್ತವೆ
ಮನವಿ ಸ್ವೀಕರಿಸಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‍ರವರು ಮಾತನಾಡಿ ನಮ್ಮ ಸರ್ಕಾರ ರೈತರ ಪರ ಮಹಿಳೆಯರ ಪರವಾಗಿದ್ದು, ರೈತರ ಸಮಸ್ಯೆಗಳನ್ನು ಸಂಬಂದಪಟ್ಟವರೊಂದಿಗೆ ಚರ್ಚಿಸಿ ಬಗೆಹರಿಸುವ ಜೊತೆಗೆ ಮಹಿಳೆಯರಿಗೆ ಕೊಟ್ಟ ಮಾತು ಕಾಂಗ್ರೇಸ್ ಸರ್ಕಾರ ಎಂದಿಗೂ ಮರೆಯುವುದಿಲ್ಲ ನಾವು ನೀಡಿರುವ 5 ಗ್ಯಾರಂಟಿ ಯೋಜನೆಗಳು ಮಹಿಳೆಯರಿಗೆ ಹೆಚ್ಚಿನ ಭಾಗ ಮೀಸಲಾಗಿದ್ದು, ಸ್ತ್ರೀ ಶಕ್ತಿ ಸಾಲ ಮನ್ನಾ ಬಗ್ಗೆ ನಾನು ಹಾಗೂ ಮುಖ್ಯಂತ್ರಿಗಳು ಸಚಿವ ಸಂಪುಟದ ಜೊತೆ ಮಹಿಳೆಯರಿಗೆ ಕೊಟ್ಟಿರುವ ಸಾಲ ಮನ್ನಾದ ಭರವಸೆಯ ಬಗ್ಗೆ ಕಾನೂನಾತ್ಮಕವಾಗಿ ಚರ್ಚಿಸುವ ಭರವಸೆ ನೀಡಿದರು.
ನಿಯೋಗದಲ್ಲಿ ರಾಜ್ಯ ಸಂಚಲನಾ ಸಮಿತಿ ಸದಸ್ಯರಾದ ಕೆ.ಟಿ ಗಂಗಾದರ್, ಹಾವೇರಿ ಮಲ್ಲಿಕಾರ್ಜುನ್ ಬಳ್ಳಾರಿ, ಕೋಲಾರ ತಿಮ್ಮಣ್ಣ, ಯಲ್ಲಪ್ಪ, ತುಮಕೂರು ದೇವರಾಜ್, ರಾಮನಗರ ಅನುಸೂಯಮ್ಮ, ಬೆಳಗಾವಿ ಸುರೇಖಾ, ಮೈಸೂರು ಮಂಜುಕಿರಣ್, ವಿದ್ಯಸಾಗರ್, ಚಿಕ್ಕಬಳ್ಳಾಪುರ ಪ್ರತೀಶ್, ಮಂಡ್ಯ ನಾಗಣ್ಣ, ಎಲ್ಲಾ ಸಂಚಲನಾ ಸಮಿತಿ ಸದಸ್ಯರು ಹಾಜರಿದ್ದರು.

ಸ್ವಸಹಾಯ ಸಂಘಗಳ ಸದಸ್ಯರು ನಿಯಮಾನುಸಾರ ಸಂಘದ ವ್ಯವಹಾರ ನಿರ್ವಹಿಸಬೇಕು:ಗೋವಿಂದ ಮೂರ್ತಿ

ಶ್ರೀನಿವಾಸಪುರ: ಸ್ವಸಹಾಯ ಸಂಘಗಳ ಸದಸ್ಯರು ನಿಯಮಾನುಸಾರ ಸಂಘದ ವ್ಯವಹಾರ ನಿರ್ವಹಿಸಬೇಕು ಎಂದು ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆ ಜಿಲ್ಲಾ ಘಟಕದ ಮಿಷನ್ ವ್ಯವಸ್ಥಾಪಕ ಗೋವಿಂದ ಮೂರ್ತಿ ಹೇಳಿದರು.
ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ ಸ್ವಸಹಾಯ ಸಂಘ ಮತ್ತು ಪ್ರದೇಶ ಮಟ್ಟದ ಒಕ್ಕೂಟದ ಸದಸ್ಯರಿಗೆ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಹಕಾರ ಸಂಘ ಸದಸ್ಯರು ಸರ್ಕಾರದ ಸೌಲಭ್ಯ ಪಡೆದು ಜೀವನೋಪಾಯ ಕಂಡುಕೊಳ್ಳುವ ನಿಟ್ಟಿನಲ್ಲಿ ಸಾಂಘಿಕ ಪ್ರಯತ್ನ ನಡೆಸಬೇಕು. ಆ ನಿಟ್ಟಿನಲ್ಲಿ ಗಳಿಕೆ ದಾರಿ ತೋರಿಸುವ ಬಗ್ಗೆ ಹಾಗೂ ಸಂಘ ನಿರ್ವಹಣೆ ಕುರಿತು ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ತರಬೇತಿ ಶಿಬಿರದಲ್ಲಿ ಸ್ವಸಹಾಯ ಸಂಘಗಳಿಗೆ ಸರ್ಕಾರದಿಂದ ದೊರೆಯುವ ಆರ್ಥಿಕ ಸೌಲಭ್ಯ ಹಾಗೂ ಸಂಘಗಳ ನಿರ್ವಹಣೆ ಕುರಿತು ಮಾಹಿತಿ ನೀಡಲಾಯಿತು. ವ್ಯವಹಾರ ಪಾರದರ್ಶಕವಾಗಿ ಇರುವಂತೆ ನೋಡಿಕೊಳ್ಳಲು ಸೂಚಿಸಲಾಯಿತು.
ಪುರಸಭೆ ಕಿರಿಯ ಅಭಿಯಂತರ ವಿ.ಶ್ರೀನಿವಾಸಪ್ಪ, ಕಂದಾಯ ನಿರೀಕ್ಷಕ ಎಣ್.ಶಂಕರ್, ಸದಸ್ಯ ಬಿ.ವೆಂಕಟರೆಡ್ಡಿ, ಮಾಜಿ ಸದಸ್ಯ ರೆಡ್ಡಪ್ಪ ಇದ್ದರು.

ಮಾನವೀಯ ಮೌಲ್ಯ ಬಿತ್ತುವ ಕಾರ್ಯ ನಿರಂತರವಾಗಿ ನಡೆಯಬೇಕು : ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೋಡಿ ರಂಗಪ್ಪ

ಶ್ರೀನಿವಾಸಪುರ: ಮಾನವೀಯ ಮೌಲ್ಯ ಬಿತ್ತುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಗೂ ಶಿಕ್ಷಣ ತಜ್ಞ ಕೋಡಿ ರಂಗಪ್ಪ ಹೇಳಿದರು.
ಪಟ್ಟಣದ ಭೈರವೇಶ್ವರ ವಿದ್ಯಾನಿಕೇತನದ ಸಭಾಂಗಣದಲ್ಲಿ ಕೋಲಾರದ ಕೃಷಿ ಸಂಸ್ಕøತಿ ಕೇಂದ್ರದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ‘ಮರೆತ ದಾರಿಗಳ ಹರಿಕಾರ ಶ್ರೀರಾಮರೆಡ್ಡಿ’ ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ತಜ್ಞ ಎಂ.ಶ್ರೀರಾಮರೆಡ್ಡಿ ಮರೆತ ಮಾನವೀಯ ಪರಂಪರೆಗೆ ಜೀವ ಕೊಟ್ಟ ಚೈತನ್ಯ ಶೀಲ ವ್ಯಕ್ತಿ. ಮಕ್ಕಳಿಗೆ ಅಕ್ಷರದ ಜತೆಗೆ ಆಲೋಚನೆ ಕಲಿಸಿದ ಮೇಷ್ಟ್ರು. ಮಾದರಿ ಖಾಸಗಿ ಶಾಲೆ ಕಟ್ಟಿ, ಪೋಷಕರಿಗೆ ಹೊರೆಯಾಗದಂತೆ, ಸರ್ಕಾರಿ ಶಾಲೆಯಂತೆ ಬೆಳೆಸಿದರು. ಸಮಾಜೋತ್ಪನ್ನ ಕಾರ್ಯಕ್ರಕ್ಕೆ ಮರುಜೀವ ನೀಡಿದರು. ಆ ಮೂಲಕ ವಿದ್ಯಾರ್ಥಿಗಳು ಓದಿನ ಬಳಿಕ ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗುವಂತೆ ಮಾಡಿದರು ಎಂದು ಹೇಳಿದರು.
ನಾಟಕಕಾರ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ಮರೆತ ದಾರಿಗಳ ಹರಿಕಾರ ಶ್ರೀರಾಮರೆಡ್ಡಿ, ನೆಲದ ಗುರುತು ಸರಣಿಯ ಮೊದಲ ಕೃತಿಯಾಗಿದೆ. ಈ ಕೃತಿ ಪ್ರತಿ ಮನೆಯ ದೀಪವಾಗಬೇಕು. ತಮ್ಮ ನಡೆಯ ಮೂಲಕ ಮಕ್ಕಳಲ್ಲಿ ಬದಲಾವರಣೆ ತಂದ ಎಂ.ಶ್ರೀರಾಮರೆಡ್ಡಿ ಶೈಕ್ಷಣಿಕ ಕ್ಷೇತ್ರದಲ್ಲಿ ಭಿನ್ನವಾಗಿ ಕಾಣಿಸುತ್ತಾರೆ. ಅವರ ಆದರ್ಶದ ಬೆಳಕಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.
ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ, ಭೈರವೇಶ್ವರ ವಿಧ್ಯಾನಿಕೇತನದ ಅಭಿವೃದ್ಧಿಯ ಹಿಂದೆ ಶ್ರೀರಾಮರೆಡ್ಡಿ ಅವರ ಶ್ರಮ ಅಡಗಿದೆ. ತಮ್ಮ ಗಳಿಕೆಯ ಹಣ ಹಾಗೂ ದಾನಿಗಳ ನೆರವು ಪಡೆದು ಮಾದರಿ ಶಾಲೆ ನಿರ್ಮಿಸಿದ್ದಾರೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ.ಅದಕ್ಕಾಗಿ ಅವರು ಅಭಿನಂದನಾರ್ಹರು. ಶಾಲೆ ಅಭಿವೃದ್ಧಿಗೆ ಪೂರಕವಾದ ಎಲ್ಲ ನೆರವು ನೀಡಲಾಗುವುದು. ಸಂಸ್ಥೆಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.
ಸಂಸ್ಥೆಯ ನಿರ್ದೇಶಕ ಎ.ವೆಂಕಟರೆಡ್ಡಿ, ಮುಖ್ಯ ಶಿಕ್ಷಕ ವೆಂಕಟರಮಣಾರೆಡ್ಡಿ, ರಂಗಭೂಮಿ ಕಲಾವಿದೆ ಡಾ. ವಿಜಯ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಬಿ.ಗೋಪಾಲಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ಆರ್.ನಾರಾಯಣಸ್ವಾಮಿ, ತಾಲ್ಲೂಕು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವೇಣುಗೋಪಾಲರೆಡ್ಡಿ, ಡಾ. ರಮೇಶ್, ಡಾ. ಯಶಸ್ವಿನಿ ಶ್ರೀರಾಮರೆಡ್ಡಿ ಅವರ ಬದುಕು ಹಾಗೂ ಸೇವೆ ಕುರಿತು ಮಾತನಾಡಿದರು.
ಭೈರವೇಶ್ವರ ವಿದ್ಯಾನಿಕೇತನದ ಸಂಸ್ಥಾಪಕ ಕಾರ್ಯದರ್ಶಿ ಎಂ.ಶ್ರೀರಾಮರೆಡ್ಡಿ, ಆದಿಮ ಸಂಸ್ಥೆಯ ಕೋಮಣ್ಣ, ಹ.ಮಾ.ರಾಮಚಂದ್ರ, ಕೃಷಿ ಸಂಸ್ಕøತಿ ಕೇಂದ್ರದ ಮುಖ್ಯಸ್ಥ ಬೈಚೇಗೌಡ, ಲೇಖಕ ಪನಸಮಾಕನಹಳ್ಳಿ ಆರ್.ಚೌಡರೆಡ್ಡಿ, ಗಾಯಕ ಹುಂಜ ಮುನಿರೆಡ್ಡಿ, ರಾಮಾಂಜಮ್ಮ, ಬೈರಾರೆಡ್ಡಿ, ವೆಂಕಟರಾಮರೆಡ್ಡಿ, ಪ್ರೊ. ಸತೀಶ್‍ಚಂದ್ರಾರೆಡ್ಡಿ, ನರಸಿಂಹಯ್ಯ, ಶಿವಾರೆಡ್ಡಿ, ಪರಮೇಶ್ ಇದ್ದರು.

ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ – ರಕ್ಷಕ- ಶಿಕ್ಷಕ ಸಭೆ


ಕುಂದಾಪುರ: ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಇಲ್ಲಿ ಶಾಲಾ ರಕ್ಷಕ ಶಿಕ್ಷಕ ಸಭೆಯು ಶಾಲಾ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರು ಹಾಗು ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳು ಆಗಿರುವ ಅತೀ ವಂದನೀಯ ಗುರು ಸ್ಟ್ಯಾನಿ ತಾವ್ರೊರವರು ವಹಿಸಿ ಪೋಷಕರಿಂದ ಮಾಹಿತಿಯನ್ನು ಕಲೆಹಾಕಿ ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪೋಷಕರು ಮತ್ತು ಶಿಕ್ಷಕರು ಸಮಾನ ಪಾತ್ರವನ್ನು ವಹಿಸಿಕೊಳ್ಳುತ್ತಾರೆ ಹಾಗೂ ಶಾಲಾ ಗುಣಮಟ್ಟದ ಶಿಕ್ಷಣದ ಬಗ್ಗೆ ಅಧ್ಯಕ್ಷೀಯ ನುಡಿಯನ್ನು ನೀಡಿದರು.

ಮುಖ್ಯ ಅತಿಥಿಗಳಾಗಿ ಕುಂದಾಪುರ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿರುವ ಶ್ರೀಮತಿ ಸುನಿತಾ ಬಾಂಜ್ ರವರುಮಕ್ಕಳಿಗೆ ಪ್ರಾರಂಭದಿಂದಲೇ ಕಲಿಸಬೇಕು. ಮಕ್ಕಳಿಗೆ ಶಿಕ್ಷಕರು ಮತ್ತು ಕುಟುಂಬದಿಂದ ಎನನ್ನು ಕಲಿಯುತ್ತಾರೊ ಅದನ್ನು ಪ್ರತಿನಿಧಿಸುತ್ತಾರೆ ಎಂದು ತಿಳಿಸುತ್ತಾ ಮಕ್ಕಳನ್ನು ಇತರರೊಂದಿಗೆ ಹೋಲಿಸಬಾರದು’ ಎಂದು ಪೋಷಕರಿಗೆ ತಿಳಿಸಿದರು.

ಮುಖ್ಯ ಶಿಕ್ಷಕಿ ತೆರೇಜ್ ಶಾಂತಿಯವರು ಶಾಲೆಯ ನೀತಿ ನಿಯಮಗಳ ಬಗ್ಗೆ ತಿಳಿಸಿದರು. ಶಾಲಾ ವರದಿಯನ್ನು ಸಹ ಶಿಕ್ಷಕಿ ರಮ್ಯಾ ಹಾಗೂ ಸಹ ಶಿಕ್ಷಕ ಓರನ್ ರವರು ವಾಚಿಸಿದರು. ಸಹ ಶಿಕ್ಷಕಿ ಪ್ರತಿಮಾ ಶೆಟ್ಟಿಯವರು ಮುಖ್ಯ ಅತಿಥಿಗಳ ಕಿರು ಪರಿಚಯವನ್ನು ನೀಡಿದರು. ಶ್ರೀಮತಿ ನಿಮಿಷಾರವರು ಅಯವ್ಯಯ ವಾಚಿಸಿದರು, ಸಹ ಶಿಕ್ಷಕಿ ನೀತಾ ಮೆಂಡೋನ್ಸಾ ಸ್ವಾಗತಿಸಿದರ, ಸಹ ಶಿಕ್ಷಕಿ ಪ್ರೀತಿ ಅಂದ್ರಾದೆ ವಂದಿಸಿದರು, ಸಹ ಶಿಕ್ಷಕಿ ರಮ್ಯಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

ಭಂಡಾರ್ಕಾರ್ಸ್‌ ಪದವಿ ಪೂರ್ವ ಕಾಲೇಜು ಮತ್ತು ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ-ವಿಶ್ವ ಯೋಗ ದಿನಾಚರಣೆ

ಕುಂದಾಪುರ: ಜೂನ್ 21ರಂದು ಇಲ್ಲಿನ ಭಂಡಾರ್ಕಾರ್ಸ್‌ ಪದವಿ ಪೂರ್ವ ಕಾಲೇಜು ಮತ್ತು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಎನ್.ಎಸ್.ಎಸ್‌ ಮತ್ತು ಎನ್.ಸಿ.ಸಿ ಘಟಕದ ಸಹಭಾಗಿತ್ವದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಯೋಗದ ಅಗತ್ಯ ಮತ್ತು ಮಹತ್ವದ ಕುರಿತಾಗಿ ಉಪನ್ಯಾಸ ಮತ್ತು ಯೋಗದ ವಿವಿಧ ಆಯಾಮಗಳ ಬಗ್ಗೆ ವಿದ್ಯರ್ಥಿಗಳಲ್ಲಿ ಅರಿವು ಮೂಡಿಸಲು ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿಯ ಆರ್ಟ್ಸ್‌ ಆಫ್‌ ಲೀವಿಂಗ್‌ ಸಂಸ್ಥೆಯ ಶೈಲಜ ಅವರು ಮಾತನಾಡಿ ಸಧೃಡ ಆರೋಗ್ಯಕ್ಕಾಗಿ ಧ್ಯಾನ,ಏಕಾಗ್ರತೆಯನ್ನು ಬೆಳೆಸಿಕೊಳ್ಳಿ,ಹಾಗೂ ಉಸಿರಾಟದ ವಿವಿಧ ಆಯಾಮಗಳನ್ನು ವಿದ್ಯಾರ್ಥಿಗಳಿಗೆ ಸ್ಪಷ್ಟವಾಗಿ ಪರಿಚಯಿಸುತ್ತ, ಶಾಂತಿದಾಯಕ,ನೆಮ್ಮದಿ,ತೃಪ್ತಿಯ ಬದುಕಿಗೆ ಯೋಗ ದಾರಿದೀಪ ಎಂದು ನುಡಿದರು. ಆರ್ಟ್‌ ಆಫ್‌ ಲೀವಿಂಗ್‌ ಕುಂದಾಪುರ ಘಟಕದ ಮಂಜುಶ್ರೀ ಹಾಗೂ ಷಣ್ಮುಖ‌ ಇವರುಗಳು ವಿದ್ಯಾರ್ಥಿಗಳಿಗೆ ಚಟುವಟಿಕೆದಾಯಕವಾದ ವಿವಿಧ ರೀತಿಯ ಯೋಗ ಭಂಗಿಗಳನ್ನು ಪರಿಚಯಿಸಿದರು.
ಈ ಸಂದರ್ಭದಲ್ಲಿ ಪದವಿ ಪೂರ್ವ ಕಾಲೇಜಿನ ಜೀವಶಾಸ್ತ್ರ ಪ್ರಾಧ್ಯಾಪಕಿ ಡಾ.ಸರೋಜ ಎಂ., ಪದವಿ ಕಾಲೇಜಿನ ಎನ್.ಎಸ್.ಎಸ್‌ ಘಟಕದ ಯೋಜನಾಧಿಕಾರಿಗಳಾದ. ಅರುಣ್‌.ಎಸ್‌ ,
ರಾಮಚಂದ್ರ ಆಚಾರಿ, ಮತ್ತು ಎನ್.ಸಿ.ಸಿ ಅಧಿಕಾರಿಗಳಾದ ಶರಣ್‌,ಅಂಜನ್‌ ಹಾಗೂ ಎಲ್ಲಾ ಬೋಧಕ ವೃಂದದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕಿ ರೇಣುಕಾ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.

ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಸಾರ್ವಜನಿಕರಿಗೆ ಅಸಡ್ಡೆ ಬೇಡ. ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಸೋಮಯಾಜಲಹಳ್ಳಿ ರಮೇಶ್‍ಬಾಬು ಅಭಿಪ್ರಾಯ

ಶ್ರೀನಿವಾಸಪುರ, ಜೂ.22ಸರ್ಕಾರಿ ಆಸ್ಪತ್ರೆ ಮತ್ತು ಸರ್ಕಾರಿ ವೈದ್ಯರ ಬಗ್ಗೆ ಸಾರ್ವಜನಿಕರಲ್ಲಿರುವ ಅಸಡ್ಡೆ ಮನೋಭಾವ ದೂರವಾಗಬೇಕು, ವೈದ್ಯಕೀಯ ವೆಚ್ಚ ದುಬಾರಿಯಾಗಿರುವುದರಿಂದ ಹಲವಾರು ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದಾವೆ ಆದ್ದರಿಂದ ಯಾವುದೇ ರೀತಿಯ ಖಾಯಿಲೆಗಳಿದ್ದರೂ ಸರ್ಕಾರಿ ಆಸ್ಪತ್ರೆಗಳಲ್ಲಿ ನುರಿತ ವೈದ್ಯರು ಇದ್ದಾರೆ. ಅಂತಹ ಕಡೆ ವೈದ್ಯಕೀಯ ಸೇವೆ ಪಡೆದರೆ ಉತ್ತಮ ಎಂದು ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಸೋಮಯಾಜಲಹಳ್ಳಿ ರಮೇಶ್‍ಬಾಬು ಅಭಿಪ್ರಾಯಪಟ್ಟರು.
ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಾದ ಸಂಜಯಗಾಂಧಿ ಟ್ರಾಮ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯ ನಿರ್ದೇಶಕರಾದ ನಿರಂಜನಗೌಡ ಮತ್ತು ಸಂಸ್ಥೆಯ ಪ್ರಾದ್ಯಾಪಕ ಹಾಗೂ ಮುಖ್ಯಸ್ಥರಾದ ಎಂ.ಎಸ್. ಮೋಹನ್ ರವರನ್ನು ಸನ್ಮಾನಿಸಿ ಮಾತನಾಡಿದ ಅವರು ಸರ್ಕಾರಿ ಅಧೀನದಲ್ಲಿ ನಡೆಯುವ ಸಂಜಯಗಾಂಧಿ ಆಸ್ಪತ್ರೆಯಲ್ಲಿ ಕಳೆದ 10 ದಿನಗಳಿಂದ ನಾನು ಚಿಕಿತ್ಸೆ ಪಡೆಯುತ್ತಿದ್ದೆ ಆಗ ಕಂಡಂತಹ ಅವರ ಸೇವಾ ಮನೋಭಾವ ಸಾರ್ವಜನಿಕ ಮೆಚ್ಚುಗೆಗೆ ಸಾಕ್ಷಿಯಾಗಿದೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಹಲವಾರು ಖಾಯಿಲೆಗಳಿಂದ ನರಳುವ ಜನರೊಂದಿಗೆ ಬೆರೆತು ಉತ್ತಮ ಚಿಕಿತ್ಸೆ ನೀಡುವುದರ ಜೊತೆಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಸಂಸ್ಥೆಯ ನಿರ್ದೇಶಕರು ಸೇರಿದಂತೆ ಅವರ ಸಿಬ್ಬಂಧಿ ಮಾಡುತ್ತಾರೆ. ಆದ್ದರಿಂದ ನನ್ನ ಕೃತಜ್ಞತೆಯನ್ನು ಸಂಸ್ಥೆಯ ತಂಡಕ್ಕೆ ಸಲ್ಲಿಸಲಾಗಿದೆ ಎಂದರು.
ಸಂಸ್ಥೆಯ ನಿರ್ದೇಶಕ ಎಂ.ಆರ್. ನಿರಂಜನ್‍ಗೌಡ ಮಾತನಾಡಿ ಹಲವಾರು ವರ್ಷಗಳಿಂದ ಈ ಸಂಸ್ಥೆ ಬಡವರು ಮತ್ತು ಉಳ್ಳವರು ಎಂಬ ಬೇಧಬಾವ ತೋರದೆ ಇಲ್ಲಿ ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ನಮ್ಮ ಜವಬ್ದಾರಿ ಅವಧಿಯಲ್ಲಿ ಇನ್ನಷ್ಟು ಸಾರ್ವಜನಿಕ ಸೇವೆ ಮುಂದುವರೆಸಲು ಇಂತಹ ಅಭಿನಂದನೆಗಳು ನಮ್ಮನ್ನು ಪ್ರೇರೆಪಿಸುತ್ತವೆ ಎಂದು ಪ್ರಶಂಸಿಸಿದರು.
ಈ ಸಂಧರ್ಭದಲ್ಲಿ ಕಾಂಗ್ರೇಸ್ ಹಿರಿಯ ಮುಖಂಡ ಸೋಮಯಾಜಲಹಳ್ಳಿ ಸಿ.ಎಸ್. ಪ್ರಸಾದ್, ಸಂಸ್ಥೆಯ ಸಿಬ್ಬಂಧಿಯಾದ ಡಾ|| ಸಿದ್ದೇಶ್ ಪಾಟೀಲ್, ಡಾ|| ಧರಣಿ ಚಿತ್ರ, ಡಾ|| ಎಂ.ಕೆ. ಆನ್ವೀಶ್, ಡಾ|| ಅರ್ಜುನ್, ಡಾ|| ಪ್ರಜ್ವಲ್, ಡಾ|| ಎನ್. ದರ್ಶನ್, ಡಾ|| ಅನಿಲ್ ಇತರರು ಇದ್ದರು.

ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಯೋಗದಿನಾಚರಣೆ :ಯೋಗದಿಂದ ಕಲಿಕೆಯಲ್ಲಿ ಕ್ರಿಯಾಶೀಲತೆ ಸಾಧ್ಯ-ಪ್ರದೀಪ್‍ಕುಮಾರ್

ಕೋಲಾರ:- ಮಾನಸಿಕ, ದೈಹಿಕ ಆರೋಗ್ಯ ಉತ್ತಮಗೊಳ್ಳುವ ಮೂಲಕ ಸದಾ ಕಲಿಕೆಯಲ್ಲಿ ಕ್ರಿಯಾಶೀಲತೆಗೆ ಯೋಗ ಸಹಕಾರಿ ಎಂದು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್ ಕುಮಾರ್ ತಿಳಿಸಿದರು.
ಶಾಲೆಯ ಆವರಣದಲ್ಲಿ ವಿಶ್ವಯೋಗದಿನದ ಅಂಗವಾಗಿ ಮಕ್ಕಳಿಂದ ನಡೆದ ಯೋಗ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಭವಿಷ್ಯದ ದೃಷ್ಟಿಯಿಂದ ವಿದ್ಯಾರ್ಥಿಗಳು ನಿರಂತರವಾಗಿ ಯೋಗಾಭ್ಯಾಸ ಮಾಡಿ, ಇತರರಿಗೂ ತಿಳಿಸಿಕೊಡಿ, ನಿಮ್ಮ ಕಲಿಕೆಯಲ್ಲಿ ಸದಾ ಕ್ರಿಯಾಶೀಲತೆ ತುಂಬಲು ಯೋಗ ಸಹಕಾರಿ ಎಂಬುದನ್ನು ಮರೆಯದಿರಿ ಎಂದು ಕಿವಿಮಾತು ಹೇಳಿದರು.
ಯೋಗ ಜಾತ್ಯಾತೀತವಾದುದು, ಇದಕ್ಕೆ ಪಕ್ಷ,ಜಾತಿ,ವಯಸ್ಸು, ಲಿಂಗ ಬೇಧವಿಲ್ಲ ಪ್ರತಿಯೊಬ್ಬರೂ ಇದನ್ನು ಕಲಿತು ಜೀವನದಲ್ಲಿ ನಿರಂತರವಾಗಿ ಅಳವಡಿಸಿಕೊಳ್ಳಬಹುದಾಗಿದೆ, ವೈಜ್ಞಾನಿಕವಾಗಿಯೂ ಇಂದು ಯೋಗ ತನ್ನ ಸ್ಥಾನ ಗಟ್ಟಿಪಡಿಸಿಕೊಂಡಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ಮನವಿಗೆ ಇಡೀ ವಿಶ್ವವೇ ಸ್ಪಂದಿಸಿದೆ, 200ಕ್ಕೂ ಹೆಚ್ಚು ದೇಶಗಳು ಇಂದು ಯೋಗದಿನ ಆಚರಿಸುತ್ತಿವೆ ಎಂದು ತಿಳಿಸಿದರು.
ಮಕ್ಕಳಿಂದ ಯೋಗ ಪ್ರದರ್ಶನ ಮಾಡಿಸಿದ ದೈಹಿಕ ಶಿಕ್ಷಕಿ ಲೀಲಾ, ಯೋಗಾಭ್ಯಾಸಕ್ಕಿಂತ ಉತ್ತಮವಾದ ವ್ಯಾಯಾಮವೇ ಇಲ್ಲ, ಇದು ದೈಹಿಕ ಆರೋಗ್ಯ ಮಾತ್ರವಲ್ಲ ಮಾನಸಿಕ ಆರೋಗ್ಯಕ್ಕೂ ಹೆಚ್ಚು ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕರಾದ ಸಿದ್ದೇಶ್ವರಿ, ಎಂ.ಆರ್.ಗೋಪಾಲಕೃಷ್ಣ, ಭವಾನಿ, ವೆಂಕಟರೆಡ್ಡಿ,ಶ್ವೇತಾ, ಸುಗುಣ, ಫರೀದಾ, ಸಿ.ಎಲ್.ಶ್ರೀನಿವಾಸಲು, ರಮಾದೇವಿ, ಡಿಚಂದ್ರಶೇಖರ್ ಮತ್ತಿತರರಿದ್ದರು.