HOLY ROSARY CHURCH, KUNDAPUR – 450 th JUBILEE SOUVENIR 2021

ಭಾರತ್ ಸ್ಕೌಟ್ಸ್ ಗೈಡ್ ಸ್ಥಳೀಯ ಸಂಸ್ಥೆ ಕಾರ್ಯಾಲಯ ಉದ್ಘಾಟನೆ

JANANUDI.COM NETWORK

ಕುಂದಾಪುರ, ಜ.11 ಭಾರತ್ ಸ್ಕೌಟ್ಸ್ ಗೈಡ್ ಸ್ಥಳೀಯ ಸಂಸ್ಥೆ ಕುಂದಾಪುರದ ವತಿಯಿಂದ ಸ್ಥಳೀಯ ಸಂಸ್ಥೆಯ ಕಾರ್ಯಾಲಯ ಉದ್ಘಾಟನೆ ಮಾಡಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರ ಇಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಅರುಣ್ ಕುಮಾರ್ ಶೆಟ್ಟಿ ಇವರ ಮಾರ್ಗದರ್ಶನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಒಂದು ಕೊಠಡಿಯನ್ನು ಸ್ಕೌಟ್ ಚಟುವಟಿಕೆಗಳಿಗೆ ನೀಡಿದ್ದರು. ಇದರ ಉದ್ಘಾಟನಾ ಸಮಾರಂಭವು ದಿನಾಂಕ : 11-01-2021ರಂದು ನಡೆಸಿ ಉದ್ಘಾಟನೆಯನ್ನು ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಶ್ರೀ ಸದಾನಂದ ಬೈಂದೂರು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ತಾಲೂಕು ಟಿ.ಪಿ.ಒ.ರವರಾದ ಶ್ರೀ ದತ್ತಾತ್ರೇಯ ನಾಯಕ್, ಪತ್ರಾಂಕಿತ ವ್ಯವಸ್ಥಾಪಕರಾದ ಶ್ರೀ ಕೃಷ್ಣ ಮೂರ್ತಿ ಸರ್, ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಗುಣರತ್ನ, ಸ್ಥಳಿಯ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಕೆ.ಆರ್.ನಾಯಕ್ ಕಾರ್ಯದರ್ಶಿ ರೇಖಾ ಕೆ.ಯು., ಖಜಾಂಚಿ ಶ್ರೀ ವೀರೇಂದ್ರ ಸರ್, ಜಿಲ್ಲಾ ಹಂತದಿಂದ ಶ್ರೀ ಆನಂದ ಅಡಿಗ ಸರ್, ಶ್ರೀ ದಿನಕರ ಪಾಟೀಲ್, ಶ್ರೀ ಕೊಗ್ಗ ಗಾಣಿಗ, ಶ್ರೀಮತಿ ಸುಮನಾ ಶೇಖರ್, ಶ್ರೀ ನಿತಿನ್ ಅಮಿನ್ ಉಪಸ್ಥಿತರಿದ್ದರು.
ಎಲ್ಲಾ ಕುಂದಾಪುರ ವಲಯದ ಎಲ್ಲಾ ಸ್ಕೌಟ್ಸ್ ಗೈಡ್ ಶಿಕ್ಷಕ ಶಿಕ್ಷಕಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ದಳಗಳನ್ನು ನೊಂದಣಿ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಕೊಗ್ಗ ಗಾಣಿಗರು ಎಲ್ಲರನ್ನು ಸ್ವಾಗತಿಸಿದರು. ಶ್ರೀ ಆನಂದ ಅಡಿಗ ಸರ್ ಅವರು ಧನ್ಯವಾದಗಳನ್ನು ಸಲ್ಲಿಸಿ, ಕಾರ್ಯಕ್ರಮವನ್ನು ಶ್ರೀ ಸದಾನಂದ ಶೆಟ್ಟಿ ಸ್ಕೌಟ್ ಮಾಸ್ಟರ್ ಇವರು ನಿರೂಪಿಸಿದರು.

ಗ್ರಾ.ಪಂ ಸದಸ್ಯ ನಂಜುಂಡಗೌಡರಿಗೆ ಸನ್ಮಾನ – ಸಹಕಾರಿ ತತ್ವದಡಿ ಕೆಲಸ ಮಾಡಿ-ಗೋಪಾಲಕೃಷ್ಣ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಸಹಕಾರ ತತ್ವದಡಿ ನಂಬಿಕೆಯಿಟ್ಟು ಕೆಲಸ ಮಾಡೋಣ ಸಂಘದಲ್ಲಿ ಭ್ರಷ್ಟತೆ ಇಣುಕಿ ನೋಡದಂತೆ ಎಚ್ಚರವಹಿಸುವ ಮೂಲಕ ಸದೃಢಗೊಳಿಸೋಣ ಎಂದು ಗೋಲ್ಡ್‍ಪೀಲ್ಡ್ ಸೌಹಾರ್ದ ಕ್ರೆಡಿಟ್ ಕೋ-ಆಪರೇಟೀವ್ ಸೊಸೈಟಿ ಅಧ್ಯಕ್ಷ ಕೆ.ಬಿ.ಗೋಪಾಲಕೃಷ್ಣ ತಿಳಿಸಿದರು.
ಸೊಸೈಟಿಯಲ್ಲಿ ನಡೆದ ಆಡಳಿತ ಮಂಡಳಿಯ ಮಾಸಿಕ ಸಭೆಯಲ್ಲಿ ಸಂಘದ ನಿರ್ದೇಶಕರೂ ಆಗಿದ್ದು, ಇದೀಗ ಅರಾಭಿಕೊತ್ತನೂರು ಗ್ರಾ.ಪಂ ಸದಸ್ಯರಾಗಿ ಆಯ್ಕೆಯಾಗಿರುವ ಎ.ಎಸ್.ನಂಜುಂಡಗೌಡರನ್ನು ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.
ನಮ್ಮ ಸಹಕಾರ ಸಂಘ ಇನ್ನೂ ಬೆಳೆಯುತ್ತಿರುವ ಕೂಸು, ಅದನ್ನು ಆರ್ಥಿಕವಾಗಿ ಸದೃಢಗೊಳಿಸುವ ಸಂಕಲ್ಪದೊಂದಿಗೆ ಎಲ್ಲರೂ ಕೆಲಸ ಮಾಡುತ್ತಿದ್ದೇವೆ, ಇಲ್ಲಿ ಒಂದು ನಯಾಪೈಸೆ ಭ್ರಷ್ಟತೆಗೆ ಅವಕಾಶವಿಲ್ಲದಂತೆ ನಡೆದುಕೊಂಡಿದ್ದೇವೆ ಎಂದರು.
ಸಂಘದಲ್ಲಿ ಎಲ್ಲಾ ವಿದ್ಯಾವಂತರು, ನಿವೃತ್ತು ಪ್ರಾಧ್ಯಾಪಕರು, ಪ್ರಾಂಶುಪಾಲರೇ ಹೆಚ್ಚಿನ ಸಂಖ್ಯೆಯಲ್ಲಿ ನಿರ್ದೇಶಕರಾಗಿದ್ದು, ಸಂಘದಲ್ಲಿ ಯಾವುದೇ ದುರ್ವವ್ಯವಾರಗಳಿಗೆ ಅವಕಾಶವಿಲ್ಲ ಎಂದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಶ್ರೀರಾಮ್,ಕಾನೂನು ಸಲಹೆಗಾರರಾದ ಟಿ.ಜಿ.ಮನ್ಮಥರೆಡ್ಡಿ, ನಿರ್ದೇಶಕರಾದ ಸುವರ್ಣರೆಡ್ಡಿ, ಮುನಿರಾಜು, ವೆಂಕಟರಾಜು, ಕೆ.ವಿ.ಮುನಿವೆಂಕಟಪ್ಪ, ನಂಜುಂಡಗೌಡ, ರೂಪ್‍ಕುಮಾರ್, ಬಿ.ಜಿ.ಶ್ರೀದೇವಿ ಲಕ್ಷ್ಮೀದೇವಿ, ರಾಮಾನಾಯಕ್ ಮತ್ತಿತರರು ಉಪಸ್ಥಿತರಿದ್ದರು.

ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ – ಎಸ್. ದಿನಕರ ಶೆಟ್ಟಿಯವರಿಗೆ ನುಡಿನಮನ

JANANUDI.COM NETWORK

ಕುಂದಾಪುರ,ಜ.9: ಇತ್ತೀಚೆಗೆ ಅಗಲಿದ ಹಿರಿಯ ಕಾಂಗ್ರೆಸ್ ನಾಯಕ, ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾದ, ಪ್ರಾಥಮಿಕ  ಸಹಕಾರಿ ಕುಂದಾಪುರ ಕ್ರಷಿ ಮತ್ತು ಗ್ರಾಮೀಣಾಭಿವ್ರದ್ದಿ ಬ್ಯಾಂಕಿನ ಅಧ್ಯಕ್ಷರಾಗಿದ್ದ  ಎಸ್. ದಿನಕರ ಶೆಟ್ಟಿಯವರಿಗೆ ಇಂದು ಶನಿವಾರ ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ನುಡಿನಮನಸಲ್ಲಿಸಲಾಯಿತು.

“ಜನನ ಮತ್ತು ಮರಣದ ನಡುವೆ ವ್ಯಕ್ತಿಯ ಜೀವನದಲ್ಲಿ ಸಾಧನೆಗಳು ಶಾಶ್ವತವಾಗಿ ಉಳಿಯುತ್ತವೆ. ನಿಧನರಾದ ದಿನಕರ್ ಶೆಟ್ಟಿಯವರ ಸರಳತೆ, ಸೌಮ್ಯತೆ, ಪ್ರಾಮಾಣಿಕತೆ ಮತ್ತು ಬದ್ಧತೆ ಕ್ರಷಿ ಪರ ಕಾಳಜಿ ಅವರನ್ನು ಶಾಶ್ವತವಾಗಿಸುತ್ತದೆ” ಮಾಜಿ ಸಚಿವ ವಿನಾಯಕುಮಾರ್ ಸೊರಕೆ ಅವರು ನುಡಿ ನಮನ ಸಲ್ಲಿಸುತ್ತಾ ’ ದಿನಕರ್ ಶೆಟ್ಟಿಯವರು ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನಃಸ್ಥಾಪನೆ,ಅವರ ಕನಸಾಗಿತ್ತು. ಕಬ್ಬು ಬೆಳೆಗಾರರ ​​ಬಗ್ಗೆ ಉತ್ತಮ ಆಲೋಚನೆ,ರೈತ ಪರ ಚಿಂತನೆಗಳಿಂದ ತಾಲ್ಲೂಕಿನಾದ್ಯಂತ್ತ ಅವರು ಅಪಾರ ಜನರ ಗೌರವವನ್ನು ಪಡೆದವರು’ ಎಂದು ಹೇಳಿದರು.

   ಮಾಜಿ ಲಯನ್ಸ್ ಗವರ್ನರ್, ಉದ್ಯಮಿ ಜಯಕಾರ ಶೆಟ್ಟಿ ಮಾತನಾಡಿ ’ದಿನಕರ್ ಶೆಟ್ಟಿಯವರ ಕೆಲಸ ಯುವಜನರಿಗೆ ಒಂದು ಮಾದರಿ. ರೈತರ ಮೂಲಕ ಸಾಕಷ್ಟು ಪ್ರಯೋಗಗಳನ್ನು ಮಾಡುವ ಮೂಲಕ ಯಶಸ್ವಿಯಾಗಿದ್ದರು’ ಎಂದು ಹೇಳಿದರು. ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಲ್ಯಾಡಿ ಶಿವರಾಮ್ ಶೆಟ್ಟಿ ಮಾತನಾಡುತ್ತಾ, ದಿನಕರ್ ಶೆಟ್ಟಿ ಯಾವಾಗಲೂ ಸಹಕಾರಿ ಕ್ಷೇತ್ರದಲ್ಲಿ ಜನರ ಹೃದಯದಲ್ಲಿ ಉಳಿಯುತ್ತಾರೆ. ಅವರು 30 ವರ್ಷಗಳ ಕಾಲ ಪಿಎಲ್‌ಡಿ ಬ್ಯಾಂಕ್‌ನ ನಿರ್ದೇಶಕರಾಗಿ, 25 ವರ್ಷಗಳ ಅಧ್ಯಕ್ಷರಾಗಿ ಕಾಲ ಸೇವೆ ಸಲ್ಲಿಸಿದವರಾಗಿದ್ದು ಕಾಂಗ್ರೆಸ್ ಪಕ್ಷದಲ್ಲೂ ಅವರ ಸೇವೆ ಅಪಾರ ಮತ್ತು ವಿಶಿಷ್ಟವಾಗಿತ್ತು’ ಎಂದು ಅವರು ಹೇಳಿದರು.ಸಭೆಯ ಅಧ್ಯಕ್ಷತೆಯನ್ನು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ವಹಿಸಿದ್ದರು.

ಕಾಂಗ್ರೆಸ್ ಮುಖಂಡ ಬಿ.ಅವರ್ಷೆ ಸುಧಾಕರ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೋಲ್ಕೆಬೈಲು ಕಿಶನ್ ಹೆಗ್ಡೆ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ಯಾಮಲಾ ಭಂಡಾರಿ ನುಡಿನಮನ ಸಲ್ಲಿಸಿದರು. ಕೆಂಚನೂರು ಸೋಮಶೇಖರ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ವಿ.ಪುತ್ರನ್ ಇನ್ನಿತರರು ಉಪಸ್ಥಿತರಿದ್ದರು.

ವಿಕಾಸ್ ಹೆಗ್ಡೆ ಕಾರ್ಯಕ್ರಮವನ್ನು ನಡೆಸಿದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದಾ ಕ್ರಾಸ್ತಾ ಸ್ವಾಗತಿಸಿದರು, ಖಜಾಂಚಿ ನಾರಾಯಣ ಆಚಾರ್ ವಂದಿಸಿದರು.

ಬಿಎಸ್‍ಪಿ ಪದಾಧಿಕಾರಿಗಳು ಪಕ್ಷದ ಸಂಘಟನೆಗೆ ಮೊದಲ ಆದ್ಯತೆ ನೀಡಬೇಕು : ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಬಿಎಸ್‍ಪಿ ಪದಾಧಿಕಾರಿಗಳು ಪಕ್ಷದ ಸಂಘಟನೆಗೆ ಮೊದಲ ಆದ್ಯತೆ ನೀಡಬೇಕು ಎಂದು ಪಕ್ಷದ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ಬಿಎಸ್‍ಪಿ ಕಚೇರಿ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಗ್ರಾಮ ಪಂಚಾಯಿತಿ ಸೇರಿದಂತೆ ವಿವಿಧ ಹಂತದ ಚುನಾವಣೆಗಳಲ್ಲಿ ಸ್ಪರ್ಧಿಸಿ ಗೆಲ್ಲುವುದು ಹಾಗೂ ರಾಜ್ಯದಲ್ಲಿ ಅಧಿಕಾರ ಸ್ಥಾನಕ್ಕೆ ಏರುವುದು ಪಕ್ಷದ ಉದ್ದೇಶವಾಗಿದೆ. ಅದಕ್ಕೆ ಪೂರಕವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಸ್ವಾತಂತ್ರ್ಯ ಬಂದಾಗಿನಿಂದ ಅಧಿಕಾರ ನಡೆಸಿದ ಬೇರೆ ಬೇರೆ ಪಕ್ಷಗಳು ಬಡತನ ನಿವಾರಣೆ ಮಾಡುವಲ್ಲಿ ವಿಫಲವಾಗಿವೆ. ಮೂಲ ಸೌಕರ್ಯ ಕಲ್ಪಿಸಲು ಸಾಧ್ಯವಾಗಿಲ್ಲ. ಇಂಥ ಸಂದರ್ಭದಲ್ಲಿ ಮತದಾರರ ಒಲವು ಗಳಿಸಿದರೆ ಸಮಾಜದ ಎಲ್ಲ ವರ್ಗದ ಜನರಿಗೂ ಮೂಲ ಸೌಕರ್ಯ ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಜ.15 ರಂದು ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರ ಜನ್ಮದಿನಾಚರಣೆ ಆಚರಿಸಲಾಗುವುದು. ಅದಕ್ಕೆ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಬೇಕಾದ ಆರ್ಥಿಕ ಸಂಪನ್ಮೂಲ ಸಂಗ್ರಹಿಸಬೇಕು. ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಹೇಳಿದರು.
ಬಿಎಸ್‍ಪಿ ರಾಜ್ಯ ಘಟಕದ ಉಸ್ತುವಾರಿ ಮಾಯಸಂದ್ರ ಮುನಿಯಪ್ಪ ಪಕ್ಷದ ಸಂಘಟನೆ ಬಲಪಡಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾತನಾಡಿದರು.
ಮುಖಂಡರಾದ ನಾಗಪ್ಪ, ಅಶೋಕ ಚಕ್ರವರ್ತಿ, ಎಂ.ಜಿ.ಜಯಪ್ರಕಾಶ್, ಎಚ್.ಸಿ.ರಾ
ಜು, ಮಂಜಲನಗರ ಚಂದ್ರಪ್ಪ, ಚಂಗಲರಾಯಶೆಟ್ಟಿ ಇದ್ದರು.


ಯಾವುದೇ ಅಭಿವೃದ್ಧಿ ಕಾರ್ಯವನ್ನು ಅಡ್ಡಿಪಡಿಸಿಲ್ಲ್ಲಆಪಾನೆ ಸತ್ಯಾಂಶವಲ್ಲ ಜೆಡಿಎಸ್ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಯಾವುದೇ ಅಭಿವೃದ್ಧಿ ಕಾರ್ಯವನ್ನು ಅಡ್ಡಿಪಡಿಸಿಲ್ಲ್ಲ. ಅಡ್ಡಿಪಡಿಸಿರುವುದಾಗಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಮಾಡಿರುವ ಆಪಾನೆಯಲಿಸತ್ಯಾಂಶವಿಲ್ಲ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ಜೆಡಿಎಸ್ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ತಾಲ್ಲೂಕಿನ ಸೋಮಯಾಜಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಿಗೆ ಹೆಚ್ಚು ಮತಗಳು ಬಂದಿರುವುದನ್ನು ಸಹಿಸಲಾಗದೆ, ಅಲ್ಲಿ ಏರ್ಪಡಿಸಲಾಗಿದ್ದ ಸಮಾರಂಭವೊಂದರಲ್ಲಿ ನನ್ನ ವಿರುದ್ಧ ಮಾತನಾಡಿದ್ದಾರೆ ಎಂದು ಹೇಳಿದರು.
ಮತದಾರರಲ್ಲಿ ಮೌಲ್ಯ ಕುಸಿದಿದೆ ಎಂದು ಹೇಳುವುದರ ಮೂಲಕ, ಮತದಾರರಿಗೆ ಅವಮಾನ ಮಾಡಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಮತ ನೀಡದ ಮತದಾರರನ್ನು ಗಮನದಲ್ಲಿಟ್ಟುಕೊಂಡು ಹಾಗೆ ಹೇಳಿದ್ದಾರೆ. ಅವರ ಮಾತು ಖಂಡನೀಯ ಎಂದು ಹೇಳಿದರು.
ಎತ್ತಿನ ಹೊಳೆ ಯೋಜನೆ ಜಾರಿ ಹಾಗೂ ಸ್ತ್ರೀ ಶಕ್ತಿ ಸಂಘಗಳಿಗೆ ಸಾಲ ನೀಡುವ ಬಗ್ಗೆ ವಿರೋಧ ವ್ಯಕ್ತಿಪಡಿಸಿಲ್ಲ. ಡಿಸಿಸಿ ಬ್ಯಾಂಕ್ ವತಿಯಿಂದ ಫಲಾನುಭವಿಗಳಿಗೆ ಬಡ್ಡಿರಹಿತ ಸಾಲ ನೀಡಲಾಗುತ್ತಿದೆ. ಆ ಹಣ ಯಾರಪ್ಪನದೂ ಅಲ್ಲ. ಹಣವನ್ನು ಅರ್ಹ ಫಲಾನುಭವಿಗಳಿಗೆ ನಿಯಮಾನುಸಾರ ವಿತರಿಸುವಂತೆ ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದರು.
ಕೆಸಿ ವ್ಯಾಲಿ ಯೋಜನೆ ಜಿಲ್ಲಾಧಿಕಾರಿಯಾಗಿದ್ದ ಡಿ.ಕೆ.ರವಿ ಅವರ ಕನಸಿನ ಕೂಸು. ಆದರೆ ಶಾಸಕ ಕೆ.ಆರ್.ರಮೇಶ್ ಕುಮಾರ್ ತಮ್ಮದೇ ಕೂಸು ಎಂಬಂತೆ ಹೆಗಲ ಮೇಲೆ ಹೊತ್ತು ತಿರುಗುತ್ತಿದ್ದಾರೆ. ಯೋಜನೆಗೆ ಟೆಂಡರ್ ಪ್ರಕ್ರಿಯೆ ಆದ ಮೇಲೆ ಅವರ ಪ್ರವೇಶವಾಯಿತು. ಯೋಜನೆ ಜಾರಿಗೆ ಆಗ ಮುಖ್ಯ ಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರಲ್ಲಿ ನಾನೂ ಮನವಿ ಮಾಡಿದ್ದೆ ಎಂದು ಹೇಳಿದರು.
ರಮೇಶ್ ಕುಮಾರ್ ಅವರು ನನ್ನನ್ನು ದೇವರ ಮುಂದೆ ಪ್ರಮಾಣ ಮಾಡಲು ಹೇಳಿದ್ದಾರೆ. ನನಗೆ ಜನರೇ ದೇವರು. ಬಹಿರಂಗ ಚರ್ಚೆಗೆ ಬರಲಿ, ಯಾರು ಏನೆಂಬುದು ತಿಳಿಯುತ್ತದೆ ಎಂದು ಹೇಳಿದರು.
ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್, ಉಪಾಧ್ಯಕ್ಷೆ ಆಯಿಷಾ ನಯಾಜ್, ಸದಸ್ಯ ಬಿ.ವೆಂಕಟರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯ ಗಣೇಶ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಮಂಜುನಾಥರೆಡ್ಡಿ, ರಾಜಶೇಖರರೆಡ್ಡಿ, ಮುಖಂಡರಾದ ಪೂಲ ಶಿವಾರೆಡ್ಡಿ, ಬಿ.ಎಲ್.ಸೂರ್ಯನಾರಾಯಣ, ಕಾರ್ ಬಾಬು, ರವಿ, ಅಪ್ಪೂರು ರಾಜು ಆನಂದ್, ಹೋಳೂರು ಗೋಪಾಲಗೌಡ ಇದ್ದರು
.

ಆರೋಗ್ಯ ಇಲಾಖೆ ಕೊರೊನಾ ವಿರುದ್ಧ ಲಸಿಕೆ ನೀಡಲು ಅಗತ್ಯದ ಸಿದ್ಧತೆ ಮಾಡಿಕೊಳ್ಳಬೇಕು: ಜಿಲ್ಲಾಧಿಕಾರಿ ಸಿ.ಸತ್ಯಭಾಮ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಆರೋಗ್ಯ ಇಲಾಖೆ ಸಿಬ್ಬಂದಿ ಕೊರೊನಾ ವಿರುದ್ಧ ಲಸಿಕೆ ನೀಡಲು ಅಗತ್ಯವಾದ ಸಿದ್ಧತೆ ಮಾಡಿಕೊಳ್ಳಬೇಕು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಸೂಚಿಸಿದರು.
ಪಟ್ಟuದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿ ಕೊರೊನಾ ವಿರುದ್ಧ ಲಸಿಕೆ ನೀಡಲು ಮಾಡಿಕೊಂಡಿರುವ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಮಾತನಾಡಿ, ಕೊರೊನಾ ವಿರುದ್ಧ ಲಸಿಕೆ ನೀಡುವುದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಸಂಬಂಧಪಟ್ಟ ಸಿಬ್ಬಂದಿ ಸೇವಾ ಮನೋಭಾವದಿಂದ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರಕಟಿಸಲಾಗಿರುವ ಯೋಜನೆಯಂತೆ ಮೊದಲ ಹಂತದಲ್ಲಿ ನಿಗದಿತ ಅವಧಿಯಲ್ಲಿ ಎರಡು ಲಸಿಕೆ ನೀಡಲಾಗುವುದು. ಆಶಾ ಕಾರ್ಯಕರ್ತೆಯರು, ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಆದ್ಯತೆ ಮೇರೆಗೆ ಮೊದಲು ಲಸಿಕೆ ನೀಡಲಾಗುವುದು. ತಾಲ್ಲೂಕಿನಲ್ಲಿ ಲಸಿಕೆ ನೀಡಲು 5 ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡದಲ್ಲೂ 5 ಮಂದಿ ವೈದ್ಯಕೀಯ ಸಿಬ್ಬಂದಿ ಇರುತ್ತಾರೆ. ಈ ತಂಡಗಳಿಗೆ ದಿನವೊಂದಕ್ಕೆ ತಲಾ 100 ಮಂದಿಗೆ ಲಸಿಕೆ ಹಾಕುವುದನ್ನು ನಿಗದಿಪಡಿಸಲಾಗಿದೆ ಎಂದು ಹೇಳಿದರು.
ತಾಲ್ಲೂಕಿನಲ್ಲಿ ಮೊದಲ ಹಂತದಲ್ಲಿ 1100 ಮಂದಿಗೆ ಕೊರೊನಾ ವಿರುದ್ಧ ಲಸಿಕೆ ನೀಡಲು ಯೋಜಿಸಲಾಗಿದೆ. ಈ ಕಾರ್ಯವನ್ನು ಎರಡು ದಿಗಳಲ್ಲಿ ಮುಗಿಸಲಾಗುವುದು ಎಂದು ಹೇಳಿದರು.
ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್, ಜಿಲ್ಲಾ ಕ್ಷಯರೋಗ ತಜ್ಞ ಡಾ. ಜನದೀಶ್, ತಾಲ್ಲೂಕು ವೈದ್ಯಾಧಿಕಾರಿ ಎಂ.ಸಿ.ವಿಜಯ, ಆಸ್ಪತ್ರೆ ಆಡಳಿತಾಧಿಕಾರಿ ಡಾ.ಜಿ.ಎಸ್.ಶ್ರೀನಿವಾಸ್, ವೈದ್ಯಾಧಿಕಾರಿಗಳಾದ ಡಾ. ಸಾದಿಕ್, ಡಾ.ಅಮರಿನ್, ಆರೋಗ್ಯ ಸಿಬ್ಬಂದಿ ಲಿಡಿಯೋ, ಹರೀಶ್, ಶಿವಕುಮಾರ್, ಪ್ರಶಾಂತ್, ಕೆವಿಸಿ ರೆಡ್ಡಿ, ಮೆಹಬೂಬ್, ನಾಗರಾಜ್ ಇದ್ದರು.

ಅರಹಳ್ಳಿಯಲ್ಲಿ 37 ಹೊಸ ಮತದಾರರ ನೋಂದಣಿ ಪರಿಶೀಲನೆ ದೇಶದ ಅಭಿವೃದ್ದಿಗಾಗಿ ಮತದಾನದ ಕರ್ತವ್ಯ ಮರೆಯದಿರಿ-ಸತ್ಯಭಾಮ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ದೇಶದ ಅಭಿವೃದ್ದಿಯ ದೃಷ್ಟಿಯಿಂದ ಮತದಾನ ಕರ್ತವ್ಯವೆಂದು ಭಾವಿಸಿ ಉತ್ತಮ ನಾಯಕನ ಆಯ್ಕೆಗೆ ನಿಮ್ಮ ಪ್ರತಿಯೊಂದು ಮತವೂ ಮೌಲ್ಯವುಳ್ಳದ್ದು ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ತಿಳಿಸಿದರು.
ತಾಲ್ಲೂಕಿನ ಅರಹಳ್ಳಿ ಒಂದೇ ಗ್ರಾಮದ ಮತಗಟ್ಟೆಯಲ್ಲಿ ಪ್ರಸಕ್ತ ಸಾಲಿನಲ್ಲಿ 37 ಮಂದಿ ಹೊಸ ಮತದಾರರು ನೋಂದಣಿಯಾಗಿರುವ ಕುರಿತು ಪರಿಶೀಲನೆ ನಡೆಸಲು ಭೇಟಿ ನೀಡಿದ್ದ ಅವರು ಯುವ ಮತದಾರರನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಡಿಸಿಯವರು ಬರುತ್ತಾರೆಂಬ ಹಿನ್ನಲೆಯಲ್ಲಿ ಮತಗಟ್ಟೆ ಅಧಿಕಾರಿ ಹಾಗೂ ಶಿಕ್ಷಕ ಎಂ.ವೆಂಕಟೇಶ್ 37 ಮಂದಿ ಹೊಸ ಮತದಾರರನ್ನು ಮತಗಟ್ಟೆಯೂ ಆಗಿರುವ ಶಾಲೆಗೆ ಆಹ್ವಾನಿಸಿದ್ದರು.

ಪ್ರಥಮ ಬಾರಿಗೆಮತ ಖುಷಿ ತಂತು
ಜಿಲ್ಲಾಧಿಕಾರಿಗಳು ಪ್ರಥಮ ಬಾರಿ ಮತಚಲಾಯಿಸಿದ್ದಕ್ಕಾಗಿ ನಿಮಗೆ ಆದ ಅನುಭವ ತಿಳಿಸಿ ಎಂದು ಕೇಳಿದಾಗ ಯುವಕರು ನಮಗೆ ಅತ್ಯಂತ ಖುಷಿಯಾಗಿದೆ, ನಮ್ಮ ಹಕ್ಕು ಚಲಾಯಿಸುವ ಅವಕಾಶ ಸಿಕ್ಕಿದ್ದು, ಸಂತಸ ತಂದಿದೆ ಎಂದು ಉತ್ತರಿಸಿದರು.
ಹಣ, ಆಮಿಷಗಳಿಗೆ ಬಲಿಯಾಗುತ್ತೀರಾ? ಎಂಬ ಪ್ರಶ್ನೆಗೆ, ಖಂಡಿತಾ ಇಲ್ಲ, ನಮ್ಮ ಮತವನ್ನು ಮಾರಿಕೊಳ್ಳುವುದಿಲ್ಲ, ನಮಗೆ ಪಕ್ಷ ಬೇಕಾಗಿಲ್ಲ, ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡುವ ಪ್ರಯತ್ನವಾಗಿ ಮತ ಚಲಾಯಿಸುತ್ತೇವೆ ಎಂದು ಯುವಕರು ತಿಳಿಸಿದರು.
ಜಿಲ್ಲಾಧಿಕಾರಿಗಳು ಯುವಕರನ್ನುದ್ದೇಶಿಸಿ ಮಾತನಾಡಿ, ಮತದಾನ ಪವಿತ್ರವಾದ ಕೆಲಸ, ಇದರಿಂದ ವಿಮುಖರಾಗಬಾರದು ಎಂದು ಕಿವಿಮಾತು ಹೇಳಿ, ಚುನಾವಣಾ ಆಯೋಗ ಶೇಕಡಾವಾರು ಮತದಾನ ಹೆಚ್ಚಬೇಕು ಎಂಬ ಆಶಯ ಹೊಂದಿದೆ, ಪ್ರತಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಮತಗಟ್ಟೆಗೆ ಬರಬೇಕು ಎಂದರು.

ಅದರಲ್ಲೂ ವಿದ್ಯಾವಂತರೇ ಮತದಾನದ ದಿನ ರಜೆ ಸಿಕ್ಕಿತೆಂದು ಪ್ರವಾಸ ತೆರಳುವ ಮನಸ್ಥಿತಿ ಒಳ್ಳೆಯ ಲಕ್ಷಣವಲ್ಲ, ಇದು ದೇಶದ ಅಭಿವೃದ್ದಿಗಾಗಿ ಓರ್ವ ನಾಯಕನ ಆಯ್ಕೆಗೆ ನಿಮಗೆ ಸಿಕ್ಕ ಅವಕಾಶದಿಂದ ವಂಚಿತವಾದಂತೆ ಎಂದು ತಿಳಿಸಿದರು.
ಒಂದೇ ಗ್ರಾಮದಲ್ಲಿ 37 ಮತದಾರರು ಸೇರ್ಪಡೆಯಾಗಿರುವುದು ಊಹಾಪೋಹಗಳಿಗೆ ಅವಕಾಶ ನೀಡಿದ್ದು, ಇದೀಗ ಮತದಾರರನ್ನು ನೋಡಿ, ನಿಮ್ಮೊಂದಿಗೆ ಮಾತನಾಡಿದ ನಂತರ ತಪ್ಪಾಗಿಲ್ಲ ಎಂದು ಗೊತ್ತಾಗಿದೆ, ನೀವು ಪ್ರತಿ ಚುನಾವಣೆಯಲ್ಲೂ ಮತದಾನ ಮಾಡುವುದನ್ನು ಮರೆಯದಿರಿ ಎಂದು ಡಿಸಿಯವರು ತಿಳಿಸಿದರು.
ಮತಗಟ್ಟೆ ಅಧಿಕಾರಿ ಎಂ.ವೆಂಕಟೇಶ್ ಎಲ್ಲಾ 37 ಹೊಸ ಮತದಾರರನ್ನು ಆಹ್ವಾನಿಸಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ದಾಖಲೆ ತೋರಿಸಿದ ನಂತರ ಊಹಾಪೋಹಗಳಿಗೆ ತೆರೆ ಬಿತ್ತು.
ಈ ಸಂದರ್ಭದಲ್ಲಿ ಚುನಾವನಾ ತಹಸೀಲ್ದಾರ್ ನಾಗವೇಣಿ, ಗ್ರಾ.ಪಂ ನೂತನ ಸದಸ್ಯ ಜಗದೀಶ್, ಸಿಬ್ಬಂದಿ ಗೌತಮ್, ಗ್ರಾಮ ಲೆಕ್ಕಿಗ ಗೌತಮ್, ಮುಖ್ಯ ಶಿಕ್ಷಕ ನಾರಾಯಣಸ್ವಾಮಿ, ಶಿಕ್ಷಕರಾದ ಸಾವಿತ್ರಮ್ಮ, ಮುರಳಿ,ನಾಗರತ್ನಮ್ಮ ಮತ್ತಿತರರು ಹಾಜರಿದ್ದರು.

ಕೋಲಾರ ತಾಲ್ಲೂಕಿನ ಅರಹಳ್ಳಿ ಒಂದೇ ಗ್ರಾಮದ ಮತಗಟ್ಟೆಯಲ್ಲಿ ಪ್ರಸಕ್ತ ಸಾಲಿನ ಮತದಾರರ ಪಟ್ಟಿಗೆ ಸೇರ್ಪಡೆ ಹೊಂದಿದ ಹೊಸ ಮತದಾರರೊಂದಿಗೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ.

ಶ್ರೀನಿವಾಸಪುರ ಬಡಾವಣೆಯಲ್ಲಿ ಕೊಳವೆ ಬಾವಿ ಪರಿಶೀಲನೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರದ ವೆಂಕಟೇಶ್ವರ ಬಡಾವಣೆಯಲ್ಲಿ ಪುರಸಭೆ ವತಿಯಿಂದ ಹೊಸದಾಗಿ ನಿರ್ಮಿಸಲಾಗಿರುವ ಕೊಳವೆ ಬಾವಿಯನ್ನು ಸ್ಥಳೀಯ ಮುಖಂಡರಾದ ಶ್ರೀನಿವಾಸರೆಡ್ಡಿ, ಈರುಳ್ಳಿ ರಂಗಪ್ಪ, ಸುರೇಂದ್ರ, ಶ್ರೀನಾಥ್, ಬಾಬು ಪರಿಶೀಲಿಸಿದರು.

ರೈತರು ಮಾವಿಗೆ ಪರ್ಯಾಯವಾಗಿ ಗೋಡಂಬಿ ಬೆಳೆದು ತಮ್ಮ ಆರ್ಥಿಕ ಸ್ಥಿತಿ ಉತ್ತಮ ಪಡಿಸಿಕೊಳ್ಳಬೇಕು

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ರೈತರು ಮಾವಿಗೆ ಪರ್ಯಾಯವಾಗಿ ಗೋಡಂಬಿ ಬೆಳೆಯುವುದರ ಮೂಲಕ ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳಬೇಕು ಎಂದು ಕೊಚ್ಚಿನ್‍ನ ಗೇರು ಮತ್ತು ಕೊಕೊ ನಿರ್ದೇಶನಾಲಯದ ನಿರ್ದೇಶಕ ಡಾ. ಎನ್.ವೆಂಕಟೇಶ್ ಹುಬ್ಬಳ್ಳಿ ಸಲಹೆ ಮಾಡಿದರು.
ತಾಲ್ಲೂಕಿನ ಹೊಗಳಗೆರೆ ತೋಟಗಾರಿಕಾ ಕ್ಷೇತ್ರದಲ್ಲಿ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕೊಚ್ಚಿನ್‍ನ ಗೇರು ಮತ್ತು ಕೊಕೊ ನಿರ್ದೇಶನಾಲಯ ಹಾಗೂ ಸ್ಥಳೀಯ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಆಶ್ರಯದಲ್ಲಿ ಗುರುವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಗೇರು ಬೆಳೆಯ ವಿಚಾರ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು,
ದೇಶದ 20 ರಾಜ್ಯಗಳಲ್ಲಿ 11 ಲಕ್ಷ 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಗೋಡಂಬಿ ಬೆಳೆಯಲಾಗುತ್ತಿದೆ. 7.50 ಲಕ್ಷ ಮೆಟ್ರಿಕ್ ಟನ್ ಗೋಡಂಬಿ ಉತ್ಪಾದಿಸಲಾಗುತ್ತಿದೆ. ಆದರೆ ದೇಶದಲ್ಲಿ 16 ಲಕ್ಷ ಮೆಟ್ರಿಕ್ ಟನ್ ಗೋಡಂಬಿಗೆ ಬೇಡಿಕೆ ಇದೆ. ಕೊರತೆ ಇರುವ ಪ್ರಮಾಣದ ಗೋಡಂಬಿಯನ್ನು ಹೊರ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ರೂ.8800 ಕೋಟಿ ಬೆಲೆಯ ಗೋಡಂಬಿಯನ್ನು ಹೊರ ದೇಶಗಳಿಂದ ತರಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಲಾಲ್‍ಬಾಗ್‍ನ ಜಂಟಿ ತೋಟಗಾರಿಕಾ ನಿರ್ದೇಶಕ ಡಾ. ಬಿ.ಎನ್.ಪ್ರಸಾದ್ ಮಾತನಾಡಿ, ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯಡಿ ಗೊಂಡಂಬಿ ಬೆಳೆ ಅಭಿವೃದ್ಧಿಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಿ ಸೌ¯ಭ್ಯ ಪಡೆದುಕೊಳ್ಳಬಹುದು. ಗೋಡಂಬಿ ಬೆಳೆಯಲು ಹೆಕ್ಟೇರ್ ಒಂದಕ್ಕೆ ರೂ.75 ಸಾವಿರ ಅನುದಾನ ಸಿಗುತ್ತದೆ. ಈ ಹಣವನ್ನು ಹಂತ ಹಂತವಾಗಿ ವಾರ್ಷಿಕ ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾದ ಡಾ. ವಿಷ್ಟುವರ್ಧನ, ಡಾ. ಆರ್.ಕೆ.ರಾಮಚಂದ್ರ, ಬಿ.ಎನ್.ರಾಜೇಂದ್ರ, ಡಾ. ಎನ್.ಅಶ್ವತ್ಥನಾರಾಯಣರೆಡ್ಡಿ, ಜಿ.ಆಂಜನೇಯರೆಡ್ಡಿ, ಎಮ್.ರಮೇಶ್, ಕೆ.ಪೊಟ್ಟಪ್ಪ, ಟಿ.ಸುಬ್ರಮಣ್ಯಂ ಕ್ರಮವಾಗಿ, ಗೇರು ಬೆಳೆಯಲ್ಲಿ ಸಸ್ಯಾಭಿವೃದ್ಧಿ, ಸಂಕರಣ ಹಾಗೂ ಸೂಕ್ತ ತಳಿಗಳು, ಗೇರು ಬೆಳೆಯ ಸಮಗ್ರ ತಂತ್ರಜ್ಞಾನ, ಗೇರು ಬೆಳೆಯಲ್ಲಿ ಸಸ್ಯ ಸಂರಕ್ಷಣೆ, ಕೊಯ್ಲೋತ್ತರ ತಂತ್ರಜ್ಞಾನ, ಸಂರಕ್ಷಣೆ ಮತ್ತು ಮಾರುಕಟ್ಟೆ ಕುರಿತು ಮಾತನಾಡಿದರು.ಎಂಬ ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು.
ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕರಾದ ಎ.ಬೈರೆಡ್ಡಿ, ಎಂ.ಶ್ರೀನಿವಾಸ್, ಪ್ರಗತಿಪರ ರೈತರಾದ ಎನ್.ರಾಜಣ್ಣ, ನಾರಾಯಣಸ್ವಾಮಿ, ವೈ.ವಿ.ಅಮರನಾಥ್ ಇದ್ದರು.
ಸ್ಥಳೀಯ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಮುಖ್ಯಸ್ಥ ಡಾ. ಆರ್.ಕೆ.ರಾಮಚಂದ್ರ ಅವರ ನೇತೃತ್ವದಲ್ಲಿ ರೈತರಿಗೆ ಗೋಡಂಬಿ ಸಸಿಗಳನ್ನು ವಿತರಿಸಲಾಯಿತು. ಗೊಡಂಬಿ ತಾಕುಗಳಿಗೆ ಭೇಟಿ ನೀಡಿ ಪರಿಶೀಲಿಸಲಾಯಿತು
.