HOLY ROSARY CHURCH, KUNDAPUR – 450 th JUBILEE SOUVENIR 2021

ಶುಕ್ಲಯಜುಃಶಾಖಾಟ್ರಸ್ಟ್ ಸ್ವಘೋಷಿತ ಪದಾಧಿಕಾರಿಗಳಿಂದ ಭ್ರಷ್ಠಾಚಾರ
ಅವಿಭಜಿತ ಜಿಲ್ಲೆ ಯಾಜ್ಞವಲ್ಕ್ಯರ ಜಾಗೃತಿಗೆ ಅಭಿಯಾನ-ಸುಧಾಕರಬಾಬು

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ಬೆಂಗಳೂರಿನ ಶುಕ್ಲ ಯಜುಃಶಾಖಾ ಟ್ರಸ್ಟ್ ಆಧಾಯ ತೆರಿಗೆ ಇಲಾಖೆಯಿಂದ 1 ಕೋಟಿ ದಂಡ ಕಟ್ಟುವ ಪರಿಸ್ಥಿತಿಗೆ ಕಾರಣರಾದ ಆಡಳಿತ ಮಂಡಳಿಯ ಸ್ವಘೋಷಿತ ಪದಾಧಿಕಾರಿಗಳ ವಿರುದ್ದ ಸಮುದಾಯದ ಜಾಗೃತಿಗಾಗಿ ಶುಕ್ಲ ಯಜುರ್ವೇದ ಮಹಾಮಂಡಳ ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅಭಿಯಾನ ಆರಂಭಿಸಿದೆ ಎಂದು ಮಹಾಮಂಡಳದ ರಾಜ್ಯಾಧ್ಯಕ್ಷ ಸುಧಾಕರ ಬಾಬು ತಿಳಿಸಿದರು.
ನಗರದ ಕೋಟೆಯ ಶೃಂಗೇರಿ ಶಂಕರಮಠದಲ್ಲಿ ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, 110 ವರ್ಷಗಳ ಇತಿಹಾಸ ಹೊಂದಿರುವ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಶುಕ್ಲ ಯಜುಃಶಾಖಾ ಟ್ರಸ್ಟ್‍ಗೆ ಕಳೆದ 16 ವರ್ಷಗಳಿಂದ ಆಡಳಿತ ಮಂಡಳಿ ಪದಾಧಿಕಾರಿಗಳೆಂದು ಸ್ವಯಂ ಘೋಷಿಸಿಕೊಂಡಿರುವವರ ವ್ಯಕ್ತಿಗಳ ನಿರ್ಲಕ್ಷ್ಯದಿಂದಾಗಿ ಆದಾಯ ತೆರಿಗೆ ಇಲಾಖೆ 1 ಕೋಟಿ ದಂಡ ಹಾಕಿದ್ದು, ಇದು ಸಮುದಾಯಕ್ಕೆ ಆಗಿರುವ ಬಹುದೊಡ್ಡ ಅನ್ಯಾಯವಾಗಿದ್ದು, ಇದಕ್ಕೆ ಈ ವ್ಯಕ್ತಿಗಳು ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
ಟ್ರಸ್ಟ್‍ನ ಆಡಳಿತ ಮಂಡಳಿ ಅಧಿಕಾರ ನಿಯಮಾನುಸಾರ 2019ರ ಜುಲೈ ತಿಂಗಳಿಗೆ ಕೊನೆಗೊಂಡಿದೆ, ಆದರೂ ನಾವೇ ಪದಾಧಿಕಾರಿಗಳೆಂದು ಹೇಳಿಕೊಂಡು ಸಮುದಾಯವನ್ನು ವಂಚಿಸಿಕೊಂಡು ಬಂದಿದ್ದಾರೆ ಎಂದು ಆರೋಪಿಸಿದರು.
ಬೆಂಗಳೂರಿನ ಕೆಂಗೇರಿ ಬಳಿಯ ದೊಡ್ಡೇರಿ ಎಂಬಲ್ಲಿ ಟ್ರಸ್ಟ್ ಹೆಸರಿನಲ್ಲಿ 85 ಲಕ್ಷ ಜಮೀನು ಖರೀದಿಸಿದ್ದು, ಈವರೆಗೂ ಸಮರ್ಪಕ ದಾಖಲೆ ಪಡೆದಿಲ್ಲ, ಟ್ರಸ್ಟ್ ವಶಕ್ಕೂ ತೆಗೆದುಕೊಂಡಿಲ್ಲ ಎಂದರು.
ಆಡಳಿತ ಮಂಡಳಿ ಅಧಿಕಾರಾವಧಿ ಮುಗಿದ ನಂತರ ಸಮುದಾಯದ ಹಿರಿಯರು ರಚಿಸಿರುವ ಅಡ್ಯಾಕ್ ಸಮಿತಿಯನ್ನು ಪರಿಗಣಿಸದೇ ಆಡಳಿತ ನಡೆಸುತ್ತಿದ್ದಾರೆ ಎಂದು ದೂರಿದರು.
ಇತ್ತೀಚಿನ ಆಯವ್ಯಯದಲ್ಲಿ 2ಕೋಟಿ 21 ಲಕ್ಷ 91 ಸಾವಿರ ಆದಾಯ ಬಂದಿದೆ ಎಂದು ತೋರಿಸಲಾಗಿದೆ, ಇದರಲ್ಲಿ 1ಕೋಟಿ 71 ಲಕ್ಷ 91 ಸಾವಿರ ಮಾತ್ರ ಜಮಾ ಆಗಿದೆ. ಉಳಿದ ಹಣದಲ್ಲಿ ಯಾವುದೇ ಗುರುತಿಸುವಂತಹ ಕೆಲಸವನ್ನಂತೂ ಅವರು ಮಾಡಿಲ್ಲ. ಇದರಲ್ಲಿ 35 ಲಕ್ಷ ರೂಗಳ ಕೆಲಸ ನಡೆದಿರುವುದು ದಾಖಲೆಗಳಲ್ಲಿ ಗೋಚರವಾಗಿದೆ ಆದರೆ ಉಳಿದ ಹಣಕ್ಕೆ ದಾಖಲೆಯಿಲ್ಲ ಎಂದು ಆರೋಪಿಸಿದರು.
ಟ್ರಸ್ಟ್ ಆಡಳಿತದಲ್ಲಿ
ಅನ್ಯರ ಕೈವಾಡ
ಸಮುದಾಯಕ್ಕೆ ಸೇರದ ಕೆಲವು ಅನ್ಯ ವ್ಯಕ್ತಿಗಳು ಟ್ರಸ್ಟ್‍ನ ಆಡಳಿತದಲ್ಲಿ ಮೂಗು ತೂರಿಸುತ್ತಿದ್ದಾರೆ, 1970 ರಲ್ಲಿ ಟ್ರಸ್ಟ್ ಆಶ್ರಯದಲ್ಲಿ ನಿರ್ಮಿಸಿರುವ ಕಟ್ಟಡಗಳು ಬಿಟ್ಟರೆ ಈವರೆಗೂ ಯಾವುದೇ ಅಭಿವೃದ್ದಿ ಕೆಲಸಗಳು ಮಾಡಿಲ್ಲ ಎಂದು ಕಿಡಿಕಾರಿದರು.
ಆಡಳಿತ ಮಂಡಳಿಯೆಂದು ಹೇಳಿಕೊಳ್ಳುವ ವ್ಯಕ್ತಿಗಳ ಅಜ್ಞಾನದಿಂದ ಟ್ರಸ್ಟ್ ಆಧಾಯ ತೆರಿಗೆ ಇಲಾಖೆಗೆ 1 ಕೋಟಿ ದಂಡ ಕಟ್ಟಬೇಕಾಗಿದೆ, ಭ್ರಷ್ಟಾಚಾರದಲ್ಲಿ ಮುಳುಗಿರುವ ಈ ವ್ಯಕ್ತಿಗಳಿಗೆ ಆಡಳಿತ ನಡೆಸುವ ನೈತಿಕತೆ ಇಲ್ಲದೇ ಓಡಾಡುತ್ತಿದ್ದಾರೆ ಎಂದು ಟೀಕಿಸಿದರು.
ಕೋಲಾರ,ಚಿಕ್ಕಬಳ್ಳಾಪು ಜಿಲ್ಲೆಗಳಲ್ಲಿ ಹೆಚ್ಚಿರುವ ಶುಕ್ಲ ಯಾಜ್ಞವಲ್ಕ್ಯ ಸಮುದಾಯ ಎಚ್ಚೆತ್ತುಕೊಂಡು ಟ್ರಸ್ಟ್ ಉಳಿಸುವ ಮಹಾಮಂಡಳದ ಈ ಅಭಿಯಾನ ಬೆಂಬಲಿಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶುಕ್ಲ ಯಜುರ್ವೇದ ಮಹಾಮಂಡಳ ಹಾಗೂ ಯಾಜ್ಞವಲ್ಕ್ಯ ಟ್ರಸ್ಟ್‍ನ ಪದಾಧಿಕಾರಿಗಳಾದ ರಮೇಶ್‍ದಿಡಿಗಾ, ಅಮರನಾಥ್, ಕೋಲಾರ ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯ ಸತ್ಯನಾರಾಯಣರಾವ್, ಅನಂತರಾಘವ, ರಾಜೇಂದ್ರಪ್ರಸಾದ್,ದಿನೇಶ್,ಸತೀಶ್,ಚಿಂತಾಮಣಿಯ ಶ್ರೀನಾಥ್, ರವೀಂದ್ರನಾಥ್, ಶಂಕರ್ ಮತ್ತಿತರರಿದ್ದರು

ನಬಾರ್ಡ್‍ನ ಮೂಲ ಸೌಕರ್ಯನಿಧಿ ಯೋಜನೆಯಡಿ ಶೇ.6ರ ಬಡ್ಡಿ ದರದಲ್ಲಿ ರೈತರು, ರೈತ ಗುಂಪುಗಳಿಗೆ 2 ಕೋಟಿ ಸಾಲ-ಬ್ಯಾಲಹಳ್ಳಿ ಗೋವಿಂದಗೌಡ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ನಬಾರ್ಡ್‍ನ ಕೃಷಿ ಮೂಲ ಸೌಕರ್ಯ ನಿಧಿ' ಯೋಜನೆಯಡಿ ರೈತರು, ಕೃಷಿ ಉದ್ಯಮಿಗಳು,ಸಹಕಾರ ಸಂಘಗಳು ಆಧುನಿಕ ಕೃಷಿಗೆ ಅಗತ್ಯವಾದ ಟ್ರಾಕ್ಟರ್,ಟಿಲ್ಲರ್,ಬೆಳೆ ಕೋಯ್ಲೋತ್ತರ ಸಲಕರಣೆ, ಶೀತಲ ಘಟಕ ಸೇರಿದಂತೆ ವಿವಿಧ ಕಾರ್ಯಗಳಿಗೆ 20 ಲಕ್ಷದಿಂದ 2 ಕೋಟಿವರೆಗೂ ಸಾಲ ಸೌಲಭ್ಯ ಶೇ.6ರ ಬಡ್ಡಿಯಲ್ಲಿ ಪಡೆಯಬಹುದಾಗಿದೆ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು. ಬ್ಯಾಂಕಿನ ಸಭಾಂಗಣದಲ್ಲಿ ಸೋಮವಾರ ನಬಾರ್ಡ್,ಅಫೆಕ್ಸ್ ಬ್ಯಾಂಕ್ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಡಿಸಿಸಿ ಬ್ಯಾಂಕ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಸ್ವಾವಲಂಬಿ ಜೀವನದೊಂದಿಗೆ ಉದ್ಯಮಿಗಳಾಗಲು ಇದು ಸಹಕಾರಿ ಎಂದರು. ಈ ಸಾಲಕ್ಕೆ ಶೇ.9 ಬಡ್ಡಿ ಇದ್ದು, ಶೇ.3 ರಷ್ಟು ಬಡ್ಡಿಯನ್ನು ಕೇಂದ್ರ ಸರ್ಕಾರ ಭರಿಸಲಿದೆ, ಸಾಲ ಮರುಪಾವತಿ ಅವಧಿ ಗರಿಷ್ಟ 7 ವರ್ಷಗಳಾಗಿದ್ದು, 2 ಕೋಟಿವರೆಗೂ ಭದ್ರತೆಯ ಖಾತ್ರಿಯೊಂದಿಗೆ ಸಾಲ ಒದಗಿಸಲಾಗುವುದು ಎಂದರು. ಈ ಯೋಜನೆಯಡಿ ಸಾವಯವ ಕೃಷಿ ಹಾಗೂ ಕೃಷಿಗೆ ಅಗತ್ಯವಾದ ಆಧುನಿಕ ಸಲಕರಣೆಗಳು, ಕೋಯ್ಲಿನೋತ್ತರ ಸಲಕರಣೆಗಳನ್ನು ಖರೀದಿಸಲು ಅಗತ್ಯವಾದ ಸಾಲ ಸೌಲಭ್ಯ ಪಡೆಯಬಹುದಾಗಿದ್ದು, ಜಿಲ್ಲೆಯ ರೈತರು ಇದರ ಪ್ರಯೋಜನ ಪಡೆಯಲು ಮುಂದೆ ಬರಬೇಕು ಎಂದರು. ಸಹಕಾರ ಸಂಘಗಳು ಬಾಡಿಗೆ ಆಧಾರಿತ ಸೇವಾ ಕೇಂದ್ರಗಳನ್ನು ಸ್ಥಾಪಿಸಬಹುದಾಗಿದೆ, ಇದಕ್ಕೂ ಅಗತ್ಯ ಸಾಲ ಸೌಲಭ್ಯ ಸಿಗಲಿದೆ, ರೈತರಿಗೆ ಅಗತ್ಯವಾದ ಆಧುನಿಕ ಸಲಕರಣೆ,ಯಂತ್ರಗಳನ್ನು ಬಾಡಿಗೆಗೆ ನೀಡಲು ಅನುವಾಗುವಂತೆ ಈ ಯೋಜನೆಯಲ್ಲಿ ಸಾಲ ಪಡೆಯಲು ಅವಕಾಶವಿದೆ ಎಂದರು. ಆಹಾರ ಧಾನ್ಯಗಳನ್ನು ಒಣಗಿಸುವ ಯಂತ್ರಗಳು, ಹಣ್ಣುಗಳನ್ನು ಮಾಗಿಸುವ ಕೋಣೆ ನಿರ್ಮಾಣಕ್ಕೂ ಸಾಲ ಸಿಗಲಿದ್ದು, ಇದರಿಂದಾಗಿ ಹಣ್ಣುಗಳನ್ನು ಕಾನೂನು ಬಾಹಿರವಾಗಿ ರಸಾಯನಿಕಗಳನ್ನು ಬಳಸಿ ಹಣ್ಣಾಗಿಸುವ ಕಾರ್ಯಗಳಿಗೆ ಕೊನೆಯಾಗಿಸಲು ಸಹಕಾರಿಯಾಗಲಿದೆ ಎಂದರು. ಸಮಗ್ರ ತೋಟಗಾರಿಕೆ ಯೋಜನೆಯ ಎಲ್ಲಾ ಉಪಯೋಜನೆಗಳು ಅಂದರೆ ಶೀತಲ ಗೃಹ, ಪ್ಯಾಕಿಂಗ್‍ಗೃಹಗಳು,ಹಣ್ಣು ಮಾಗಿಸುವ ಚೇಂಬರ್‍ಗಳು, ರೀಫರ್ ವ್ಯಾನ್‍ಗಳ ಖರೀದಿಗೆ ಶೇ.35 ರಿಂದ 50 ರಷ್ಟು ಸಹಾಯಧನ ಸಿಗಲಿದೆ ಎಂದು ತಿಳಿಸಿದರು. ಆಧುನಿಕ ಕೃಷಿಗೆ ನಬಾರ್ಡ್‍ನೆರವು ನಬಾರ್ಡ್ ಎಜಿಎಂ ಎಂ.ಆರ್.ನಟರಾಜನ್ ಮಾತನಾಡಿ,ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಘಟಕಗಳ ಅನುಸರಣಾ ಯೋಜನೆಗೂ ಸಹಾಯಧನ ಸಿಗಲಿದೆ, ಸಾಲವನ್ನು ಒಂದೇ ಕಾರಣಕ್ಕೆ ವಿತರಿಸದೇ ವಿವಿಧ ಯೋಜನೆಗಳಿಗೆ ಒದಗಿಸುವಂತಾಗಬೇಕು ಎಂದರು. ನಬಾರ್ಡ್ ಆಧುನಿಕ, ಸಾವಯವ ಕೃಷಿಗೆ ಉತ್ತೇಜನ ನೀಡುತ್ತಿದ್ದು, ಕೃಷಿ ಯಂತ್ರೋಪಕರಣಗಳ ಬಳಕೆಗೆ ಒತ್ತು ನೀಡಿದ್ದು, ಇದರ ಪ್ರಯೋಜನ ಪಡೆಯಲು ಕೋರಿದರು. ನಬಾರ್ಡ್‍ನ ಕೃಷಿ ಮೂಲಭೂತ ಸೌಕರ್ಯ ನಿಧಿ’ ಯೋಜನೆಯಡಿ ಸಾಲವನ್ನು ಪಡೆಯಲು ಅನ್‍ಲೈನ್‍ನಲ್ಲಿ ಎಐಎಫ್ ಯೋಜನೆಯ ಪೋರ್ಟೆಲ್‍ನಲ್ಲಿ ಅರ್ಜಿಯನ್ನು ಭರ್ತಿ ಮಾಡಿ, ಯೋಜನೆ ಪ್ರಸ್ತಾವನೆಯ ಸಾಫ್ಟ್ ಕಾಫಿಯನ್ನು ಅಪ್ ಲೋಡ್ ಮಾಡಬೇಕು, ಇದನ್ನು ಕೇಂದ್ರ ಸರ್ಕಾರ ಪರಿಶೀಲಿಸಿದ ನಂತರ ಸಂಬಂಧಿಸಿದ ಬ್ಯಾಂಕಿಗೆ ವರ್ಗಾಯಿಸುತ್ತದೆ ಎಂದರು.
ಬ್ಯಾಂಕಿನಿಂದ ಮೌಲ್ಯಮಾಪನ ಕೈಗೊಂಡು ಅರ್ಹ ಅರ್ಜಿದಾರರಿಗೆ ಸಾಲದ ಮಂಜೂರಾತಿ ಆಗಲಿದೆ, ಕೇಂದ್ರ ಸರ್ಕಾರ ಸಂಬಂಧಿಸಿದ ಬ್ಯಾಂಕಿಗೆ ಬಡ್ಡಿ ಸಹಾಯಧನ ಹಾಗೂ ಸಾಲಕ್ಕೆ ಖಾತ್ರಿ ಒದಗಿಸುತ್ತದೆ ಎಂದು ತಿಳಿಸಿದರು.
ಸಾವಿರ ಕೋಟಿ
ಠೇವಣಿ ಸಂಗ್ರಹಿಸಿ
ಡಿಸಿಸಿ ಬ್ಯಾಂಕ್ ಮುಂದಿನ 3 ವರ್ಷಗಳಲ್ಲಿ ಸಾವಿರ ಕೋಟಿ ಠೇವಣಿ ಸಂಗ್ರಹಿಸುವ ಗುರಿಯೊಂದಿಗೆ ಕೆಲಸ ಮಾಡಿ, ಬೆಳೆ ಸಾಲ, ಮಹಿಳೆಯರಿಗೆ ನೀಡುತ್ತಿರುವ ಸಾಲದ ಪ್ರಮಾಣ ಹೆಚ್ಚಲಿ ಎಂದು ಕಿವಿಮಾತು ಹೇಳಿದರು.
ಠೇವಣಿ ಸಂಗ್ರಹ ಹೆಚ್ಚಳವಾದರೆ ಮಾತ್ರ ಬ್ಯಾಂಕ್ ಮತ್ತಷ್ಟು ಸಾಲ ಯೋಜನೆ ಜಾರಿ ಮಾಡಲು ಸಾಧ್ಯ ಎಂದು ತಿಳಿಸಿದರು.
ಸಭೆಯಲ್ಲಿ ಡಿಸಿಸಿ ಬ್ಯಾಂಕ್ ಎಂಡಿ ಎಂ.ಆರ್.ಶಿವಕುಮಾರ್, ಅಪೆಕ್ಸ್ ಬ್ಯಾಂಕ್ ಎಜಿಎಂ ವರದರಾಜ್,ಡಿಸಿಸಿ ಬ್ಯಾಂಕಿನ ಎಜಿಎಂಗಳಾದ ಬೈರೇಗೌಡ, ಖಲೀಮುಲ್ಲಾ, ಹುಸೇನ್‍ಸಾಬ್ ದೊಡ್ಡಮನಿ, ವ್ಯವಸ್ಥಾಪಕರಾದ ಭಾನುಪ್ರಕಾಶ್,ಕೆ.ಎನ್.ಮಮತಾ, ಅಂಬರೀಷ್ ಮತ್ತಿತರರಿದ್ದರು.

ಹೆಬ್ರಿ ಅಮೃತ ಭಾರತಿ ವಿದ್ಯಾಸಂಸ್ಥೆ ಎಸ್ ಎಸ್ ಎಲ್ ಸಿ. ಪರೀಕ್ಷಾ ಪೂರ್ವ ತಯಾರಿ ಶಿಬಿರ

JANANUDI.COM NETWORK

ಅಮೃತ ಭಾರತಿ ವಿದ್ಯಾಸಂಸ್ಥೆ ಹೆಬ್ರಿ ಇಲ್ಲಿ ನಡೆದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತಯಾರಿ ಕುರಿತ ಮಾಹಿತಿ ಶಿಬಿರವನ್ನು ಆರ್ ಎನ್ ಶೆಟ್ಟಿ ಪದವಿಪೂರ್ವ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಕೃಷ್ಣಮೂರ್ತಿ ಡಿಬಿ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಉಪಸ್ಥಿತರಿದ್ದು ನಡೆಸಿಕೊಟ್ಟರು.
ಈ ಶಿಬಿರವನ್ನು ಕುಂದಾಪುರ ತಾಲೂಕು ಖಾಸಗಿ ಶಿಕ್ಷಕರ – ಉಪನ್ಯಾಸಕರ ಸಂಘ ಮತ್ತು ಅಮೃತ ಭಾರತಿ ವಿದ್ಯಾಸಂಸ್ಥೆ ಸಹಯೋಗದಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಅಪರ್ಣಾ ಆಚಾರ್ಯ ಉಪಸ್ಥಿತರಿದ್ದರು.
ಅಮೃತ ಭಾರತಿ ವಿದ್ಯಾಸಂಸ್ಥೆಯ ಶಿಕ್ಷಕರಾದ ಶ್ರೀ ಮಹೇಶ್ ಹೈಕಾಡಿ ಇವರು ಸಂಪನ್ಮೂಲ ವ್ಯಕ್ತಿ ಗಳಾದ ಕೃಷ್ಣಮೂರ್ತಿಯವರ ಪರಿಚಯವನ್ನು ಮಾಡಿ, ಕಾರ್ಯಕ್ರಮವ ನಿರ್ವಹಣೆ ಮಾಡಿದರು.

ಕುಂದಾಪುರದ ಹಿರಿಯ ವಕೀಲ ಗಡಾಹದ್ ರಾಮಕೃಷ್ಣರಾವ್ ನಿಧನ

JANANUDI.COM NETWORK


ಕುಂದಾಪುರ,F.28: ಕುಂದಾಪುರದ ಹಿರಿಯ ವಕೀಲ, ಕುಂದಾಪುರ ಬಾರ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ, ಕುಂದಾಪುರ ಪುರಸಭೆಯ ಮಾಜಿ ಉಪಾಧ್ಯಕ್ಷ ಗಡಾಹದ್ ರಾಮಕೃಷ್ಣ ರಾವ್ (87) ಫೆ. 27 ರಂದು ರಾತ್ರಿ ನಿಧನರಾದರು.
ಜಿ.ಆರ್.ರಾವ್. ಮತ್ತು “ಗಡಾಲ್” ರು ಎಂದೇ ಕರೆಯಲ್ಪಡುತ್ತಿದ್ದ ಇವರು, ಕುಂದಾಪುರದ ಧಾರ್ಮಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಸಕ್ರಿಯರಾದವರು. ಕುಂದಾಪುರದ ರೋಟರಿಕ್ಲಬ್, ರೋಟರಿ ದಕ್ಷಿಣದ ಪ್ರೋಬಸ್ ಕ್ಲಬ್, ನೆಹರೂ ಸ್ಪೋರ್ಟ್ ಕ್ಲಬ್‍ನ ಹಿರಿಯ ಸದಸ್ಯರಾಗಿದ್ದ ರಲ್ಲದೇ, ಶ್ರೀ ಕುಂದೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿದವರು. ಸಹಕಾರಿ ಕ್ಷೇತ್ರದಲ್ಲೂ ಸಹಕಾರ ಸಂಘಗಳ ನಿರ್ದೇಶಕರಾಗಿ ಶ್ರಮಿಸಿದವರು.
ಕುಂದಾಪುರದ ಬಹುತೇಕ ಸಂಘ ಸಂಸ್ಥೆಗಳೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದ ಅವರು, ಸಾಹಿತ್ಯಿಕ, ಸಾಂಸ್ಕøತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳು ತ್ತಿದ್ದರು.
ಇವರು ಇಬ್ಬರು ಪತ್ರಿಯರನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಹಲವು ಗಣ್ಯರು ಸಂಘಸಂಸ್ಥೆಗಳ ಸದಸ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಮಾರ್ಚ್ ಆರಂಭದಲ್ಲಿ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಭಾರಿ ಮಳೆ ಸಾಧ್ಯತೆ

JANANUDI.COM NETWORK

ಬೆಂಗಳೂರು, ಫೆ.28: ಶಿವರಾತ್ರಿ ಹಬ್ಬ ಮುಗಿಯುತ್ತಿದ್ದಂತೆ ಅಂದರೆ ಮಾರ್ಚ್ 1ರಂದು ಈ ವರ್ಷದಲ್ಲಿ ಮೊದಲ ಭಾರಿಯಾಗಿ ವಾಯುಭಾರ ಕುಸಿತವು ಬಂಗಾಳಕೂಲ್ಲಿಯಲ್ಲಿ ಉಂಟಾಗುವ ಲಕ್ಷಣಗಳಿದ್ದು ಶ್ರೀಲಂಕಾ ಅಥವಾ ತಮಿಳುನಾಡು, ಕರ್ನಾಟಕ ಹಾಗೂ ಕೇರಳದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿವೆ.ಎಂದು ಹವಮಾನ ಇಲಾಖೆ ತಿಳಿಸಿದೆ.

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ  ಮಾರ್ಚ್ 3ರಂದು ತಮಿಳುನಾಡಿನಾದ್ಯಂತ ಭಾರಿ ಮಳೆಯಾಗಲಿದ್ದು ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಭಾಗಗಳಲ್ಲಿ ಸಹ ಇದರ ಪರಿಣಾಮವಾಗಿ ಮಳೆಯಾಗಲಿದ್ದು,ಮಾರ್ಚ್ 7ರ ತನಕ ಕೇರಳ ಹಾಗೂ ಕರ್ನಾಟಕ ಕರಾವಳಿ ಭಾಗಗಳಲ್ಲಿ ಮತ್ತು ದಕ್ಷಿಣ ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ಮಳೆಯ ಸಾಧ್ಯತೆ ಇದೆಯೆಂದು ತೀಳಿಸಿದೆ.

ಟೀಂ ಇಂಡಿಯಾ ಕ್ರಿಕೇಟ್ ಆಟಗಾರರು ತೆರಳುತ್ತಿದ್ದ ಬಸ್ಸಿನಲ್ಲಿ 2 ಗುಂಡಿನ‌ ಶೆಲ್ ಗಳು ಪತ್ತೆ!!

JANANUDI. COM NETWORK

ಚಂಡೀಗಢ,ಫೆ 28. ನಿನ್ನೆ ದಿನ ಟೀಂ ಇಂಡಿಯಾ ಆಟಗಾರರು ಮೊಹಾಲಿಗೆ ಅಭ್ಯಾಸಕ್ಕೆ ತೆರಳಬೇಕಿದ್ದ ಬಸ್‌ನಲ್ಲಿ ಎರಡು ಗುಂಡಿನ ಶೆಲ್​ಗಳು ಪತ್ತೆಯಾಗಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ. ಚಂಡೀಗಢದ ಐಟಿ ಪಾರ್ಕ್‌ನಲ್ಲಿರುವ ಲಲಿತ್ ಹೋಟೆಲ್‌ನಲ್ಲಿ ಭಾರತ ಕ್ರಿಕೆಟ್ ತಂಡದ ಸದಸ್ಯರು ತಂಗಿದ್ದರು. ಅಲ್ಲಿಂದ ತಂಡವು ಮೊಹಾಲಿಯ ಪಿಸಿಎ ಸ್ಟೇಡಿಯಂಗೆ ಬಸ್‌ನಲ್ಲಿ ಅಭ್ಯಾಸಕ್ಕೆ ತೆರಳಬೇಕಿತ್ತು. ಭದ್ರತಾ ಸಿಬ್ಬಂದಿ ಬಸ್ ಅನ್ನು ಸೂಕ್ಷ್ಮವಾಗಿ ಪರಿಶೀಲಿಸುವಾಗ ಬಸ್‌ನ ಲಗೇಜ್ ಬಾಕ್ಸ್‌ನಲ್ಲಿ ಎರಡು ಗುಂಡಿನ ಶೆಲ್​ಗಳ ಪತ್ತೆಯಾಗಿದೆ‌.ಎಂದು ತಿಳಿದು ಬಂದಿದೆ.
ಆ ಎರಡೂ ಶೆಲ್‌ಗಳನ್ನು ಸಿಎಫ್‌ಎಸ್‌ಎಲ್ ತಂಡವು ವಶಪಡಿಸಿಕೊಂಡು ತನಿಖೆ ನಡೆಸುತ್ತಿದೆ. ಈ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಬಾಂಬ್ ಶ್ವಾನದಳದೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದೆ.

ಉಕ್ರೇನ್‌ – ರಷ್ಯಾ ಯುದ್ದ ಉಕ್ರೇನಿನ ಗ್ಯಾಸ್‌ ಪೈಪ್‌ ಲೈನ್‌ ಸ್ಫೋಟಿಸಿದ ರಷ್ಯಾ

JANANUDI.COM NETWORK


ಉಕ್ರೇನ್‌: ಉಕ್ರೇನ್‌ ದೇಶದ ಎರಡನೇ ಅತಿ ದೊಡ್ಡ ನಗರ ಕರ್ಕಿವ್‌ನಲ್ಲಿರುವ ಗ್ಯಾಸ್ ಪೈಪ್‌ಲೈನ್‌ನ್ನು ರಷ್ಯಾ ಸೇನೆ ಸ್ಫೋಟಿಸಿದೆ ಎಂದು ಉಕ್ರೇನ್ ಅಧ್ಯಕ್ಷರ ಕಚೇರಿ ಅಧಿಕೃತವಾಗಿ ತಿಳಿಸಿದೆ.

ಈ ಸ್ಫೋಟದ ಪರಿಣಾಮದಿಂದ ಪರಿಸರಕ್ಕೆ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಲಿದೆ ಎಂದು ಉಕ್ರೇನ್ ಸರ್ಕಾರವು ತೀವ್ರ ಕಳವಳ ವ್ಯಕ್ತಪಡಿಸಿದೆ. ಹೀಗಾಗಿ, ನಗರದಲ್ಲಿ ವಾಸಿಸುತ್ತಿರುವ ನಿವಾಸಿಗಳು ಮನೆ ಕಿಟಕಿಗಳನ್ನು ಬಟ್ಟೆಯಲ್ಲಿ ಮುಚ್ಚಬೇಕು. ಜೊತೆಗೆ, ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ದ್ರವ ಪದಾರ್ಥಗಳನ್ನು ಹೆಚ್ಚು ಸೇವಿಸಬೇಕೆಂದು ಸೂಚಿಸಿದೆ.

ಎಂಐಟಿ ಕುಂದಾಪುರ ಎಂಬಿಎ ವಿಭಾಗ ಸಿದ್ಧಪಡಿಸಿದ” ಸಾಮರ್ಥ್ಯ ಆಧಾರಿತ ಸಂದರ್ಶನಕ್ಕಾಗಿ ಪ್ರಶ್ನಾವಳಿ ಪುಸ್ತಕ ಬಿಡುಗಡೆ

JANANUDI.COM NETWORK

ಎಂಐಟಿ ಕುಂದಾಪುರದ ಎಂಬಿಎ ವಿದ್ಯಾರ್ಥಿಗಳು ಸಿದ್ಧಪಡಿಸಿದ “ಜನತಾ ಗ್ರೂಪ್‌ಗಾಗಿ ಸಾಮರ್ಥ್ಯ ಆಧಾರಿತ ಸಂದರ್ಶನಕ್ಕಾಗಿ ಪ್ರಶ್ನಾವಳಿ” ಎಂಬ ಪುಸ್ತಕದ ಬಿಡುಗಡೆ  ಕಾರ್ಯಕ್ರಮವು 25 ಫೆಬ್ರವರಿ 2022 ರಂದು ಕೋಟಾದ ಜನತಾ ಗ್ರೂಪ್‌ನಲ್ಲಿ ನಡೆಯಿತು./ ಜನತಾ ಗ್ರೂಪ್ ಕೋಟ ಇದರ ಸಿಇಒ, ಡಾ.ಧಾನೇಶ್ ಜೇವಾನಿ, ಸಿಎಫ್‌ಒ ಅಶ್ವಥ್ ಶೆಟ್ಟಿ, ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾದ   ಎಂ.ಎಸ್. ಕೃಷ್ಣ, ಪ್ರಮೋಟರ್ ಗಳಾದ ಶ್ರೀ ಪ್ರಶಾಂತ್ ಕುಂದರ್,  ಶ್ರೀ ರಕ್ಷಿತ್ ಕುಂದರ್, ಕಾರ್ಖಾನೆಯ ಉಸ್ತುವಾರಿ ಶ್ರೀ ಶ್ರೀನಿವಾಸ ಕುಂದರ್, ಮೂಡ್ಲಕಟ್ಟೆ ಕಾಲೇಜಿನ ಶೈಕ್ಷಣಿಕ ವಿಭಾಗದ ಡೀನ್ ಹಾಗೂ ಎಂಬಿಎ ವಿಭಾಗದ ಮುಖ್ಯಸ್ಥರಾದ  ಡಾ. ಪ್ರತಿಭಾ ಎಂ. ಪಟೇಲ್, ಉದ್ಯೋಗ ಹಾಗೂ ತರಬೇತಿ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಅಮೃತಮಾಲಾ,  ಜನತಾ ಗ್ರೂಪ್‌ನ ಅನೇಕ ಸಿಬ್ಬಂದಿಗಳು ಮತ್ತು ಪ್ರೊಜೆಕ್ಟ್ ನಿರ್ವಹಿಸಿದ ಕಾಲೇಜಿನ ಎಂಬಿಎ  ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಜನತಾ ಗ್ರೂಪ್‌ನ ಎಚ್‌ಆರ್‌ ಶ್ರೀ ಆತ್ಮ ಶಾಮನೂರು ಅವರು ನಿರ್ವಹಿಸಿದರು./ಈ ಉಪಯುಕ್ತ  ಪುಸ್ತಕವನ್ನು ಸಿದ್ಧಪಡಿಸುವಲ್ಲಿ  ಎಂಐಟಿ ಕುಂದಾಪುರ ಎಂಬಿಎ ವಿಭಾಗದ ಹಳೆ ವಿದ್ಯಾರ್ಥಿಗಳಾಗಿ ಪ್ರಸ್ತುತ ಜನತಾ ಗ್ರೂಪ್ ನ ಉದ್ಯೋಗಿಗಳಾಗಿರುವ ಅನಂತ್ ನಾಯಕ್, ಅಸರ್ ಮೊಹಮ್ಮದ್, ಸುದೇಷ್ಣ ಶೆಟ್ಟಿ ಹಾಗೂ ಕಾಲೇಜಿನ ಪ್ರಸ್ತುತ ವಿದ್ಯಾರ್ಥಿಗಳಾದ ಹರೀಶ್ ಹೊಳ್ಳ ಕೆ, ನಾಗಶ್ರೀ ಹೆಗ್ಡೆ, ಪೂರ್ಣಿಮಾ ಆರ್ ಶೆಟ್ಟಿ,  ಪ್ರಸಾದ್ ಕೆಪಿ, ಶಬೀನಾ, ಸುಶ್ಮಿತಾ ಎಂ, ಸುಶ್ಮಿತಾ ಎಸ್ ಮತ್ತು ಶ್ರೀಮತಿ ವಿಜೇತಾ ರೆಡ್ಡಿ ಇವರುಗಳು ಕೊಡುಗೆ ನೀಡಿರುತ್ತಾರೆ.  / ಈ ಪುಸ್ತಕವನ್ನು ಜನತಾ ಗ್ರೂಪ್ ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಎಂ. ಎಸ್ ಕೃಷ್ಣ , ಕಾಲೇಜಿನ ಡೀನ್  ಡಾ. ಪ್ರತಿಭಾ ಎಂ. ಪಟೇಲ್ ಹಾಗೂ  ಶ್ರೀಮತಿ ಅಮೃತಮಾಲಾ ಇವರುಗಳ ಮಾರ್ಗದರ್ಶನದಲ್ಲಿ ಸಿದ್ದಪಡಿಸಲಾಯಿತು.

ವಿಶೇಷ ಮುತಿವರ್ಜಿ ವಹಿಸಿ ನ್ಯಾಯಾಲಯದಲ್ಲಿನ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು :ನ್ಯಾಯಮೂರ್ತಿ ಬಿ.ವೀರಪ್ಪ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ನ್ಯಾಯಾಧೀಶರು ಹಾಗೂ ವಕೀಲರು ವಿಶೇಷ ಮುತಿವರ್ಜಿ ವಹಿಸಿ ನ್ಯಾಯಾಲಯದಲ್ಲಿನ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ಬಿ.ವೀರಪ್ಪ ಹೇಳಿದರು.
ಪಟ್ಟಣದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ, ನೂತನವಾಗಿ ಸೃಜಿಸಲ್ಪಟ್ಟ ಸಂಚಾರಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯ ಉದ್ಘಾಟಿಸಿ ಮಾತನಾಡಿದ ಅವರು, ಪಟ್ಟಣದ ಹೊರ ವಲಯದಲ್ಲಿ ರೂ.15 ಕೋಟಿ ವೆಚ್ಚದಲ್ಲಿ ನೂತನ ನ್ಯಾಯಾಲಯ ಕಟ್ಟಡ ನಿರ್ಮಿಸಲಾಗುವುದು ಎಂದು ಹೇಳಿದರು.
ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ಮಾತನಾಡಿ, ತಾಲ್ಲೂಕಿನ ಜನರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ನ್ಯಾಯಾಲಯವನ್ನು ಸ್ಥಾಪಿಸಲಾಗಿದೆ. ಇದರಿಂದ ಕ್ಷಕಿದಾರರು ಜಿಲ್ಲಾ ಕೇಂದ್ರಕ್ಕೆ ಪ್ರಯಾಣಿಸುವುದು ತಪ್ಪುತ್ತದೆ. ಬಲಿಷ್ಟ ನ್ಯಾಯಾಂಗದಿಂದ ಮಾತ್ರ ಪ್ರಜಾಪ್ರಭುತ್ವ ಬಲಗೊಳ್ಳಲು ಸಾಧ್ಯ. ಜನ ಸಾಮಾನ್ಯರಿಗೆ ನ್ಯಾಯ ಸಿಗಬೇಕು. ಅದಕ್ಕೆ ಪೂರಕವಾಗಿ ನ್ಯಾಯಾಲಯಗಳು ನಡೆದುಕೊಳ್ಳಬೇಕು ಎಂದು ಹೇಳಿದರು.
ಶಾಸಕ ಕೆ.ಆರ್.ರಮೇಶ್ ಕುಮಾರ್ ಮಾತನಾಡಿ, ನ್ಯಾಯಾಂಗ ಸ್ವತಂತ್ರವಾಗಿದ್ದು ಸಂವಿಧಾನದ ಆಶಯಗಳನ್ನು ಜಾಗರೂಕತೆಯಿಂದ ಉಳಿಸುವಲ್ಲಿ ಯಶಸ್ವಿಯಾಗಿದೆ. ಸಂಕಷ್ಟದ ಸಂದರ್ಭಗಳಲ್ಲಿ ದೇಶವನ್ನು ಸಮರ್ಥವಾಗಿ ಉಳಿಸಿದೆ. ಆದ್ದರಿಂದಲೇ ಜನರು ನ್ಯಾಯಾಲಯಗಳ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂದು ಹೇಳಿದರು.
ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎನ್.ಎಸ್.ಸಂಜಯ್ ಗೌಡ, ಪ್ರಧಾನ ಜಿಲ್ಲಾ ಮತು ಸತ್ರ ನ್ಯಾಯಾಧೀಶ ಕೆ.ಆರ್.ನಾಗರಾಜ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಶಿವಪ್ಪ ಮಾತನಾಡಿದರು.
ಸ್ಥಳೀಯ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಎಚ್.ಆರ್.ದೇವರಾಜ್, ಅಪರ ಸಿವಿಲ್ ನ್ಯಾಯಾಧೀಶ ನಾಗೇಶ್ ನಾಯಕ್, ನೂತನ ನ್ಯಾಯಾಲಯದ ನ್ಯಾಯಾಧೀಶ ಮಹೇಶ್ ಬಾಬು, ವಕೀಲರ ಸಂಘದ ಕಾರ್ಯದರ್ಶಿ ರೂಪ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್ ಇದ್ದರು.