
ಕುಂದಾಪುರ, ಆ. 22; ಸುದ್ದಿ ಪ್ರಕಟಣೆಯ ಕುಂದಾಪುರ ವರದಿಗಾರ ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಅವರ ಮೇಲೆ ಆಗಸ್ಟ್ 21 ರ ಬೆಳಿಗ್ಗೆ ಕುಂದಾಪುರದ ಹೋಟೆಲ್ ಒಂದರಲ್ಲಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಭ್ರಷ್ಟಾಚಾರಕ್ಕೆ ಸಂಬಂಧಿಸಿದ ವರದಿ ಮಾಡಿದ್ದಕ್ಕೆ ‘ಕನ್ನಡಪ್ರಭ’ ವರದಿಗಾರ ಶ್ರೀಕಾಂತ್ ಹೆಮ್ಮಾಡಿ ಅವರ ಮೇಲೆ ಸರ್ಕಾರಿ ಮಹೇಂದ್ರ ಶೆಟ್ಟಿ ಹಲ್ಲೆ ನಡೆಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

ಹಲ್ಲೆಗೊಳಗಾದ ಪತ್ರಕರ್ತರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪುರ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ಮಹೇಂದ್ರ ಶೆಟ್ಟಿ ಹಲ್ಲೆ ನಡೆಸಿದ ಆರೋಪಿಯಾಗಿದ್ದಾರೆ. ಇನ್ನು ಹಲ್ಲೆ ಮಾಡುವ ದೃಶ್ಯವೂ ಕೂಡ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹೋಟೆಲ್ ಸಿಬ್ಬಂದಿ ಹಲ್ಲೆಯಾಗುವುದನ್ನು ತಡೆದಿದ್ದಾರೆ.
ಸಾರ್ವಜನಿಕ ಸೇವೆಯಲ್ಲಿರುವ ವೈದ್ಯರೊಬ್ಬರು ಮಾಧ್ಯಮ ಪ್ರತಿನಿಧಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಿರುವುದು ಖಂಡನೀಯ ಎಂದು ಪತ್ರಕರ್ತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭ್ರಷ್ಟಾಚಾರ ಅಥವಾ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಚಾರಗಳನ್ನು ವರದಿ ಮಾಡುವುದು ಪತ್ರಕರ್ತರ ವೃತ್ತಿಪರ ಕರ್ತವ್ಯವಾಗಿದ್ದು, ವರದಿಯ ಬಗ್ಗೆ ಆಕ್ಷೇಪವಿದ್ದರೆ ಕಾನೂನುಬದ್ಧವಾಗಿ ಸ್ಪಷ್ಟನೆ ನೀಡುವುದು ಅಥವಾ ಸೂಕ್ತ ವೇದಿಕೆಯಲ್ಲಿ ಪ್ರಶ್ನಿಸುವ ಬದಲು ಹಲ್ಲೆಯಂತಹ ಕ್ರಮಕ್ಕೆ ಮುಂದಾಗುವುದು ಸರಿಯಲ್ಲ ಎಂದು ಪತ್ರಕರ್ತರ ವಲಯ ಅಭಿಪ್ರಾಯಪಟ್ಟಿದೆ.
ವ್ಯಾಪಾಕ ಖಂಡನೆ: ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಮೇಲಿನ ಹಲ್ಲೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಬ್ರಹ್ಮಾವರ, ಬೈಂದೂರು, ಕಾಪು, ಕುಂದಾಪುರ, ಹೆಬ್ರಿ, ಕಾರ್ಕಳ ತಾಲೂಕು ಘಟಕಗಳು ತೀವ್ರವಾಗಿ ಖಂಡಿಸಿವೆ.
ಡಿವೈಎಫ್ಐ ಮತ್ತು ಪತ್ರಕರ್ತರಿಂದ ವತಿಯಿಂದ ಪತ್ರಕರ್ತರ ಮೇಲಿನ ಹಲ್ಲೆ ಖಂಡಿಸಿ,ಪ್ರತಿಭಟನೆ
ಕುಂದಾಪುರ :ನಿನ್ನೆ ಸಂಜೆ ಇಲ್ಲಿನ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಲಂಚದ ಪ್ರಕರಣದ ಕುರಿತಾಗಿ ವರದಿ ಮಾಡಿದ ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಅವರ ಮೇಲೆ ವೈದ್ಯ ಮಹೇಂದ್ರ ಶೆಟ್ಟಿ ನಡೆಸಿದ ಹಲ್ಲೆ ಖಂಡಿಸಿ ಹಾಗೂ ಬಂಧಿಸಿ, ಕಠಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ಕುಂದಾಪುರ ತಾಲೂಕು ಸಮಿತಿ (ಡಿವೈಎಫ್ಐ) ವತಿಯಿಂದ ಇಲ್ಲಿನ ಶಾಸ್ತ್ರಿ ಸರ್ಕಲ್ ಬಳಿ ಶುಕ್ರವಾರ ಸಂಜೆ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮುಖಂಡರಾದ ಸುರೇಶ್ ಕಲ್ಲಾಗರ ಅವರು, ಇಂತವರು ವೈದ್ಯ ವೃತ್ತಿಗೆ ಕಳಂಕ. ಕೂಡಲೇ ಆರೋಗ್ಯ ಸಚಿವರು ಇವರನ್ನು ವಜಾಗೊಳಿಸಿ, ಕಾನೂನು ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದವರು ಒತ್ತಾಯಿಸಿದರು.
ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಹಣ ಪಡೆಯುತ್ತಿರುವುದು ಉಚಿತ ಸೇವೆಗೆ ಕಪ್ಪು ಚುಕ್ಕೆ. ವೈದ್ಯರೊಬ್ಬರು ಈ ರೀತಿಯಾಗಿ ಪತ್ರಕರ್ತರಿಗೆ ಹಲ್ಲೆ ನಡೆಸಿರುವುದು ಅಕ್ಷಮ್ಯ ಅಪರಾಧ. ಇವರು ಮುಂದೆ ವೈದ್ಯ ವೃತ್ತಿಯಲ್ಲಿಯೇ ಮುಂದುವರಿಯಬಾರದು ಎಂದು ಮುಖಂಡರಾದ ಹೆಚ್. ನರಸಿಂಹ ಆಗ್ರಹಿಸಿದರು.
ಡಿವೈಎಫ್ಐ ಮಾಜಿ ಕಾರ್ಯದರ್ಶಿ ಚಂದ್ರಶೇಖರ್ ಮಾತನಾಡಿ, ಪತ್ರಿಕೋದ್ಯಮ ಸಮಾಜದ ನಾಲ್ಕನೇ ಕಂಬವಾಗಿದ್ದು, ಸಮಾಜದ ಓರೆಕೋರೆ ತಿದ್ದುವ ಕಾರ್ಯ ಮಾಡುತ್ತಿದೆ. ತಪ್ಪುಗಳನ್ನು ತೋರಿಸುವ ಕೆಲಸವನ್ನು ಪತ್ರಿಕೆಗಳು ಮಾಡುತ್ತಿದೆ. ಇದು ಪತ್ರಿಕಾ ಧರ್ಮದ ಮೇಲಿನ ಹಲ್ಲೆಯಾಗಿದೆ. ಚಿಕಿತ್ಸೆಗೆ ಹಣ ಪಡೆಯುತ್ತಿರುವ ಆರೋಪ ನಿಜಕ್ಕೂ ಖಾಸಗಿ ಆಸ್ಪತ್ರೆಗಿಂತ ಕೀಳಾದ ನಡೆಯಾಗಿದೆ. ಇಂತವರ ವಿರುದ್ಧ ಕೂಡಲೇ ಶಿಸ್ತು ಕ್ರಮ ಜರಗಿಸಬೇಕು. ಅಕ್ರಮ ಎಸಗಿದ ವೈದ್ಯರನ್ನು ಸಾರ್ವಜನಿಕ ಸೇವೆಯಿಂದ ತಕ್ಷಣ ವಜಾಗೊಳಿಸಬೇಕು. ಕೂಡಲೇ ಆರೋಪಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಡಿವೈಎಫ್ ಐ ಮುಖಂಡರಾದ ಗಣೇಶ್ ದಾಸ್, ರಾಜ ಬಿಟಿಆರ್, ರವಿ ವಿಎಂ, ಮಂಜುನಾಥ್ ಶೋಗನ್, ಉದಯ ಟೈಲರ್, ಸಂಪತ್ ಕುಮಾರ್, ಚಂದ್ರ ಬಿಟಿಆರ್, ಗಣೇಶ ಕಲ್ಲಾಗರ, ರಾಜೀವ ಪಡುಕೋಣೆ, ಸಂತೋಷ್ ಹೆಮ್ಮಾಡಿ, ರಾಘವೇಂದ್ರ ದೋಣಿಮನೆ ಮತ್ತಿತರರು ಉಪಸ್ಥಿತರಿದ್ದರು.
ಕುಂದಾಪುರ ನಗರ ಠಾಣಾ ವೃತ್ತ ನಿರೀಕ್ಷಕ ಜಯರಾಮ ಗೌಡ, ಸಂಚಾರ ಠಾಣಾ ಪಿಎಸ್ ಐ ಅನೂಪ್ ನಾಯಕ್ ಹಾಗೂ ಸಿಬಂದಿ ಭದ್ರತೆ ವಹಿಸಿದ್ದರು.

