

ಭಟ್ಕಳ: ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆಯ ಅಂಗವಾಗಿ ನೂತನ ವೈದ್ಯರಿಗೆ ಸ್ವಾಗತ ಹಾಗೂ ವರ್ಗಾವಣೆಗೊಂಡ ವೈದ್ಯರು ಮತ್ತು ಸಿಬ್ಬಂದಿಗೆ ಬೀಳ್ಕೊಡುಗೆ ಕಾರ್ಯಕ್ರಮ ಭಾವುಕ ವಾತಾವರಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಆಡಳಿತಾಧಿಕಾರಿ ಡಾ. ಸವಿತಾ ಕಾಮತ, ಸರ್ಕಾರಿ ಸೇವೆಯಲ್ಲಿ ವರ್ಗಾವಣೆ ಸಹಜ ಪ್ರಕ್ರಿಯೆಯಾಗಿದ್ದು, ತಾವು ಕಾರ್ಯನಿರ್ವಹಿಸಿದ ಆಸ್ಪತ್ರೆಯು ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದಬೇಕು ಎಂಬುದು ತಮ್ಮ ಆಶಯ ಎಂದು ಹೇಳಿದರು. ಆಸ್ಪತ್ರೆಯ ಬೆಳವಣಿಗೆಗೆ ವೈದ್ಯರು, ಸಿಬ್ಬಂದಿ, ದಾನಿಗಳು ಮತ್ತು ಸಾರ್ವಜನಿಕರ ಸಹಕಾರ ಪ್ರಮುಖ ಪಾತ್ರ ವಹಿಸಿದೆ. ದಾನಿಗಳ ನೆರವಿನಿಂದ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗಿದ್ದು, ಅವರ ವಿಶ್ವಾಸ ಮತ್ತು ಬೆಂಬಲವನ್ನು ಸದಾ ಸ್ಮರಿಸುವುದಾಗಿ ತಿಳಿಸಿದರು.
ಭಟ್ಕಳ ಆಸ್ಪತ್ರೆಗೆ ನೂತನವಾಗಿ ಹಿರಿಯ ತಜ್ಞ ವೈದ್ಯರಾದ ಡಾ. ರಾಬರ್ಟ್ ರೆಬೆಲ್ಲೊ ಸೇರಿದಂತೆ ಹಲವು ವೈದ್ಯರು ಸೇರ್ಪಡೆಯಾಗಿರುವುದು ಆಸ್ಪತ್ರೆಯ ಸೇವಾ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ವ್ಯಕ್ತಿಗಳಿಗಿಂತ ಸಂಸ್ಥೆಯೇ ಶ್ರೇಷ್ಠವಾಗಿದ್ದು, ಎಲ್ಲರ ಒಗ್ಗಟ್ಟಿನ ಪ್ರಯತ್ನದಿಂದ ಆಸ್ಪತ್ರೆ ಮತ್ತಷ್ಟು ಪ್ರಗತಿ ಸಾಧಿಸಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ವರ್ಗಾವಣೆಗೊಂಡ ತಜ್ಞ ವೈದ್ಯರಾದ ಡಾ. ಲಕ್ಷೀಶ, ಡಾ. ಸತೀಶ ಬಿ. ಹಾಗೂ ಶುಶ್ರೂಸಕಿಯರಾದ ಅಮೃತಾ ಎಂ., ಅರ್ಚನಾ ಭಂಡಾರ್ಕರ್ ಮತ್ತು ಅನಸೂಯಾ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಇದೇ ಸಂದರ್ಭದಲ್ಲಿ ನೂತನ ವೈದ್ಯರಾದ ಡಾ. ರಾಬರ್ಟ್ ರೆಬೆಲ್ಲೊ, ಡಾ. ಪ್ರಕಾಶ ನಾಯ್ಕ, ಡಾ. ಅನುರಾಧ ನಾಯಕ ಹಾಗೂ ಡಾ. ಸುಮಲತಾ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಆರೋಗ್ಯಾಧಿಕಾರಿ ಡಾ ಸನಾ ಪಟೇಲ್ ವಹಿಸಿದರು. ಡಾ. ಅರುಣ ಕುಮಾರ್ ವಂದಿಸಿದರು.ದಾನಿಗಳು, ವೈದ್ಯರು, ಆಸ್ಪತ್ರೆ ಸಿಬ್ಬಂದಿ ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

