

ಸ್ಮಾರ್ಟ್ ಕ್ಲಾಸ್ ಚಾಲನೆ, 2026–27ರಿಂದ ಉಚಿತ ಪಿಯುಸಿ ವಿಜ್ಞಾನ ಹಾಗೂ ಸ್ಪರ್ಧಾತ್ಮಕ ತರಗತಿಗಳ ಘೋಷಣೆ
ಶ್ರೀನಿವಾಸಪುರ : ಕೋಲಾರ ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮೈಲಾರಪ್ಪ ಅವರು ಶ್ರೀನಿವಾಸಪುರ ಪಟ್ಟಣದ ಚಿಂತಾಮಣಿ ರಸ್ತೆಯಲ್ಲಿರುವ ಮೌಲಾನಾ ಆಜಾದ್ ಪಬ್ಲಿಕ್ ಶಾಲೆಗೆ ಭೇಟಿ ನೀಡಿ ಶಾಲೆಯ ಶೈಕ್ಷಣಿಕ ಹಾಗೂ ಮೂಲಸೌಕರ್ಯಗಳ ಪರಿಶೀಲನೆ ನಡೆಸಿದರು.
ಎಸ್ಎಸ್ಎಲ್ಸಿ ಪರೀಕ್ಷೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ಅವರು ಸಮಗ್ರವಾಗಿ ಅವಲೋಕಿಸಿದರು. ಈ ವೇಳೆ ಸರ್ಕಾರದಿಂದ ನೂತನವಾಗಿ ಮಂಜೂರಾದ ಸ್ಮಾರ್ಟ್ ಕ್ಲಾಸ್ ಯೋಜನೆಯಡಿ ಅಳವಡಿಸಲಾಗಿರುವ ಡಿಜಿಟಲ್ ಬೋರ್ಡ್ಗೆ ಸುಮಾರು ಎರಡುವರೆ ತಿಂಗಳ ಪ್ರಯೋಗಾತ್ಮಕ ಚಾಲನೆ ನೀಡಿದರು.
ಡಿಜಿಟಲ್ ತಂತ್ರಜ್ಞಾನಗಳ ಬಳಕೆಯಿಂದ ಬೋಧನೆ ಇನ್ನಷ್ಟು ಪರಿಣಾಮಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಪರಿಶೀಲನೆಯ ನಂತರ ಮಾತನಾಡಿದ ಮೈಲಾರಪ್ಪ ಅವರು, 2026–27ನೇ ಶೈಕ್ಷಣಿಕ ವರ್ಷದಿಂದ ಸರ್ಕಾರದ ವತಿಯಿಂದ ಉಚಿತವಾಗಿ ಪ್ರಥಮ ಪಿಯುಸಿ ಪಿಸಿಎಂಬಿ (ವಿಜ್ಞಾನ ವಿಭಾಗ) ತರಗತಿಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದರು. ಇದೇ ವೇಳೆ ನೀಟ್, ಕೆ ಸಿಇಟಿ ಹಾಗೂ ಜೆಇಇ ಸೇರಿದಂತೆ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ಪ್ರಥಮ ಪಿಯುಸಿಯಿಂದಲೇ ಪ್ರಾರಂಭಿಸಲಾಗುತ್ತಿದ್ದು, ದಾಖಲಾತಿಗಳಿಗೆ ಶೀಘ್ರದಲ್ಲೇ ಅರ್ಜಿಗಳನ್ನು ಆಹ್ವಾನಿಸಲಾಗುವುದು ಎಂದು ಮಾಹಿತಿ ನೀಡಿದರು.
ಶಾಲೆಯ ಅಭಿವೃದ್ಧಿಗೆ ಸರ್ಕಾರದಿಂದ ಅಗತ್ಯ ನೆರವು ಒದಗಿಸಲಾಗುವುದು ಎಂದು ಭರವಸೆ ನೀಡಿದ ಅವರು, ಕಾಂಪೌಂಡ್ ನಿರ್ಮಾಣ, ಸಿಸಿ ಕ್ಯಾಮೆರಾ ಅಳವಡಿಕೆ, ಹೆಚ್ಚುವರಿ ಡಿಜಿಟಲ್ ಬೋರ್ಡ್ಗಳು, ಶಾಲಾ ಆವರಣದಲ್ಲಿ ಟೈಲ್ಸ್ ಅಳವಡಿಕೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಹಂತ ಹಂತವಾಗಿ ಮಂಜೂರು ಮಾಡಿ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದ್ದು, ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗೆ ಇಲಾಖೆ ಸದಾ ಬದ್ಧವಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಹೊಸ 15 ಅಂಶಗಳ ಕಾರ್ಯಕ್ರಮದ ಜಿಲ್ಲಾ ಸದಸ್ಯ ಶಬ್ಬೀರ್ ಅಹ್ಮದ್, ಮುಖ್ಯ ಶಿಕ್ಷಕಿ ಅರುಣ, ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.




