

ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಲ್ಲಿ ಮಾವಿನ ಬೆಳೆಯಲ್ಲಿ ಹೆಚ್ಚಿನ ಹಾಗೂ ಗುಣಮಟ್ಟದ ಇಳುವರಿ ಪಡೆಯಬಹುದು ಎಂದು ತೋಟಗಾರಿಕೆ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ನಾಗರಾಜ ಕೆ. ಎಸ್. ತಿಳಿಸಿದರು. ತೋಟಗಾರಿಕೆ ಮಹಾವಿದ್ಯಾಲಯ, ಕೋಲಾರದ ಬಿ.ಎಸ್ಸಿ. ಅಂತಿಮ ವರ್ಷದ ವಿದ್ಯಾರ್ಥಿಯರಿಂದ ಬೆಗ್ಲಿ ಹೊಸಳ್ಳಿ ಹಾಗೂ ಮಂಗಸಂದ್ರ ಗ್ರಾಮದಲ್ಲಿ ಏರ್ಪಡಿಸಿರುವ ಗ್ರಾಮೀಣ ತೋಟಗಾರಿಕೆ ಕಾರ್ಯಾನುಭವ ಶಿಬಿರವನ್ನು ಉದ್ದೇಶಿಸಿ ರೈತರಿಗೆ ಮಾಹಿತಿ ನೀಡಿದರು.
ಮಾವು ಕಟಾವು ಸಾಧನ ಬಳಸಿ ಒಂದು ಗಂಟೆಗೆ 100 ಕೆಜಿ ಮಾವು ಕಟಾವು ಮಾಡಬಹುದು ಹಾಗು ಇದರ ಬಳಕೆಯಿಂದ ಕೂಲಿಯಾಳುಗಳ ಮೇಲೆ ಅವಲಂಬಿತವಾಗದೆ ಗುಣಮಟ್ಟದ ಇಳುವರಿ ಪಡೆಯಬಹುದು ಮತ್ತು ಹಣ್ಣುಗಳು 4-5 ದಿನಗಳ ಕಾಲ ಕೆಡದೆ ಇರುವುದು. ಹಾಗಯೇ ಮಾವು ಸ್ಪೇಷಲ್ ಬಳಕೆಯಿಂದ ಕಾಯಿಯ ಗಾತ್ರ ಮತ್ತು ಗುಣಮಟ್ಟ ಹೆಚ್ಚಿಸಬಹುದು ಮತ್ತು ಪ್ಯಾಕ್ಲೊಬುಟ್ರಜಾಲ್ ಬಳಕೆಯಿಂದ ಅನಿಯಮಿತ ಅಥವಾ ಕಡಿಮೆ ಇಳುವರಿ ತೊಂದರೆಯನ್ನು ನಿವಾರಿಸಬಹುದಾಗಿದೆ ಎಂದು ಹಣ್ಣು ವಿಜ್ಞಾನಿ ಡಾ. ನಾಗರಾಜ ಕೆ. ಎಸ್. ರೈತರಿಗೆ ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿದರು. ಮಾವಿನಲ್ಲಿ ಸವರುವಿಕೆ ಅತಿಮುಖ್ಯವಾಗಿದ್ದು ಸೂಕ್ತ ತಂತ್ರಜ್ಞಾನದೊಂದಿಗೆ ಮಾಡಿದಲ್ಲಿ ಇಳುವರಿಯನ್ನು ಹೆಚ್ಚಿಸಬಹುದು ಎಂದರು. ಮುಖ್ಯವಾಗಿ ಮಾವಿನ ಮರದ ಒಳಭಾಗದಲ್ಲಿ ಅಡ್ಡಾದಿಡ್ಡಿಯಾಗಿ ಬೆಳೆದ ನಿರುಪಯುಕ್ತ, ರೋಗಕ್ಕೆ ತುತ್ತಾದ ರಂಬೆಗಳನ್ನು ಪ್ರತಿಶತ 30 ರಷ್ಟು ಹಾಗೂ ಹೊರಭಾಗದಲ್ಲಿ ಚಾಚಿದ ನಿರುಪಯುಕ್ತ ರೆಂಬೆಗಳನ್ನು ಪ್ರತಿಶತ 10 ರಷ್ಷು ಸವರಿದಲ್ಲಿ ಹೆಚ್ಚಿನ ಹಾಗು ಗುಣಮಟ್ಟದ ಇಳುವರಿ ಪಡೆಯಬಹುದು ಎಂದರು.
ತೋಟಗಾರಿಕೆ ಮಹಾವಿದ್ಯಾಲಯ, ಕೋಲಾರದ ಬೀಜ ವಿಭಾಗದ ಡಾ. ಧನಂಜಯ ಪಿ. ಮಾತನಾಡಿ ಹೊಸದಾಗಿ ನಾಟಿ ಮಾಡಲು ಬಯಸುವವರು ಸೂಕ್ತ ಕಸಿಗಿಡಗಳನ್ನು ಸರ್ಟಿಫೈಡ ನರ್ಸರಿಯಿಂದ ತಗೆದುಕೊಳ್ಳಿ ಹಾಗು ತರಕಾರಿ ಮಾಡಲು ಬಯಸುವವರು ಸೂಕ್ತ ತಳಿಗಳ ಬೀಜೋಪಚಾರದ ಮಾಡಿದ ಬೀಜಗಳನ್ನು ಖರೀದಿಸಿ ಹಾಗು ಮೊಳಕೆ ಪ್ರಮಾಣವನ್ನು ಗಮನಿಸಿ ಮತ್ತು ಖರೀದಿಸಿದ ಬಿಲ್ಲನ್ನು ತಮ್ಮಲ್ಲಿ ಬೆಳೆ ಮುಗಿಯುವವರೆಗೆ ಇಟ್ಟುಕೊಳ್ಳುವುದರಿಂದ ಪ್ರಯೋಜನವಾಗಲಿದೆ ಎಂದರು.
ಗ್ರಾಮೀಣ ತೋಟಗಾರಿಕೆ ಕಾರ್ಯಾನುಭವ ಶಿಬಿರದ ಸಂಯೋಜಕರಾದ ಡಾ. ಜಯಲಕ್ಷಿ ಬಿ. ಪವಾರ ಮಾತನಾಡಿ, ಈ ಶಿಬಿರದಲ್ಲಿ ಹಲವು ತರಬೇತಿ ಹಾಗೂ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳು ತಮ್ಮ ಜಮೀನಿನಲ್ಲಿ ಮಾಡುತ್ತಿದ್ದು, ಗ್ರಾಮದ ಎಲ್ಲ ರೈತರು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು. ಹಾಗೆಯೇ ಶೀಘ್ರದಲ್ಲಿ ಶಿಬಿರದವತಿಯಿಂದ ರೈತರಿಗೆ ಮಾಹಿತಿ ನೀಡಲು ತೋಟಗಾರಿಕೆ ಪ್ರದರ್ಶನವನ್ನು ಗ್ರಾಮದ ಮಟ್ಟದಲ್ಲಿ ಏರ್ಪಡಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಮಾವು ಸ್ಪೇಷಲ್ ಬಳಸುವ ವಿಧಾನ ಹಾಗು ಅದರ ಉಪಯೋಗ, ಮಾವು ಕಟಾವು ಸಾಧನದ ಉಪಯೋಗ, ಅನಿಯಮಿತ ಇಳುವರಿ ಅಥವಾ ಕಡಿಮೆ ಇಳುವರಿ ನಿವಾರಿಸುವಲ್ಲಿ ಪ್ಯಾಕ್ಲೋಬುಟ್ರಜಾಲ್ ಬಳಕೆ ಹಾಗು ಸುಧಾರಿತ ಸಾದನ ಬಳಸಿ ಮಾವಿನ ಚಾಟನಿ ಮೇಲೆ ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳು ರೈತರಿಗೆ ವಿವರಿಸಿದರು.




