


ಕೋಲಾರ, ಜೂ. 9: ಕೇಂದ್ರ ಸರ್ಕಾರದ ಇಂಧನ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ನಗರದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಯಿತು. ಎಂಎಲ್ಸಿ ಎಂ.ಎಲ್. ಅನಿಲ್ ಕುಮಾರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂಭಾಗದಿಂದ ಆರಂಭವಾದ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಅಡುಗೆ ಅನಿಲ ಸಿಲಿಂಡರ್ಗಳನ್ನು ಪ್ರದರ್ಶಿಸಿ, ಮೋದಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಎತ್ತಿನಗಾಡಿ ಮೂಲಕ ಸಾಂಕೇತಿಕ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಮೆಕ್ಕೆ ವೃತ್ತದವರೆಗೆ ಕಾಲ್ನಡಿಗೆ ಜಾಥಾ ನಡೆಸಿ ಮಾನವ ಸರಪಳಿ ರಚಿಸಿ ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಂಎಲ್ಸಿ ಎಂ.ಎಲ್. ಅನಿಲ್ ಕುಮಾರ್, ಅಚ್ಚೇ ದಿನ್ ತರಲು ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜನರ ನಿರೀಕ್ಷೆಗಳನ್ನು ಈಡೇರಿಸಲು ವಿಫಲವಾಗಿದೆ. ಅಡುಗೆ ಅನಿಲ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ನಿರಂತರವಾಗಿ ಹೆಚ್ಚಿಸುವ ಮೂಲಕ ಸಾಮಾನ್ಯ ಜನರ ಮೇಲೆ ಆರ್ಥಿಕ ಹೊರೆ ಹಾಕಲಾಗಿದೆ ಎಂದು ಆರೋಪಿಸಿದರು.
ಅಡುಗೆ ಅನಿಲಕ್ಕೆ ನೀಡುತ್ತಿದ್ದ ಸಬ್ಸಿಡಿಯನ್ನು ಹಿಂತೆಗೆದುಕೊಂಡಿರುವುದರಿಂದ ಮಧ್ಯಮ ಮತ್ತು ಬಡ ವರ್ಗದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಅವರು ಹೇಳಿದರು. ಇಂಧನ ದರಗಳನ್ನು ತಕ್ಷಣ ಕಡಿಮೆ ಮಾಡದಿದ್ದರೆ ಜಿಲ್ಲೆಯ ಕಾಂಗ್ರೆಸ್ ಶಾಸಕರ ನೇತೃತ್ವದಲ್ಲಿ ಇನ್ನಷ್ಟು ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಯುಪಿಎ ಸರ್ಕಾರದ ಅವಧಿಯಲ್ಲಿ ಅಡುಗೆ ಅನಿಲದ ಬೆಲೆ ₹400 ರಿಂದ ₹450ರೊಳಗಿತ್ತು. ಆದರೆ ಪ್ರಸ್ತುತ ಅದು ಸಾವಿರ ರೂಪಾಯಿ ಗಡಿ ತಲುಪಿದೆ. ಡೀಸೆಲ್ ಮತ್ತು ಪೆಟ್ರೋಲ್ ದರಗಳೂ ಗಣನೀಯವಾಗಿ ಏರಿಕೆ ಕಂಡಿವೆ ಎಂದು ಆರೋಪಿಸಿದ ಅವರು, ನೋಟು ಅಮಾನ್ಯೀಕರಣ, ನರೇಗಾ ಯೋಜನೆಯ ಮೂಲ ಉದ್ದೇಶಗಳಿಗೆ ಧಕ್ಕೆ ಹಾಗೂ ಮಹಿಳಾ ಮೀಸಲಾತಿ ಜಾರಿಗೆ ವಿಳಂಬ ಸೇರಿದಂತೆ ಹಲವು ವಿಷಯಗಳಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದರು.
ದೇಶದ ರೈತರಿಗೆ ಅಗತ್ಯ ರಸಗೊಬ್ಬರ ಸಮರ್ಪಕವಾಗಿ ದೊರೆಯುತ್ತಿಲ್ಲ. ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ ಅವರು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಉಲ್ಲೇಖಿಸಿ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುವುದನ್ನು ಕೇಂದ್ರ ಸರ್ಕಾರ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ, ಕಾರ್ಯಾಧ್ಯಕ್ಷರಾದ ಊರಬಾಗಲು ಶ್ರೀನಿವಾಸ್ ಹಾಗೂ ಮ್ಯಾಕಲ ನಾರಾಯಣಸ್ವಾಮಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಖಾಜಿಕಲ್ಲಹಳ್ಳಿ ಮುನಿರಾಜು, ಕೋಮುಲ್ ನಿರ್ದೇಶಕರಾದ ಚಂಜಿಮಲೆ ರಮೇಶ್ ಮತ್ತು ಕೆ.ಕೆ. ಮಂಜುನಾಥ್, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ. ಶಿವಕುಮಾರ್, ಜಿಲ್ಲಾ ಉಪಾಧ್ಯಕ್ಷ ಹಿದಾಯತ್ ಉಲ್ಲಾ, ಶ್ರೀನಿವಾಸಪುರ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮನೋಹರ್, ತಾಲ್ಲೂಕು ಅಧ್ಯಕ್ಷ ವೇಮಗಲ್ ಮುನಿಯಪ್ಪ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಉರಟ ಅಗ್ರಹಾರ ಚೌಡರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೈಲಾಂಡಹಳ್ಳಿ ಮುರಳಿ ಹಾಗೂ ಸೀಸಂದ್ರ ಗೋಪಾಲಗೌಡ , ಜಫಿರುಲ್ಲಾ ಖಾನ್ ಸೇರಿದಂತೆ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.


