

ಕುಂದಾಪುರ, ಡಿ.22; ಕುಂದಾಪುರ ಚರ್ಚಿನ ಅಂತರ್ ಧರ್ಮೀಯ ಸೌಹಾರ್ದ ಆಯೋಗ ಮತ್ತು ಕಥೊಲಿಕ್ ಸಭಾ ಕುಂದಾಪುರ ಘಟಕದಿಂದ ಕ್ರಿಸ್ಮಸ್ ಸ್ನೇಹ ಸಮ್ಮೀಲನ ಕಾರ್ಯಕ್ರಮ ಡಿ. 21 ರಂದು ಕುಂದಾಪುರ ಚರ್ಚ್ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಕುಂದಾಪುರ ಚರ್ಚಿನ ಧರ್ಮಗುರು ಅ।ವಂ।ಪೌಲ್ ರೇಗೊ ಮಾತನಾಡಿ “ನಾವು ತಮ್ಮ ತಮ್ಮ ಧರ್ಮ ಪಾಲಿಸುವಾಗ ನಾವು ಇತರ ಧರ್ಮದವರನ್ನು ಪ್ರೀತಿಸಬೇಕು. ಎಲ್ಲ ಧರ್ಮಗಳಲ್ಲಿರುವುದು ಸಂದೇಶ ಒಂದೇ. ಕುಂದಾಪುರದಲ್ಲಿ ಧರ್ಮಗಳ ನಡುವೆ ಸೌಹಾರ್ದತೆ ಇರುವುದು ಸಂತೋಷದ ವಿಷಯ. ಗಲಾಟೆಗಳು ನಡೆಯುವಾಗ ಶಾಂತಿ ಸಭೆ ನಡೆಸಲಾಗುತ್ತದೆ, ಆದರೆ ನಾವು ಅವಾಗಾವಗ ಒಟ್ಟು ಕೂಡಿ ಸೌಹಾರ್ದ ಸಭೆಗಳನ್ನು ನಡೆಸಬೇಕು. ಹಿಂದು ಮುಸ್ಲಿಂ ಕ್ರಿಶ್ಚಿಯನ್ ತಮ್ಮ ತಮ್ಮ ಮುಖ್ಯ ಹಬ್ಬಗಳ ಸಂದರ್ಭದಲ್ಲಿಅಹ್ವಾನ ನೀಡಿ ಒಟ್ಟಾಗಿ ಹಬ್ಬಗಳನ್ನ್ನು ಆಚರಿಸಬೇಕು. ಕ್ರಿಸ್ಮಸ್ ಅಂದರೆ ದೇವರ ಪ್ರೀತಿಯನ್ನು ಇತರರಿಗೆ ಹಂಚುವುದು. ಕ್ರಿಸ್ಮಸ್ ಏಕತೆಯ ಹಬ್ಬ ಎಂದು’ ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮನಿಸಿದ ಸಹ ಬಾಳ್ವೆ ಇದರ ಸಂಚಾಲಕರಾದ ರಾಮಕ್ರಷ್ಣ ಹೆರಳೆ, ಬಾಲ ನಕ್ಷತ್ರ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ “ಕ್ರಿಸ್ಮಸ್ ಕೇವಲ ಕ್ರೈಸ್ತರ ಹಬ್ಬವಲ್ಲ, ಇದು ಇಡೀ ಜಗತ್ತಿನ ಹಬ್ಬ, ಅಂದಿನ ಕಾಲದಲ್ಲಿ ಜನ ಕಶ್ಟ ಬವಣೆ, ಪಾಪಗಳ ಜೊತೆ ಜೀವಿಸುವಾಗ ಅವರ ಮುಕ್ತಿಗಾಗಿ ಯೇಸು ಈ ಲೋಕದಲ್ಲಿ ಹುಟ್ಟಿದ, ಯೇಸುವಿನ ಜನನದ ಹಬ್ಬಕ್ಕಾಗಿ ನಾವೆಲ್ಲ ಇತರ ಧರ್ಮೀಯರು ಸೇರಿ ಹಬ್ಬ ಆಚರಿಸುವುದು ಬಹಳ ಅರ್ಥಪೂರ್ಣವಾಗಿದೆ, ಇಂತಹ ಕಾರ್ಯಕ್ರಮ ನಮ್ಮ ದೇಶದಲ್ಲಿ ಬಹಳ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟರು.
ಮತ್ತೋರ್ವ ಅತಿಥಿ ಕೋಟ ಜಾಮೀಯ ಮಸೀದಿಯ ಅಧ್ಯಕ್ಷರಾದ ಇಬ್ರಾಹಿಂ ಸಾಹೇಬ್ ಕೋಟ, “ನಾವೆಲ್ಲರೂ ಅಣ್ಣ ತಮ್ಮಂದಿರು, ನಾವೆಲ್ಲ ಒಬ್ಬರನೊಬ್ಬರು ಅರಿತು ಬಾಳಬೇಕು, ಯೇಸು ಕ್ರಿಸ್ತರು ಮಹಾ ಪ್ರವಾದಿ ಅವರನ್ನು ನಂಬದಿದ್ದವರು ನೀಜವಾದ ಮುಸ್ಲಿನಲ್ಲ, ಇಂತಹ ಸ್ನೇಹ ಕೂಟಗಳು ನಡೆಯುತ್ತಲೇ ಇರಬೇಕು’ ಎಂದು ತಿಳಿಸಿದರು. ಕುಂದಾಪುರ ಸಿ.ಎಸ್ ಐ ಚರ್ಚಿನ ಪಾಸ್ಟರ್ ವಂ।ಇಮಾನ್ಯೂವೆಲ್ ಜಯಕರ್ ಮಾತನಾಡಿ “ಕ್ರಿಸ್ಮಸ್ ಅಂದರೆ ಜಗತ್ತಿಗೆ ಸಂತೋಷ್, ಎಲ್ಲಾ ಧರ್ಮೀಯರ ಜೊತೆ ಸೇರಿ ಬಾಳಬೇಕು, ನಾನು ಪಾಸ್ಟರ್ ತರಬೇತಿ ಪಡೆಯುವಾಗ, ನಾನು ಇತರ ಧರ್ಮದವರ ಜೊತೆ ಹಾಸ್ಟೆಲ್ ಕೊಠಡಿಯಲ್ಲಿ ಜೀವಿಸಬೇಕಾಗಿತ್ತು, ಕಾರಣ ನಾವು ಇತರ ಧರ್ಮದವರನ್ನು ಅರಿಯಬೇಕಾಗಿತ್ತು. ಕ್ರಿಸ್ಮಸ್ ಅಂದರೆ ಎಲ್ಲರೂ ಸಂತೋಷ ಪಡುವ ಹಬ್ಬವಾಗಿದೆ ಎಂದು ತಿಳಿಸಿದರು.
ಕುಂದಾಪುರ ಚರ್ಚ್ ಗಾಯನ ಮಂಡಳಿ ಮತ್ತು ಕುಂದಾಪುರ ಸಿ.ಎಸ್ ಐ ಚರ್ಚಿನವರಿಂದ ಕ್ರಿಸ್ಮಸ್ ಕೇರೊಲ್ ಗಾಯನಗಳನ್ನು ಹಾಡಿದರು. ಈ ಸ್ನೇಹ ಸಮ್ಮೀಲನಕ್ಕೆ ಹಿಂದು ಮುಸ್ಲಿಂ, ಕ್ರೈಸ್ತ ಬಾಂಧವರು ಸೇರಿದ್ದರು. ರಾಜಕೀಯ ಪ್ರಮುಕರು ಕೂಡ ಹಾಜರಿದ್ದರು. ವೇದಿಕೆಯಲ್ಲಿ ಕಥೊಲಿಕ್ ಸಭಾ ಕಾರ್ಯದರ್ಶಿ ಉಪಸ್ತಿತರಿದ್ದು, ಆಶಾ ಕರ್ವಾಲ್ಲೊ, ವಾಲ್ಟರ್ ಡಿಸೋಜಾ ಅತಿಥಿಗಳ ಪರಿಚಯ ನೀಡಿದರು. ಭೋಜನದ ಜೊತೆ ಕಾರ್ಯಕ್ರಮ ಮುಕ್ತಾಯವಾಯಿತು.
ಕಥೊಲಿಕ್ ಸಭಾ ಕುಂದಾಪುರ ಘಟಕ ಅಧ್ಯಕ್ಷರಾದ ವಿಲ್ಸನ್ ಡಿಆಲ್ಮೇಡಾ ಸ್ವಾಗತಿಸಿದರು. ವಿನೋದ್ ಕ್ರಾಸ್ಟೊ ನಿರೂಪಿಸಿದರು. ಶೈಲಾ ಡಿಆಲ್ಮೇಡಾ ವಂದಿಸಿದರು.

















































