

ಕುಂದಾಪುರ: “ಯಾವುದೇ ರೋಗದ ನಿವಾರಣೆಯು ಪರಿಪೂರ್ಣವಾಗಬೇಕಾದರೆ ವೈದ್ಯಕೀಯ ಕೌಶಲ, ಮಾನಸಿಕ ನೆಮ್ಮದಿ ಹಾಗೂ ದೈವಿಕ ಬಲ ಈ ಮೂರೂ ಸಮನ್ವಯಗೊಳ್ಳುವುದು ಅತ್ಯಗತ್ಯ. ಆ ದೃಷ್ಟಿಕೋನವನ್ನು ಪ್ರತಿಯೊಬ್ಬ ರೋಗಿಗೂ ತಲುಪಿಸುವ ಹಾಗೂ ಜಾಗತಿಕ ಮಟ್ಟದಲ್ಲಿ ಆರೋಗ್ಯ ಸೌಹಾರ್ದತೆಯನ್ನು ಬಿತ್ತುವ ಉದ್ದೇಶದಿಂದ ಧನ್ವಂತರಿ ಜಯಂತಿಯಂದು ಧನ್ವಂತರಿ ಹೋಮವನ್ನು ನಡೆಸಲಾಗಿದೆ” ಎಂದು ಆಲೂರಿನಲ್ಲಿರುವ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ಮುಖ್ಯಸ್ಥರಾದ ಡಾ. ರಾಜೇಶ್ ಬಾಯರಿ ತಿಳಿಸಿದ್ದಾರೆ.
ಆಯುರ್ವೇದ ಪದ್ಧತಿಯ ಆರಾಧ್ಯ ದೇವರಾದ ಭಗವಾನ್ ಧನ್ವಂತರಿ ಜಯಂತಿಯ ಪ್ರಯುಕ್ತ ಲೋಕದ ಶಾಂತಿ, ಕಲ್ಯಾಣ ಹಾಗೂ ಸಮಗ್ರ ಆರೋಗ್ಯ ವೃದ್ಧಿಯ ಸಂಕಲ್ಪದೊಂದಿಗೆ ಚಿತ್ರಕೂಟ ಆಯುರ್ವೇದ ಸಂಸ್ಥೆಯಲ್ಲಿ ನಡೆದ ಧನ್ವಂತರಿ ಹೋಮದ ಸಂದರ್ಭದಲ್ಲಿ ಅವರು ಮಾತನಾಡಿದರು.
ಈ ಧಾರ್ಮಿಕ ಹಾಗೂ ವೈಜ್ಞಾನಿಕ ಕಾರ್ಯಕ್ರಮದಲ್ಲಿ ಚಿತ್ರಕೂಟ ಸಂಸ್ಥೆಯಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯುತ್ತಿರುವ ವಿಶ್ವದ ಬೇರೆ ಬೇರೆ ದೇಶಗಳ ಸುಮಾರು 40 ರಿಂದ 50ಕ್ಕೂ ಹೆಚ್ಚು ವಿದೇಶಿ ಪ್ರಜೆಗಳು ಭಾಗವಹಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು. ಭಾರತೀಯ ಸಂಸ್ಕೃತಿ ಮತ್ತು ಆಯುರ್ವೇದ ವಿಧಿ-ವಿಧಾನಗಳ ಮಹತ್ವವನ್ನು ಅರಿತು, ಭಾರತೀಯರೊಂದಿಗೆ ವಿದೇಶಿಯರೂ ಹೋಮಕುಂಡದ ಮುಂದೆ ಕುಳಿತು ಪೂರ್ಣಾಹುತಿಯಲ್ಲಿ ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿದರು.
ಕಾರ್ಯಕ್ರಮದ ಕುರಿತು ಮಾತನಾಡಿದ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ಸಂಸ್ಥಾಪಕರು ಹಾಗೂ ಮುಖ್ಯ ವೈದ್ಯರಾದ ಡಾ. ರಾಜೇಶ್ ಬಾಯರಿ ಅವರು, “ಆಯುರ್ವೇದ ಕೇವಲ ಔಷಧಿ ನೀಡುವ ವಿಜ್ಞಾನವಲ್ಲ, ಅದು ದೇಹ, ಮನಸ್ಸು ಮತ್ತು ಆತ್ಮವನ್ನು ಸಮತೋಲನದಲ್ಲಿಡುವ ಅಪೂರ್ವ ಜೀವನ ಪದ್ಧತಿ. ಪ್ರಾಚೀನ ಆಯುರ್ವೇದ ಶಾಸ್ತ್ರವು ರೋಗ ಪರಿಹಾರಕ್ಕೆ ತ್ರಿವಿಧ ಚಿಕಿತ್ಸಾ ವಿಧಾನಗಳನ್ನು ಪ್ರತಿಪಾದಿಸಿದೆ. ಮೊದಲನೆಯದಾಗಿ ದೈವವ್ಯಪಾಶ್ರಯ ಚಿಕಿತ್ಸೆ- ಇದರಲ್ಲಿ ಹೋಮ, ಹವನ, ಜಪ, ತಪ ಮತ್ತು ದೈವಿಕ ಪ್ರಾರ್ಥನೆಗಳ ಮೂಲಕ ಆಧ್ಯಾತ್ಮಿಕ ಹಾಗೂ ಪರಿಸರದ ಧನಾತ್ಮಕ ಶಕ್ತಿಯಿಂದ ಆರೋಗ್ಯವನ್ನು ಸುಧಾರಿಸಲಾಗುತ್ತದೆ. ಎರಡನೆಯದು ಯುಕ್ತಿವ್ಯಪಾಶ್ರಯ ಚಿಕಿತ್ಸೆ ಅಂದರೆ ಒಬ್ಬ ಅನುಭವಿ ವೈದ್ಯನು ತನ್ನ ಜ್ಞಾನ, ಕೌಶಲ, ಸೂಕ್ತ ಪಥ್ಯ ಮತ್ತು ಕಷಾಯ-ಔಷಧಗಳ ಯೋಜನೆಯ ಮೂಲಕ ಕಾಯಿಲೆಯನ್ನು ಗುಣಪಡಿಸುವ ಕ್ರಮ. ಮೂರನೆಯ ಹಾಗೂ ಅತ್ಯಂತ ಪ್ರಮುಖವಾದದ್ದು ಸತ್ತ್ವಾವಜಯ ಚಿಕಿತ್ಸೆ- ಇದು ರೋಗಿಯ ಮಾನಸಿಕ ಸ್ಥೈರ್ಯ, ಮನೋಬಲ ಮತ್ತು ಗುಣಮುಖನಾಗುವೆನೆಂಬ ಅಚಲ ಆತ್ಮವಿಶ್ವಾಸವನ್ನು ಹೆಚ್ಚಿಸುವ ಮಾನಸಿಕ ಚಿಕಿತ್ಸೆಯಾಗಿದೆ” ಎಂದು ವಿವರಿಸಿದರು.


