

ಶ್ರೀನಿವಾಸಪುರ : ಸ್ವಾತಂತ್ರ್ಯ ಪೂರ್ವದಿಂದಲೂ ಕೆಲವು ಗ್ರಾಮಗಳಿಗೆ ಮೂಲಭೂತ ರಸ್ತೆ ಸೌಲಭ್ಯ ಇಲ್ಲದಿರುವುದು ನೋವು ತಂದಿದ್ದು, ಅಂತಹ ಗ್ರಾಮಗಳನ್ನು ಗುರುತಿಸಿ ಸಿಸಿ ರಸ್ತೆಗಳನ್ನು ನಿರ್ಮಿಸುವುದು ನನ್ನ ಕನಸಾಗಿದೆ ಎಂದು ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಹೇಳಿದರು.
ತಾಲ್ಲೂಕಿನ ಕೂರಿಗೇಪಲ್ಲಿ ಗ್ರಾಮಪಂಚಾಯಿತಿ ಆವರಣದಲ್ಲಿ ಮಂಗಳವಾರ ನಡೆದ ತಾಲ್ಲೂಕು ಆಡಳಿತ ನಡೆ ಗ್ರಾಮದ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಪ್ರಸ್ತುತ 35 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ.
ಸಾರ್ವಜನಿಕರು ತಮ್ಮ ವಾಸಸ್ಥಳದ ಬಳಿ ರಸ್ತೆ ಸೌಲಭ್ಯಗಳ ಕೊರತೆ ಇದ್ದರೆ ತಕ್ಷಣ ತಮ್ಮ ಅಥವಾ ಅಧಿಕಾರಿಗಳ ಗಮನಕ್ಕೆ ತರಬೇಕು. ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡು ರಸ್ತೆಗಳನ್ನು ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ಕ್ಷೇತ್ರದ 400 ಗ್ರಾಮಗಳಲ್ಲಿ ಹೈಮಾಸ್ಕ್ ಹಾಗೂ ಸೋಲಾರ್ ಲೈಟ್ಗಳನ್ನು ಅಳವಡಿಸುವ ಯೋಜನೆ ಹೊಂದಿದ್ದು, ಈಗಾಗಲೇ 150 ಲೈಟ್ಗಳನ್ನು ಅಳವಡಿಸಲಾಗಿದೆ. ಅಗತ್ಯ ಅನುದಾನ ಬಿಡುಗಡೆಗಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಅನುದಾನ ಲಭ್ಯವಾದ ತಕ್ಷಣ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ಕಳೆದ 10 ವರ್ಷಗಳಿಂದ ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗದವರಿಗೆ ಇಲಾಖೆಯ ಮೂಲಕ ಉಚಿತವಾಗಿ 500 ಕೊಳವೆಬಾವಿಗಳನ್ನು ಒದಗಿಸಲಾಗಿದೆ ಎಂದರು.
ಬೈರಗಾನಪಲ್ಲಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಕೋಲಾರದಿಂದ ಬಿ.ಕೊತ್ತಕೋಟೆವರೆಗೆ ಉತ್ತಮ ರಸ್ತೆ ಕಾಮಗಾರಿ ನಡೆಯುತ್ತಿದೆ.
ಬಚ್ಚಿರೆಡ್ಡಿಗಾರಿಪಲ್ಲಿ ಬಳಿ 3 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣಗೊಂಡಿದ್ದು, ಮುಂದಿನ 15 ದಿನಗಳಲ್ಲಿ ಭೂಮಿಪೂಜೆ ನೆರವೇರಲಿದೆ. ಮರಸನಪಲ್ಲಿ ಪೂಲಕುಂಟ್ಲಪಲ್ಲಿ ಮಾರ್ಗ ಮಧ್ಯೆ 1 ಕೋಟಿ ರೂ. ವೆಚ್ಚದಲ್ಲಿ ಚೆಕ್ಡ್ಯಾಂ ನಿರ್ಮಿಸಲಾಗಿದೆ. ಬೀಮಗಾನಪಲ್ಲಿ ಬಳಿ 3.50 ಕೋಟಿ ರೂ. ವೆಚ್ಚದಲ್ಲಿ ಚೆಕ್ಡ್ಯಾಂ ನಿರ್ಮಾಣಕ್ಕೆ ಭೂಮಿಪೂಜೆ ನಡೆಯಲಿದೆ ಎಂದು ವಿವರಿಸಿದರು.
ಗ್ರಾಮಪಂಚಾಯಿತಿಗಳಲ್ಲಿ ಸಾರ್ವಜನಿಕರಿಂದ ಬಂದಿರುವ ಸಮಸ್ಯೆಗಳನ್ನು ಯುಗಾದಿ ಹಬ್ಬದೊಳಗೆ ಪರಿಹರಿಸುವಂತೆ ಇಒ, ಆಡಳಿತಾಧಿಕಾರಿ ಹಾಗೂ ಪಿಡಿಒಗಳಿಗೆ ಸೂಚನೆ ನೀಡಿದರು.
ಗೌನಿಪಲ್ಲಿ ಗ್ರಾಮಪಂಚಾಯಿತಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿಯಾಗಿರುವುದನ್ನು ತೆರವುಗೊಳಿಸಲು ಹಾಗೂ ಪಡಿತರ ಚೀಟಿಗಳ ಸಮಸ್ಯೆಗಳನ್ನು ಶೀಘ್ರ ಪರಿಹರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕಾರ್ಯಕ್ರಮದಲ್ಲಿ ಕೂರಿಗೇಪಲ್ಲಿ 23, ಬೈರಗಾನಪಲ್ಲಿ 43, ಗೌನಿಪಲ್ಲಿ 10 ಹಾಗೂ ಕೋಡಿಪಲ್ಲಿ 46 ಅರ್ಜಿಗಳನ್ನು ಸ್ವೀಕರಿಸಲಾಯಿತು.
ಈ ಸಂದರ್ಭದಲ್ಲಿ ಇಒ ಕೆ. ಸರ್ವೇಶ್, ಎಡಿ. ರಾಮಪ್ಪ, ಅಭಿವೃದ್ಧಿ ಅಧಿಕಾರಿಗಳಾದ ರಮೇಶ್ ಕುಮಾರ್, ರವಿಕುಮಾರ್, ನಾರಾಯಣಸ್ವಾಮಿ, ಚಲಪತಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿ ಆರ್. ನಾರಾಯಣಸ್ವಾಮಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.

