ಎಪಿಎಂಸಿ ಕಾಯಿದೆಯನ್ನು ವಾಪಸ್ ಪಡೆದು ಪಾಳು ಬೀಳುತ್ತಿರುವ ಎಪಿಎಂಸಿಗಳಿಗೆ ಬಲ ತುಂಬಲು ಹೆಚ್ಚಿನ ಅನುದಾನ ಬಿಡುಗಡೆ ಮಾಡಿ-ರೈತಸಂಘ

ಶ್ರೀನಿವಾಸಪುರ; ಜೂ.: ಎಪಿಎಂಸಿ ಕಾಯಿದೆಯನ್ನು ವಾಪಸ್ ಪಡೆದು ಪಾಳು ಬೀಳುತ್ತಿರುವ ಎಪಿಎಂಸಿಗಳಿಗೆ ಬಲ ತುಂಬಲು ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿ ಮಾಡಬೇಕೆಂದು ರೈತಸಂಘದಿಂದ ತಹಸೀಲ್ದಾರ್ ಹಾಗೂ ಎಪಿಎಂಸಿ ಅಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ಕೃಷಿ ಕ್ಷೇತ್ರದ ಜೀವನಾಡಿಯಾಗಿರುವ ರೈತರು ಬೆವರು ಸುರಿಸಿ ಬೆಳೆದ ಬೆಳೆಯನ್ನು ನ್ಯಾಯಯುತ ಬೆಲೆಗೆ ಮಾರಾಟ ಮಾಡುವ ಎಪಿಎಂಸಿ ಇಂದು ಮೂಲಭೂತ ಸೌಕರ್ಯಗಳಿಲ್ಲದೆ ಸ್ಮಶಾನಗಳಾಗಿ ಮಾರ್ಪಟ್ಟಿದೆ. ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಶುಲ್ಕ ಪಾವತಿಸಲು ಆದಾಯವಿಲ್ಲದೆ ಅನಾಥವಾಗುತ್ತಿವೆ ಎಂದು ಎಪಿಎಂಸಿ ಅವ್ಯವಸ್ಥೆ ವಿರುದ್ಧ ರೈತಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಹಾಗೂ ಎಪಿಎಂಸಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ 4 ವರ್ಷಗಳ ಹಿಂದೆ ಜಾರಿಗೆ ತಂದಿದ್ದ ಮೂರು ಕಾಯಿದೆಗಳನ್ನು ರೈತರ ಹೋರಾಟದ ಪ್ರತಿಫಲ ವಾಪಸ್ ಪಡೆಯಿತು. ಆದರೆ, ರಾಜ್ಯ ಸರ್ಕಾರ ತನ್ನ ಮೊಂಡುತನದಿಂದ ಯಾವುದೇ ಕಾಯಿದೆಯನ್ನು ವಾಪಸ್ ಪಡೆಯದೆ ಅದನ್ನೇ ಮುಂದುವರೆಸಿದ ಹಿನ್ನೆಲೆಯಲ್ಲಿ ಎಪಿಎಂಸಿಗೆ ಬರುತ್ತಿದ್ದ ಆದಾಯಕ್ಕೆ ಹೊಡೆತ ಬಿದ್ದಿದೆ ಎಂದು ಆರೋಪ ಮಾಡಿದರು.
ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ವಿಶ್ವ ವಿಖ್ಯಾತಿ ಮಾವಿನ ನಗರಿ ಎಂದೇ ಪ್ರಸಿದ್ಧಿ ಪಡೆದಿರುವ ಮಾವು ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಬದುಕು ಕಟ್ಟಿಕೊಳ್ಳಲು ಬರುವ ಕೂಲಿ ಕಾರ್ಮಿಕರು, ವರ್ಷಪೂರ್ತಿ ಬೆವರು ಸುರಿಸಿ ಮನೆ ಮಕ್ಕಳಂತೆ ಸಾಕುವ ರೈತರು, ಆರೋಗ್ಯದಿಂದ ಬಂದು ಅನಾರೋಗ್ಯ ಪೀಡಿತರಾಗಿ ಮನೆಗೆ ವಾಪಸ್ ಹೋಗುವ ಮಟ್ಟಕ್ಕೆ ಮಾರುಕಟ್ಟೆ ವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪ ಮಾಡಿದರು.
ಈ ಕಾಯಿದೆಯಿಂದ ಎಪಿಎಂಸಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಜೊತೆಗೆ ಯಾರ್ಡ್‍ನಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ವರ್ತಕರು ಎಪಿಎಂಸಿ ಆಡಳಿತ ಮಂಡಳಿಯ ಕೈತಪ್ಪಿ ತಮಗಿಷ್ಟ ಬಂದ ರೀತಿ ವ್ಯಾಪಾರ ಮಾಡುವ ಮೂಲಕ ರೈತರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಹೆಚ್ಚಾಗಿರುವ ಜೊತೆಗೆ ಮಾರುಕಟ್ಟೆಗೆ ವರ್ತಕರು ಪಾವತಿಸುತ್ತಿದ್ದ ಸೆಸ್ ಶೇ.1.5 ರಿಂದ ಶೇ.0.60ಕ್ಕೆ ಇಳಿಕೆ ಮಾಡಿ ಎಪಿಎಂಸಿಯಿಂದ ಹೊರಗಡೆ ವ್ಯಾಪಾರ ಮಾಡುವ ಮುಖಾಂತರ ಪಾವತಿಸಬೇಕಾದ ಸೆಸ್ ಹಣಕ್ಕೂ ಹೊಡೆತ ಬಿದ್ದಿದೆ ಎಂದು ಹೇಳಿದರು.
ರೈತರ ನಿರೀಕ್ಷೆಯಂತೆ ಬಹುಮತದೊಂದಿಗೆ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಸರ್ಕಾರ ಕೂಡಲೇ ಎಪಿಎಂಸಿ ಕಾಯಿದೆಯನ್ನು ವಾಪಸ್ ಪಡೆದು ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿ ಅಭಿವೃದ್ಧಿಪಡಿಸುವ ಜೊತೆಗೆ ವರ್ತಕರ ಮೇಲೆ ವಿಧಿಸುತ್ತಿರುವ ಸೆಸ್ ಶೇ.1.5ಕ್ಕೆ ಏರಿಕೆ ಮಾಡಬೇಕು. ಮಾವು ಮಾರುಕಟ್ಟೆಗೆ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿಪಡಿಸಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಎಪಿಎಂಸಿ ಅಧಿಕಾರಿಗಳು, ಜಿಲ್ಲಾಧಿಕಾರಿಗಳ ಮುಖಾಂತರ ನಿಮ್ಮ ಮನವಿಯನ್ನು ಸರ್ಕಾರಕ್ಕೆ ಕಳುಹಿಸುವ ಭರವಸೆ ನೀಡಿದರು.
ಮನವಿ ನೀಡುವಾಗ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ತಾಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ, ಆಲವಾಟ ಶಿವ, ಶೇಕ್ ಶಫಿಉಲ್ಲಾ, ವೆಂಕಟ್ ಮುಂತಾದವರಿದ್ದರು.

ಜನನುಡಿ ಡಾಟ್ ಕಾಮ್ ಸುದ್ದಿ ಸಂಸ್ಥೆಯ “ಮುದ್ದು ಯೇಸು2022-23” ರರ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

ಕುಂದಾಪುರ,ಜೂನ್ 4 : ಜನನುಡಿ ಡಾಟ್ ಕಾಮ್ ಸುದ್ದಿ ಸಂಸ್ಥೆಯಿಂದ ಏರ್ಪಡಿಸಿದ ಮುದ್ದು ಯೇಸು ಫೋಟೊ ಸ್ಫರ್ಧೆಯ ವಿಜೇತರಿಗೆ ಕೋಟೆಶ್ವರ ಕಟ್ಕರೆಯ ಬಾಲ ಯೇಸುವಿನ ಆಶ್ರಮದಲ್ಲಿ ಮತ್ತು ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು. ಗುರುವಾರದಂದು ಬಾಲ ಯೇಸುವಿನ ನೊವೆನಾ ದಿವಸ ವಿಜೇತರಿಗೆ ಶುಕ್ರವಾರದಂದು ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ಬಹುಮಾನಗಳನ್ನು ವಿತರಿಸಲಾಯಿತು.

ಕಟ್ಕೆರೆ ಬಾಲಯೇಸುವಿನ ಆಶ್ರಮದಲ್ಲಿ,ಆಶ್ರಮದ ನೂತನ ಮುಖ್ಯಸ್ಥರಾದ ವಂ|ಪ್ರವೀಣ್ ಪಿಂಟೊ ಮತ್ತು ಧರ್ಮಗುರು ವಂ|ಜೋ ತಾವ್ರೊ ವಿಜೇತ ಮಕ್ಕಳಿಗೆ ಬಹುಮಾನವನ್ನು ವಿತರಿಸಿದರು. ಶುಕ್ರವಾರ ಸಂಜೆ ರೋಜರಿ ಚರ್ಚಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ವಿಜೇತರಿಗೆ ಬಹುಮಾನವನ್ನು ವಿತರಿಸಿದರು. ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ಮತ್ತು ನಗದು ಹಣವನ್ನು ವಿತರಿಸಿ ಶುಭ ಕೋರಿದರು. ಈ ಸಂದರ್ಭದಲ್ಲಿ ಕುಂದಾಪುರದ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನ, ಪೋಷಕಿಯರಲ್ಲಿ ಒಬ್ಬರಾದ ಶಾಂತಿ ಪಿಂಟೊ ಮತ್ತು ಇತರು ಉಪಸ್ಥಿತರಿದ್ದರು.

  ಜನನುಡಿ ಸುದ್ದಿ ಸಂಸ್ಥೆಯ ಸಂಪಾದಕರಾದ ಬರ್ನಾಡ್ ಡಿಕೋಸ್ತಾ ಸ್ವಾಗತಿಸಿಧನ್ಯವಾದಗಳನ್ನು ಅರ್ಪಿಸಿದರು. ಸ್ಫರ್ಧೆಯ ಸಂಯೋಜಕಿ ವಿನಯಾ ಡಿಕೋಸ್ತಾ ಕಾರ್ಯಕ್ರಮ ನಿರೂಪಿಸಿದರು.

ಮುದ್ದು ಯೇಸು ಸ್ಫರ್ಧೆಯಲ್ಲಿ ಒಂದು ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ಬಸ್ರೂರಿನ ವೆನೋರಾ ಡಿಸೋಜಾ ಪ್ರಥಮ ಸ್ಥಾನ ಪಡೆದರೆ,ದ್ವಿತೀಯ ಸ್ಥಾನವನ್ನು ಬೆಂಗಳೂರಿನ ಇಯನ್ ಜಿತ್, ಡೆದರು, ತ್ರತೀಯ ಸ್ಥಾನವನ್ನು ಕುಂದಾಪುರದ ಎಡೆನ್ ಡಿಆಲ್ಮೇಡಾ ಪಡೆದುಕೊಂಡನು. ಕೋಟದ ಡೀಯೊರ್ ಸಾಶಾ ಡಾಯಾಸ್, ಕೋಟೆಶ್ವರದ ಅಮೋಸ್ ಥೋಮಸ್ ಡಿಮೆಲ್ಲೊ ಮತ್ತು  ಪೇತ್ರಿಯ ಈವಾ ಎಂಜೆಲ್ ಡಿಸೋಜಾ ಇವರು ಸಮಾಧಾನಕರ ಬಹುಮಾನಗಳನ್ನು ಪಡೆದುಕೊಂಡರು.

2 ರಿಂದ 5 ವರ್ಷದ ಮಕ್ಕಳ ವಿಭಾಗದಲ್ಲಿ ಕುಂದಾಪುರದ ಸಾನಿಯಾ ಡಿಮೆಲ್ಲೊ ಪ್ರಥಮ ಸ್ಥಾನ ಪಡೆದಳು. ದ್ವಿತೀಯ ಸ್ಥಾನವನ್ನು ಕುಂದಾಪುರದ ಅಲೈನಾ ಎಬ್ರಿಲ್ ಫೆರ್ನಾಂಡಿಸ್ ಪಡೆದುಕೊಂಡನು, ತ್ರತೀಯ ಸ್ಥಾನವನ್ನು ಕುಂದಾಪುರದ ಮಹಿಮಾ ವಿಯಾನ್ನಾ ಬರೆಟ್ಟೊ ಪಡೆದುಕೊಂಡಳು. ಗಂಗೊಳ್ಳಿಯ ಒನೀಲ್ ಜೂಡ್ ರೆಬೆಲ್ಲೊ, ಮೂಡುಬಿದ್ರೆ ಕಲ್ಲಾ ಬೆಟ್ಟುವಿನ ಆನ್ (Ann) ಕಾರ್ಡೊಜಾ, ಮತ್ತು ಹಂಗಾರಕಟ್ಟೆಯ ಸೆಲ್ವಿಟಾ ಡಿಆಲ್ಮೇಡಾ ಇವರು ಸಮಾಧಾನಕರ ಬಹುಮಾನಗಳನ್ನು ಪಡೆದುಕೊಂಡರು.

ಈ ಸಾಲಿನ ಸ್ಪರ್ಧೆಯು ಮಾಧ್ಯಮದ ಮೂಲಕ ಸಾರ್ವಜನಿಕರು ಮೆಚ್ಚುಗೆ ಪಡೆದ ಮಕ್ಕಳನ್ನು ಜನನುಡಿ ಮುದ್ದು ಯೇಸು ಸ್ಫರ್ಧೆಯಲ್ಲಿ ವಿಜೇತರನ್ನಾಗಿ ಆರಿಸಲಾಗಿದೆ. ಸ್ಫರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಜನನುಡಿ ಸುದ್ದಿ ಸಂಸ್ಥೆಯಿಂದ ಧನ್ಯವಾದಗಳು, ವಿಜೇತರಾದ ಮುದ್ದು ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ಜನನುಡಿ ಸುದ್ದಿ ಸಂಸ್ಥೆಯಿಂದ ಅಭಿನಂದನೆಗಳು.ಹಾಗೇ ಈ ಸ್ಫರ್ಧೆಗೆ ಪೋಷಕರಾದ ಮಂಜೀತ್ ನಾಗರಾಜ್, ಸಮಾಜ ಸೇವಕರು ಉದ್ಯಮಿ, ಕಿರಣ್-ಜೆಸ್ವಿನಾ ಜಿತ್ ಎನ್ರೆಸ್ಪೊಟೆಕ್ನೊಲೊಜೀಸ್ ಬೆಂಗಳೂರು, ರೋಜರಿ ಕ್ರೆಡಿಟ್ ಕೋ.ಆಪ್. ಸೊಸೈಟಿ ಲಿಮಿಟ್. ಡಾ.ರೊಬರ್ಟ್ ರೆಬೆಲ್ಲೊ ಐವನ್ ಆಲ್ಮೇಡಾ, ವಸಂತ ಬೇಕರಿ,ಕುಂದಾಪುರ, ಶ್ರೀಮತಿ ಶಾಂತಿ ಪಿಂಟೊ, ಮತ್ತು ಕುಟುಂಬ ಕುಂದಾಪುರ, ಸೀತಾರಾಮ್ ಶೆಟ್ಟಿ, ಕುಂದಾಪುರ. ಶ್ರೀಮತಿ ವನೀತಾ ಬರೆಟ್ಟೊ/ಶ್ರೀ ವಿನ್ಸೆಂಟ್ ಬರೆಟ್ಟೊ ಮತ್ತು ಅಂಟೋನಿ ಲುವಿಸ್ ಮಣಿಪಾಲ  ಇವರಿಗೆ  ತುಂಬು ಹ್ರದಯದಿಂದ ಸುದ್ದಿ ಸಂಸ್ಥೆ ಕ್ರತ್ಞಜತೆಗಳನ್ನು  ಸಲ್ಲಿಸಿಸುತ್ತಿದೆ.

ಕೋಲಾರ ಜಿಲ್ಲಾ ಸರ್ವೇ,ಕಂದಾಯ ಇಲಾಖೆಯಿಂದ ಅಭಿನಂದನೆ, ಕಂದಾಯ ಇಲಾಖೆ ಜನಸ್ನೇಹಿಯಾಗಿಸೋಣ-ಸಚಿವ ಕೃಷ್ಣಬೈರೇಗೌಡ

ಕೋಲಾರ:- ಸದಾ ರೈತರು,ಸಾರ್ವಜನಿಕರ ಸಂಪರ್ಕ ಹೊಂದಿರುವ ಕಂದಾಯ,ಸರ್ವೇ ಇಲಾಖೆಗಳು ಜನರ ನಿರೀಕ್ಷೆಯಂತೆ ಕೆಲಸ ಮಾಡಿ ಜನಸ್ನೇಹಿಯಾಗಿಸಲು ಇಲಾಖೆ ನೌಕರರು ಹೆಚ್ಚಿನ ಹೊಣೆಗಾರಿಕೆಯಿಂದ ಸೇವೆ ಸಲ್ಲಿಸಬೇಕಿದೆ ಎಂದು ರಾಜ್ಯದ ನೂತನ ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ಕಂದಾಯ ಸಚಿವರಾದ ನಂತರ ಕೋಲಾರ ಹಾಗೂ ಬೆಂಗಳೂರು ಜಿಲ್ಲೆಗಳ ಭೂಮಾಪನ ಹಾಗೂ ಕಂದಾಯ ಇಲಾಖೆಗಳಿಂದ ನೀಡಲಾದ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಕಚೇರಿಗಳಿಗೆ ಬರುವ ರೈತರನ್ನು ಅಲೆಸದೇ ಜನಪರವಾಗಿ ಕೆಲಸ ಮಾಡೋಣ, ನೌಕರರ ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತನ್ನಿ ಪರಿಹರಿಸುವೆ ಆದರೆ ಜನರ ಕಷ್ಟಗಳಿಗೆ ನೀವೂ ಸ್ಪಂದಿಸುವ ಮೂಲಕ ಇಲಾಖೆಗೆ ಕಳಂಕ ಎದುರಾಗದಂತೆ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದರು.
ಸರ್ವೇ ಹಾಗೂ ಕಂದಾಯ ಇಲಾಖೆ ಇತರೆಲ್ಲಾ ಇಲಾಖೆಗಳಿಗಿಂತ ಒತ್ತಡದಲ್ಲಿ ಕೆಲಸ ಮಾಡಬೇಕಿದೆ ಎಂಬುದು ಸತ್ಯ ಆದರೆ ಜನರ ಸೇವೆ ಮಾಡುವಾಗ ನಾವೂ ಮುಂಚೂಣಿಯಲ್ಲಿರಬೇಕು, ಕಂದಾಯ,ಸರ್ವೇ ಇಲಾಖೆ ನೌಕರರು ಅನ್ನದಾತರ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಮಾರ್ಗಸೂಚಿಯೊಂದಿಗೆ ಕೆಲಸ ಮಾಡಬೇಕು, ಇಲಾಖೆಯಲ್ಲಿ ಜನಸ್ನೇಹಿಯಾಗಿ ಕೆಲಸ ಮಾಡಲು ಹೊಸ ಹೊಸ ವಿಧಾನಗಳ ಅಳವಡಿಕೆ ಅಗತ್ಯವಿದೆ ಈ ನಿಟ್ಟಿನಲ್ಲಿ ಅನುಭವಿ ಅಧಿಕಾರಿಗಳ ಸಲಹೆಯೂ ಸ್ವೀಕೃತ ಎಂದ ಅವರು, ಒಟ್ಟಾರೆ ಜನರ ಕೆಲಸವನ್ನು ನಾವು ಜನಪರವಾಗಿ ಜನತೆಗೆ ತೊಂದರೆಯಾಗದಂತೆ ನಿರ್ವಹಿಸೋಣ ಎಂದರು.
ಈ ಸಂದರ್ಭದಲ್ಲಿ ಭೂಮಾಪನಾ ಇಲಾಖೆ ಕೋಲಾರ ಜಿಲ್ಲಾ ಉಪನಿರ್ದೇಶಕರಾದ ಭಾಗ್ಯಮ್ಮ, ಬೆಂಗಳೂರು ಕೇಂದ್ರ ಉಪನಿರ್ದೇಶಕ ಕೇಶವಮೂರ್ತಿ, ಕೋಲಾರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು, ಪ್ರಧಾನ ಕಾರ್ಯದರ್ಶಿ ಅಜಯ್‍ಕುಮಾರ್, ಕೋಲಾರ ಜಿಲ್ಲಾ ಯಾದವ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಉದ್ಯಮಿ ವಕ್ಕಲೇರಿ ನಾರಾಯಣಸ್ವಾಮಿ, ಸರ್ವೇ ಇಲಾಖೆಯ ಕೇಶವ್, ನಾಗರಾಜ್ ಮತ್ತಿತರರಿದ್ದರು.

ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್‍ಗೆ ಪುನರ್ವಸತಿ ಕಲ್ಪಿಸಿ

ಕೋಲಾರ,ಜೂ,2: ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್ ನೇಮಕಾತಿ ನಿಷೇಧ ಹಾಗೂ ಪುನರ್ವಸತಿ 2013ರ ಕಾಯ್ದೆಯ ಅನುಷ್ಟಾನಕ್ಕೆ ಒತ್ತಾಯಿಸಿ ಸಫಾಯಿ ಕರ್ಮಚಾರಿ ಕಾವಲು ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಮಲ ಹೊರುವ ಪದ್ದತಿ ಅಮಾನವೀಯ, ಜಾತೀಯತೆ ಮತ್ತು ಗುಲಾಮಗಿರಿಯ ಸಂಕೇತ, ಮನುಷ್ಯನ ಘನತೆಗೆ ಧಕ್ಕೆ ತರುವ ನಾಗರಿಕ ಸಮಾಜದ ಸಾಕ್ಷಿಪ್ರಜ್ಞೆಗೆ ಸಾವಾಲಾಗಿ ಇಡೀ ಸಮಾಜ ತಲೆ ತಗ್ಗಿಸುವ ಹಾಗು ಘೋರ ಮಾನವ ಹಕ್ಕುಗಳ ಉಲ್ಲಂಘನೆ ಎಂದು ಪರಿಗಣಿಸಿ ಮಲಹೊರುವ ಅನಿಷ್ಟ ಪದ್ದತಿಯನ್ನು ನಿರ್ಮೂಲನೆ ಹಾಗು ಸ್ಕ್ಯಾವೆಂಜರ್ ಸಮುಧಾಯಗಳನ್ನು ಘನತೆ ಗೌರವದಿಂದ ಸಮಾಜದ ಮುಖ್ಯ ವಾಹಿನಿಗೆ ತರುವ ಆಶಯದೊಂದಿಗೆ ಕೋಲಾರ ಜಿಲ್ಲೆಯಲ್ಲಿ 2013, 2018ರ ನಡುವೆ ಸಮೀಕ್ಷೆಯಲ್ಲಿ ಕೋಲಾರ ಜಿಲ್ಲೆಯ ಗ್ರಾಮಾಂತರ ಮತ್ತು ನಗರ ಪ್ರದೇಶದಲ್ಲಿ 1000 ಕ್ಕೂ ಹೆಚ್ಚು ಜನರನ್ನು ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್ ಎಂದು ಗುರುತಿಸಿ ನೊಂದಣೆ ಮಾಡಿಕೊಂಡಿದ್ದಾರೆ. ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ 2013 ರ ಸೆಕ್ಷನ್ 13 ರ ಪ್ರಕಾರ ಪುನರ್ವಸತಿ ಒದಗಿಸುವ ಅಗತ್ಯವಿದೆ. ಸದರಿ ಕಾಯ್ದೆಯ ಸೆಕ್ಷನ್ 13 (1) ಗುರ್ತಿಸಲಾದ ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್‍ಗಳಿಗೆ ಪರ್ಯಾಯ ಉದ್ಯೋಗ ಹಾಗೂ ಸಹಾಯಧನ ಮತ್ತು ರಿಯಾಯಿತಿ ಸಾಲವನ್ನು ನೀಡಬೇಕು.
ಆದರೆ 2020-21, 2021-22 ಹಾಗು 2022-23ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮಕ್ಕೆ ಅರ್ಜಿ ಸಲ್ಲಿಸಿದ್ದು, ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್‍ಗಳಿಗೆ ಆರ್ಥಿಕ ನೆರವು ನೀಡಲಾಗಿಲ್ಲ. ಈ ಅರ್ಜಿದಾರರು 8-10 ವರ್ಷಗಳಿಂದ ಅಂದಿನಿಂದ ಇಂದಿನವರೆಗೂ ಪುನರ್ವಸತಿಗಾಗಿ ಕಾಯುತ್ತಿದ್ದಾರೆ. ಇದರಲ್ಲಿ ಅವೈಜಾÐನಿಕ ನಿಯಮಗಳಿಂದ ಪಿಇಎಂಎಸ್‍ಆರ್ ಕಾಯ್ದೆಯ ಪ್ರಕಾರ ಪುನರ್ವಸತಿ ಹೊಂದಲು ಪರ್ಯಾಯ ಉದ್ಯೋಗಗಳನ್ನು ಸೃಷ್ಟಿಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಲು ಸಿದ್ದರಿದ್ದಾರೆ.
ಆದರೆ ಸರ್ಕಾರಗಳು ಇವರೆಗೂ ಸಮಗ್ರ ಪುನರ್ವಸತಿಗಾಗಿ ಯಾವುದೇ ರೀತಿಯ ಯೋಜನೆಗಳನ್ನು ರೂಪಿಸದೇ ಉದಾಸೀನತೆಯಿಂದ 20 ಜನರು ಪ್ರಾಣ ಕಳೆದಕೊಂಡಿದ್ದಾರೆ. 40-60 ಸದಸ್ಯರು 60 ವರ್ಷಕ್ಕೆ ಮೇಲ್ಪಟ್ಟಿದ್ದಾರೆ. ಅವೈಜ್ಞಾನಿಕ ನಿಯಮಗಳ ಪ್ರಕಾರ ಸೌಲಭ್ಯಗಳ ವಂಚನೆಯಾಗಿದೆ ಎಂದು ಆರೋಪಿಸಿದರು.
ಈ ಕಾಯ್ದೆಯ ಕಾಲಂ 13 (2) ಗುರ್ತಿಸಲಾದ ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್‍ಗಳ ಪುನರ್ವಸತಿಯನ್ನು ಖಾತ್ರಿಪಡಿಸುವ ಜವಾಬ್ದಾರಿಯು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಇರುತ್ತದೆ. 2013 ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ ಸೆಕ್ಷನ್ 19 ರ ಅಡಿಯಲ್ಲಿ ಅನುಷ್ಟಾನವನ್ನು ಖಚಿತ ಪಡಿಸಿಕೊಳ್ಳುವ ಜವಾಬ್ದಾರಿ ಮಾನ್ಯ ಜಿಲ್ಲಾಧಿಕಾರಿಗಳ ಮೇಲಿದೆ ಆದ್ದರಿಂದ ತಮ್ಮ ಅಧಿಕಾರವನ್ನು ಚಲಾಯಿಸಿ ಮೇಲಿನ ಉಲ್ಲಂಘನೆಗಳ ಬಗ್ಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆಗ್ರಹಿಸಿದರು.

ಹಕ್ಕೊತ್ತಾಯಗಳು:
ಸೆಕ್ಷನ್ 13(1) ರ ಪ್ರಕಾರ ಗುರ್ತಿಸಲಾದ ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್ ಗಳ ಪರ್ಯಾಯ ಉದ್ಯೋಗಕ್ಕಾಗಿ ಹಾಗು ಸಹಾಯಧನ ರಿಯಾಯಿತಿ ಸಾಲವನ್ನು ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಈ ಕೂಡಲೇ ನೀಡಬೇಕು, ಕಲಂ 13(ಸಿ) ಪ್ರಕಾರ ಸ್ವಂತ ನಿವೇಶನ ಅಥವ ಮನೆ ನಿರ್ಮಾಣಕ್ಕೆ ಹಣಕಾಸಿನ ನೆರವು ಈ ಕೂಡಲೇ ನೀಡಬೇಕು, ಕಲಂ 13(ಸಿ) ಪ್ರಕಾರ ಸರ್ಕಾರಿ ಯೋಜನೆಗಳಲ್ಲಿ ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್ ಗಳಿಗೆ ತಲಾ 2.00 ಎಕರೆ ಜಮೀನು ನೀಡಬೇಕು, ಕಲಂ 13(1ಬಿ) ಪ್ರಕಾರ ಅವಲಂಬಿತರ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗು ಉದ್ಯೋಗ ಈ ಕೂಡಲೇ ನೀಡಬೇಕು, 60 ವರ್ಷ ಮೆಲ್ಪಟ್ಟವರಿಗೆ ಮಾಸಿಕ 5000 ಪಿಂಚಣಿ ನೀಡಬೇಕು, ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್ ಅನಾರೋಗ್ಯದ ಕಾರಣ ಮರಣ ಹೊಂದಿರುವ ಕುಟುಂಬಳಿಗೆ ಕಾನೂನು ಬದ್ದವಾಗಿ ನೆರವು ನೀಡಲೇಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಫಾಯಿ ಕರ್ಮಚಾರಿ ಕಾವಲು ಸಮಿತಿ ರಾಜ್ಯ ಸಂಚಾಲಕಿ ಎಂ.ಪದ್ಮ, ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಲಕ್ಷ್ಮೀಸಾಗರ ವೆಂಕಟರಾಮ್, ರಾಜ್ಯ ಮುಖಂಡ ಓಬಳೇಶ್, ಹನುಮಪ್ಪ, ಮಂಜುನಾಥ್, ಕೃಷ್ಣಯ್ಯ ಸೇರಿದಂತೆ ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್ ಉಪಸ್ಥಿತರಿದ್ದರು.

ನಕಲಿ ಬೋನಫೈಡ್ ಹಗರಣವನ್ನು ಸಿಬಿಐಗೆ ಒಪ್ಪಿಸಿ ದಂಧೆಯಲ್ಲಿ ಭಾಗಿಯಾಗಿರುವ ಕಂದಾಯ ಹಾಗೂ ಆರ್‍ಟಿಒ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು-ರೈತಸಂಘ

ಮುಳಬಾಗಿಲು; ಜೂ.2: ನಕಲಿ ಬೋನಫೈಡ್ ಹಗರಣವನ್ನು ಸಿಬಿಐಗೆ ಒಪ್ಪಿಸಿ ದಂಧೆಯಲ್ಲಿ ಭಾಗಿಯಾಗಿರುವ ಕಂದಾಯ ಹಾಗೂ ಆರ್‍ಟಿಒ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕೆಂದು ರೈತಸಂಘದಿಂದ ತಹಸೀಲ್ದಾರ್ ಮುಖಾಂತರ ಕಂದಾಯ ಸಚಿವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಸರ್ಕಾರಿ ಕೆರೆ ಜಮೀನಿಗೆ ಜಿಲ್ಲಾಧಿಕಾರಿಗಳ ಸಹಿಯನ್ನೇ ನಕಲು ಮಾಡಿರುವ ಪ್ರಕರಣ ಇನ್ನೂ ಜೀವಂತವಾಗಿರುವಾಗಲೇ ಯಾರದೋ ಜಮೀನಿಗೆ ಇನ್ಯಾರೋ ಮಾಲೀಕನ ಟ್ರಾಕ್ಟರ್‍ಗೆ ನಕಲಿ ಬೋನಫೈಡ್ ದಾಖಲೆಗಳನ್ನು ಸೃಷ್ಠಿ ಮಾಡಿ ಕೋಟ್ಯಾಂತರ ರೂಪಾಯಿ ತೆರಿಗೆ ಹಣವನ್ನು ಸರ್ಕಾರಕ್ಕೆ ವಂಚನೆ ಮಾಡಿ ಅಕ್ರಮ ಆರ್‍ಡಿ ನಂಬರ್‍ಗಳನ್ನು ಸೃಷ್ಠಿ ಮಾಡುವ ಮುಖಾಂತರ ಸಾವಿರಾರು ಟ್ರಾಕ್ಟರ್ ಹಾಗೂ ಟ್ರಾಲಿಗಳನ್ನು ನೋಂದಣಿ ಮಾಡಿರುವ ಹಗರಣ ತೇಲಗಿ ಛಾಪಾ ಕಾಗದ ಹಗರಣವನ್ನು ಮೀರಿಸುವಂತಿದೆ ಎಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಹದಗೆಟ್ಟಿರುವ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾದ್ಯಂತ ಎಲ್ಲಾ ನಾಡಕಚೇರಿಗಳಲ್ಲಿ ಉಪ ತಹಸೀಲ್ದಾರ್‍ಗಳಿಗೆ ಆರ್‍ಟಿಒ ಕಚೇರಿಗಳಲ್ಲಿನ ದಲ್ಲಾಳಿಗಳು ಟ್ರಾಕ್ಟರ್ ಶೋರೂಂ ಮಾಲೀಕರ ಜೊತೆ ಶಾಮೀಲಾಗಿ ವಾಣಿಜ್ಯ ಹಾಗೂ ಬೇರೆ ಬೇರೆ ಉದ್ದೇಶಕ್ಕಾಗಿ ಟ್ರಾಕ್ಟರ್ ಖರೀದಿ ಮಾಡುವ ಶ್ರೀಮಂತರಿಗೆ ಕೃಷಿ ಮಾಡುವ ರೈತರ ಜಮೀನಿನ ಪಹಣಿ ಮುಂತಾದ ದಾಖಲೆಗಳನ್ನು ಕಂದಾಯ ಇಲಾಖೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಕೈಕಟ್ಟಿಕೊಂಡು ಪ್ರತಿ ಬೋನಫೈಡ್ ದಾಖಲೆಗೆ 10 ರಿಂದ 20 ಸಾವಿರ ಲಂಚ ನೀಡುವ ಮುಖಾಂತರ ಮೂಲ ಮಾಲೀಕರ ಹೆಸರಿನಲ್ಲಿರುವ ಜಮೀನಿಗೆ ಬೇರೆ ವ್ಯಕ್ತಿ ಹೆಸರಿಗೆ ಬೋನಫೈಡ್ ಪತ್ರ ಸೃಷ್ಠಿ ಮಾಡಿ ನೋಂದಣಿ ಮಾಡಿರುವ ದಂಧೆಗೆ ಮುಕ್ತಿ ಸಿಗಬೇಕಾದರೆ ಹಗರಣವನ್ನು ಸಿಬಿಐಗೆ ಒಪ್ಪಿಸಲೇ ಬೇಕಾಗಿದೆ ಎಂದು ಒತ್ತಾಯ ಮಾಡಿದರು.
ನಾಡಕಚೇರಿಯ ಉಪ ತಹಸೀಲ್ದಾರ್ ಕೈಯಲ್ಲಿ ಥಂಬ್ ಕೊಡುವ ಪೆನ್‍ಡ್ರೈವ್ ಇರುತ್ತದೆ. ಆದರೆ ಅಲ್ಲಿ ಹೊಟ್ಟೆಪಾಡಿಗಾಗಿ ಹೊರಗುತ್ತಿಗೆ ಮೇಲೆ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ಸಂಪೂರ್ಣ ಜವಾಬ್ದಾರಿ ಉಪತಹಸೀಲ್ದಾರ್ ನೀಡುತ್ತಾರೆಯೇ ? ಇದು ಸಾರ್ವಜನಿಕ ಬುದ್ಧಿವಂತರ ಪ್ರಶ್ನೆಯಾಗಿದೆ ಎಂದರು.
ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ಮಾತನಾಡಿ, ಈ ದಂಧೆ ಪರಿಹಾರಕ್ಕಾಗಿ ರೈತರು ನೀಡಿರುವ ದಾಖಲೆಗಳ ದುರುಪಯೋಗ ಹಾಗೂ ಕೆರೆ, ಗೋಮಾಳ, ಗುಂಡುತೋಪು ಸರ್ಕಾರಿ ಆಸ್ತಿಗಳಿಗೆ ನಕಲಿ ರೈತರ ಹೆಸರನ್ನು ಸೃಷ್ಠಿ ಮಾಡಿ ಈ ಧಂಧೆ ನಡೆಯುತ್ತಿದೆ. ಕಂದಾಯ ಹಾಗೂ ಆರ್‍ಟಿಒ ಅಧಿಕಾರಿಗಳ ಕುಮ್ಮಕ್ಕಿಲ್ಲದೆ ಈ ದಂಧೆ ನಡೆಯುತ್ತಿಲ್ಲ ಎಂದು ಆರೋಪಿಸಿದರು.
ಆರ್‍ಟಿಒ ಕಚೇರಿ ಅಧಿಕಾರಿಗಳಿಗೆ ಮತ್ತು ದಲ್ಲಾಳರಿಗೆ ಚಿನ್ನದಮೊಟ್ಟೆ ಇಡುವ ಇಲಾಖೆಯಾಗಿ ಮಾರ್ಪಟ್ಟು ಹೆಜ್ಜೆಹೆಜ್ಜೆಗೂ ಜನಸಾಮಾನ್ಯರನ್ನು ಶೋಷಣೆ ಮಾಡುವ ಇಲಾಖೆಯಾಗಿದೆ. ಒಂದು ಕಡೆ ನಕಲಿ ಬೋನಫೈಡ್ ದಂಧೆಯಾದರೆ ಮತ್ತೊಂದೆಡೆ ಐಷಾರಾಮಿ ಹೊರರಾಜ್ಯದ ಕಾರುಗಳಿಗೆ ಮುಖಬೆಲೆಯನ್ನು ಕಡಿಮೆ ಮಾಡಿ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿ ನೋಂದಣಿ ಮಾಡುವ ದೊಡ್ಡ ನಕಲಿ ಜಾಲವೇ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದೆ ಎಂದು ದೂರಿದರು.
ಅಲ್ಲಿನ ಅಧಿಕಾರಿಗಳ ಮಾಹಿತಿ ಪ್ರಕಾರ ನಾಡಕಚೇರಿಗಳಲ್ಲಿ ಸೃಷ್ಠಿಯಾಗುವ ಬೋನಫೈಡ್ ಸಾವಿರ ಆದರೆ ಅದೇ ಆರ್‍ಡಿ ನಂಬರುಗಳನ್ನು ನಕಲು ಮಾಡಿ 6 ಸಾವಿರಕ್ಕೂ ಹೆಚ್ಚು ಟ್ರಾಕ್ಟರ್‍ಗಳನ್ನು ಅಧಿಕಾರಿಗಳು ತಿರುಚಿ ನೋಂದಣಿ ಮಾಡಿರುವ ಜೊತೆಗೆ 500ಕ್ಕೂ ಹೆಚ್ಚು ಐಷಾರಾಮಿ ಕಾರುಗಳಿಗೂ ಇದೇ ರೀತಿ ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿ ಕೋಟಿಕೋಟಿ ಹಣವನ್ನು ಲೂಟಿ ಮಾಡಿದ್ದಾರೆ. ತಪ್ಪಿಸಿಕೊಳ್ಳಲು ಹೊರಗುತ್ತಿಗೆದಾರರ ಮೇಲೆ ಗೂಬೆ ಕೂರಿಸುವ ಅಧಿಕಾರಿಗಳ ಜಾಣ ನಡೆಗೆ ಸಾರ್ವಜನಿಕರು ದಂಗಾಗಿದ್ದಾರೆ.
ಹಾಗಾಗಿ ಮಾನ್ಯ ಕಂದಾಯ ಮಂತ್ರಿಗಳಾದ ಕೃಷ್ಣಬೈರೇಗೌಡರ ಜಮೀನಿಗೆ ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿ ಬೋನಫೈಡ್ ಮುಖಾಂತರ ಟ್ರಾಕ್ಟರ್, ಟ್ರಾಲಿಯನ್ನು ನೋಂದಣಿ ಮಾಡಿರುವ ದಂಧೆಯನ್ನು ಸಿಬಿಐಗೆ ಒಪ್ಪಿಸಿ ಭಾಗಿಯಾಗಿರುವ ಕಂದಾಯ, ಆರ್‍ಟಿಒ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಅಮಾಯಕರನ್ನು ಉಳಿಸಿ ದಂಧೆಗೆ ಕಡಿವಾಣ ಹಾಕಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ರವಿಕುಮಾರ್, ನಿಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳ ಮುಖಾಂತರ ಕಂದಾಯ ಸಚಿವರಿಗೆ ಕಳುಹಿಸಿಕೊಡುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ರಾಜ್ಯ ಪ್ರಧಾನ ಕಾರ್ಯದರ್ಶಿ ಫಾರೂಖ್‍ಪಾಷ, ಜಿಲ್ಲಾ ಕಾರ್ಯಾಧ್ಯಕ್ಷ ಹೆಬ್ಬಣಿ ಆನಂದರೆಡ್ಡಿ, ಬಂಗಾರಿ ಮಂಜು, ಸುನೀಲ್‍ಕುಮಾರ್, ಭಾಸ್ಕರ್, ರಾಜೇಶ್, ದೇವರಾಜ್, ಗುರುಮೂರ್ತಿ, ವಿಶ್ವ, ವಿಜಯ್‍ಪಾಲ್ ಮುಂತಾದವರಿದ್ದರು.

ಸರ್ಕಾರವು ಪಟ್ಟಣಗಳ ಅಭಿವೃದ್ಧಿಗಾಗಿ ಕೋಟ್ಯಾಂತರ ರೂಗಳ ಅನುದಾನ ನೀಡುತ್ತಿದೆ ಸಮಾಜ ಕಟ್ಟಕಡೆಯ ವ್ಯಕ್ತಿಗೂ ಮುಟ್ಟುವಂತೆ ಅಧಿಕಾರಿಗಳು ಎಚ್ಚರವಹಿಸಬೇಕು:ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ 1 : ಸರ್ಕಾರವು ಪಟ್ಟಣಗಳ ಅಭಿವೃದ್ಧಿಗಾಗಿ ಕೋಟ್ಯಾಂತರ ರೂಗಳ ಅನುದಾನ ನೀಡುತ್ತಿದೆ ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ಸಮಾಜ ಕಟ್ಟಕಡೆಯ ವ್ಯಕ್ತಿಗೂ ಮುಟ್ಟುವಂತೆ ಎಚ್ಚರವಹಿಸಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ಪುರಸಭೆಯಲ್ಲಿ ಗುರುವಾರ ಪುರಸಭಾ ಸಿಬ್ಬಂದಿ ಹಾಗೂ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.
ಚುನಾವಣಾ ಪ್ರಚಾರಕ್ಕಾಗಿ ಪಟ್ಟಣದ ಎಲ್ಲಾ ಬಡವಾಣೆಗಳಲ್ಲಿ ಪ್ರಚಾರ ಮಾಡಿದ ಸಮಯದಲ್ಲಿ ಸಾಮಾನ್ಯವಾಗಿ ಎಲ್ಲಾ ಬಡವಾಣೆಗಳಲ್ಲಿ ಶುದ್ದಕುಡಿಯುವ ನೀರು, ಬೀದಿಗಳು, ನೈರ್ಮಲ್ಯ ಸ್ವಚ್ಚತೆ, ಚರಂಡಿಗಳ ಸ್ವಚ್ಚತೆ ಇಲ್ಲದೆ ಗಬ್ಬುನಾರುತ್ತಿರುವ . ಬಗ್ಗೆ ಸಾರ್ವಜನಿಕರು ಮೌಖಿಕಾವಾಗಿ ಮಾಹಿತಿ ನೀಡಿದರು. ಅಲ್ಲದೆ, ನಾನು ಪ್ರಚಾರದ ಸಮಯದಲ್ಲಿ ನಾನು ಗಮನಿಸಿದಾಗಲೂ ಬೇಸರವಾಯಿತು ಎಂದು ತಿಳಿಸುತ್ತಾ, ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳಿಗೆ ತಕ್ಷಣ ಸ್ವಚ್ಚತಾ ಕಾರ್ಯವನ್ನು ಹಮ್ಮಿಕೊಳ್ಳುವಂತೆ ಸೂಚಿಸಿದರು.
ಸಾಮಾನ್ಯವಾಗಿ ಬಹುತೇಕ ಬಡಾವಣೆಗಳಲ್ಲಿ ಆಳವಡಿಸಿರುವ ಬೀದಿ ದೀಪಗಳು ಕಳಪೆ ಮಟ್ಟದ್ದಾಗಿದ್ದು, ದೀಪಗಳು ಬೆಳಕು ಬರುವುದಿಲ್ಲ ಎಂದು ಆರೋಪಿಸಿದರು. ತಕ್ಷಣ ಬೀದಿ ದೀಪಗಳ ಆಳವಡಿಸಲು ಗುತ್ತಿಗೆಯನ್ನು ಪಡೆದ ಗುತ್ತಿಗೆದಾರರನ್ನು ದೂರವಾಣಿ ಮುಖಾಂತರ ಮಾತನಾಡಿ ಅತೀ ಶೀಘ್ರವಾಗಿ ಬೀದಿ ದೀಪಗಳನ್ನು ಬದಲಿಸುವಂತೆ ಸೂಚನೆ ನೀಡಿದರು.
ಹಾಗು ಪುರಸಭೆಗೆ ವ್ಯಾಪ್ತಿಗೆ ಬರುವ ಇ –ಖಾತೆಗಳನ್ನು ಮಾಡಿಕೊಡುವ ಸಮಯದಲ್ಲಿ ಹಣಕ್ಕಾಗಿ ಪೀಡಿಸದೆ, ಕಾನೂನು ರೀತ್ಯ ಪಕ್ಷತೀತವಾಗಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಿಕೊಡುವಂತೆ ಸೂಚನೆ ನೀಡಿದರು. ಸಾರ್ವಜನಿಕರು ರಾಜಾಜೀ ರಸ್ತೆಯ ಕಾಮಗಾರಿ ಬಗ್ಗೆ ಶಾಸಕರ ಗಮನಕ್ಕೆ ತಂದ ಸಮಯದಲ್ಲಿ ರಸ್ತೆ ಕಾಮಗಾರಿಯು ವಿಳಂಬವಾಗುತ್ತಿರುವ ಅಧಿಕಾರಿಗಳ ಬಳಿ ಚರ್ಚೆ ನಡೆಸುತ್ತಿರುವ ಸಮಯದಲ್ಲಿ
ಪಿಡಬ್ಲ್ಯೂಡಿ ಇಂಜನೀಯರ್ ಹಾಗೂ ಪುರಸಭೆ ಅಧಿಕಾರಿಗಳಿಗೆ ತರಾಟೆ : ಪಟ್ಟಣದ ರಾಜಾಜಿರಸ್ತೆ ಕಾಮಗಾರಿ ನಿದಾನ ಗತಿಯಲ್ಲಿ ನಡೆಯಲು ನಿಮ್ಮಿಂದಲೇ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳನ್ನು ಶಾಸಕರು ತರಾಟೆಗೆ ತೆಗೆದುಕೊಂಡರು. ಅದರ ಬಗ್ಗೆ ಗುತ್ತಿಗೆದಾರರಿಂದ ಮಾಹಿತಿ ಪಡೆದು ಮಾತನಾಡಿ ಪುರಸಭೆ ಅಧಿಕಾರಿಗಳು ಅತಿ ಶೀಘ್ರವಾಗಿ ನೀರಿನ ಪೈಪ್‍ಲೈನ್ ಆಳವಡಿಸುವಂತೆ, ಪಿಡಬ್ಲ್ಯೂಡಿ ಇಂಜನೀಯರ್ ರವರು ರಸ್ತೆ ಅಗಲೀಕರಣಕ್ಕೆ ಮಾರ್ಕಿಂಗ್ ಮಾಡಿಸಿಕೊಡುವಂತೆ ಸೂಚಿಸಿದರು. ಗುತ್ತಿಗೆದಾರಿಗೆ ಗಣಮಟ್ಟದ ರಸ್ತೆ ಕಾಮಗಾರಿಯನ್ನು ಮಾಡುವಂತೆ ತಿಳಿಸಿದರು.
ಆಡಳಿತಾಧಿಕಾರಿ ಶರೀನ್‍ತಾಜ್, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ್ , ಕಚೇರಿ ವ್ಯವಸ್ಥಾಪಕ ನವೀನ್ ಚಂದ್ರ, ಕಂದಾಯ ಅಧಿಕಾರಿಗಳಾದ ವಿ.ನಾಗರಾಜ್, ಎನ್.ಶಂಕರ್,ಕಿರಿಯ ಅಭಿಯಂತರ ವಿ.ಶ್ರೀನಿವಾಸಪ್ಪ, ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್ ಇದ್ದರು.

ಕುಂದಾಪುರ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ಉಚಿತ ನೋಟ್ ಪುಸ್ತಕ ವಿತರಣೆ

ಕುಂದಾಪುರ, ಸಂತ ಜೋಸೆಫರ ಪ್ರೌಢಶಾಲೆಯ ಪ್ರಸ್ತುತ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಎಂ ಸಿ ಸಿ ಬ್ಯಾಂಕ್ ಇವರು 02-06-2023 ರಂದು ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಂ. ಸಿ. ಸಿ. ಬ್ಯಾಂಕಿನ ಚೇರ್ಮನ್ ಶ್ರೀ ಅನಿಲ್ ಲೋಬೊ ಇವರು ಮಾತನಾಡಿ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಶಾಲೆ ಜ್ಞಾನ ದೇಗುಲವಿದ್ದಂತೆ.ವಿದ್ಯಾರ್ಥಿಗಳು ಶಿಕ್ಷಕರಲ್ಲಿ ದೇವರನ್ನು ಕಾಣಬೇಕು. ತಂದೆ ತಾಯಿಯರನ್ನು ಗೌರವಿಸಬೇಕು. ನಮ್ಮ ಬ್ಯಾಂಕ್ ವತಿಯಿಂದ ಪ್ರತಿ ವರ್ಷವೂ ನೋಟ್ ಪುಸ್ತಕಗಳನ್ನು ನೀಡುವುದಾಗಿ ತಿಳಿಸಿದರು. ಬ್ಯಾಂಕಿನ ನಿರ್ದೇಶಕರಾಗಿರುವ ಎಲ್ರೊಯ್ ಕಿರಣ್ ಕ್ರಾಸ್ಟೋ ಇವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕ ಮಾತುಗಳನ್ನು ಆಡಿದರು. ಕಾರ್ಯಕ್ರಮದ ಅಧ್ಯಕ್ಷರಾಗಿರುವ ಶಾಲೆಯ ಜಂಟಿ ಕಾರ್ಯದರ್ಶಿಗಳಾಗಿರುವ ಸಿಸ್ಟರ್ ಸುಪ್ರಿಯ ಇವರು ಬ್ಯಾಂಕಿನ ಅಧಿಕಾರಿ ವರ್ಗದವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ವಿದ್ಯಾರ್ಥಿಗಳು ಅವರು ನೀಡಿದ ಕೊಡುಗೆಗಳನ್ನು ಸರಿಯಾಗಿ ಬಳಸಿಕೊಂಡು ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಸಿಸ್ಟರ್ ಐ ವಿ ಸ್ವಾಗತಿಸಿದರು. ಮೈಕಲ್ ಸರ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶ್ರೀಮತಿ ಶ್ರೀಲತಾ ಇವರು ವಂದಿಸಿದರು.

ವಿಶ್ವ ವಿಖ್ಯಾತ ಪವಾಡ ಪುರುಷ ಡೋರ್ನಹಳ್ಳಿ ಸಂತ ಅಂತೋಣಿಯವರ ವಾರ್ಷಿಕ ಮಹೋತ್ಸವ-2023 ಕ್ಕೆ ಆತ್ಮೀಯವಾದ ಆಮಂತ್ರಣ

(ಜಾಹಿರಾತು) (Advertisement)

ವಿಶ್ವ ವಿಖ್ಯಾತ ಪವಾಡ ಪುರುಷ
ಡೋರ್ನಹಳ್ಳಿ ಸಂತ ಅಂತೋಣಿಯವರ ವಾರ್ಷಿಕ ಮಹೋತ್ಸವ-2023
ಪ್ರಿಯ ಭಕ್ತಾಧಿಗಳೇ,
ಬಸಿಲಿಕಾ ಮಹೋತ್ಸವದಲ್ಲಿ ಕುಟುಂಬ ಸಮೇತರಾಗಿ ಪಾಲ್ಗೊಂಡು ಪವಾಡ ಪುರುಷ ಸಂತ ಅಂತೋಣಿಯವರ ಮೂಲಕ ಪ್ರಭು ಯೇಸುವಿನ ವರದಾನಗಳನ್ನು ಪಡೆದು ಪಾವನರಾಗಲು ತಮ್ಮೆಲ್ಲರನ್ನು ಮೈಸೂರು ಧರ್ಮಕ್ಷೇತ್ರದ ಪರವಾಗಿ ಆತ್ಮೀಯವಾಗಿ ಆಮಂತ್ರಣ ನೀಡಿದ್ದಾರೆ.

ಮಣಿಪುರದಲ್ಲಿ ಕ್ರಿಶ್ಚಿಯನ್ನರ ಮೇಲಾಗುತ್ತಿರುವ ಧಾಳಿಯನ್ನು ಖಂಡಿಸಿ ಜೂನ್ 6 ರಂದು ಮಂಗಳೂರಿನಲ್ಲಿ ಸಾಮೂಹಿಕ ಧರಣಿ

(ಚಿತ್ರ ಎರವಲು)

ಮಣಿಪುರ ರಾಜ್ಯದಲ್ಲಿ ಮೀಸಲಾತಿ ವಿಚಾರದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಚರ್ಚ್ ಹಾಗೂ ಕ್ರಿಶ್ಚಿಯನ್ನರ ಮೇಲೆ ನಡೆದ ವ್ಯಾಪಕ ಧಾಳಿಯನ್ನು ಖಂಡಿಸಿ ಹಾಗೂ ಮಣಿಪುರದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಒತ್ತಾಯಿಸಿ ದ.ಕ.ಜಿಲ್ಲಾ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ, ಕಥೋಲಿಕ್ ಸಭಾ ಮಂಗಳೂರು ಪ್ರದೇಶ(ರಿ) ಮತ್ತು ಯುನೈಟೆಡ್ ಕ್ರಿಶ್ಚಿಯನ್ ಫೋರಂ ಮಂಗಳೂರು ಇವುಗಳ ಜಂಟಿ ನೇತೃತ್ವದಲ್ಲಿ ತಾ.06-06-2023ರಂದು ಮಂಗಳವಾರ ಸಂಜೆ 4.30ಕ್ಕೆ ನಗರದ ಕ್ಲಾಕ್ ಟವರ್ ಬಳಿಯಲ್ಲಿ ಸಾಮೂಹಿಕ ಧರಣಿ ನಡೆಯಲಿದೆ ಎಂದು 3 ಸಂಘಟನೆಗಳು ಜಂಟಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಮಣಿಪುರದಲ್ಲಿ ಬಹುಸಂಖ್ಯಾತರಾಗಿರುವ ಬುಡಕಟ್ಟು ಸಮುದಾಯದ ಮಧ್ಯೆ ಸೌಹಾರ್ದ ವಾತಾವರಣವನ್ನು ಸಾಧಿಸುವ ಬದಲು ಅಲ್ಲಿನ ಬಿಜೆಪಿ ರಾಜ್ಯ ಸರಕಾರವು ದ್ವೇಷ ರಾಜಕಾರಣವನ್ನು ನಡೆಸುತ್ತಿದೆ. ಮೈತೈ ಸಮುದಾಯಕ್ಕೆ ಮೀಸಲಾತಿ ನೀಡುವ ವಿಚಾರದಲ್ಲಿ ಭುಗಿಲೆದ್ದ ಗಲಭೆಯನ್ನು ಮುಂದಿಟ್ಟು ಕುಕಿ ಸಮುದಾಯದ ಕ್ರಿಶ್ಚಿಯನ್ನರ ಹಾಗೂ ಅವರ ಚರ್ಚ್ ಗಳ ಮೇಲೆ ವ್ಯಾಪಕ ದಾಳಿಗಳನ್ನು ನಡೆಸಿ ನೂರಾರು ಸಂಖ್ಯೆಯಲ್ಲಿ ಪ್ರಾಣಹಾನಿಯಾಗಿದ್ದು, 50,000ಕ್ಕೂ ಮಿಕ್ಕಿ ಜನತೆ ಸಂತ್ರಸ್ತರಾಗಿದ್ದಾರೆ. ಕೋಟ್ಯಂತರ ರೂಪಾಯಿಯ ಆಸ್ತಿಪಾಸ್ತಿ ಹಾನಿಯಾಗಿದೆ.9 ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿಯಾಗಿದ್ದು,ದೂರಸಂಪರ್ಕ,ಇಂಟರ್ ನೆಟ್ ಸೇರಿದಂತೆ ಎಲ್ಲಾ ಸಂಪರ್ಕಗಳನ್ನು ಕಡಿತಗೊಳಿಸಲಾಗಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ.ದೇಶದ ಒಂದು ಪುಟ್ಟ ರಾಜ್ಯದಲ್ಲಿ ಇಂತಹ ಗಂಭೀರ ಸಮಸ್ಯೆ ತಲೆದೋರಿದರೂ ದೇಶವನ್ನಾಳುವ ಕೇಂದ್ರ ಸರಕಾರವು ಮಾತ್ರ ದಿವ್ಯ ಮೌನ ವಹಿಸಿದೆ ಎಂದು ಮೂರೂ ಸಂಘಟನೆಗಳು ಆಪಾದಿಸಿದೆ

ಮಣಿಪುರ ರಾಜ್ಯದಲ್ಲಿ ಗಲಭೆಯನ್ನು ಸಂಪೂರ್ಣವಾಗಿ ನಿಯಂತ್ರಿಸಿ,ಮತ್ತೆ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕೆಂದು ಒತ್ತಾಯಿಸಿ ತಾ.06-06-2023ರಂದು ಸಂಜೆ 4.30ಕ್ಕೆ ಮಂಗಳೂರಿನಲ್ಲಿ ಜರುಗಲಿರುವ ಸಾಮೂಹಿಕ ಧರಣಿಯಲ್ಲಿ ಜಿಲ್ಲೆಯ ನ್ಯಾಯಪ್ರಿಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕಾರ್ಯಕ್ರಮದ ಸಂಘಟಕರಾದ ರೊಯ್ ಕ್ಯಾಸ್ಟಲಿನೋ, ಸುನಿಲ್ ಕುಮಾರ್ ಬಜಾಲ್, ಆಲ್ಫ್ರೆಡ್ ಮನೋಹರ್, ಸ್ಟ್ಯಾನಿ ಲೋಬೋ, ಕೆ ಅಶ್ರಫ್, ಮಂಜುಳಾ ನಾಯಕ್ ರವರು ಜಂಟಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ

ವಂದನೆಗಳೊಂದಿಗೆ

ಸುನಿಲ್ ಕುಮಾರ್ ಬಜಾಲ್
ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ ಮಂಗಳೂರು