

ಮಸ್ಕಟ್/ನವದೆಹಲಿ : ಈ ವಾರದ ಆರಂಭದಲ್ಲಿ ಓಮನ್ ಕರಾವಳಿಯಲ್ಲಿ ಅಮೆರಿಕದ ಪಡೆಗಳು ಹಡಗಿನ ಮೇಲೆ ದಾಳಿ ಮಾಡಿದ ನಂತರ ಕಾಣೆಯಾಗಿದ್ದ ಮೂವರು ಭಾರತೀಯ ನಾವಿಕರು ಸಾವನ್ನಪ್ಪಿದ್ದಾರೆ ಎಂದು ಹಡಗು ಸಚಿವ ಸರ್ಬಾನಂದ ಸೋನೋವಾಲ್ ಹೇಳಿದ್ದಾರೆ. ಇದನ್ನು “ದುರಂತ” ನಷ್ಟ ಎಂದು ಕರೆದ ಸಚಿವರು, ಕಾಣೆಯಾದ ಮೂವರು ನಾವಿಕರ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು. ಓಮನ್ಕರಾವಳಿ ಸಮೀಪ ಸಂಚರಿಸುತ್ತಿದ್ದ ‘ಎಂಟಿ ಸೆಟ್ಟೆಬೆಲ್ಲೊ’ ತೈಲ ಟ್ಯಾಂಕರ್ ಹಡಗಿನ ಮೇಲೆ ನಡೆದ ಕ್ಷಿಪಣಿ ದಾಳಿಯ ಬಳಿಕ ನಾಪತ್ತೆಯಾಗಿದ್ದ ಮೂವರು ಭಾರತೀಯ ನಾವಿಕರು ಮೃತಪಟ್ಟಿರುವುದು ದೃಢಪಟ್ಟಿದೆ. ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ್ ಸೋನೋವಾಲ್ ಈ ಮಾಹಿತಿಯನ್ನು ಅಧಿಕೃತವಾಗಿ ಖಚಿತಪಡಿಸಿದ್ದಾರೆ.
ಒಟ್ಟು 24 ಭಾರತೀಯ ಸಿಬ್ಬಂದಿಯನ್ನು ಹೊಂದಿದ್ದ ವಾಣಿಜ್ಯ ಹಡಗು ಗಲ್ಫ್ ಆಫ್ ಓಮನ್ ಮಾರ್ಗವಾಗಿ ಸಂಚರಿಸುತ್ತಿದ್ದ ವೇಳೆ ದಾಳಿ ನಡೆದಿದ್ದು, ಹಡಗಿನ ಇಂಜಿನ್ ಕೊಠಡಿಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಓಮನ್ ರಕ್ಷಣಾ ಪಡೆಗಳು ಮತ್ತು ಅಧಿಕಾರಿಗಳು 21 ಭಾರತೀಯ ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು.
ಆದರೆ ಮೂವರು ಭಾರತೀಯ ನಾವಿಕರು ನಾಪತ್ತೆಯಾಗಿದ್ದು, ಬಳಿಕ ನಡೆದ ತೀವ್ರ ಶೋಧ ಕಾರ್ಯಾಚರಣೆಯ ನಂತರ ಅವರು ಮೃತಪಟ್ಟಿರುವುದು ದೃಢಪಟ್ಟಿದೆ. ಮೃತರು ಉತ್ತರ ಪ್ರದೇಶ ಹಾಗೂ ಹಿಮಾಚಲ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ನಿವಾಸಿಗಳಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಹಿನ್ನೆಲೆಯಲ್ಲಿ ಭಾರತ ಸರ್ಕಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅಮೆರಿಕ ರಾಯಭಾರ ಕಚೇರಿಯ ಉಪ ಮುಖ್ಯಸ್ಥರಿಗೆ ಸಮನ್ಸ್ ಜಾರಿ ಮಾಡಿ ತನ್ನ ಪ್ರತಿಭಟನೆಯನ್ನು ದಾಖಲಿಸಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆ ವಾಣಿಜ್ಯ ಹಡಗುಗಳು ಮತ್ತು ನಾಗರಿಕರ ಸುರಕ್ಷತೆ ಅತ್ಯಂತ ಮಹತ್ವದ್ದಾಗಿದ್ದು, ಅಂತರರಾಷ್ಟ್ರೀಯ ಜಲಮಾರ್ಗಗಳಲ್ಲಿ ಶಾಂತಿ ಹಾಗೂ ಸುರಕ್ಷತೆ ಕಾಪಾಡಬೇಕು ಎಂದು ಭಾರತ ಒತ್ತಾಯಿಸಿದೆ.
















































































