

ಶಿರೂರು: ಜ್ಞಾನದಾ ಶೈಕ್ಷಣಿಕ ಸಂಸ್ಥೆ, ಶಿರೂರಿನಲ್ಲಿ ತುಳುನಾಡಿನ ಸಾಂಪ್ರದಾಯಿಕ ಸಂಸ್ಕೃತಿ, ಆಹಾರ ಪದ್ಧತಿ ಹಾಗೂ ಪರಂಪರೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ‘ಆಟಿ ಸಂಭ್ರಮ’ ಕಾರ್ಯಕ್ರಮವನ್ನು ಬುಧವಾರ, 05 ಆಗಸ್ಟ್ 2026 ರಂದು ಸಂಭ್ರಮದಿಂದ ಆಯೋಜಿಸಲಾಯಿತು.
ಆಟಿ ತಿಂಗಳು ತುಳುನಾಡಿನ ಜನಜೀವನದಲ್ಲಿ ವಿಶೇಷ ಮಹತ್ವವನ್ನು ಹೊಂದಿದ್ದು, ಈ ತಿಂಗಳಲ್ಲಿ ನಮ್ಮ ಹಿರಿಯರು ಅನುಸರಿಸುತ್ತಿದ್ದ ಸಾಂಪ್ರದಾಯಿಕ ಆಹಾರ ಪದ್ಧತಿ, ಜೀವನಶೈಲಿ ಹಾಗೂ ಆಚರಣೆಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು.
ಕಾರ್ಯಕ್ರಮದ ಅಂಗವಾಗಿ ವಿವಿಧ ಬಗೆಯ ಸಾಂಪ್ರದಾಯಿಕ ಆಟಿ ಆಹಾರ ಪದಾರ್ಥಗಳನ್ನು ಪೋಷಕರು ಸಿದ್ಧಪಡಿಸಿ ತಮ್ಮ ಮಕ್ಕಳೊಂದಿಗೆ ಕಳುಹಿಸಿ ಕೊಟ್ಟಿದ್ದರು ಶಿಕ್ಷಕರು ತಾವು ತಂದ ವಿವಿಧ ಖಾದ್ಯಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು,ಪಾರಂಪರಿಕ ಆಹಾರಗಳ ವೈಶಿಷ್ಟ್ಯ, ಅವುಗಳ ತಯಾರಿಕಾ ವಿಧಾನ ಹಾಗೂ ಆರೋಗ್ಯಕರ ಗುಣಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ಈ ಮೂಲಕ ವಿದ್ಯಾರ್ಥಿಗಳು ನಮ್ಮ ಪೂರ್ವಜರು ಅನುಸರಿಸಿಕೊಂಡು ಬಂದಿದ್ದ ಆಹಾರ ಸಂಸ್ಕೃತಿ ಹಾಗೂ ಅದರ ಮಹತ್ವವನ್ನು ಅರಿತುಕೊಂಡರು.
ಆಟಿ ಸಂಭ್ರಮವು ಕೇವಲ ಆಹಾರೋತ್ಸವವಾಗಿರದೆ, ತುಳುನಾಡಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಸ್ಥಳೀಯ ಆಹಾರ ಸಂಸ್ಕೃತಿಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಒಂದು ಅರ್ಥಪೂರ್ಣ ಪ್ರಯತ್ನವಾಗಿತ್ತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಎಲ್ಲರ ಸಹಕಾರದಿಂದ ಆಟಿ ಸಂಭ್ರಮವು ಅತ್ಯಂತ ಅರ್ಥಪೂರ್ಣವಾಗಿ ಹಾಗೂ ಸಡಗರದಿಂದ ನೆರವೇರಿತು.
“ಪರಂಪರೆಯ ಸೊಗಡಿನೊಂದಿಗೆ ಆರೋಗ್ಯಕರ ಆಹಾರ – ನಮ್ಮ ಸಂಸ್ಕೃತಿಯ ಹೆಮ್ಮೆ” ಎಂಬ ಸಂದೇಶವನ್ನು ಸಾರಿದ ಆಟಿ ಸಂಭ್ರಮವು ವಿದ್ಯಾರ್ಥಿಗಳಲ್ಲಿ ನಮ್ಮ ನಾಡಿನ ಸಂಸ್ಕೃತಿ, ಪರಂಪರೆ ಹಾಗೂ ಆಹಾರ ಪದ್ಧತಿಗಳ ಬಗ್ಗೆ ಗೌರವ ಮತ್ತು ಅಭಿಮಾನವನ್ನು ಮೂಡಿಸುವಲ್ಲಿ ಯಶಸ್ವಿಯಾಯಿತು.













