

ಬೆಂಗಳೂರು : ಬೆಂಗಳೂರಿನ ಕೆ.ಆರ್. ಪುರಂ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಭಟ್ಕಳ ಮೂಲದ 22 ವರ್ಷದ ಯುವತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಅತ್ಯಂತ ದುರದೃಷ್ಟಕರ ಘಟನೆ ನಡೆದಿದೆ. ಮೃತಳನ್ನು ಭಟ್ಕಳದ ಬೆಲ್ಕೆ ಗ್ರಾಮದ ನಿವಾಸಿ ದೀಪಾಲಿ ಗುರು ಗೊಂಡ (22) ಎಂದು ಗುರುತಿಸಲಾಗಿದೆ.
ಕಳೆದ ಏಳು ತಿಂಗಳಿನಿಂದ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ದೀಪಾಲಿ, ತನ್ನ ಸಹೋದ್ಯೋಗಿಗಳೊಂದಿಗೆ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮ ಮುಗಿಸಿ ಅವರೆಲ್ಲರೂ ಟಿಟಿ ವಾಹನದಲ್ಲಿ ಹಿಂತಿರುಗುತ್ತಿದ್ದಾಗ ಮಾರ್ಗಮಧ್ಯೆ ಈ ಘೋರ ದುರಂತ ಸಂಭವಿಸಿದೆ.
ನಿಲ್ಲಿಸಿದ್ದ ವಾಹನಕ್ಕೆ ಡಿಕ್ಕಿ ಹೊಡೆದ ಲಾರಿ:
ವರದಿಗಳ ಪ್ರಕಾರ, ಪ್ರಯಾಣದ ನಡುವೆ ಚಾಲಕನು ವಿಶ್ರಾಂತಿ ಪಡೆಯಲು ಕೆ.ಆರ್. ಪುರಂ ಬಳಿ ರಸ್ತೆಬದಿಯಲ್ಲಿ ಟಿಟಿ ವಾಹನವನ್ನು ನಿಲ್ಲಿಸಿದ್ದನು. ಈ ವೇಳೆ ಬಹುತೇಕ ಪ್ರಯಾಣಿಕರು ಕೆಳಗಿಳಿದಿದ್ದರು. ಆದರೆ, ದೀಪಾಲಿ ಸೇರಿದಂತೆ ಮೂವರು ಪ್ರಯಾಣಿಕರು ವಾಹನದೊಳಗೇ ಉಳಿದುಕೊಂಡಿದ್ದರು. ಇದೇ ಸಂದರ್ಭದಲ್ಲಿ ಹಿಂದಿನಿಂದ ಅತಿ ವೇಗವಾಗಿ ಬಂದ ಲಾರಿಯೊಂದು ನಿಲ್ಲಿಸಿದ್ದ ವಾಹನಕ್ಕೆ ರಬಸದಲ್ಲಿ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟಿಟಿ ವಾಹನವು ರಸ್ತೆಯಲ್ಲೇ ಪಲ್ಟಿಯಾಗಿದೆ.
ಅಪಘಾತದ ತೀವ್ರತೆಗೆ ವಾಹನದೊಳಗಿದ್ದ ದೀಪಾಲಿ ಅವರ ತಲೆ ಹಾಗೂ ದೇಹದ ಆಂತರಿಕ ಭಾಗಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ಆಕೆಯನ್ನು ಆಸ್ಪತ್ರೆಗೆ ತಲುಪಿಸುವ ಮೊದಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಮತ್ತೊಬ್ಬ ಯುವತಿಗೂ ಗಾಯಗಳಾಗಿದ್ದು, ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ.

