

ಮಂಗಳೂರು: ನಗರದ ವೆಲೆನ್ಸಿಯಾದ ಸೇಂಟ್ ವಿನ್ಸೆಂಟ್ ಫೆರರ್ ಚರ್ಚ್ಗೆ ಬರುತ್ತಿದ್ದ ಅಪ್ರಾಪ್ತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಬಂಧನಕ್ಕೊಳಗಾಗಿದ್ದ ಚರ್ಚ್ನ ಮಾಜಿ ಧರ್ಮಗುರು ರೆ. ಫಾ. ಸಿಪ್ರಿಯನ್ ಪಿಂಟೊ (65) ಅವರಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಅಕ್ಟೋಬರ್ 15ರಂದು ದಾಖಲಾಗಿದ್ದ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಕ್ಟೋಬರ್ 18ರಂದು ಪೊಲೀಸರ ಮುಂದೆ ಶರಣಾಗಿದ್ದ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಜಾಮೀನು ಅರ್ಜಿಯನ್ನು ಪುರಸ್ಕರಿಸಿ ನ್ಯಾಯಾಧೀಶರಾದ ಮಾನು ಕೆ.ಎಸ್. ಅವರು ಈ ಆದೇಶ ಹೊರಡಿಸಿದ್ದಾರೆ.
ಚರ್ಚ್ ಆವರಣದಲ್ಲಿ ಶಿಸ್ತು ಕಾಪಾಡುವ ಉದ್ದೇಶದಿಂದ ಸಂಜೆ 7 ಗಂಟೆಯ ನಂತರ ಗೇಟ್ ಮುಚ್ಚುವುದು ಸೇರಿದಂತೆ ಕೆಲ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದ್ದರಿಂದ ಅಸಮಾಧಾನಗೊಂಡ ಕೆಲವರು ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಅರ್ಜಿದಾರರ ಪರ ವಕೀಲರಾದ ರಾಜೇಶ್ ಕುಮಾರ್ ಅಮ್ಟಾಡಿ ವಾದ ಮಂಡಿಸಿದ್ದರು.
ಕೃತ್ಯ ನಡೆದಿದೆ ಎನ್ನಲಾದ ಅವಧಿಗೂ ಮತ್ತು ದೂರು ದಾಖಲಾದ ದಿನಾಂಕಕ್ಕೂ ಎರಡು ತಿಂಗಳಿಗೂ ಹೆಚ್ಚು ಕಾಲಾವಕಾಶವಿದೆ, ಅಲ್ಲದೆ ಇದೇ ವಿಷಯವಾಗಿ ಈ ಹಿಂದೆ ಮಕ್ಕಳ ರಕ್ಷಣಾ ನಿರ್ದೇಶನಾಲಯದ ಸೂಚನೆಯಂತೆ ಪೊಲೀಸರು ನಡೆಸಿದ ವಿಚಾರಣೆಯಲ್ಲೂ ಆರೋಪದಲ್ಲಿ ಹುರುಳಿಲ್ಲ ಎಂಬ ವರದಿ ಬಂದಿತ್ತು ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದರು. ಆರೋಪಿಗೆ 65 ವರ್ಷ ವಯಸ್ಸಾಗಿದ್ದು, ವಿವಿಧ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂಬುದನ್ನು ಪರಿಗಣಿಸುವಂತೆ ಕೋರಿದ್ದರು.
ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ಆರೋಪಿಗೆ ₹1 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತದ ಒಬ್ಬರ ಭದ್ರತಾ ಖಾತರಿಯೊಂದಿಗೆ ಜಾಮೀನು ನೀಡಿದೆ. ವಿಚಾರಣೆಯ ದಿನಾಂಕಗಳಂದು ನ್ಯಾಯಾಲಯಕ್ಕೆ ತಪ್ಪದೇ ಹಾಜರಾಗಬೇಕು, ತನಿಖಾಧಿಕಾರಿಗಳು ಕರೆದಾಗ ಹಾಜರಾಗಿ ಸಹಕಾರ ನೀಡಬೇಕು, ಸಂತ್ರಸ್ತ ಅಪ್ರಾಪ್ತನನ್ನು ಭೇಟಿಯಾಗುವುದಾಗಲಿ ಅಥವಾ ಆತನಿಗೆ ಕಿರುಕುಳ ನೀಡುವುದಾಗಲಿ ಮಾಡಬಾರದು, ಸಾಕ್ಷ್ಯಾಧಾರಗಳನ್ನು ನಾಶಪಡಿಸಬಾರದು, ನ್ಯಾಯಾಲಯದ ಅನುಮತಿ ಇಲ್ಲದೆ ದೇಶ ಬಿಟ್ಟು ತೆರಳುವಂತಿಲ್ಲ ಹಾಗೂ ವಾಸಸ್ಥಳದ ವಿಳಾಸ ಮತ್ತು ಮೊಬೈಲ್ ಸಂಖ್ಯೆಗಳನ್ನು ಒದಗಿಸಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ. ಈ ಯಾವುದೇ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಜಾಮೀನು ರದ್ದುಪಡಿಸಲು ಪ್ರಾಸಿಕ್ಯೂಷನ್ಗೆ ಅವಕಾಶವಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

