

ಇರಾನ್ಗೆ ಸಂಬಂಧಿಸಿದ ತೈಲ ಮತ್ತು ಪೆಟ್ರೋಕೆಮಿಕಲ್ ವಹಿವಾಟಿನಲ್ಲಿ ತೊಡಗಿವೆ ಎಂಬ ಆರೋಪದ ಮೇಲೆ ಭಾರತದ 4 ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಿರುವ ಅಮೆರಿಕಾ, ಈ ಕಂಪನಿಗಳೊಂದಿಗೆ ಸಂಪರ್ಕ ಹೊಂದಿರುವ 3 ಭಾರತೀಯ ಪ್ರಜೆಗಳ ಮೇಲೂ ನಿರ್ಬಂಧ ವಿಧಿಸಿದೆ.
ಇರಾನ್ಗೆ ಸಂಬಂಧಿಸಿದ ಪೆಟ್ರೋಲಿಯಂ ಮತ್ತು ಪೆಟ್ರೋಕೆಮಿಕಲ್ ವಹಿವಾಟು ಹಾಗೂ ಖರೀದಿ ಜಾಲದಲ್ಲಿ ಭಾಗಿಯಾಗಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಮೆರಿಕವು ಭಾರತ ಮೂಲದ ನಾಲ್ಕು ಕಂಪನಿಗಳ ಮೇಲೆ ನಿರ್ಬಂಧ ವಿಧಿಸಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ತಿಳಿಸಿದೆ.
ಇದೇ ವೇಳೆ, ಈ ಕಂಪನಿಗಳೊಂದಿಗೆ ಸಂಪರ್ಕ ಹೊಂದಿರುವ ಮೂವರು ಭಾರತೀಯ ನಾಗರಿಕರ ಮೇಲೂ ಅಮೆರಿಕ ನಿರ್ಬಂಧ ಹೇರಿರುವುದಾಗಿ ಮಾಹಿತಿ ನೀಡಿದೆ. ಅಮೆರಿಕದ ‘ಆಪರೇಷನ್ ಎಕನಾಮಿಕ್ ಔಟ್ಕಾಸ್ಟ್’ ಎಂಬ ವ್ಯಾಪಕ ಅಭಿಯಾನದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಇರಾನ್ನ ಸೇನಾ ಚಟುವಟಿಕೆಗಳು, ಖರೀದಿ ಜಾಲಗಳು ಹಾಗೂ ಪೆಟ್ರೋಲಿಯಂ ಮತ್ತು ಪೆಟ್ರೋಕೆಮಿಕಲ್ ವಹಿವಾಟುಗಳಿಗೆ ಸಂಬಂಧಿಸಿದೆ ಎಂದು ಅಮೆರಿಕ ಆರೋಪಿಸುವ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಈ ಅಭಿಯಾನ ನಡೆಯುತ್ತಿದೆ. ಅಮೆರಿಕದ ವಿದೇಶಾಂಗ ಇಲಾಖೆಯ ಪ್ರಕಾರ, Portease Partners LLP (Portease) ಭಾರತಕ್ಕೆ ಇರಾನ್ನಿಂದ ಪೆಟ್ರೋಕೆಮಿಕಲ್ ಉತ್ಪನ್ನಗಳ ಹಲವು ಸಾಗಣೆಗಳನ್ನು ಸುಗಮಗೊಳಿಸಲು ನೆರವಾಗಿದೆ ಎಂಬ ಆರೋಪವಿದೆ. Porteaseನ ನಿಯೋಜಿತ ಪಾಲುದಾರರಾಗಿರುವ ಇಬ್ಬರು ಭಾರತೀಯ ನಾಗರಿಕರಾದ ಇಂದ್ರಿಸ್ಮಿಯಾ ಅಶ್ರಫ್ಮಿಯಾ ಶೇಖ್ ಮತ್ತು ಹರೀಶ್ ರಾಮಚಂದ್ರ ರಂಗಿ ಅವರ ಮೇಲೂ ಅಮೆರಿಕ ನಿರ್ಬಂಧ ವಿಧಿಸಿದೆ.
ಇದೇ ವೇಳೆ, Sadashiva Overseas Limited ಎಂಬ ಭಾರತ ಮೂಲದ ಕಂಪನಿಯು 2024ರ ಫೆಬ್ರವರಿಯಿಂದ 2025ರ ಜೂನ್ವರೆಗೆ ವಿವಿಧ ಕಂಪನಿಗಳಿಂದ ಸುಮಾರು 6.9 ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಇರಾನ್ ಮೂಲದ ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದೆ ಎಂದು ಅಮೆರಿಕ ಆರೋಪಿಸಿದೆ. ಈ ಸಾಗಣೆಗಳಲ್ಲಿ ಕೆಲವು Bonjoure Commodity F.Z.E. ಮೂಲಕ ನಡೆದಿವೆ ಎಂದು ಹೇಳಿದೆ.
ಇರಾನ್ನಿಂದ ಪೆಟ್ರೋಲಿಯಂ ಅಥವಾ ಪೆಟ್ರೋಲಿಯಂ ಉತ್ಪನ್ನಗಳ ಖರೀದಿ, ಸ್ವಾಧೀನ, ಮಾರಾಟ, ಸಾಗಣೆ ಅಥವಾ ಮಾರುಕಟ್ಟೆ ಮಾಡುವ ಮೂಲಕ ಮಹತ್ವದ ವಹಿವಾಟು ನಡೆಸಿದೆ ಎಂಬ ಆರೋಪದ ಮೇರೆಗೆ Sadashiva Overseas ಮೇಲೆ ನಿರ್ಬಂಧ ವಿಧಿಸಲಾಗಿದೆ ಎಂದು ಅಮೆರಿಕ ತಿಳಿಸಿದೆ. ಮತ್ತೊಂದು ಕಂಪನಿಯಾದ PP Softtech Private Limited ಕೂಡ ಅಮೆರಿಕದ ನಿರ್ಬಂಧಕ್ಕೆ ಒಳಗಾಗಿದೆ. 2024ರ ಜನವರಿಯಿಂದ 2025ರ ಜೂನ್ವರೆಗೆ ಈ ಕಂಪನಿಯು ಸುಮಾರು 2.5 ಕೋಟಿ ಡಾಲರ್ ಮೌಲ್ಯದ ಇರಾನ್ ಮೂಲದ ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದೆ ಎಂದು ಅಮೆರಿಕ ಆರೋಪಿಸಿದೆ.
PP Softtech ನ ನಿರ್ದೇಶಕರಾಗಿರುವ ಭಾರತೀಯ ನಾಗರಿಕ ಪ್ರಶಾಂತ್ ಗರ್ಗ್ ಅವರ ಮೇಲೂ ನಿರ್ಬಂಧ ಹೇರಲಾಗಿದೆ.
ನಾಲ್ಕನೇ ಕಂಪನಿಯಾದ Prakrutees Infra Impex India Private Limited 2023ರ ಮೇಯಿಂದ 2026ರ ಫೆಬ್ರವರಿವರೆಗೆ ವಿವಿಧ ಕಂಪನಿಗಳಿಂದ ಸುಮಾರು 2.5 ಕೋಟಿ ಡಾಲರ್ ಮೌಲ್ಯದ ಇರಾನ್ ಮೂಲದ ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದೆ ಎಂದು ಅಮೆರಿಕ ಆರೋಪಿಸಿದೆ.
ಅಮೆರಿಕ ಈಗಾಗಲೇ ನಿರ್ಬಂಧ ವಿಧಿಸಿರುವ Bonjoure Commodity F.Z.E. ಸೇರಿದಂತೆ ಹಲವು ಕಂಪನಿಗಳಿಂದ ಈ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದೆ. Sadashiva Overseas, PP Softtech ಮತ್ತು Prakrutees Infraಗೆ ಸಂಬಂಧಿಸಿದ ಇರಾನ್ ಮೂಲದ ಪೆಟ್ರೋಲಿಯಂ ಆಮದುಗಳ ಒಟ್ಟು ಮೌಲ್ಯ ಸುಮಾರು 11.9 ಕೋಟಿ ಅಮೆರಿಕನ್ ಡಾಲರ್ ಎಂದು ಅಮೆರಿಕ ಹೇಳಿದೆ.
ಇರಾನ್ನ ಪೆಟ್ರೋಲಿಯಂ ಆದಾಯವನ್ನು ನಿರ್ಬಂಧಿಸುವುದು ಹಾಗೂ ಇರಾನ್ನ ಸೇನಾ ಮತ್ತು ಖರೀದಿ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿವೆ ಎಂದು ಅಮೆರಿಕ ಆರೋಪಿಸುವ ಜಾಲಗಳನ್ನು ಅಸ್ತವ್ಯಸ್ತಗೊಳಿಸುವುದು ಈ ಕ್ರಮದ ಉದ್ದೇಶವಾಗಿದೆ. ಇರಾನ್ ತೈಲ ವಹಿವಾಟಿಗೆ ಸಂಬಂಧಿಸಿದ ಆರೋಪಗಳ ಹಿನ್ನೆಲೆಯಲ್ಲಿ ಈ ಹಿಂದೆಯೂ ಅಮೆರಿಕ ಹಲವು ಭಾರತ ಮೂಲದ ಕಂಪನಿಗಳ ಮೇಲೆ ನಿರ್ಬಂಧ ವಿಧಿಸಿತ್ತು.
ಅಮೆರಿಕದ ಈ ಘೋಷಣೆಗೆ ಸಂಬಂಧಿಸಿದಂತೆ ನಿರ್ಬಂಧಕ್ಕೆ ಒಳಗಾದ ಕಂಪನಿಗಳು ಮತ್ತು ವ್ಯಕ್ತಿಗಳು ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

