

ಮಂಗಳೂರು, ಅ. 15; ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ನಗರದ ವೆಲೆನ್ಸಿಯಾದ ಚರ್ಚ್ ವೊಂದರ ಧರ್ಮಗುರು ಸಿಪ್ರಿಯನ್ ಪಿಂಟೋ ಎಂಬವರ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಪ್ರಕರಣ ದಾಖಲಾಗಿದೆ.
ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ಫಾ.ಸಿಪ್ರಿಯನ್ ಪಿಂಟೋ ವಿರುದ್ಧ ಸಂತ್ರಸ್ತರು ಮಕ್ಕಳ ರಕ್ಷಣಾ ನಿರ್ದೇಶನಾಲಯಕ್ಕೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ರಕ್ಷಣಾ ನಿರ್ದೇಶನಾಲಯವು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ದ.ಕ. ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಸೂಚನೆ ನೀಡಿತ್ತು.
ಅಲ್ಲದೇ ಮೈಸೂರಿನ ಒಡನಾಡಿ ಸಂಸ್ಥೆ ಕೂಡ ಪ್ರಕರಣದ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಆಗ್ರಹಿಸಿತ್ತು ಎಂದು ತಿಳಿದು ಬಂದಿದೆ.
ಈ ಕುರಿತು ಸಂತ್ರಸ್ತ ಬಾಲಕನೋರ್ವ ನೀಡಿದ ದೂರಿನಂತೆ ಆರೋಪಿ ಫಾ.ಸಿಪ್ರಿಯನ್ ಪಿಂಟೋ ವಿರುದ್ಧ ನಗರದ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ವೆಲೆನ್ಸಿಯಾದ ಸೇಂಟ್ ವಿನ್ಸೆಂಟ್ ಫೆರಾರ್ ಚರ್ಚ್ನ ಧರ್ಮಗುರು ಫಾದರ್ ಸಿಪ್ರಿಯನ್ ಪಿಂಟೋ ಅವರ ವಿರುದ್ಧ ಅಪ್ರಾಪ್ತ ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಅಕ್ಟೋಬರ್ 15 ರಂದು ಈ ಸಂಬಂಧ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ
ಚಾಕಲೇಟ್ ಆಮಿಷ ಒಡ್ಡಿ ಕಿರುಕುಳ: ದೂರಿನ ವಿವರ
ದೂರಿನ ಪ್ರಕಾರ, ಪ್ರಾರ್ಥನೆಗಾಗಿ ಚರ್ಚ್ಗೆ ಬರುತ್ತಿದ್ದ 14 ವರ್ಷದ ಅಪ್ರಾಪ್ತ ಬಾಲಕನಿಗೆ ಆರೋಪಿ ಧರ್ಮಗುರು ಚಾಕಲೇಟ್ ನೀಡಿ ಪುಸಲಾಯಿಸಿದ್ದರು. ನಂತರ ಚರ್ಚ್ ಆವರಣದ ಕೊಠಡಿಯೊಂದಕ್ಕೆ ಕರೆದೊಯ್ದು ಆತನ ದೇಹವನ್ನು ಅಸಭ್ಯವಾಗಿ ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದರು. ಆಗಸ್ಟ್ 14 ರಂದು ರಿಸೆಪ್ಷನಿಸ್ಟ್ ಕೊಠಡಿಗೆ ಬಾಲಕನನ್ನು ಕರೆದು ತಬ್ಬಿಕೊಂಡು ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತ ಬಾಲಕ ದೂರಿನಲ್ಲಿ ತಿಳಿಸಿದ್ದಾನೆ.

