


ಕೋಲಾರ:- ರೈತರು ಕಾಲ,ಮಾರುಕಟ್ಟೆ ವೈಪರಿತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಬೆಳೆ ಪದ್ದತಿ ಅಳವಡಿಸಿಕೊಂಡು ಕೃಷಿಯನ್ನು ಲಾಭದಾಯಕವಾಗಿಸಿಕೊಳ್ಳಬೇಕು ಎಂದು ಚಿಂತಾಮಣಿ ರೇಷ್ಮೆ,ಕೃಷಿ ಮಹಾವಿದ್ಯಾಲಯದ ಡೀನ್ ರಾಮಕೃಷ್ಣ ನಾಯ್ಕ್ ಕರೆ ನೀಡಿದರು.
ಕೋಲಾರ ಜಿಲ್ಲೆಯ ಕೊಳತೂರು ಗ್ರಾಮದ ಸೋಮೇಶ್ವರಸ್ವಾಮಿ ದೇವಾಲಯ ಆವವರಣದಲ್ಲಿ ಚಿಂತಾಮಣಿ ರೇಷ್ಮೆ ಕೃಷಿ ಮಹಾವಿದ್ಯಾಲಯ ವಿದ್ಯಾರ್ಥಿಗಳ ಗ್ರಾಮೀಣ ಸಹಭಾಗಿತ್ವ ಮೌಲ್ಯಮಾಪನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇಂದಿನ ಶಿಬಿರದಲ್ಲಿ ವಿದ್ಯಾರ್ಥಿಗಳು ಕೊಳತೂರು ಗ್ರಾಮದ ಸಾಮಾಜಿಕ ನಕ್ಷೆ, ಬೆಳೆಯ ಶ್ರೇಣಿ, ಚಲನಶೀಲತೆಯ ನಕ್ಷೆ, ಸಂಪನ್ಮೂಲ ನಕ್ಷೆ, ಋತುಮಾನ ನಕ್ಷೆ, ಸಮಸ್ಯಾತ್ಮಕ ನಕ್ಷೆಯ ಕುರಿತು ಗ್ರಾಮದ ಸೋಮೇಶ್ವರ ಸ್ವಾಮಿ ದೇವಾಲಯದ ಮುಂಭಾಗದ ಆವರಣದಲ್ಲಿ ಮಾದರಿಗಳನ್ನು ನಿರ್ಮಿಸಿ ರೈತರಿಗೆ ಅರಿವು ಮೂಡಿಸಲಾಯಿತು.
ರೈತರು ಭೂಮಿಯಲ್ಲಿ ಒಂದೇ ಬೆಳೆಯನ್ನು ನಿರಂತರವಾಗಿ ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ನಾಶವಾಗುತ್ತದೆ, ರೋಗಗಳು ಹೆಚ್ಚುತ್ತವೆ ಎಂದು ಎಚ್ಚರಿಸಿದ ಅವರು, ಋತುಮಾನಕ್ಕೆ ತಕ್ಕಂತೆ ಬೆಳೆ ಪದ್ದತಿ ಅಳವಡಿಸಿಕೊಳ್ಳಿ, ಕೃಷಿಯಲ್ಲಿ ಈಗ ಆಧುನಿಕ ಪದ್ದತಿಗಳನ್ನು ಅಳವಡಿಸಿಕೊಳ್ಳಿ, ಬೆಳೆನಷ್ಟವಾಯಿತು ಎಂದು ದುಃಖ ಪಡುವ ಬದಲಿಗೆ ಮಾರುಕಟ್ಟೆ ವೈಪರಿತ್ಯಗಳನ್ನು ಅರಿತು ಬೆಳೆ ಪದ್ದತಿ ಇರಲಿ, ಬೇರೆಬೇರೆ ಬೆಳೆಗಳನ್ನು ಬೆಳೆದು ಲಾಭ ಗಳಿಸಿ ಎಂದರು.
ಕಾರ್ಯಕ್ರಮದ ಸಂಯೋಜಕ ಕೀಟಶಾಸ್ತ್ರ ವಿಭಾಗದ ಡಾ.ಎಂ.ವಿ.ಶ್ರೀನಿವಾಸರೆಡ್ಡಿ, ವಿವಿಧ ಬೆಳೆಗಳಿಗೆ ಬರುವ ರೋಗಗಳು, ಅವುಗಳ ನಿಯಂತ್ರಣದ ಕುರಿತು ಅರಿವು ಮೂಡಿಸಿ, ರೋಗ ನಿಯಂತ್ರಣಕ್ಕೆ ಜೈವಿಕ ವಿಧಾನ ಹೆಚ್ಚು ಸೂಕ್ತ ಎಂದರು.
ಕೃಷಿ ಸಂಶೋಧನಾ ಕೇಂದ್ರದ ಹಿರಿಯ ಕೃಷಿ ಅಧೀಕ್ಷಕ ಡಾ.ವಿ.ವೆಂಕಟಾಚಲಪತಿ, ರೋಗ ನಿಯಂತ್ರಣದ ಜತೆಗೆ ಆಧುನಿಕ ಬೇಸಾಯಪದ್ದತಿಗಳನ್ನು ಅಳವಡಿಸಿಕೊಳ್ಳಿ, ಬಿತ್ತನೆ ಬೀಜ ಪಡೆಯುವಾಗ ಎಚ್ಚರಿಕೆ ಇರಲಿ, ಗುಣಮಟ್ಟದ ಕುರಿತು ಖಾತ್ರಿ ಇರಲಿ, ರಸೀದಿ ಕೇಳಿ ಪಡೆಯಿರಿ ಎಂದು ಸಲಹೆ ನೀಡಿದರು.
ಬೇಸಾಯ ಶಾಸ್ತ್ರ ವಿಭಾಗದ ಡಾ.ವೆಂಕಟರಮಣ ನಾಯಕ್ ಇದೇ ಸಂದರ್ಭದಲ್ಲಿ ಮಣ್ಣಿನ ಪರೀಕ್ಷೆಯ ಮಹತ್ವ, ಮಣ್ಣಿನ ಮಾದರಿ ಸಂಗ್ರಹಣೆ, ಮಣ್ಣು ಮಾದರಿ ಎಲ್ಲಿ ತೆಗದುಕೊಳ್ಳಬೇಕೆಂದು ತಿಳಿಸಿಕೊಟ್ಟರು.
ಒಂದೇ ಬೆಳೆ ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ನಾಶವಾಗುತ್ತದೆ ಎಂದು ಎಚ್ಚರಿಸಿದ ಅವರು, ಕೇವಲ ರಸಾಯನಿಕ ಗೊಬ್ಬರಗಳಿಗೆ ಸೀಮಿತವಾದರೆ ಮಣ್ಣಿನ ಗುಣ ಹಾಳಾಗಿ ಆಮ್ಲೀಯತೆ ಹೆಚ್ಚುತ್ತದೆ ಎಂದು ಎಚ್ಚರಿಸಿ, ಸಾವಯವ ಗೊಬ್ಬರಗಳನ್ನು ಹೆಚ್ಚು ಬಳಸಲು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕೃಷಿ ವಿಸ್ತರಣಾ ಕೇಂದ್ರದ ಡಾ.ರಾಜೇಶ್ಸಿಎಂ., ಡಾ.ಸುನೀತಾ, ಅನುವಂಶೀಯತೆ, ಸಸ್ಯಾಭಿವೃದ್ದಿ ವಿಭಾಗದ ಡಾ.ಅಂಬಿಕಾ, ಬೆಳೆ ಶರೀರಶಾಸ್ತ್ರದ ಡಾ.ಪಲ್ಲವಿ, ಪ್ರಗತಿಪರ ರೈತರಾದ ಜಿ.ಎನ್.ನಾಗರಾಜ್, ಬಾಲಚಂದ್ರಣ್ಣ, ಶ್ರೀನಿವಾಸ್, ಗ್ರಾ.ಪಂ ಮಾಜಿ ಚೇರ್ಮನ್ ಶ್ರೀನಿವಾಸ್, ಎಂಪಿಸಿಎಸ್ ಅಧ್ಯಕ್ಷ ಶ್ರೀರಾಮೇಗೌಡ, ವಿದ್ಯಾರ್ಥಿಗಳಾದ ಡಿ.ಎಸ್.ಅತೀಶ್ಪಾಟೀಲ್, ಎಂ.ಚೇತನ, ದೀಪಿಕಾ. ಎಸ್.ದ್ವಾರಕಿ, ಜಿ.ಗಾನವಿ, ಜಿ.ಹೆಚ್.ಗುರುದೇವಿ, ಜೆ.ಭೀಮರಾವ್, ಸಿ.ಕಮಲಾಕ್ಷಿತಾ, ಜೆ.ಲೀಲಾ, ಮೌನೇಶ್ ಪಟ್ಟಾರ್, ರಾಹುಲ್ ಶಿಂದೆ, ಸಿದ್ದಲಿಂಗರೆಡ್ಡಿ, ತರುಣ್, ಭದ್ರಕಾಳಿ ,ವಿನಾಹಕ ಮತ್ತು ಗ್ರಾಮಸ್ಥರು ಹಾಜರಿದ್ದರು.

