


ಶ್ರೀನಿವಾಸಪುರ: ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಹಂತ ಹಂತವಾಗಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ಮುಳಬಾಗಿಲು ವೃತ್ತದಿಂದ ಎಚ್.ನಲ್ಲಪಲ್ಲಿ ಗ್ರಾಮದವರೆಗೆ ₹1 ಕೋಟಿ ವೆಚ್ಚದಲ್ಲಿ ಡಾಂಬರ್ ರಸ್ತೆ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಪಟ್ಟಣದಲ್ಲಿನ ಮೂರು ರಾಜಕಾಲುವೆಗಳನ್ನು ಸುಮಾರು ₹5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಎಪಿಎಂಸಿ ಮಾರುಕಟ್ಟೆ ಬಳಿಯ ರಾಜಕಾಲುವೆಯಿಂದ ಕಾಮಗಾರಿ ಆರಂಭವಾಗಲಿದ್ದು, ಮೂರು ಪ್ರಮುಖ ರಾಜಕಾಲುವೆಗಳ ಅಭಿವೃದ್ಧಿಯ ಜೊತೆಗೆ ಒಂದು ಸೇತುವೆ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಪಟ್ಟಣದ ಅಮಾನಿಕರೆಯಂಗಳದಲ್ಲಿ ನಿರ್ಮಾಣವಾಗುತ್ತಿರುವ ಕ್ರೀಡಾಂಗಣಕ್ಕೆ ₹4.5 ಕೋಟಿ ವೆಚ್ಚ ಮಾಡಲಾಗುತ್ತಿದೆ. ಕೆರೆ ಕಟ್ಟೆ ಮೇಲ್ಭಾಗದಲ್ಲಿ ಉದ್ಯಾನವನ ನಿರ್ಮಾಣ, ಬ್ಯಾಡ್ಮಿಂಟನ್ ಕೋರ್ಟ್ ಹಾಗೂ ಮುಂದಿನ ಹಂತದಲ್ಲಿ ಈಜುಕೊಳ ನಿರ್ಮಿಸುವ ಚಿಂತನೆಯೂ ಇದೆ ಎಂದು ಹೇಳಿದರು.
ಸರ್ಕಾರದ ಮಾರ್ಗಸೂಚಿಯಂತೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಕೈಗೊಳ್ಳಲಾಗುತ್ತಿದೆ. ಶ್ರೀನಿವಾಸಪುರ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವ ಕನಸು ನನ್ನದಲ್ಲಿದೆ ಎಂದು ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದಲ್ಲಿ ವಿವಿಧ ಸಮುದಾಯಗಳಿಗೆ ಅನುಗುಣವಾಗಿ ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ಜಮೀನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಹಕ್ಕುಪತ್ರಗಳನ್ನೂ ವಿತರಿಸಲಾಗಿತ್ತು. ಆದರೆ ಕೆಲವು ಕಾರಣಗಳಿಂದ ಕಾಮಗಾರಿ ಮುಂದುವರಿಯಲಿಲ್ಲ ಎಂದು ವಿವರಿಸಿದರು.
ಪ್ರಸ್ತುತ ಟೊಮ್ಯಾಟೊ ಹಾಗೂ ಮಾವಿನಕಾಯಿ ಬೆಲೆ ಕುಸಿತದಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಕುರಿತು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನಕ್ಕೆ ವಿಷಯವನ್ನು ತಂದಿದ್ದೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ತೂಪಲ್ಲಿ ಆರ್. ನಾರಾಯಣಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ನಾಗರಾಜ್, ಪುರಸಭೆ ಮಾಜಿ ಅಧ್ಯಕ್ಷರಾದ ಸಿ.ಮುನಿಯಪ್ಪ ಮತ್ತು ಶ್ರೀನಿವಾಸಪ್ಪ, ಮಾಜಿ ಸದಸ್ಯ ಬಿ.ವಿ.ರೆಡ್ಡಿ, ಆನಂದ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹಳೇಪೇಟೆ ಮಂಜುನಾಥರೆಡ್ಡಿ, ನೀರಾವರಿ ಇಲಾಖೆ ಇಂಜಿನಿಯರ್ ರಡ್ಡಪ್ಪ, ಲ್ಯಾಂಡ್ ಆರ್ಮಿ ಇಂಜಿನಿಯರ್ ಶ್ರೀನಿವಾಸ್, ಪೂಲ ಶಿವಾರೆಡ್ಡಿ, ಮಂಜುನಾಥ್, ಲಕ್ಷ್ಮಣರೆಡ್ಡಿ, ಹೆಬ್ಬಟ ರಮೇಶ್, ಮೋಹನ್, ಹನುಮಂತಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

