


ಬೆಂಗಳೂರು: ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೂತನ ಆಯುಕ್ತರಾಗಿ ಐಪಿಎಸ್ ಅಧಿಕಾರಿ ಎಂ.ಎನ್. ಅನುಚೇತ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ. ಅವರು ಇಂದು ಅಧಿಕಾರ ಸ್ವೀಕರಿಸಲಿದ್ದಾರೆ.
ಸರ್ಕಾರವು ವಾರ್ತಾ ಇಲಾಖೆಯ ಜೊತೆಗೆ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಆಯುಕ್ತರ ಹೆಚ್ಚುವರಿ ಪ್ರಭಾರವನ್ನೂ ಅವರಿಗೆ ನೀಡಿದೆ.
ಮೂಲತಃ ಕೋಲಾರ ಜಿಲ್ಲೆಯವರಾದ ಅನುಚೇತ್ ಅವರು, ಬೆಂಗಳೂರಿನ ಆರ್.ವಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ 2006ರಲ್ಲಿ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ನಂತರ ನಾಗರಿಕ ಸೇವೆಗೆ ಸೇರುವ ಗುರಿಯೊಂದಿಗೆ ಶ್ರಮಿಸಿ, 2008ರ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿ, 2009ರ ಬ್ಯಾಚ್ನ ಕರ್ನಾಟಕ ಕೇಡರ್ನ ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದರು.
ತಂತ್ರಜ್ಞಾನ ಆಧಾರಿತ ಆಡಳಿತ ಮತ್ತು ಸಮರ್ಥ ಪೊಲೀಸ್ ವ್ಯವಸ್ಥೆಗಾಗಿ ಹೆಸರುವಾಸಿಯಾಗಿರುವ ಅನುಚೇತ್ ಅವರು, ಪೊಲೀಸ್ ಇಲಾಖೆಯಲ್ಲಿ ಹಲವು ಮಹತ್ವದ ಹುದ್ದೆಗಳನ್ನು ನಿರ್ವಹಿಸಿದ್ದಾರೆ. 2011ರಲ್ಲಿ ಪುತ್ತೂರಿನ ಸಹಾಯಕ ಪೊಲೀಸ್ ಅಧೀಕ್ಷಕರಾಗಿ (ASP) ವೃತ್ತಿಜೀವನ ಆರಂಭಿಸಿದ ಅವರು, ಬಳಿಕ ಸಿಐಡಿ ವಿಭಾಗದ ಎಸ್ಪಿ, ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಸೇರಿದಂತೆ ಹಲವು ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.
ಇತ್ತೀಚೆಗೆ ಬೆಂಗಳೂರು ನಗರ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಆಗಿ ಕಾರ್ಯನಿರ್ವಹಿಸಿದ್ದ ಅವರು, ನಗರ ಸಂಚಾರ ನಿಯಂತ್ರಣದಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಅಳವಡಿಕೆಗೆ ಪ್ರಮುಖ ಪಾತ್ರವಹಿಸಿದ್ದರು. ಈ ಹುದ್ದೆಗೆ ಮೊದಲು ಪೊಲೀಸ್ ನೇಮಕಾತಿ ವಿಭಾಗದ ಡಿಐಜಿಪಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಅತ್ಯುತ್ತಮ ತನಿಖಾ ಕಾರ್ಯಕ್ಕಾಗಿ ಕೇಂದ್ರ ಸರ್ಕಾರದಿಂದ “ಕೇಂದ್ರ ಗೃಹ ಸಚಿವರ ಅತ್ಯುತ್ತಮ ತನಿಖಾ ಪದಕ”ಕ್ಕೂ ಭಾಜನರಾಗಿರುವ ಅನುಚೇತ್ ಅವರು, ವಾರ್ತಾ ಇಲಾಖೆಯ ಕಾರ್ಯವೈಖರಿಗೆ ಹೊಸ ಚೈತನ್ಯ ನೀಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತವಾಗಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೂತನ ಆಯುಕ್ತರಾಗಿ ಅಧಿಕಾರ ಸ್ವೀಕರಿಸಲಿರುವ ಡಿಐಜಿ ಎಂ.ಎನ್. ಅನುಚೇತ್ ಅವರಿಗೆ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ ಅಭಿನಂದನೆ ಸಲ್ಲಿಸಿದೆ.

