

ಶ್ರೀನಿವಾಸಪುರ : ದೇಶಾದ್ಯಂತ 23 ವರ್ಷಗಳ ಬಳಿಕ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದ್ದು, ಈಗ ಮೂರನೇ ಹಂತದ ಕಾರ್ಯ ನಡೆಯುತ್ತಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ರೋಣುರು ಆರ್.ಎನ್.ಚಂದ್ರಶೇಖರ್ ತಿಳಿಸಿದರು
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದರು.
ಶ್ರೀನಿವಾಸಪುರ ತಾಲೂಕಿನ ಅನೇಕ ಗ್ರಾಮಗಳಲ್ಲಿ ಹೊರ ಪ್ರದೇಶದ ಮತದಾರರ ಹೆಸರುಗಳಿರುವ ಬಗ್ಗೆ ಮಾಹಿತಿ ದೊರೆತಿದ್ದು, ಎಲ್ಲಾ ಬೂತ್ಗಳಲ್ಲಿ ನೇಮಕಗೊಂಡಿರುವ ಬಿಎಲ್ಎ ಹಾಗು ಬಿಎಲ್ಒ ಅಧಿಕಾರಿಗಳು ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸಬೇಕು ಎಂದು ಹೇಳಿದರು. ಬಿಎಲ್ಒ ಅಧಿಕಾರಿಗಳು ಯಾವುದೇ ರಾಜಕೀಯ ಪ್ರಭಾವಕ್ಕೆ ಒಳಗಾಗದೆ ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸಬೇಕು. ತಪ್ಪುಗಳು ಕಂಡುಬAದರೆ ನೇರ ಹೊಣೆ ಅಧಿಕಾರಿಗಳದ್ದೇ ಆಗಲಿದೆ ಎಂದು ಎಚ್ಚರಿಸಿದರು.
ಬಿಜೆಪಿ ಪಕ್ಷದ ನಿಕಟಪೂರ್ವ ಜಿಲ್ಲಾ ಅಧ್ಯಕ್ಷ ಡಾ. ಕೆ.ಎನ್.ವೇಣುಗೋಪಾಲ್ ಮಾತನಾಡಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಭಾರತೀಯ ನಾಗರಿಕ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಆಗಬೇಕು. ಜೊತೆಗೆ ನಕಲಿ ಮತದಾರರು, ಡಬಲ್ ಎಂಟ್ರಿ ಹಾಗೂ ಮರಣ ಹೊಂದಿದವರ ಹೆಸರುಗಳನ್ನು ತೆಗೆದುಹಾಕುವುದು ಈ ಕಾರ್ಯದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಬೂತ್ ಲೆವೆಲ್ ಅಧಿಕಾರಿಗಳು ಪ್ರತಿಯೊಂದು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ಮತದಾರರ ಹೆಸರು, ವಿಳಾಸ, ವಯಸ್ಸು ಸೇರಿದಂತೆ ಯಾವುದೇ ತಿದ್ದುಪಡಿ ಇದ್ದರೆ ಸರಿಪಡಿಸುವ ಅವಕಾಶವಿದೆ ಎಂದರು.
ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ಈ ಪ್ರಕ್ರಿಯೆಯ ಮೂಲಕ ಲಕ್ಷಾಂತರ ನಕಲಿ ಮತದಾರರನ್ನು ಗುರುತಿಸಿ ಮತಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಹೇಳಿದರು. ಕರ್ನಾಟಕದ ಅನೇಕ ಕ್ಷೇತ್ರಗಳಲ್ಲಿ ಕೆಲವೇ ಸಾವಿರ ಮತಗಳ ಅಂತರದಲ್ಲಿ ಗೆಲುವು-ಸೋಲು ನಿರ್ಧಾರವಾಗುತ್ತಿರುವುದರಿಂದ ಮತದಾರರ ಪಟ್ಟಿಯ ಪಾರದರ್ಶಕತೆ ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದರು. ಯಾವುದೇ ವ್ಯಕ್ತಿಯ ಹೆಸರು ಎರಡು ಕಡೆ ಮತದಾರರ ಪಟ್ಟಿಯಲ್ಲಿ ಇರಬಾರದು. ವಾಸಿಸುವ ಸ್ಥಳದ ಆಧಾರದ ಮೇಲೆ ಒಂದೇ ಕಡೆ ಮತದಾರರಾಗಿ ನೋಂದಣಿ ಇರಬೇಕು ಎಂದು ತಿಳಿಸಿದರು.
ಈ ಸಮಯದಲ್ಲಿ ತಾಲೂಕು ಕಾರ್ಯದರ್ಶಿ ಶೆಟ್ಟಿಹಳ್ಳಿ ನಾಗಭೂಷಣ್, ಮುಖಂಡರಾದ ನಾಗರಾಜ್, ಶ್ರೀನಿವಾಸ್ ಇದ್ದರು

