

ಉಡುಪಿ ಜಿಲ್ಲೆಯ ಕುಂದಾಪುರದ ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಪೃಥ್ವಿರಾಜ್ ರಾಘವೇಂದ್ರ ಗಾಣಿಗ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ -2 ರಲ್ಲಿ ರಾಜ್ಯಕ್ಕೆ 6 ನೇ ಸ್ಥಾನ (Rank)ಗಳಿಸಿದ್ದಾನೆ.
ಯಾವುದೇ ಕೋಚಿಂಗ್ ಅಥವಾ ಟ್ಯೂಷನ್ ಗೆ ಹೋಗದೆ ಉಪನ್ಯಾಸಕ ವೃಂದದವರು ಮತ್ತು ಪಾಲಕರ ಹುರಿದುಂಬಿಸುವಿಕೆಯಿಂದ ಛಲ ಬಿಡದೆ ಅಧ್ಯಯನ ಮಾಡಿ ಪಿ ಯು ವಾರ್ಷಿಕ ಪರೀಕ್ಷೆ -1 ರಲ್ಲಿ ರಾಜ್ಯಕ್ಕೆ 11 ನೇ ಸ್ಥಾನ ಗಳಿಸಿ ಮತ್ತೆ ಹಠ ಸಾಧನೆಯಿಂದ ಪರೀಕ್ಷೆ -2 ರಲ್ಲಿ 600 ಅಂಕಗಳಿಗೆ 595 ಅಂಕಗಳನ್ನು (ಶೇ 99.16)ಗಳಿಸಿ ರಾಜ್ಯಕ್ಜೆ 6 ನೇ ಸ್ಥಾನ ಗಳಿಸಿರುತ್ತಾನೆ. ಬಹುಮುಖ ಪ್ರತಿಭೆಯ ವಿದ್ಯಾರ್ಥಿಯಾಗಿರುವ ಈತ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಮುಂದಿದ್ದು, ಉತ್ತಮ ಕೊಳಲು
ವಾದನದಲ್ಲಿಯೂ ಆಸಕ್ತಿ ಹೊಂದಿದ್ದು ಕುಂದಾಪುರದ ಸಾಧನ ಕಲಾ ಸಂಗಮ ಸಂಸ್ಥೆಯ ವಿದ್ಯಾರ್ಥಿಯಾಗಿ ಜೂನಿಯರ್ ಪರೀಕ್ಷೆ ತೇರ್ಗಡೆಯಾಗಿ ಸಿನಿಯರ್ ಪರೀಕ್ಷೆಗೆ ತಯಾರಿ ನಡೆಸಿರುತ್ತಾನೆ. ಉತ್ತಮ ಭಾಷಣಕಾರ, ನಿರೂಪಕ, ಸಂಗೀತ, ಸಾಮಾನ್ಯಜ್ಞಾನ ಎಲ್ಲದರಲ್ಲಿಯೂ ಎತ್ತಿದ ಕೈ ಇವನದ್ದು.
ಈತನು ಕುಂದಾಪುರದ ಆನಗಳ್ಳಿಯ “ಸ್ಮಾರ್ಟ್ ಕಿಡ್ಸ್ ಸ್ಕೂಲ್” ಈ ಸಂಸ್ಥೆಯ ಮಾಲಕರಾದ ಶ್ರೀ ರಾಘವೇಂದ್ರ ಗಾಣಿಗ ಮತ್ತು ಶ್ರೀಮತಿ ವಾಣಿ ಆರ್ ಈ ದಂಪತಿಗಳ ಸುಪುತ್ರ. ಈತನ ಸಾಧನೆಗೆ ವಿದ್ಯಾಸಂಸ್ಥೆಯ ಸಂಚಾಲಕರು, ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಉಪನ್ಯಾಸಕ ವೃಂದದವರು ಅಭಿನಂದನೆಗಳನ್ನು ತಿಳಿಸಿದ್ದಾರೆ.

