

ಶ್ರೀನಿವಾಸಪುರ: ಭಾರಿ ಮಳೆ ಮತ್ತು ಬಿರುಗಾಳಿಯಿಂದ ಹಾನಿಗೊಳಗಾದ ಮಾವು ಬೆಳೆಗಾರ ರೈತರಿಗೆ ತಕ್ಷಣ ಎಸ್ಡಿಆರ್ಎಫ್ ಹಾಗೂ ಎನ್ಡಿಆರ್ಎಫ್ ಪರಿಹಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಕೆಆರ್ಎಸ್ ಪಕ್ಷದ ವತಿಯಿಂದ ಸೋಮವಾರ ಭರ್ಜರಿ ಬೈಕ್ ರ್ಯಾಲಿ ನಡೆಸಲಾಯಿತು.
ಕೆಆರ್ಎಸ್ ಪಕ್ಷದ ರಾಜ್ಯ ಕಾರ್ಯದರ್ಶಿ ಇಂದಿರಾ ರೆಡ್ಡಿ ನೇತೃತ್ವದಲ್ಲಿ ನಡೆದ ರ್ಯಾಲಿಯಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರೈತರ ಪರ ಘೋಷಣೆಗಳನ್ನು ಕೂಗಿದರು. ಹೊದಲಿ ಪಂಚಾಯಿತಿಯಿಂದ ಆರಂಭವಾದ ರ್ಯಾಲಿ ಪುಲಗೂರಕೋಟೆ, ಸೋಮಯಾಜಲಹಳ್ಳಿ, ಅಡ್ಡಗಲ್, ಲಕ್ಷ್ಮಿಪುರ , ತಾಡಿಗೋಳ್ ಹಾಗೂ ನೆಲವಂಕಿ ಪಂಚಾಯಿತಿಗಳ ಮೂಲಕ ಸಂಚರಿಸಿತು.
ಪ್ರತಿ ಗ್ರಾಮದಲ್ಲೂ ಸ್ಥಳೀಯ ಯುವಕರು ರ್ಯಾಲಿಗೆ ಬೆಂಬಲ ಸೂಚಿಸಿದರು. ಬಳಿಕ ಪಂಚಾಯಿತಿ ಕಚೇರಿಗಳಿಗೆ ಭೇಟಿ ನೀಡಿದ ಇಂದಿರಾ ರೆಡ್ಡಿ ಹಾಗೂ ಪಕ್ಷದ ಕಾರ್ಯಕರ್ತರು ಪಿಡಿಒ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ರೈತರು ಅರ್ಜಿ ಸಲ್ಲಿಸಿದ ತಕ್ಷಣ ಸ್ಥಳ ಮಹಜರ್ ನಡೆಸಬೇಕು. ಅಧಿಕಾರಿಗಳ ವಿಳಂಬದಿಂದ ರೈತರಿಗೆ ಅನ್ಯಾಯವಾಗಬಾರದು,ಎಂದು ಇಂದಿರಾ ರೆಡ್ಡಿ ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಅವರು, ಇದು ಕೇವಲ ಬೈಕ್ ರ್ಯಾಲಿಯಲ್ಲ, ರೈತರ ಪರ ಯುವಶಕ್ತಿಯ ಧ್ವನಿ. ಜನರ ತೆರಿಗೆ ಹಣ ಜನರಿಗೆ ಮರಳಿ ಸಿಗಬೇಕು. ಪಂಚಾಯಿತಿ ಮಟ್ಟದ ಭ್ರಷ್ಟಾಚಾರ ನಿರ್ಮೂಲನೆ ಆಗಬೇಕು. ಯುವಕರು ಮುಂದೆ ಬಂದರೆ ಮಾತ್ರ ವ್ಯವಸ್ಥೆ ಬದಲಾಗುತ್ತದೆ, ಎಂದು ಹೇಳಿದರು.
ರ್ಯಾಲಿಯಲ್ಲಿ ಅಹಿಂದ ರಕ್ಷಣಾ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್, ರಾಜೇಶ್, ಶ್ರೀನಿವಾಸ್, ಕಿರಣ್, ಚರಣ್, ನಾಗರಾಜ್, ಮಂಜುನಾಥ್ ಹಾಗೂ ವಿಜಯ್ ರೆಡ್ಡಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಗ್ರಾಮದಿಂದ ಗ್ರಾಮಕ್ಕೆ ತೆರಳಿ ಜನರ ಸಮಸ್ಯೆಗಳನ್ನು ಆಲಿಸುತ್ತಿರುವ ಇಂದಿರಾ ರೆಡ್ಡಿ, ಕ್ಷೇತ್ರದಲ್ಲಿ ಹೋರಾಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.


